ADVERTISEMENT

ಮೊಬೈಲ್‌ನಲ್ಲಿ ಡಾರ್ಕ್ ಮೋಡ್ ಎಂಬ ಹೊಸ ಟ್ರೆಂಡ್: ಏನಿದು, ನಮಗೇನು ಲಾಭ?

ಅವಿನಾಶ್ ಬಿ.
Published 13 ಮಾರ್ಚ್ 2020, 6:44 IST
Last Updated 13 ಮಾರ್ಚ್ 2020, 6:44 IST
ಬೆಳಕಿಲ್ಲದ ವೇಳೆ ಮೊಬೈಲ್ ಫೋನ್ ಬಳಸುವಾಗ ಕಣ್ಣುಗಳಿಗೆ ಹಾನಿ
ಬೆಳಕಿಲ್ಲದ ವೇಳೆ ಮೊಬೈಲ್ ಫೋನ್ ಬಳಸುವಾಗ ಕಣ್ಣುಗಳಿಗೆ ಹಾನಿ   

ಕಳೆದ ಎರಡೇ ಎರಡು ವರ್ಷಗಳಲ್ಲಿ ಮೊಬೈಲ್ ಅವಲಂಬನೆ ಜಾಸ್ತಿಯಾಗಿಬಿಟ್ಟಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಅದರಲ್ಲೂ ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳ ಬಳಕೆ ಹೆಚ್ಚಾಗಿದೆ; ಮಕ್ಕಳಾದರೆ ಗೇಮ್ಸ್‌ನಲ್ಲಿ (ದೊಡ್ಡವರೂ ಕೂಡ!) ಮುಳುಗೇಳುತ್ತಿದ್ದಾರೆ. ಇದರ ನೇರ ಪರಿಣಾಮವಾಗುತ್ತಿರುವುದು ನಮ್ಮ ಕಣ್ಣುಗಳ ಮೇಲೆ ಎಂಬುದು ಸರ್ವವಿದಿತ. ಹಾಗೂ ಕಣ್ಣಿಗೇ ನಿದ್ದೆ ಹತ್ತುವುದರಿಂದಾಗಿ ನಿದ್ದೆಯ ಮೇಲೂ, ಪರಿಣಾಮವಾಗಿ ತತ್ಸಂಬಂಧಿತ ಅನಾರೋಗ್ಯಗಳಿಗೂ ಮೊಬೈಲ್ ಫೋನೆಂಬ ಮಾಯಾಲೋಕವು ನಮಗರಿವಿಲ್ಲದಂತೆಯೇ ಕಾರಣವಾಗುತ್ತಿರುವುದು ದಿಟ.

