ADVERTISEMENT

ತಂತ್ರಜ್ಞಾನ | ಆನ್‌ಲೈನ್‌ ವಂಚನೆಗಳ ಬಲೆಗೆ ತಲೆಯೊಡ್ಡದಿರಿ

ಸೂರ್ಯನಾರಾಯಣ ವಿ.
Published 27 ನವೆಂಬರ್ 2024, 0:30 IST
Last Updated 27 ನವೆಂಬರ್ 2024, 0:30 IST
   

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ನನಗೆ ವಾರದ ಹಿಂದೆ ಎಸ್‌ಬಿಐನಿಂದ ಬರುವ ಮಾದರಿಯಲ್ಲಿ, ‘ನಿಮ್ಮ ಕ್ರೆಡಿಟ್‌ ಕಾರ್ಡ್‌ ಮಿತಿಯನ್ನು ₹4 ಲಕ್ಷಕ್ಕೆ ಹೆಚ್ಚಿಸಬಹುದು. ಕೆವೈಸಿ ಪೂರ್ಣಗೊಳಿಸಲು ಭೇಟಿ ನೀಡಿ’ ಎಂದು ಒಂದು ಲಿಂಕ್‌ ಹೊಂದಿದ್ದ ಎಸ್‌ಎಂಎಸ್‌ ಮೊಬೈಲ್‌ಗೆ ಬಂತು. ಕಾರ್ಡ್‌ ಪಡೆದು ನಾಲ್ಕು ವರ್ಷ ಆದರೂ ಇನ್ನೂ ಮಿತಿ ಒಂದು ಲಕ್ಷ ದಾಟದೇ ಇದ್ದುದರಿಂದ, ಮಿತಿ ಹೆಚ್ಚಳಕ್ಕೆ ಈಗ ಅವಕಾಶ ನೀಡಿರಬಹುದೇನೋ ಎಂದುಕೊಂಡು ಲಿಂಕ್‌ ಒತ್ತಿದೆ. ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ ವಿಳಾಸದ ರೀತಿಯ ವಿಳಾಸವೇ (ಯುಆರ್‌ಎಲ್‌) ಇತ್ತು. ಆದರೆ, ವಿಳಾಸದಲ್ಲಿ ಮತ್ತೊಂದು ಪದವೂ (ಸ್ಪ್ರಿಂಟ್‌ ಎನ್ನುವ) ಇತ್ತು. ಅನುಮಾನ ಬಂದು ಮುಂದುವರಿಯಲಿಲ್ಲ. ಎರಡು ದಿನಗಳ ಹಿಂದೆ ಮತ್ತೆ ಅದೇ ರೀತಿಯ ಎಸ್‌ಎಂಎಸ್‌ ಬಂತು. ಈ ಸಲ ಕಂಪ್ಯೂಟರ್‌ನಲ್ಲಿ ಆ ವೆಬ್‌ಲಿಂಕ್‌ ಪೇಸ್ಟ್‌ ಮಾಡಿ  ವೆಬ್‌ಸೈಟ್‌ಗೆ ಭೇಟಿ ನೀಡಿದೆ. ಇಂಟರ್‌ನೆಟ್‌ನಲ್ಲಿ ಆ ವೆಬ್‌ಸೈಟ್‌ ಬಗ್ಗೆ ಮಾಹಿತಿ ಹುಡುಕಾಡಿದೆ. ಹೆಚ್ಚು ಮಾಹಿತಿ ಸಿಗಲಿಲ್ಲ. ಆನ್‌ಲೈನ್‌ ಪ್ರಶ್ನೋತ್ತರ ವೇದಿಕೆಯೊಂದರಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಗಮನಕ್ಕೆ ಬಂತು. ಅದು ವಂಚನೆ ಉದ್ದೇಶದ ನಕಲಿ ವೆಬ್‌ಸೈಟ್‌ ಆಗಿರುವ ಸಾಧ್ಯತೆ ಇದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದರು.

