ಫೇಸ್‌ಬುಕ್ಕನ್ನು ಹೊಕ್ಕು, ಸ್ಕ್ರೋಲ್ ಮಾಡುತ್ತಾ ಹೋದಂತೆ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ಮೊಗೆದಷ್ಟೂ ಮುಗಿಯದ ಪೋಸ್ಟ್‌ಗಳಿಂದ ಸಮಯ ವ್ಯರ್ಥ. ಕ್ಲಿಕ್‌ಗಾಗಿಯೇ ಶೀರ್ಷಿಕೆ ನೀಡಿ, ಕ್ಲಿಕ್ ಮಾಡಿ ನೋಡಿದರೆ ಅದರಲ್ಲೇನೂ ಇರುವುದಿಲ್ಲ ಎಂದು ಓದುಗರೇ ‘ಬೆಚ್ಚಿ ಬೀಳುವ’ ಸಂದರ್ಭಗಳೇ ಹೆಚ್ಚು. ಇದಲ್ಲದೆ, ನಿಮ್ಮ ಸ್ನೇಹಿತವರ್ಗದಿಂದ ಬರಬಹುದಾದ ರಾಜಕೀಯ ಹೇಳಿಕೆಗಳು, ದೂಷಣೆಗಳು, ಜಾತಿ-ಧರ್ಮದ ಕುರಿತು ಆಕ್ರೋಶ ಹೆಚ್ಚಿಸುವ ಪೋಸ್ಟ್‌ಗಳು... ಇವನ್ನೆಲ್ಲ ನೋಡಿದರೆ ದಿನವಿಡೀ ಮನಸ್ಸು ಕದಡಿರುತ್ತದೆ. ಇದಕ್ಕಾಗಿ, ವಿಶ್ವಾಸಾರ್ಹ ಸುದ್ದಿಮಾಧ್ಯಮಗಳಿಂದ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳಿಂದ ಬರುವ ಸುದ್ದಿಗಳನ್ನಷ್ಟೇ ನೆಚ್ಚಿಕೊಳ್ಳುವುದರಿಂದ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ ಎಲ್ಲವೂ ಫೇಕ್ ಆಗಿರುವುದಿಲ್ಲ; ಆಗೊಮ್ಮೆ ಈಗೊಮ್ಮೆ ಒಳ್ಳೆಯ ವಿಚಾರಗಳೂ ಬರುತ್ತವೆ ಎಂಬುದು ಸಮಾಧಾನ.
ಹಾಗಿದ್ದರೆ, ಫೇಸ್‌ಬುಕ್ ಲಾಗಿನ್ ಆಗಿ, ನಿಮ್ಮದೇ ಟೈಮ್‌ಲೈನ್‌ನಲ್ಲಿ ಸ್ಕ್ರೋಲ್ ಮಾಡುವಾಗ ನಮಗೆ ಬೇಕಾದಂತಹ, ಸಕಾರಾತ್ಮಕ ಮಾಹಿತಿಗಳುಳ್ಳ ಫೀಡ್‌ಗಳನ್ನಷ್ಟೇ ಹೊಂದಿಸುವುದು ಹೇಗೆ? ಸದಾ ಕಾಲ ಒಳ್ಳೆಯದನ್ನಷ್ಟೇ ನೋಡುವಂತಾದರೆ ಮನಸ್ಸೂ ವ್ಯಾಕುಲಗೊಳ್ಳದು. ಇದಕ್ಕಾಗಿ ನಿಮ್ಮ ಫೇಸ್‌ಬುಕ್ ಟೈಮ್‌ಲೈನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಲು ಒಂದಿಷ್ಟು ಅಮೂಲ್ಯ ಸಲಹೆಗಳು ಇಲ್ಲಿವೆ.