ನಿದ್ದೆಗೆ ಕಾರಣವಾಗುವ ಹಾರ್ಮೋನುಗಳಲ್ಲಿ ಮೆಲಟೋನಿನ್ ಕೂಡ ಒಂದು. ಆದರೆ ಮೊಬೈಲ್, ಟ್ಯಾಬ್ಲೆಟ್, ಟಿವಿ ಹಾಗೂ ಕಂಪ್ಯೂಟರ್ ಮುಂತಾದ ಸ್ಕ್ರೀನ್‌ಗಳಿಂದ ಹೊರಸೂಸುವ ಬ್ಲೂಲೈಟ್ ಎಂಬ ನೀಲ ಕಿರಣಗಳು ದೇಹದೊಳಗೆ ಈ ಮೆಲಟೋನಿನ್ ಸ್ರವಿಸುವಿಕೆಗೆ ತಡೆಯಾಗುತ್ತವೆ. ತತ್ಪರಿಣಾಮವೇ ನಿದ್ರಾಹೀನತೆ. ಕಾರುಗಳ ಡ್ಯಾಶ್‌ಬೋರ್ಡ್‌ಗಳಲ್ಲಿ ನೀಲಿ ಬಣ್ಣದ ಬೆಳಕಿರುವುದೇಕೆ ಎಂಬುದು ಈಗ ಅರಿವಿಗೆ ಬಂದಿರಬಹುದಲ್ಲ? ಡ್ರೈವಿಂಗ್ ವೇಳೆ ನಿದ್ದೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಅಂತಲೂ ತಿಳಿದುಕೊಳ್ಳಬಹುದು! ಅದಿರಲಿ, ಸ್ಮಾರ್ಟ್‌ಫೋನ್‌ಗಳಲ್ಲಿ ಈ ನೀಲ ಕಿರಣಗಳು ನೇರವಾಗಿ ಕಣ್ಣಿಗೆ ರಾಚುವುದನ್ನು ತಪ್ಪಿಸುವುದಕ್ಕಾಗಿ, ನೀಲಿ ಬೆಳಕನ್ನು ಫಿಲ್ಟರ್ ಮಾಡಬಲ್ಲ ಮತ್ತು ಕೆಂಪು ಬೆಳಕನ್ನು ಆವರಿಸಬಲ್ಲ ಸಾಕಷ್ಟು ಆ್ಯಪ್‌ಗಳು ಬಂದವು. ಅದಲ್ಲದೆ, ರೀಡಿಂಗ್ ಮೋಡ್ ಎಂಬ ಮೋಡ್ ಕೂಡ ಬಂದಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಡಾರ್ಕ್ ಮೋಡ್. ಹಿನ್ನೆಲೆಯಲ್ಲಿರುವ ಬಿಳಿ ಬಣ್ಣದ ಬೆಳಕಿನ ಪ್ರಖರತೆಯನ್ನು ತಡೆಯುವುದಕ್ಕಾಗಿ ಬಣ್ಣವನ್ನು ರಿವರ್ಸ್ ರೂಪಕ್ಕೆ ಪರಿವರ್ತಿಸುವುದೇ ಡಾರ್ಕ್ ಮೋಡ್ ವೈಶಿಷ್ಟ್ಯ. ಅಂದರೆ, ಇಡೀ ಮೊಬೈಲ್‌ನಾದ್ಯಂತ ಪಠ್ಯವು ಬಿಳಿ ಬಣ್ಣದಲ್ಲಿರುತ್ತದೆ, ಯೂಸರ್ ಇಂಟರ್ಫೇಸ್‌ನ ಉಳಿದ ಜಾಗವೆಲ್ಲ ಕಪ್ಪಗಿರುತ್ತದೆ.

ಸುತ್ತಲಲ್ಲಿ ಕತ್ತಲಿರುವಾಗ ಮೊಬೈಲ್ ಫೋನ್‌ನಲ್ಲಿ ಕಾರ್ಯವ್ಯಸ್ತವಾಗಿರುವವರ ಮುಖವನ್ನೊಮ್ಮೆ ನೋಡಿ. ಅವರ ಮುಖಕ್ಕೆ, ವಿಶೇಷವಾಗಿ ಕಣ್ಣಿಗೆ ಆ ಸ್ಕ್ರೀನ್‌ನಿಂದ ಹೊರಸೂಸುವ ಬೆಳಕಿನ ಪ್ರಖರತೆ ಎಷ್ಟೆಂಬುದು ಗೊತ್ತಾಗುತ್ತದೆ. ಸಣ್ಣ ಮಕ್ಕಳಿಗೆ ಎಳೆ ಪ್ರಾಯದಲ್ಲೇ ಕನ್ನಡಕ ಬರುತ್ತಿರುವುದರಲ್ಲಿ ಈ ಮೊಬೈಲ್ ವ್ಯಸನದ ಪಾಲು ಕೂಡ ಇದೆ ಎಂಬುದು ಅದನ್ನು ನೋಡಿದಾಕ್ಷಣ ನಿಮಗೆ ತಿಳಿಯುತ್ತದೆ.