ಇಂತಹ ಅನುಭವ ಲಕ್ಷಾಂತರ ಮಂದಿಗೆ ಆಗಿರಬಹುದು. ಈ ಸಂದರ್ಭದಲ್ಲಿ ಕೊಂಚ ಎಚ್ಚರ ವಹಿಸಿ ಯೋಚನೆ ಮಾಡಿದರೆ ಆನ್‌ಲೈನ್‌ ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು. ಆದರೆ, ತರಾತುರಿಯಲ್ಲಿರುವ ಕೆಲವು ಜನರು ಯೋಚನೆ ಮಾಡದೆ ವಂಚಕರ ಬಲೆಗೆ ಬಿದ್ದು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಕೃತಕಬುದ್ಧಿಮತ್ತೆ (ಎಐ) ಆಧಾರಿತ ಹೊಸ ಹೊಸ ತಂತ್ರಜ್ಞಾನ ಬಳಕೆಗೆ ಬರುತ್ತಿರುವ ಈ ಹೊತ್ತಿನಲ್ಲಿ ಜನರು ಆನ್‌ಲೈನ್‌ ವಂಚನೆಗೆ ತುತ್ತಾಗುತ್ತಿರುವುದು ಜಾಸ್ತಿಯಾಗಿದೆ. ಡೀಪ್‌ಫೇಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸಂಬಂಧಿಕರ ಧ್ವನಿಯನ್ನು ಅನುಕರಿಸುವುದು, ದೊಡ್ಡ ದೊಡ್ಡ ಉದ್ಯಮಿಗಳು, ಕ್ರೀಡಾಪಟುಗಳು, ಪ್ರಭಾವಿ ವ್ಯಕ್ತಿಗಳೇ ಬಂಡವಾಳ ಹೂಡಿಕೆಗೆ ಸಲಹೆ ನೀಡುತ್ತಿರುವ ವಿಡಿಯೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ದೊಡ್ಡ ಕಂಪನಿಗಳ ವೆಬ್‌ಸೈಟ್‌ಗಳನ್ನೇ ಹೋಲುವ ವೆಬ್‌ ವಿಳಾಸ (ಯುಆರ್‌ಎಲ್‌), ಇ–ಮೇಲ್‌ ಐಡಿಗಳನ್ನು ಸೃಷ್ಟಿಸಿ ಮೇಲ್‌, ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಮೂಲಕ ಲಿಂಕ್‌ ಕಳುಹಿಸುವಂತಹ ಕೆಲಸವನ್ನು ವಂಚಕರು ಮಾಡುತ್ತಿದ್ದಾರೆ. ತಂತ್ರಜ್ಞಾನ ಕಂಪನಿಗಳು ಅಥವಾ ದೂರಸಂಪರ್ಕ ಕಂಪನಿಗಳು ಎಷ್ಟೇ ಪ್ರಯತ್ನ ಪಟ್ಟರೂ ಇಂತಹ ನಕಲಿ/ಸ್ಪ್ಯಾಮ್‌ ಇ-ಮೇಲ್‌, ಎಸ್‌ಎಂಎಸ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ADVERTISEMENT

ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಬಳಕೆದಾರರನ್ನು ಹೊಂದಿರುವ ಗೂಗಲ್‌ ಕಂಪನಿಯು ತನ್ನ ಬಳಕೆದಾರರು ಹಾಗೂ ಆ್ಯಂಡ್ರಾಯ್ಡ್‌ ಬಳಕೆದಾರರಿಗಾಗಿ ಆನ್‌ಲೈನ್‌ ವಂಚನೆ ಯತ್ನವನ್ನು ಪತ್ತೆ ಹಚ್ಚುವುದು ಮತ್ತು ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇತ್ತೀಚೆಗೆ ಹಲವು ಸಲಹೆಗಳನ್ನು ನೀಡಿದೆ. ಜಿ-ಮೇಲ್‌ನಲ್ಲಿ ಬರುವ ಶೇ 99.9ರಷ್ಟು ಸ್ಪ್ಯಾಮ್‌ಗಳು, ಕುತಂತ್ರಾಂಶಗಳು, ವಂಚನೆಯ ಯತ್ನವನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತಡೆಯಲಾಗುತ್ತಿದೆ ಎಂದು ಗೂಗಲ್‌ ಹೇಳಿಕೊಂಡಿದೆ. ಹಾಗಿದ್ದರೂ, ಬಳಕೆದಾರರು ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದು ಅದರ ಕಾಳಜಿ.