ಮೊದಲನೆಯ ಹಂತ ಎಂದರೆ, ನಿಮ್ಮ ಮನಸ್ಸನ್ನು ಕುದಿಯುವಂತೆ ಮಾಡಬಲ್ಲ ಪೋಸ್ಟ್‌ಗಳನ್ನು ನಿವಾರಿಸುವುದು. ಇದಕ್ಕಾಗಿ ಅನುಸರಿಸಬೇಕಾದ ಪ್ರಮುಖ ಕ್ರಮವೆಂದರೆ, ದ್ವೇಷವನ್ನು ಕಾರುವ, ಬೇರೆಯವರೆಲ್ಲರೂ ತಪ್ಪು, ತಾವೇ ಸರಿ ಎನ್ನುವ, ಇತರರನ್ನು ದೂಷಿಸುವ, ಮಾನವೀಯ ಮೌಲ್ಯಗಳಿಗೇ ವಿರುದ್ಧವಾಗಿರುವ, ಸದಾ ಕಾಲ ಸುಳ್ಳನ್ನೇ ಸತ್ಯವೆಂದು ಹರಡುವ ವ್ಯಕ್ತಿಗಳು, ಫೇಸ್‌ಬುಕ್ ಪುಟಗಳು ಮತ್ತು ಗುಂಪುಗಳಿಂದ ದೂರವಿರುವುದು. ಇದಕ್ಕಾಗಿ ವ್ಯಕ್ತಿಗಳನ್ನು ಅನ್‌ಫ್ರೆಂಡ್ ಮಾಡಿ, ಪುಟಗಳನ್ನು ಅನ್‌ಫಾಲೋ ಮಾಡಿ ಮತ್ತು ಗುಂಪುಗಳಿಂದ ಹೊರಗೆ ಬನ್ನಿ.
ಹೇಗೆ ಮಾಡುವುದು?
ಆ್ಯಪ್ ಅಥವಾ ಬ್ರೌಸರ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಿ, ನಿಮಗೆ ಬೇಡವಾದ ಮಾಹಿತಿ ಇರುವ ಪುಟ, ವ್ಯಕ್ತಿ ಅಥವಾ ಗುಂಪಿನಿಂದ ಬರುವ ಪೋಸ್ಟ್ ಒಂದನ್ನು ಹುಡುಕಿ, ಪೋಸ್ಟ್‌ನ ಬಲ-ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳನ್ನು (ಸೆಟ್ಟಿಂಗ್ಸ್ ಮೆನು) ಕ್ಲಿಕ್ ಮಾಡಿದಾಗ, ಅಲ್ಲಿ ಹಲವು ಆಯ್ಕೆಗಳು ಗೋಚರಿಸುತ್ತವೆ. ‘Hide Post’ ಕ್ಲಿಕ್ ಮಾಡಿದರೆ, ಅದರಂತಿರುವ ಪೋಸ್ಟ್‌ಗಳು ನಿಮ್ಮ ಫೀಡ್‌ನಲ್ಲಿ ಕಡಿಮೆ ಗೋಚರಿಸುತ್ತವೆ. ‘Snooze for 30 Days’ ಕ್ಲಿಕ್ ಮಾಡಿದರೆ, ಒಂದು ತಿಂಗಳು ಅವರಿಂದ ಯಾವುದೇ ಪೋಸ್ಟ್‌ಗಳು ಗೋಚರಿಸಲಾರವು. ‘Unfollow’ ಮಾಡಿದರೆ, ಆ ವ್ಯಕ್ತಿಯೊಂದಿಗೆ ‘ಫ್ರೆಂಡ್’ ಆಗಿರುವಂತೆಯೇ, ಅವರಿಂದ ಯಾವುದೇ ಪೋಸ್ಟ್‌ಗಳನ್ನು ವೀಕ್ಷಿಸಲಾರಿರಿ. ಬೇಡವೇ ಬೇಡ ಎಂದಾದರೆ ‘Block’ ಮಾಡುವ ಆಯ್ಕೆಯೂ ಅಲ್ಲಿಯೇ ಸಿಗುತ್ತದೆ. ಜೊತೆಗೆ, ಯಾವುದೇ ವ್ಯಕ್ತಿಯ ಪ್ರೊಫೈಲ್ ಅಥವಾ ಫೇಸ್‌ಬುಕ್ ಪುಟದಲ್ಲಿರುವ ಪೋಸ್ಟ್ ಸುಳ್ಳು, ದ್ವೇಷಪೂರಿತ, ಫೇಕ್ ಮತ್ತು ಸಮಾಜಕ್ಕೆ ಹಾನಿಕಾರಕ ಎಂದು ಕಂಡುಬಂದರೆ, ಜವಾಬ್ದಾರಿಯುತ ಬಳಕೆದಾರನಾಗಿ ನೀವು ಅದನ್ನು ಫೇಸ್‌ಬುಕ್ ಕಂಪನಿಗೆ ‘Report’ ಮಾಡಿದರೆ ಅವರು ಅಂತಹ ಖಾತೆಗಳನ್ನು, ಪೋಸ್ಟ್‌ಗಳನ್ನು ನಿರ್ಬಂಧಿಸುತ್ತಾರೆ ಮತ್ತು ಹೆಚ್ಚು ಪ್ರಸಾರವಾಗದ ಹಾಗೆ ತಡೆಯುತ್ತಾರೆ.
