ADVERTISEMENT

Online Privacy: ಇಂಟರ್ನೆಟ್ ಬಳಸುವಾಗ ಖಾಸಗಿ ಮಾಹಿತಿ ರಕ್ಷಿಸಿಕೊಳ್ಳುವುದು ಹೇಗೆ?

ಆನ್‌ಲೈನ್: ಅರಿತು ಬಳಸಿದರೆ ಖಾಸಗಿ ಮಾಹಿತಿ ಸುರಕ್ಷಿತ

ಅವಿನಾಶ್ ಬಿ.
Published 13 ಜುಲೈ 2020, 19:45 IST
Last Updated 13 ಜುಲೈ 2020, 19:45 IST
ಖಾಸಗಿ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆಯಿರಲಿ
ಖಾಸಗಿ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆಯಿರಲಿ   

ಕೋಟ್ಯಂತರ ಬಳಕೆದಾರರ ದತ್ತಾಂಶ ಸೋರಿಕೆ, ಮಾರುಕಟ್ಟೆ ಏಜೆನ್ಸಿಗಳಿಂದ ದತ್ತಾಂಶ ಮಾರಾಟ, ಆನ್‌ಲೈನ್‌ನಲ್ಲಿ ನಮ್ಮ ಹೆಜ್ಜೆಯ ಜಾಡು ಹಿಡಿಯುವ ಆ್ಯಪ್, ಸಾಮಾಜಿಕ ಮಾಧ್ಯಮಗಳು; ಜೊತೆಗೆ ಫೀಶಿಂಗ್ ಹಾಗೂ ಸ್ಪೈವೇರ್ ಮುಂತಾದ ಮಾಲ್‌ವೇರ್‌ಗಳ ಮೂಲಕ ನಮ್ಮ ಖಾಸಗಿ ಮಾಹಿತಿಗೆ ಕನ್ನ ಮತ್ತು ನಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡ ಅದೆಷ್ಟೋ ಸುದ್ದಿಗಳನ್ನು ಈ ಕಾಲದಲ್ಲಿ ನಾವು ಕನಿಷ್ಠ ದಿನಕ್ಕೊಂದರಂತೆ ಓದುತ್ತಿದ್ದೇವೆ.

ಇಂಟರ್ನೆಟ್ ಕ್ರಾಂತಿ ಯಾವಾಗ ಆಯಿತೋ ಅಂದಿನಿಂದಲೇ ಡೇಟಾ ಅಥವಾ ದತ್ತಾಂಶದ ಪ್ರೈವೆಸಿ (ಖಾಸಗಿತನ, ಗೋಪ್ಯತೆ) ವಿಷಯ ಅತೀ ಹೆಚ್ಚು ಚರ್ಚೆಗೀಡಾದ ವಿಷಯ. ಸ್ಮಾರ್ಟ್ ಮೊಬೈಲ್ ಫೋನ್ ಕ್ರಾಂತಿಯಿಂದಾಗಿ ಇಂಟರ್ನೆಟ್ ಬಳಕೆ ಹೊಸ ಹೊಸ ದಿಕ್ಕಿಗೆ ಹೊರಳಿದರೂ, ವ್ಯಕ್ತಿಗತ ವಿಷಯಗಳನ್ನು ಕಾಪಾಡಿಕೊಳ್ಳುವ ತಂತ್ರಜ್ಞಾನದಲ್ಲಿ ಯಾವುದೇ ಅದ್ಭುತ ಎನಿಸಬಹುದಾದ ಪ್ರಗತಿ ಕಂಡುಬಂದಿಲ್ಲ. ಎರಡು ಹಂತದ ದೃಢೀಕರಣ (Two Step Verification), ಎನ್‌ಕ್ರಿಪ್ಷನ್ ಮುಂತಾದ ಅದೆಷ್ಟೋ ಆನ್‌ಲೈನ್ ಸುರಕ್ಷತೆಗೆ ಸಂಬಂಧಿಸಿದ ಪದಗಳನ್ನು ನಾವು ಕೇಳುತ್ತಿದ್ದೇವಾದರೂ, ಖಾಸಗಿ ಮಾಹಿತಿ ಸೋರಿಕೆಯಾಗುವುದು, ಬ್ಯಾಂಕ್ ಖಾತೆಗಳಿಂದ ಹಣ ವಂಚನಾ ಪ್ರಕರಣಗಳು ನಿಂತಿಲ್ಲ.

