ಚೀನಾದಲ್ಲಿ ಭಾರತದಲ್ಲಿರುವಷ್ಟು ಇಂಟರ್ನೆಟ್ ಸ್ವಾತಂತ್ರ್ಯ ಇಲ್ಲ. ಜಾಗತಿಕವಾಗಿ ಗರಿಷ್ಠ ಬಳಕೆಯಾಗುತ್ತಿರುವ ಗೂಗಲ್, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್, ಪಿನ್‌ಟರೆಸ್ಟ್, ಟಂಬ್ಲರ್, ಸ್ನ್ಯಾಪ್‌ಚಾಟ್, ಟಿಂಡರ್ ಮುಂತಾದವುಗಳಿಗೆ ಅಲ್ಲಿ ನಿಷೇಧವಿದೆ. ಅಷ್ಟೇ ಏಕೆ, ಈಗ ಭಾರತದಲ್ಲಿ ನಿಷೇಧವಾದಾಗ ಭಾರಿ ಸದ್ದು ಮಾಡಿದ ಟಿಕ್‌ಟಾಕ್ ಅಲ್ಲಿ ಬಳಕೆಯಲ್ಲೇ ಇಲ್ಲ ಎಂದರೆ ನಂಬಲೇಬೇಕು!
ಹೌದು, ಚೀನಾ ಚಾಣಾಕ್ಷ. ತನ್ನ ಪ್ರಜೆಗಳು ಬೇರೆ ದೇಶದಿಂದ ಪ್ರಭಾವಿತರಾಗಬಾರದು ಮತ್ತು ತನ್ನ ಆಡಳಿತದ ವಿರುದ್ಧ ಯಾರೂ ಧ್ವನಿಯೆತ್ತಬಾರದು ಎಂಬ ಕಾರಣಕ್ಕೋ ಇಂಟರ್ನೆಟ್‌ಗೇ ಕಡಿವಾಣ ಹಾಕಿಬಿಟ್ಟಿದೆ. 1998ರಲ್ಲೊಮ್ಮೆ ಸಾಮಾಜಿಕ ಜಾಲತಾಣಗಳನ್ನು ಬಳಸಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಅಲ್ಲಿನ ಕಮ್ಯುನಿಸ್ಟ್ ಪಾರ್ಟಿ ಮುಖ್ಯಾಲಯವಿರುವ ಝಾಂಗ್‌ನಾನ್‌ಹಾಯ್ ಎಂಬಲ್ಲಿ ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತುಕೊಂಡ ಅದು, ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕಾಗಿಯೇ ಫೈರ್‌ವಾಲ್ ಸಿದ್ಧಪಡಿಸಿತು. ಹೊರ ಜಗತ್ತಿಗೆ ಚೀನಾ ಈ ಕುರಿತು ಅಧಿಕೃತ ಮಾಹಿತಿ ದೊರೆಯದಂತೆ ನೋಡಿಕೊಂಡಿತಾದರೂ, ಚೀನಾದ 'ಗ್ರೇಟ್ ಫೈರ್‌ವಾಲ್'ನ ಪಿತಾಮಹ ಅಂತ ಹುಡುಕಿದಾಗ ಧುತ್ತನೇ ಕೇಳಿಬರುತ್ತಿರುವ ಹೆಸರು ಹಾರ್ಬಿನ್ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನದ ಪ್ರೊಫೆಸರ್ ಫಾಂಗ್ ಬಿಂಕ್ಸಿಂಗ್.