ಹೀಗೆ ಪ್ರತಿದಿನವೆಂಬಂತೆ ಒಂದಿಷ್ಟು ಪೋಸ್ಟ್‌ಗಳ ಮೇಲೆ ಈ ರೀತಿ ‘ಕ್ರಮ ಕೈಗೊಂಡರೆ’, ಕೆಲವೇ ದಿನಗಳಲ್ಲಿ ನಿಮಗೆ ನಿಮ್ಮ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಪೋಸ್ಟ್‌ಗಳು ಸಕಾರಾತ್ಮಕವಾಗಿರಬಲ್ಲವು.
ಅಪ್ಪಿತಪ್ಪಿ, ನಿಮಗೆ ಬೇಕಾದವರ ಪೋಸ್ಟ್‌ಗಳೂ ಕಾಣದಂತೆ ನೀವು ನಿರ್ಬಂಧಿಸಿಕೊಂಡಿದ್ದರೆ, ಅದನ್ನು ಸರಿಪಡಿಸಲು, ಫೇಸ್‌ಬುಕ್‌ನ ಬಲ ಮೇಲ್ಭಾಗದಲ್ಲಿರುವ ಮೆನು ಬಟನ್ ಕ್ಲಿಕ್ ಮಾಡಿ, ಅದರಲ್ಲಿ ‘Settings & Privacy’ ಕ್ಲಿಕ್ ಮಾಡಿ, ‘Reconnect’ ಎಂಬ ಆಯ್ಕೆಯನ್ನು ನೋಡಿದರೆ, ಅಲ್ಲಿ ನೀವು ನಿರ್ಬಂಧಿಸಿರುವವರನ್ನು ಪುನಃ ಫಾಲೋ ಮಾಡುವ ಆಯ್ಕೆ ಕಾಣಿಸುತ್ತದೆ.
ಫೇವರಿಟ್ಸ್ ಮಾಡಿಕೊಳ್ಳಿ
ಇನ್ನು, ಒಳ್ಳೆಯ, ಮಾಹಿತಿಪೂರ್ಣ ಪೋಸ್ಟ್‌ಗಳನ್ನು ಹಾಕುವ ವ್ಯಕ್ತಿಗಳ ಅಥವಾ ಪುಟಗಳ ಫೀಡ್ ಅನ್ನು ಒಂದೇ ಕಡೆ ನೋಡಬೇಕೆಂದಿದ್ದರೆ ಅದಕ್ಕೂ ಒಂದು ಅವಕಾಶವನ್ನು ಫೇಸ್‌ಬುಕ್ ಒದಗಿಸಿದೆ. ಅದೆಂದರೆ ‘ಫೇವರಿಟ್ಸ್ ಫೀಡ್’. ನಮಗೆ ಬೇಕಾದವರನ್ನಷ್ಟೇ ಈ ಪಟ್ಟಿಗೆ ಸೇರಿಸಿಕೊಂಡರೆ ನಿಮ್ಮ ಫೀಡ್ ಹೆಚ್ಚು ಉಲ್ಲಾಸದಾಯಕವಾಗಿರಬಲ್ಲದು. ಇದನ್ನು ಹಿಂದೆ ‘ಬುಕ್‌ಮಾರ್ಕ್’ ಅಂತ ಕರೆಯುತ್ತಿದ್ದರು.