ಮೊಬೈಲ್ ಸ್ಕ್ರೀನ್‌ನಿಂದ ಕಣ್ಣು ಬೇರೆ ಕಡೆ ಹೊರಳಿಸುವುದು ಅಂದರೆ, ಮೊಬೈಲ್ ಬಳಕೆ ಕಡಿಮೆ ಮಾಡುವುದೇ ಕಣ್ಣುಗಳ ರಕ್ಷಣೆಗೆ, ಒಳ್ಳೆಯ ನಿದ್ದೆಗೆ ಮತ್ತು ದೈಹಿಕ-ಮಾನಸಿಕ ಆರೋಗ್ಯಕ್ಕೆ ಏಕೈಕ ಅತ್ಯುತ್ತಮ ಮಾರ್ಗವಾದರೂ, ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಮೊಬೈಲ್ ಅನಿವಾರ್ಯವಾಗಿಬಿಟ್ಟಿದೆ. ಸಂದೇಶಗಳು, ಇಮೇಲ್‌ಗಳು - ಇವುಗಳನ್ನು ನೋಡದಿದ್ದರೆ ಉದ್ಯೋಗ, ವ್ಯಾಪಾರದ ಮೇಲೂ ಪ್ರಭಾವ ಬೀರುತ್ತದೆಯಾದುದರಿಂದ, ಈಗ ವಿಭಿನ್ನ ಆ್ಯಪ್‌ಗಳು ಮಾತ್ರವೇ ಅಲ್ಲದೆ, ಮೊಬೈಲ್ ತಯಾರಿಕಾ ಕಂಪನಿಗಳು ಕೂಡ ಡಾರ್ಕ್ ಮೋಡ್ ಎಂಬ ವಿಶಿಷ್ಟ ಮೋಡ್ ಅನ್ನು ಪರಿಚಯಿಸಿವೆ.

ಮೊಬೈಲ್ ಫೋನ್‌ನಲ್ಲಿ ಸೆಟ್ಟಿಂಗ್ಸ್ ಮೆನುವಿನಲ್ಲಿ 'ಡಿಸ್‌‍ಪ್ಲೇ' ಎಂಬಲ್ಲಿಗೆ ಹೋಗಿ ಈ ಡಾರ್ಕ್ ಮೋಡ್ ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು. ಈ ಮೋಡ್ ಟಾಗಲ್ ಸ್ವಿಚ್ ಕೂಡ ಶಾರ್ಟ್‌ಕಟ್ ಟ್ರೇಯಲ್ಲಿ ಇರುತ್ತದೆ. ಡಾರ್ಕ್ ಮೋಡ್ ಅನ್ನು ನಿರ್ದಿಷ್ಟ ಸಮಯಕ್ಕೆ ಸ್ವಯಂಚಾಲಿತವಾಗಿ ಆನ್ ಆಗುವಂತೆ ಹೊಂದಿಸಲೂಬಹುದು. ಉದಾಹರಣೆಗೆ, ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಕತ್ತಲಿನ ಸಮಯವಾದುದರಿಂದ ಆ ಸಮಯಕ್ಕೆ ಹೊಂದಿಸಿಟ್ಟುಕೊಳ್ಳಬಹುದು.

ಆದರೆ, ಪಠ್ಯ ಓದುವುದಕ್ಕಾಗಿ ಅಥವಾ ಗೇಮ್ ಆಡುವುದಕ್ಕಾಗಿ ತೀರಾ ಹೆಚ್ಚು ಕಾಲ ಡಾರ್ಕ್ ಮೋಡ್ ಬಳಸಿದರೆ, ಕಣ್ಣುಗಳಿಗೆ ಹೆಚ್ಚು ತ್ರಾಸವಾಗುವ ಅಪಾಯವಿದೆ. ಕಾರಣ ಸ್ಪಷ್ಟ. ಡಾರ್ಕ್ ಮೋಡ್‌ನಲ್ಲಿ ಅಕ್ಷರಗಳು ಸ್ಫುಟವಾಗಿ, ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಕಡಿಮೆ. ದೀರ್ಘಕಾಲ ಅದನ್ನು ಸರಿಯಾಗಿ ಓದಿ ತಿಳಿದುಕೊಳ್ಳಲು ಕಣ್ಣಿಗೆ ತ್ರಾಸವಾಗಬಹುದು ಎಂಬುದು ನೆನಪಿರಲಿ.

