ADVERTISEMENT

ಕೇರಳ ವಿಮಾನ ದುರಂತ | ಕಾರಣ ತಿಳಿಯಲು ಹೇಗೆ ನೆರವಾಗುತ್ತೆ ಬ್ಲಾಕ್‌ ಬಾಕ್ಸ್?

ಪ್ರಜಾವಾಣಿ ವಿಶೇಷ
Published 8 ಆಗಸ್ಟ್ 2020, 8:25 IST
Last Updated 8 ಆಗಸ್ಟ್ 2020, 8:25 IST
ಬ್ಲಾಕ್‌ ಬಾಕ್ಸ್‌
ಬ್ಲಾಕ್‌ ಬಾಕ್ಸ್‌   

ಕೇರಳದ ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ದುರಂತಕ್ಕೀಡಾದ ಏರ್‌ ಇಂಡಿಯಾ ವಿಮಾನದ ‘ಬ್ಲಾಕ್‌ ಬಾಕ್ಸ್’ ಪತ್ತೆಯಾಗಿದೆ ಎಂದು ವರದಿಯಾಗಿದೆ. ‘ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್’ ಮತ್ತು ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌’ಗಳನ್ನು ಒಳಗೊಂಡಿರುವ ಈ ‘ಬ್ಲಾಕ್‌ ಬಾಕ್ಸ್’ ವಿಮಾನ ದುರಂತದ ಕಾರಣ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಏನಿದು ಬ್ಲಾಕ್ ಬಾಕ್ಸ್?

ವಿಮಾನದ ಯಾವುದೇ ಎಲೆಕ್ಟ್ರಾನಿಕ್‌ ವ್ಯವಸ್ಥೆಗೆ ಕಳುಹಿಸುವ ಪ್ರತಿ ಸಂದೇಶವನ್ನು ದಾಖಲಿಸಿಕೊಳ್ಳುವ ಎಲೆಕ್ಟ್ರಾನಿಕ್‌ ಉಪಕರಣವೇ ಬ್ಲಾಕ್‌ ಬಾಕ್ಸ್‌. ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್‌ ವಾರನ್‌ ಇದನ್ನು ಅಭಿವೃದ್ಧಿಪಡಿಸಿದ್ದರು.

ADVERTISEMENT

ಬ್ಲಾಕ್‌ ಬಾಕ್ಸ್‌ನಲ್ಲಿವೆ ಎರಡು ಸಾಧನಗಳು...

ಪ್ರಯಾಣಿಕರ ವಿಮಾನಗಳ ಬ್ಲಾಕ್‌ ಬಾಕ್ಸ್‌ನಲ್ಲಿ ಎರಡು ಸಾಧನಗಳಿರುತ್ತವೆ. ಅವುಗಳೇ ‘ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್’ ಮತ್ತು ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌’ಗಳು. ಮೊದಲನೆಯದ್ದರಲ್ಲಿ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹವಾಗುತ್ತದೆ. ವಿಮಾನದ ವೇಗ, ಹಾರುತ್ತಿರುವ ದಿಕ್ಕು, ಎತ್ತರ ಮೊದಲಾದ ಸಂಗತಿಗಳು ಅದರಲ್ಲಿ ದಾಖಲಾಗುತ್ತವೆ. ಎರಡನೆಯದ್ದರಲ್ಲಿ ಪೈಲಟ್‌ಗಳು, ವಿಮಾನದ ಸಿಬ್ಬಂದಿ ಹಾಗೂ ಇತರರ ಸಂಭಾಷಣೆಗಳು ಅಡಕವಾಗಿರುತ್ತವೆ.

ಬ್ಲಾಕ್‌ ಬಾಕ್ಸ್‌ಗಳನ್ನು ಎಲ್ಲಿ ಇಡಲಾಗುತ್ತೆ?

ವಿಮಾನದ ಹಿಂಭಾಗದ ತುದಿಯಲ್ಲಿ ಅವನ್ನು ಇಡುತ್ತಾರೆ. ಒಂದು ವೇಳೆ ದುರಂತ ಸಂಭವಿಸಿ, ವಿಮಾನ ಸುಟ್ಟುಹೋದರೂ ‌ಬ್ಲಾಕ್‌ ಬಾಕ್ಸ್‌ ನಾಶವಾಗದಂತೆ ಅದನ್ನು ಇಡಲಾಗುತ್ತದೆ.

ಬ್ಲಾಕ್‌ ಬಾಕ್ಸ್‌ ಎಷ್ಟು ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲದು?

ಕನಿಷ್ಠ 25 ಗಂಟೆಗಳಷ್ಟು ಅವಧಿಯ ಮಾತನ್ನು ಅದು ದಾಖಲಿಸಿಟ್ಟುಕೊಳ್ಳಬಲ್ಲದು. ಕಾಕ್‌ಪಿಟ್‌ ಧ್ವನಿಮುದ್ರಣ ಸಾಧನವು ಕನಿಷ್ಠ ಎರಡು ತಾಸಿನಷ್ಟು ಧ್ವನಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಲ್ಲದು. ಹಳೆಯ ದತ್ತಾಂಶವನ್ನು ಆಗಾಗ ಅಳಿಸಿ, ಹೊಸ ಧ್ವನಿಯನ್ನು ಮುದ್ರಿಸಿಕೊಳ್ಳುತ್ತದೆ.

ಕಪ್ಪು ಬಣ್ಣದಲ್ಲಿರುತ್ತಾ ಬ್ಲಾಕ್‌ ಬಾಕ್ಸ್?

ಇಲ್ಲ, ಅವುಗಳು ಹೊಳೆಯುವ ಹಿತ್ತಳೆ ಬಣ್ಣದ್ದಾಗಿರುತ್ತವೆ. ವಿಮಾನ ದುರಂತಕ್ಕೆ ಈಡಾದಲ್ಲಿ ಅದು ಸುಲಭವಾಗಿ ಕಣ್ಣಿಗೆ ಬೀಳಲಿ ಎಂಬ ಕಾರಣಕ್ಕೆ ಕಿತ್ತಳೆ ಬಣ್ಣ ಹಚ್ಚಲಾಗಿರುತ್ತದೆ.

ಬ್ಲಾಕ್‌ ಬಾಕ್ಸ್ ‌ನಾಶವಾಗಬಹುದೇ?

ತುಕ್ಕು ಹಿಡಿಯದಂಥ ಸ್ಟೇನ್‌ಲೆಸ್‌ ಸ್ಟೀಲ್‌ ಕವಚದಲ್ಲಿ ಅದನ್ನು ಭದ್ರವಾಗಿ ಇಡಲಾಗುತ್ತದೆ. 1,100 ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ, ನೀರಿನಾಳದ 6,000 ಮೀಟರ್‌ನಷ್ಟು ಒತ್ತಡ ಎಲ್ಲವನ್ನೂ ಬ್ಲಾಕ್‌ ಬಾಕ್ಸ್‌ ತಾಳಿಕೊಳ್ಳಬಲ್ಲದು. ಹಾಗಾಗಿ ಬ್ಲಾಕ್‌ ಬಾಕ್ಸ್‌ ನಾಶವಾಗುವ ಸಂಭವನೀಯತೆ ತುಂಬಾ ಕಡಿಮೆ.

(ಮಾಹಿತಿ – ಪ್ರಜಾವಾಣಿ ಸಂಗ್ರಹ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.