ಗೂಗಲ್‌ನ ಕೆಲವು ಸಲಹೆಗಳು

*ಸೆಲೆಬ್ರೆಟಿಗಳು, ಪ್ರಭಾವಿಗಳ ದನಿಯಲ್ಲಿರುವ ಆಡಿಯೊ, ವಿಡಿಯೊಗಳ ಬಗ್ಗೆ ಎಚ್ಚರದಿಂದಿರಿ. ಡೀಪ್‌ಫೇಕ್‌ ತಂತ್ರಜ್ಞಾನ ಆಧಾರಿತವಾಗಿ ಅವುಗಳನ್ನು ಸೃಷ್ಟಿಮಾಡಿರುವ ಸಾಧ್ಯತೆ ಇರುತ್ತದೆ. ಮೇಲ್ನೋಟಕ್ಕೆ ಇವುಗಳು ನಿಜವೆಂದು ಅನಿಸಿದರೂ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಎಐ ಆಧಾರಿತ ಡೀಪ್‌ಫೇಕ್‌ ಆಡಿಯೊ, ವಿಡಿಯೊ ಎಂಬುದು ಗೊತ್ತಾಗುತ್ತದೆ. ಬಹುತೇಕ ಡೀಪ್‌ಫೇಕ್‌ ವಿಡಿಯೊದಲ್ಲಿ ತುಟಿಗಳ ಚಲನೆ ಹೋಲಿಕೆ ಯಾಗುವುದಿಲ್ಲ; ಮಾತನಾಡುವವರ ಹಾವಭಾವಕ್ಕೂ, ಕೇಳುವ ಮಾತಿಗೂ ವ್ಯತ್ಯಾಸವಿರುತ್ತದೆ.

*ಹೆಚ್ಚು ಗಳಿಕೆಯ ಭರವಸೆಯ ಕ್ರಿಪ್ಟೊ ಬಂಡವಾಳ ಹೂಡಿಕೆಯ ಮೇಲ್‌ಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇವು ಬಂಡವಾಳ ಹೂಡಿಕೆ ವಂಚನೆಯ ಮೇಲ್‌ ಆಗಿರುವ ಸಾಧ್ಯತೆಯೇ ಹೆಚ್ಚು. ಇದರಲ್ಲಿ ಕಡಿಮೆ ಅವಧಿಯಲ್ಲಿ ಹಲವು ಪಟ್ಟು ಗಳಿಸಬಹುದು ಎಂದು ಆಮಿಷ ಒಡ್ಡಲಾಗುತ್ತದೆ.

*ನಕಲಿ ಆ್ಯ‍ಪ್‌, ವೆಬ್‌ಸೈಟ್‌ಗಳ ಬಗ್ಗೆಯೂ ಎಚ್ಚರದಿಂದ ಇರಬೇಕು. ಬ್ಯಾಂಕ್‌ ಅಥವಾ ವಿವಿಧ ಕಂಪನಿಗಳ ಅಧಿಕೃತ ವೆಬ್‌ಸೈಟ್‌ ಮತ್ತು ಆ್ಯಪ್‌ಗಳನ್ನು ಹೋಲುವ ವೆಬ್‌ ಮತ್ತು ಆ್ಯಪ್‌ಗಳನ್ನು ವಂಚಕರು ಸೃಷ್ಟಿಸಿರುತ್ತಾರೆ. ಡೌನ್‌ಲೋಡ್‌ ಮಾಡುವುದಕ್ಕೂ ಮುನ್ನ ಎರಡೆರಡು ಬಾರಿ ಪರಿಶೀಲಿಸುವುದು ಜಾಣ ನಡೆ.

*ಅಪರಿಚಿತರಿಂದ ಬರುವ ಇ-ಮೇಲ್‌ಗಳ ಬಗ್ಗೆ ಜಾಗರೂಕರಾಗಿರಿ. ನಿಮಗೆ ಗೊತ್ತಿಲ್ಲದ ವ್ಯಕ್ತಿಯೊಬ್ಬರು ಇ-ಮೇಲ್‌ ಕಳುಹಿಸಿ ನಿಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಿದ್ದಾರೆ ಎಂದರೆ ಆ ಮೇಲ್‌ಗೆ ಪ್ರತಿಕ್ರಿಯಿಸದಿರಿ.