ಮೊಬೈಲ್‌ನ ಕ್ರೋಮ್ ಬ್ರೌಸರ್ ಆ್ಯಪ್, ಗೂಗಲ್ ಆ್ಯಪ್, ಜಿಮೇಲ್, ಟ್ವಿಟರ್, ರೆಡಿಟ್, ಎಡ್ಜ್ ಬ್ರೌಸರ್ ಮುಂತಾದವೆಲ್ಲವೂ ಈಗ ಡಾರ್ಕ್ ಮೋಡ್ ಹೊಂದಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆ ನಾವು-ನೀವೆಲ್ಲರೂ ಹೆಚ್ಚಾಗಿ ಬಳಸುವ ವಾಟ್ಸ್ಆ್ಯಪ್. ಈ ಡಾರ್ಕ್ ಮೋಡ್ ಕಣ್ಣಿನ ಶ್ರಮವನ್ನು ಒಂದಷ್ಟು ಕಡಿಮೆ ಮಾಡುವುದರೊಂದಿಗೆ, ಬ್ಯಾಟರಿ ಚಾರ್ಜ್ ಉಳಿತಾಯಕ್ಕೂ ನೆರವಾಗುತ್ತದೆ.

ವಾಟ್ಸ್ಆ್ಯಪ್‌ನಲ್ಲಿ ಡಾರ್ಕ್ ಮೋಡ್
ಇದು ತೀರಾ ಇತ್ತೀಚೆಗೆ ಕಲ್ಪಿಸಿದ ಹೊಸ ಸೌಲಭ್ಯ. ವಾಟ್ಸ್ಆ್ಯಪ್ ಅನ್ನು ಹೊಚ್ಚ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ನಂತರ ಅದನ್ನು ತೆರೆದು, ಮೇಲ್ಭಾಗದ ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳನ್ನು ಒತ್ತಿದರೆ ಕಾಣಿಸಿಕೊಳ್ಳುವ ಮೆನುವಿನಿಂದ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಅಲ್ಲಿ, ಚಾಟ್ಸ್ ಎಂಬಲ್ಲಿ ಥೀಮ್ ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಡಾರ್ಕ್ ಮೋಡ್ ಆಯ್ದುಕೊಂಡರಾಯಿತು.

ಮೊಬೈಲ್‌ನಲ್ಲಿ ಕೆಲಸ ಮಾಡುತ್ತಿರುವಾಗ ಕಣ್ಣುಗಳಲ್ಲಿ ನೀರು ಬಂದರೆ ಅದಕ್ಕೆ ಪ್ರಧಾನ ಕಾರಣ ಅದರಲ್ಲಿರುವ ಸಾಮಾನ್ಯವಾದ ವೈಟ್ ಮೋಡ್ ಅಲ್ಲ. ಡಾರ್ಕ್ ಮೋಡ್ ಹಾಕಿದಾಕ್ಷಣ ಕಣ್ಣೀರು ನಿಲ್ಲುತ್ತದೆಯೆಂದಾಗಲೀ, ತಲೆನೋವು ಕಡಿಮೆಯಾಗುತ್ತದೆಯೆಂದಾಗಲೀ ಅಥವಾ ನಿದ್ದೆ ಸರಿಹೋಗುತ್ತದೆಯೆಂದಾಗಲೀ ತಿಳಿಯುವಂತಿಲ್ಲ. ಇದಕ್ಕೆ ಪ್ರಧಾನ ಕಾರಣ, ನೀವು ಮೊಬೈಲ್ ಬಳಸುವ ಸಮಯ. ಹೀಗಾಗಿ ಸ್ಕ್ರೀನ್‌ನಿಂದ ಹೊರಸೂಸುವ ಆ ಪ್ರಖರ ಬಿಳಿ ಬೆಳಕನ್ನು ಕಡಿಮೆ ಮಾಡುವುದು, ಅಂದರೆ ಮೊಬೈಲ್ ಬಳಸುವುದನ್ನೇ ಕಡಿಮೆ ಮಾಡುವುದು ಎಲ್ಲಕ್ಕೂ ಮದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.