ಸೋಷಿಯಲ್ ಮೀಡಿಯಾ ಎಂದರೆ ಅದೊಂದು ಮುಚ್ಚಲಾಗದ ಪುಸ್ತಕವಿದ್ದಂತೆ. ಏನು ಬೇಕಾದರೂ ಅದರಲ್ಲಿರಬಹುದು. ಅದಕ್ಕೆ ನಮ್ಮ ಇಮೇಲ್ ವಿಳಾಸ ಗೊತ್ತು, ಫೋನ್ ನಂಬರು ಗೊತ್ತು, ನಾವಿರುವ ಸ್ಥಳ, ನಾವು ಓಡಾಡಿದ ಜಾಗಗಳು, ಸಂಪರ್ಕದ ವಿಳಾಸ, ಊರು, ನಮ್ಮ ವಿದ್ಯಾಭ್ಯಾಸ, ನೌಕರಿ, ಕುಟುಂಬ - ಹೀಗೆ ಖಾಸಗಿ ಎಂದು ಪರಿಗಣಿಸುವ ಎಲ್ಲ ಮಾಹಿತಿಯೂ ಅಡಕವಾಗಿರುತ್ತದೆ.

ADVERTISEMENT

ಸೋಷಿಯಲ್ ಮೀಡಿಯಾ ಖಾತೆಗೆ ಎಲ್ಲವನ್ನೂ ಹಂಚಿಕೊಳ್ಳುವ ನಾವು ಸರ್ಕಾರಕ್ಕೆ, ಸರ್ಕಾರಿ ಸವಲತ್ತುಗಳಿಗೆ ಇದೇ ಮಾಹಿತಿಯನ್ನು ನೀಡುವಾಗ 'ಪ್ರೈವೆಸಿ' ಎನ್ನುತ್ತಾ ಗದ್ದಲವೆಬ್ಬಿಸುವ ವಿಪರ್ಯಾಸದ ಮನಸ್ಥಿತಿಯೂ ಇದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ನಮ್ಮ ಖಾಸಗಿತನವನ್ನು ಸಂರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್.

* ಕೆಲವು ವೆಬ್ ತಾಣಗಳ ಸವಲತ್ತು ಪಡೆಯಬೇಕಿದ್ದರೆ ಅವುಗಳಿಗೆ ಲಾಗಿನ್ ಆಗಬೇಕಾಗುತ್ತದೆ. ನಮ್ಮ ಇಮೇಲ್, ಫೋನ್ ನಂಬರ್ ಅಥವಾ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಬಹುದು. ಈ ಸಂದರ್ಭದಲ್ಲಿ, ಮುಂದೇನಿದೆ ಎಂಬುದನ್ನು ಗಮನಿಸದೆಯೇ ಎಲ್ಲದಕ್ಕೂ Yes, Continue, Next ಎಂಬುದೇ ಮುಂತಾದ ಬಟನ್‌ಗಳನ್ನು ಕ್ಲಿಕ್ ಮಾಡುತ್ತಾ ಹೋಗುತ್ತೇವೆ. 'ಬೇಗ ಪೂರ್ಣಗೊಳಿಸಿದರೆ ಸಾಕು' ಎಂಬ ಈ ಮನೋಭಾವ ಬದಲಾಗಬೇಕು. ಸರಿಯಾಗಿ ಓದಿಕೊಂಡು, ಕ್ಲಿಕ್ ಮಾಡಬೇಕು.

* ಸೋಷಿಯಲ್ ಮೀಡಿಯಾ ಖಾತೆಯ 'ಪ್ರೈವೆಸಿ ಸೆಟ್ಟಿಂಗ್ಸ್' ವಿಭಾಗದಲ್ಲಿ, ಬಹಿರಂಗಪಡಿಸಬಾರದ ಅಂಶಗಳು ಬೇರೆಯವರಿಗೆ ಕಾಣಿಸದಂತೆ ಹೊಂದಿಸಬೇಕು.