ಯಾವುದೇ ವ್ಯಕ್ತಿ ಅಥವಾ ಪುಟದ ಪೋಸ್ಟ್‌ಗಳನ್ನು ನಿಮ್ಮ ‘ಫೇವರಿಟ್ಸ್‘ ಫೀಡ್‌ಗೆ ಸೇರಿಸಿಕೊಳ್ಳಲು ಹೀಗೆ ಮಾಡಿ. ಫೇಸ್‌ಬುಕ್ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಕ್ಲಿಕ್ ಮಾಡಿ, ‘Settings & Privacy’ಯಲ್ಲಿ ‘Feed’ ಎಂದು ಕ್ಲಿಕ್ ಮಾಡಿದಾಗ ಮೊದಲ ಆಯ್ಕೆ ‘ಫೇವರಿಟ್ಸ್’. ಅದನ್ನು ಒತ್ತಿದಾಗ, ವ್ಯಕ್ತಿ ಅಥವಾ ಪುಟಗಳ ಎದುರು ‘ಸ್ಟಾರ್’ ಐಕಾನ್ ಒತ್ತಿದರೆ, ಅವರ ಪೋಸ್ಟ್‌ಗಳು ನಿಮಗೆ ಆದ್ಯತೆಯಿಂದ ಕಾಣಿಸುತ್ತವೆ. ಆದರೆ ಇದಕ್ಕೆ 30 ಪುಟ ಅಥವಾ ವ್ಯಕ್ತಿಗಳ ಮಿತಿ ಇದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವಾಗಲೇ ಎಚ್ಚರಿಕೆಯಿರಲಿ. ಪುನಃ ಅದೇ ಸ್ಟಾರ್ ಐಕಾನ್ ಒತ್ತಿದರೆ ಅನ್-ಫೇವರಿಟ್ ಆಗುತ್ತದೆ ಮತ್ತು ಆ ಸ್ಥಾನದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಫೇವರಿಟ್ ಆಗಿ ಸೇರಿಸಿಕೊಳ್ಳಬಹುದಾಗಿದೆ.
ಇದಲ್ಲದೆ, ಫೇಸ್‌ಬುಕ್ಕೇ ನಮ್ಮಲ್ಲಿ ಆಗಾಗ್ಗೆ ಕೇಳುತ್ತದೆ; ಇಲ್ಲವೇ, ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿದಾಗಲೂ ‘ಇಂಥವನ್ನು ಹೆಚ್ಚು ತೋರಿಸಬೇಕೇ?’ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿಂದಲೇ ‘ಹೌದು’ ಅಥವಾ ‘ಬೇಡ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಕೊನೆಯದಾಗಿ, ನಮ್ಮ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳನ್ನೂ ನಿರ್ಬಂಧಿಸಬಹುದು. ಜಾಹೀರಾತಿನ ಫೀಡ್ ನಿಯಂತ್ರಿಸಲು ಹೀಗೆ ಮಾಡಿ: ಫೇಸ್‌ಬುಕ್ ‘Settings & privacy’ ಎಂಬಲ್ಲಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿದಾಗ, ‘ಅಕೌಂಟ್ ಸೆಂಟರ್‘ ಕಾಣಿಸುತ್ತದೆ. ಅಲ್ಲಿ ‘Ad Preferences‘ ಎಂಬುದನ್ನು ನೋಡಿ. ಅಲ್ಲೇ ‘ಕಸ್ಟಮೈಸ್ ಆ್ಯಡ್ಸ್’ ಎಂದು ಇರುವಲ್ಲಿ, ನಿಮಗೆ ಹೆಚ್ಚು ಅಥವಾ ಕಡಿಮೆ ಕಾಣಿಸಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ನಿಮ್ಮ ಟೈಮ್‌ಲೈನ್‌ನಲ್ಲಿ ಬರುವ ಜಾಹೀರಾತಿನ ಬಲಮೇಲ್ಭಾಗದಲ್ಲಿ ಕಾಣಿಸುವ ‘X’ ಬಟನ್ ಕ್ಲಿಕ್ ಮಾಡಿದರೂ, ಆ ಜಾಹೀರಾತು ಪುನಃ ನಿಮ್ಮ ಫೀಡ್‌ನಲ್ಲಿ ಕಾಣಿಸಿಕೊಳ್ಳಲಾರದು.
ಹೀಗೆ ಮಾಡುವುದರಿಂದ ನಮ್ಮ ಫೇಸ್‌ಬುಕ್ ಫೀಡ್ ಅನ್ನು ನಮಗೆ ಬೇಕಾದಂತೆ, ಸ್ವಚ್ಛವಾಗಿಟ್ಟುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.