ಹೊರಜಗತ್ತಿನ ಆಗುಹೋಗುಗಳನ್ನು ತನ್ನ ಪ್ರಜೆಗಳು ನೋಡದಂತೆ ಮಾಡಿರುವ ಚೀನಾದಲ್ಲಿ ಫೇಸ್‌ಬುಕ್ ಬದಲಾಗಿ ವಿಚಾಟ್, ಟ್ವಿಟರ್‌ಗೆ ಪರ್ಯಾಯವಾಗಿ ವೈಬೋ (Weibo), ಯೂಟ್ಯೂಬ್ ಬದಲು ಟೆನ್ಸೆಂಟ್ ವಿಡಿಯೊ, ಗೂಗಲ್ ಬದಲು ಬೈಡು, ಟಿಕ್‌ಟಾಕ್ ಬದಲು ಡೌಯಿನ್ (DouYin) - ಹೀಗೆ ಪರ್ಯಾಯ ಸಾಮಾಜಿಕ ಜಾಲತಾಣಗಳು ಸಾಕಷ್ಟಿವೆ. ಇವ್ಯಾವುವನ್ನೂ ಚೀನಾದ ಗೂಗಲ್, ಚೀನಾದ ಫೇಸ್‌ಬುಕ್ ಅಂತ ಕರೆಯಲಾಗುವುದಿಲ್ಲ ಎಂಬ ಅಂಶ ನೋಡಿದರೆ, ಚೀನೀಯರು ತಮ್ಮ 'ಆತ್ಮನಿರ್ಭರತೆ'ಗೆ ನೀಡಿದ ಮಹತ್ವದ ಅರಿವಾಗುತ್ತದೆ. ಚೀನಾ ಮೂಲದ ಕಂಪನಿಗಳು ಯಾವುದೇ ದೇಶದಲ್ಲಿ ಕಾರ್ಯಾಚರಿಸುತ್ತಿರಲಿ, ಚೀನಾದ ಗುಪ್ತಚರ ಏಜೆನ್ಸಿ ಜೊತೆಗೆ ದತ್ತಾಂಶವನ್ನು ಹಂಚಿಕೊಳ್ಳಬೇಕೆಂಬ ಕಾನೂನು ಅಲ್ಲಿದೆ. ಈ ಕಾನೂನಿನ ಅಂಶವು ಕೂಡ ಟಿಕ್‌ಟಾಕ್ ಸಹಿತ ಹಲವು ಆ್ಯಪ್‌ಗಳಿಗೆ ಭಾರತ ನಿಷೇಧ ಹೇರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಫೈರ್‌ವಾಲ್ ಎಂಬ ತಂತ್ರಜ್ಞಾನವನ್ನು ನಮ್ಮಲ್ಲಿ ಬಹುತೇಕ ಕಂಪ್ಯೂಟರುಗಳಲ್ಲಿ, ಖಾಸಗಿ ನೆಟ್‌ವರ್ಕ್‌ಗಳಲ್ಲಿ ಬಳಸಲಾಗುತ್ತದೆ. ವೈರಸ್ ಅಂತ ಸಾಮಾನ್ಯವಾಗಿ ಕರೆಯಲಾಗುವ ಮಾಲ್‌ವೇರ್‌ಗಳು ಅಥವಾ ಕುತಂತ್ರಾಂಶಗಳಿಂದ ರಕ್ಷಿಸುವುದಕ್ಕಾಗಿ ನಾವಿದನ್ನು ಬಳಸುತ್ತೇವೆ. ಆದರೆ, ಚೀನಾ ರಚಿಸಿರುವ ಈ ಫೈರ್‌ವಾಲ್ (ಗ್ರೇಟ್ ವಾಲ್ ಆಫ್ ಚೀನಾ ಎಂಬ ಹೆಸರಿನಿಂದಾಗಿಯೇ ಇದಕ್ಕೆ ಗ್ರೇಟ್ ಫೈರ್‌ವಾಲ್ ಆಫ್ ಚೀನಾ ಎಂಬ ಹೆಸರಿದೆ) ಕುರಿತು ಯಾವುದೇ ಮಾಹಿತಿಯನ್ನು ಅದು ಬಿಟ್ಟುಕೊಟ್ಟಿಲ್ಲ. ತಂತ್ರಜ್ಞರು ಈ ಫೈರ್‌ವಾಲ್‌ಗೆ ಇರುವ ಸಾಮರ್ಥ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅದು ಐಪಿ ಅಡ್ರೆಸ್‌ಗಳನ್ನು ನಿರ್ಬಂಧಿಸುವ ಬಗೆ, ನಿರ್ದಿಷ್ಟ ಯುಆರ್‌ಎಲ್‌ಗಳು ಹಾಗೂ ಕೀವರ್ಡ್‌ಗಳ ಮೂಲಕ ಜಾಲತಾಣಗಳನ್ನೇ ನಿರ್ಬಂಧಿಸುವ ವಿಧಾನ - ಇವೆಲ್ಲವೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ನಿರ್ಬಂಧಿತ ಜಾಲತಾಣ ಅಥವಾ ಸೇವೆಗಳಿಗೆ ಪ್ರವೇಶ ಪಡೆಯಲೆಂದೇ ಬಳಕೆಯಾಗುತ್ತಿರುವ ವಿಪಿಎನ್ ವ್ಯವಸ್ಥೆಯನ್ನೂ ಅದು ಬ್ಲಾಕ್ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಭಾರತದ ಮಾಧ್ಯಮ ಸಂಸ್ಥೆಗಳ ಜಾಲತಾಣಗಳನ್ನು ಈಗಾಗಲೇ ನಿಷೇಧಿಸಿರುವ ಚೀನಾದಲ್ಲಿ, ಅಮೆರಿಕದ ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್, ಬ್ಲೂಮ್‌ಬರ್ಗ್, ವಾಷಿಂಗ್ಟನ್ ಪೋಸ್ಟ್, ಗಾರ್ಡಿಯನ್ ಮುಂತಾದ ಸುದ್ದಿ ಸಂಸ್ಥೆಗಳ ಜಾಲತಾಣಗಳು ಯಾವತ್ತೋ ಬ್ಲಾಕ್ ಆಗಿವೆ.
ಈ ರೀತಿಯ ಫೈರ್‌ವಾಲ್ ವ್ಯವಸ್ಥೆಯು ಹೊರದೇಶದಿಂದ ನೋಡುವಾಗ ನಮಗೆ ವಿಚಿತ್ರವೆಂದು ಕಾಣಿಸುತ್ತದೆಯಾದರೂ, ಈ ಕ್ರಮವು ಸ್ಥಳೀಯ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ವರದಾನವಾಗಿದೆ. ಬೈಡು, ಟೆನ್‌ಸೆಂಟ್, ಅಲಿಬಾಬಾ, ಶವೊಮಿ, ಒಪ್ಪೊ ಮುಂತಾದ ಸ್ವದೇಶೀ ಬ್ರ್ಯಾಂಡ್‌ಗಳು ಅಲ್ಲಿ ಹುಟ್ಟಿ ಜಾಗತಿಕ ಮಟ್ಟದಲ್ಲಿ ಬೆಳಗುವುದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿವೆ ಎಂಬುದು ಸುಳ್ಳಲ್ಲ. ಅಲ್ಲಿನವರ ಮನಸ್ಥಿತಿಯ ಬಗ್ಗೆ ನ್ಯೂಯಾರ್ಕ್ ಟೈಮ್ಸ್ 2014ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ, ಫೈರ್‌ವಾಲ್ ದಾಟಲು ಉಚಿತ ಟೂಲ್‌ಗಳಿದ್ದರೂ ಅವರಿಗದರ ಬಗ್ಗೆ ಆಸಕ್ತಿಯೇ ಇಲ್ಲ. ಸೆನ್ಸಾರ್ ಆಗಿರೋ ವಿಷಯಗಳನ್ನು ನೋಡಿ ಏನಾಗಬೇಕು ಎಂಬ ಸ್ವದೇಶೀ ಮನೋಭಾವ ಅಲ್ಲಿನ ಜನರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.