* ಅತ್ಯಂತ ಪ್ರಬಲವಾದ ಪಾಸ್‌ವರ್ಡ್ ಅಗತ್ಯ. ಅದರಲ್ಲಿ ನಮ್ಮ ಹೆಸರು, ಜನ್ಮದಿನ, ಅನುಕ್ರಮ ಸಂಖ್ಯೆ/ಅಕ್ಷರಗಳು ಮುಂತಾದವು ಇಲ್ಲದಂತೆ ನೋಡಿಕೊಳ್ಳಿ. ಯಾವುದಾದರೂ ನಿಮಗಿಷ್ಟವಾದ ವಾಕ್ಯವನ್ನೇ (ಕನಿಷ್ಠ 12 ಅಕ್ಷರಗಳಿರುವ) ಪಾಸ್‌ವರ್ಡ್ ಆಗಿ ಇರಿಸಿಕೊಳ್ಳಬಹುದು. ಕನಿಷ್ಠ ಒಂದು ಸಂಖ್ಯೆ, ಒಂದು ಚಿಹ್ನೆ ಹಾಗೂ ಅಕ್ಷರಗಳು ಇರುವಂತೆಯೇ ಪಾಸ್‌ವರ್ಡ್ ಹೊಂದಿಸಬೇಕಾಗುತ್ತದೆ.

* ಪಾಸ್‌ವರ್ಡನ್ನು ಆಗಾಗ್ಗೆ ಬದಲಿಸುತ್ತಿರಬೇಕು. ಇದು ಕಷ್ಟವಾದರೂ, ನಮ್ಮ ಸುರಕ್ಷತೆಗಾಗಿ ಅತ್ಯಂತ ಮುಖ್ಯ.

* ಪಾಸ್‌ವರ್ಡ್‌ನಂತಹಾ ಖಾಸಗಿ ಮಾಹಿತಿಯನ್ನು ಕ್ಲೌಡ್‌ನಲ್ಲಿ ಎಂದರೆ ಗೂಗಲ್ ಡಾಕ್ಸ್, ಗೂಗಲ್ ಡ್ರೈವ್, ಒನ್‌ಡ್ರೈವ್, ಡ್ರಾಪ್‌ಬಾಕ್ಸ್ ಮುಂತಾದವುಗಳಲ್ಲಿ ಸಂಗ್ರಹಿಸಿಡಲೇಬೇಡಿ.

* ಯಾವುದೋ ಮೊಬೈಲ್‌ಗಾಗಿ ಸರ್ಚ್ ಮಾಡುತ್ತೀರಿ. ನಂತರ ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಕ್ರಾಲ್ ಮಾಡುತ್ತಿರುವಾಗಲೂ ಅದನ್ನೇ ಮತ್ತೆ ಕಾಣುತ್ತೀರಲ್ಲವೇ? ಇದರರ್ಥ, ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಆ ಸೋಷಿಯಲ್ ಮೀಡಿಯಾ ತಾಣವು ಟ್ರ್ಯಾಕ್ ಮಾಡಿದೆ ಎಂದರ್ಥ. ಮಾರಾಟಗಾರರು ಅದನ್ನೇ ಬಳಸಿ, ನೀವು ಸರ್ಚ್ ಮಾಡುವ ವಿಷಯಗಳನ್ನೇ ಮತ್ತೆ ಮತ್ತೆ ತೋರಿಸುತ್ತಾರೆ. ಪರಿಹಾರ? ಯಾವುದೇ ವಿಷಯ ಹುಡುಕಾಟ ಮಾಡಲು ಬ್ರೌಸರ್‌ನಲ್ಲಿ ಸಂಪೂರ್ಣವಾಗಿ ಟ್ರ್ಯಾಕ್ ಮಾಡಲಾರದ ಇನ್‌ಕಾಗ್ನಿಟೋ ಮೋಡ್ ಎಂಬ ಪ್ರೈವೇಟ್ ವಿಂಡೋ ಬಳಸಿ.

