ADVERTISEMENT

Microsoft: ಒನ್‌ನೋಟ್ ಅಟ್ಯಾಚ್‌ಮೆಂಟ್ ಕಳುಹಿಸಿ ಮಾಲ್ವೇರ್ ಹರಡುತ್ತಿರುವ ಹ್ಯಾಕರ್

ಮೈಕ್ರೋಸಾಫ್ಟ್‌ ಒನ್‌ನೋಟ್ ಮೂಲಕ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗೆ ವೈರಸ್ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2023, 14:50 IST
Last Updated 25 ಜನವರಿ 2023, 14:50 IST
   

ಬೆಂಗಳೂರು: ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸದಾ ವೈರಸ್ ಮತ್ತು ಮಾಲ್ವೇರ್‌ಗಳ ಕಾಟ ತಪ್ಪಿದ್ದಲ್ಲ. ಹ್ಯಾಕರ್‌ಗಳು ಪ್ರತಿ ಬಾರಿ ಹೊಸ ಹೊಸ ತಂತ್ರದ ಮೊರೆ ಹೋಗುತ್ತಾರೆ.

ಈ ಬಾರಿ ಹ್ಯಾಕರ್ಸ್, ಮೈಕ್ರೋಸಾಫ್ಟ್ ಒನ್‌ನೋಟ್ ಅಟ್ಯಾಚ್‌ಮೆಂಟ್ ತಂತ್ರದ ಮೊರೆ ಹೋಗಿದ್ದಾರೆ. ಮೈಕ್ರೋಸಾಫ್ಟ್ ಒನ್‌ನೋಟ್ ಮೂಲಕ ಅಟ್ಯಾಚ್‌ಮೆಂಟ್ ಕಳುಹಿಸಿ, ಅದನ್ನು ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಸಿ, ಅದರ ಮೂಲಕ ವೈರಸ್ ಹರಡಲಾಗುತ್ತದೆ.

ಇ ಮೇಲ್ ಮೂಲಕ ಕಳುಹಿಸಲಾಗುವ ಅಟ್ಯಾಚ್‌ಮೆಂಟ್‌ಗಳನ್ನು, ಅದರಲ್ಲೂ ಅಪರಿಚಿತ ಐಡಿಗಳಿಂದ ಬರುವ ಇ ಮೇಲ್‌ ತೆರೆಯಬೇಡಿ ಎಂದು ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಸಿದರೂ, ಅದನ್ನು ಲೆಕ್ಕಿಸದೇ, ಹಲವರು ಅಟ್ಯಾಚ್‌ಮೆಂಟ್ ಡೌನ್‌ಲೋಡ್ ಮಾಡುತ್ತಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಬಳಕೆದಾರರು ಆಕಸ್ಮಿಕವಾಗಿ ಅಟ್ಯಾಚ್‌ಮೆಂಟ್ ಫೈಲ್ ಕ್ಲಿಕ್ ಮಾಡಿದರೆ, ಆಗ ವೈರಸ್ ಫೈಲ್ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆಗುತ್ತದೆ. ಅದರಿಂದ ಹ್ಯಾಕರ್‌ಗಳು ಸುಲಭದಲ್ಲಿ ನಿಮ್ಮ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್‌ಫೋನ್‌ನ ನಿಯಂತ್ರಣ ಪಡೆಯುವರು. ಇದರಿಂದ ವೈಯಕ್ತಿಕ ದತ್ತಾಂಶ ಸೋರಿಕೆ ಜತೆಗೆ, ಬ್ಯಾಂಕಿಂಗ್ ವಿವರ, ಮತ್ತಿತರ ಖಾಸಗಿ ಮಾಹಿತಿ ಹ್ಯಾಕರ್ಸ್ ಕೈಸೇರುವ ಅಪಾಯವಿದೆ ಎಂದು ಬ್ಲೀಪಿಂಗ್ ಕಂಪ್ಯೂಟರ್ ವರದಿ ಎಚ್ಚರಿಸಿದೆ.

ಹೀಗಾಗಿ, ಯಾವುದೇ ಅನಧಿಕೃತ ಇ ಮೇಲ್ ವಿಳಾಸಗಳಲ್ಲಿ ಬರುವ ಉಡುಗೊರೆ ಅಮಿಷ, ಆಫರ್ ಇತ್ಯಾದಿಗಳನ್ನು ಕ್ಲಿಕ್ ಮಾಡುವ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತ. ಜತೆಗೆ, ಸೂಕ್ತ ಆ್ಯಂಟಿವೈರಸ್ ಸಾಫ್ಟ್‌ವೇರ್ ಬಳಕೆಯಿಂದ, ಇಂತಹ ಸಂಭಾವ್ಯ ವೈರಸ್ ದಾಳಿಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.