*ತುರ್ತಾಗಿ ನಿಮ್ಮ ವಿವರಗಳು, ಬ್ಯಾಂಕ್‌ ಖಾತೆಯ ವಿವರಗಳು, ಮನೆ ವಿಳಾಸ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕೇಳಿ ಬಂದಿರುವ ಇ-ಮೇಲ್‌ಗಳಿಗೆ ಸ್ಪಂದಿಸದಿರಿ.

*ನಿಮ್ಮ ಬ್ಯಾಂಕ್‌ ಅಥವಾ ಇನ್ಯಾವುದೇ ವಿಶ್ವಾಸನೀಯ ಮೂಲದಿಂದ ಬಂದ ಇ-ಮೇಲ್‌ನಲ್ಲಿರುವ ಮಾಹಿತಿಗಳ ಬಗ್ಗೆ ಅನುಮಾನ ಇದ್ದರೆ ಮುಂದುವರಿಯಬೇಡಿ. ಸಂಬಂಧಿಸಿದವರೊಂದಿಗೆ ವಿಚಾರಿಸಿ. ವಂಚಕರು, ಬ್ಯಾಂಕ್‌ ವೆಬ್‌ ವಿಳಾಸ ಅಥವಾ ಇ-ಮೇಲ್‌ ವಿಳಾಸವನ್ನೇ ಹೋಲುವ, ವ್ಯತ್ಯಾಸ ತಕ್ಷಣಕ್ಕೆ ಗಮನಕ್ಕೆ ಬಾರದ ರೀತಿಯ ವಿಳಾಸದಿಂದ ಮೇಲ್‌ ಮಾಡಿ ನಿಮ್ಮನ್ನು ನಂಬಿಸುವ ಸಾಧ್ಯತೆ ಇರುತ್ತದೆ.

*ಇ-ಮೇಲ್‌ನಲ್ಲಿ ಬಂದ ವಿವರಗಳಲ್ಲಿ ನಮೂದಿಸಿರುವ ವೆಬ್‌ ವಿಳಾಸದ ಬಗ್ಗೆ ಸಂದೇಹ ಮೂಡಿದರೆ, ಅದರಲ್ಲಿರುವ ಲಿಂಕ್‌ ಅನ್ನು ತೆರೆಯಬೇಡಿ. ಬದಲಿಗೆ ಯುಆರ್‌ಎಲ್‌ ಬಾರ್‌ನಲ್ಲಿ ಆ ವೆಬ್‌ ವಿಳಾಸವನ್ನು ಟೈಪ್‌ ಮಾಡಿ ಪರಿಶೀಲಿಸಿ. ಯುಆರ್‌ಎಲ್‌ ಬೇರೆ ವಂಚಕ ವೆಬ್‌ಸೈಟ್‌ಗೆ ಲಿಂಕ್‌ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

*ವಂಚಕರು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಾಜೂಕಾಗಿ ಪದಗಳನ್ನು ಪೋಣಿಸಿ ಆಕರ್ಷಕವಾಗಿ ಇ-ಮೇಲ್‌ ಬರೆದಿರಬಹುದು. ಹಾಗಿದ್ದರೂ, ಆ ಮೇಲ್‌ಗಳಲ್ಲಿ ವ್ಯಾಕರಣದೋಷ ಇರಬಹುದು. ಕಾಗುಣಿತ ತಪ್ಪಾಗಿರಬಹುದು. ಅವುಗಳ ಬಗ್ಗೆಯೂ ಗಮನ ಹರಿಸಿ.

*ಪಾಸ್‌ವರ್ಡ್‌ ರಿಸೆಟ್‌ ಮಾಡಿ ಎಂದು ಮನವಿ ಮಾಡುವ ಹಲವು ಇ-ಮೇಲ್‌ಗಳು ಬರುತ್ತಿರುತ್ತವೆ. ಇವುಗಳ ಬಗ್ಗೆಯೂ ಎಚ್ಚರಿಕೆ ಅಗತ್ಯ. ನೀವಾಗಿಯೇ ಪಾಸ್‌ವರ್ಡ್‌ ಬದಲಿಸಲು ಮುಂದಾಗದೇ ಇದ್ದ ಸಂದರ್ಭದಲ್ಲಿ ಬಂದ ಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವುದು ಒಳಿತು.

ಮೂರು ಸೂತ್ರಗಳು ಸದಾ ನೆನಪಿರಲಿ

ಗೂಗಲ್‌ ಈ ಸೂತ್ರಗಳನ್ನು ‘ಗೋಲ್ಡನ್‌ ರೂಲ್ಸ್‌’ ಎಂದು ಕರೆದಿದೆ.

‌1.ತರಾತುರಿ ಬೇಡ, ನಿಧಾನ ವಹಿಸಿ

ಆನ್‌ಲೈನ್‌/ದೂರವಾಣಿ ಕರೆಗಳ ಮೂಲಕ ಮಾಡುವ ವಂಚನೆಯು ಕ್ಷಿಪ್ರವಾಗಿ ನಡೆದು ಹೋಗುತ್ತದೆ. ಈ ವಂಚನೆಯ ಸ್ವರೂಪದ ವಿನ್ಯಾಸವೂ ಅದೇ ರೀತಿ ಇದೆ. ವಂಚಕರು ತುಂಬಾ ತರಾತುರಿಯಲ್ಲಿ ಇರುತ್ತಾರೆ. ಜನರಿಗೆ ಯೋಚಿಸುವುದಕ್ಕೆ ಅವಕಾಶ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬಳಕೆದಾರರು ಗಾಬರಿ ಬೀಳಬಾರದು. ಅವಸರವೂ ಪಡಬಾರದು. ಹೆಚ್ಚು ಯೋಚಿಸಬೇಕು. ವಂಚಕರಿಗೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳುತ್ತಿರಬೇಕು. ನಿಧಾನವಾದಷ್ಟೂ ವಂಚನೆಯ ಬಗ್ಗೆ ಸುಳಿವು ಸಿಗುತ್ತದೆ. ಮೋಸ ಹೋಗುವುದರಿಂದ ಪಾರಾಗಬಹುದು.

2. ಮಾಹಿತಿಯನ್ನು ಪರಿಶೀಲಿಸಿ

ಮೇಲ್‌, ವಾಟ್ಸ್‌ ಆ್ಯಪ್‌, ಮೆಸೆಂಜರ್‌ ಅಥವಾ ಎಸ್‌ಎಂಎಸ್‌ ಮೂಲಕ ಬರುವ ಮಾಹಿತಿಗಳನ್ನು ನೀವು ಪರಿಶೀಲನೆಗೆ ಒಳಪಡಿಸುತ್ತೀರಾ? ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತೀರಾ? ಆನ್‌ಲೈನ್‌ನಲ್ಲಿ ಮೋಸ ಹೋಗುವವರು ಬಹುತೇಕರು ಬಂದ ಸಂದೇಶ ಅಥವಾ ವಿವರಗಳನ್ನು ಹೆಚ್ಚು ಪರಿಶೀಲಿಸಲು ಹೋಗುವುದಿಲ್ಲ. ಆ ತಪ್ಪನ್ನು ಯಾವಾಗಲೂ ಮಾಡಬಾರದು. ವಿವರಗಳನ್ನು ಇಂಟರ್‌ನೆಟ್‌ನಲ್ಲಿ ಜಾಲಾಡಿದಾಗ ವಾಸ್ತವ ಸಂಗತಿ ತಿಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

3. ಸುಮ್ಮನಿರಿ; ಹಣ ಕಳುಹಿಸಬೇಡಿ

ಯಾವುದೇ ಪ್ರತಿಷ್ಠಿತ ಸಂಸ್ಥೆ ಅಥವಾ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ತಕ್ಷಣವೇ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ ಅಥವಾ ಹಣ ನೀಡುವಂತೆ ಒತ್ತಾಯಿಸುವುದಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಹಣವನ್ನು ಕೇಳಿದರೆ ಕಳುಹಿಸದೆ ಸುಮ್ಮನಿದ್ದುಬಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.