* ಮುಖ್ಯವಾದ ವಿಚಾರವೆಂದರೆ, ನಿಮ್ಮ ಬ್ಯಾಂಕಿಂಗ್ ಖಾತೆಗೆ ಬಳಸುವ ಇಮೇಲ್ ವಿಳಾಸ ಮತ್ತು ಫೋನ್ ನಂಬರು ನಿಮಗೆ ಮತ್ತು ಮನೆಯವರಿಗೆ ಮಾತ್ರವೇ ಗೊತ್ತಿರಲಿ. ಬೇರೆ ಯಾವುದೇ ಆನ್‌ಲೈನ್ ವ್ಯವಹಾರಗಳಿಗೆ, ಸ್ನೇಹಿತರ ಸಂಪರ್ಕಕ್ಕೆ ಬೇರೆಯೇ ಮೊಬೈಲ್ ನಂಬರ್, ಇಮೇಲ್ ವಿಳಾಸ ಬಳಸಿಕೊಳ್ಳಿ.

* ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಆಗಿರುವ ಅಥವಾ ಅದನ್ನು ಸಕ್ರಿಯಗೊಳಿಸಿದ ಬಳಿಕವೇ ಯಾವುದೇ ಸಂವಹನ ಮಾಧ್ಯಮಗಳನ್ನು ಬಳಸಿ. ವಾಟ್ಸ್ಆ್ಯಪ್‌ನಲ್ಲಿ ಅದು ಡೀಫಾಲ್ಟ್ ಆಗಿದ್ದರೆ, ಟೆಲಿಗ್ರಾಂ, ಮೆಸೆಂಜರ್ ಮುಂತಾದವುಗಳಲ್ಲಿ ನಾವೇ ಅದನ್ನು ಸಕ್ರಿಯಗೊಳಿಸಬೇಕಾಗುತ್ತದೆ.

* ಆ್ಯಪ್‌ಗಳು, ಬ್ರೌಸರ್ ಎಕ್ಸ್‌ಟೆನ್ಷನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಅದಕ್ಕೆ ನೀಡಲಾಗುವ ಅನುಮತಿಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ.

* ಫೋನ್ ಅಥವಾ ಕಂಪ್ಯೂಟರ್‌ಗೆ ಪ್ರಬಲ ಸ್ಕ್ರೀನ್ ಲಾಕ್ ಬಳಸಿ, ಲಾಕ್‌ಸ್ಕ್ರೀನ್ ನೋಟಿಫಿಕೇಶನ್‌ಗಳನ್ನು ನಿರ್ಬಂಧಿಸಿಬಿಡಿ.

* ಉಚಿತವಾಗಿ ಸಿಗುತ್ತದೆಂಬ ಕಾರಣಕ್ಕೆ, ವಿಶೇಷವಾಗಿ ಬ್ಯಾಂಕಿಂಗ್‌ನಂತಹಾ ಸೂಕ್ಷ್ಮ ಮಾಹಿತಿಯ ವಿನಿಮಯದ ಸಂದರ್ಭದಲ್ಲಿ, ಸಾರ್ವಜನಿಕ ವೈಫೈ ಬಳಸಲೇಬೇಡಿ.

* ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ಖಾಸಗಿ ವಿಚಾರಗಳನ್ನೂ ಹಂಚಿಕೊಳ್ಳಬೇಡಿ.

* ಅಪರಿಚಿತರಿಂದ ಬರುವ ಅಥವಾ ಸ್ನೇಹಿತರಂತೆ, ಅಧಿಕೃತ ಬ್ಯಾಂಕ್‌ನಿಂದ ಬಂದಂತೆ ಕಾಣಿಸುವ ಇಮೇಲ್‌ಗಳ ಲಿಂಕ್ ಕ್ಲಿಕ್ ಮಾಡುವ ಮೊದಲು ಪುನಃ ಯೋಚಿಸಿ.

ಈ ಟಿಪ್ಸ್ ಅನುಸರಿಸಿದರೆ, ನಾವು ಆನ್‌ಲೈನ್‌ನಲ್ಲಿ ಶೇ.100 ಸುರಕ್ಷಿತ ಎಂದುಕೊಳ್ಳುವಂತಿಲ್ಲ, ಆದರೆ ಹೆಚ್ಚಿನ ಅಪಾಯ ತಪ್ಪಿಸಬಹುದು ಎಂದಷ್ಟೇ ಖಾತ್ರಿ. ಇದು ತಂತ್ರಜ್ಞಾನದ ಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.