ಬೆಂಗಳೂರು: ಪೆಗಾಸಸ್ ಎಂಬ ಸ್ಪೈವೇರ್ ಅಪ್ಲಿಕೇಶನ್ ಈಗ ಜಾಗತಿಕವಾಗಿ ಸದ್ದು ಮಾಡುತ್ತಿದೆ. ವಿವಿಧ ಮಂದಿಯ ಸ್ಮಾರ್ಟ್‌ಫೋನ್ ಅನ್ನು ಪೆಗಾಸಸ್ ಬಳಸಿ ಹ್ಯಾಕ್ ಮಾಡಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.
ಬಳಕೆದಾರರ ಫೋನ್‌ಗಳನ್ನು ವಿವಿಧ ರೀತಿಯಲ್ಲಿ ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗುತ್ತದೆ. ಅಲ್ಲದೆ, ಪೆಗಾಸಸ್ ಮಾದರಿಯ ಇತರ ಹ್ಯಾಕಿಂಗ್ ಅಪ್ಲಿಕೇಶನ್ ಕೂಡ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಸಾಧ್ಯತೆಯೂ ಇರಬಹುದು. ಯಾವ ರೀತಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹ್ಯಾಕಿಂಗ್ ಅಪ್ಲಿಕೇಶನ್ ಅಳವಡಿಸುವ ಸಾಧ್ಯತೆ ಇದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.
ಯುಎಸ್‌ಬಿ ಚಾರ್ಜರ್
ಅಪರಿಚಿತ ಪ್ರದೇಶಗಳಲ್ಲಿ ಮತ್ತು ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನಿಮ್ಮದೇ ಚಾರ್ಜರ್, ಯುಎಸ್‌ಬಿ ಬಳಸಿ. ಅನ್ಯರು ನೀಡುವ ಚಾರ್ಜರ್, ಯುಎಸ್‌ಬಿ ಕೇಬಲ್ ಬಳಕೆ ಸುರಕ್ಷಿತವಲ್ಲ. ಅದರ ಮೂಲಕ ನಿಮ್ಮ ಫೋನ್‌ನಲ್ಲಿ ನಕಲಿ ಅಪ್ಲಿಕೇಶನ್ ಇನ್‌ಸ್ಟಾಲ್ ಆಗಬಹುದು, ನಿಮ್ಮ ಫೋನ್ ಡಾಟಾ ಕಳವಾಗಲೂಬಹುದು.
ಬ್ಲೂಟೂತ್ ಬಳಕೆ ಬಗ್ಗೆ ಎಚ್ಚರಿಕೆ
ಬ್ಲೂಟೂತ್ ಆನ್ ಆಗಿರುವಾಗ ಅದರ ಮೂಲಕ ನಿಮ್ಮ ಫೋನ್ ಅನ್ನು ಸಂಪರ್ಕಿಸಿ, ಆ್ಯಪ್ ಇನ್‌ಸ್ಟಾಲ್ ಮಾಡುವ ಸಾಧ್ಯತೆಯೂ ಇರುತ್ತದೆ.
ಮಿಸ್ ಕಾಲ್ ನೀಡುವ ಮೂಲಕ..
ಕೆಲವೊಂದು ಸಂದರ್ಭದಲ್ಲಿ ಹ್ಯಾಕರ್‌ಗಳು ಮಿಸ್ ಕಾಲ್ ನೀಡುವ ಮೂಲಕ, ನಿಮ್ಮ ಫೋನ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಬಹುದು. ಅಲ್ಲಿ, ನೀವು ಕರೆ ಸ್ವೀಕರಿಸಿದೇ ಇದ್ದರೂ, ಹ್ಯಾಕಿಂಗ್ ಆ್ಯಪ್ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಬಹುದು.
ನಕಲಿ ಆ್ಯಪ್
ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಇನ್‌ಸ್ಟಾಲ್ ಆಗಿರುವ ಆ್ಯಪ್ ಮೂಲಕ, ಇಲ್ಲವೆ ಥರ್ಡ್ ಪಾರ್ಟಿ ಆ್ಯಪ್ ಮೂಲಕವೂ ಸ್ಪೈವೇರ್ ಅಪ್ಲಿಕೇಶನ್ ನಿಮ್ಮ ಫೋನ್ ಪ್ರವೇಶಿಸಬಹುದು.
ಸಿಮ್ ಕಾರ್ಡ್ ಸ್ವಾಪ್
ಕಸ್ಟಮರ್ ಕೇರ್ ಎಂದು ಹೇಳಿಕೊಂಡು ಕರೆ ಮಾಡುವ ನಕಲಿ ಅಧಿಕಾರಿಗಳ ಸೋಗಿನ ಹ್ಯಾಕರ್‌ಗಳು, ನಿಮ್ಮ ಸಿಮ್ ಕಾರ್ಡ್ ನಕಲಿ ಮಾಡಿಕೊಂಡು, ಅದರ ಮೂಲಕ ವಂಚನೆ ಎಸಗಬಹುದು.
ವಾಟ್ಸ್‌ಆ್ಯಪ್, ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ನಕಲಿ ಲಿಂಕ್
ಉಚಿತ ಕೊಡುಗೆ, ಆಫರ್ ಹೆಸರಿನ ನಕಲಿ ಲಿಂಕ್ ಕಳುಹಿಸಿದಾಗ, ಅದನ್ನು ಕ್ಲಿಕ್ ಮಾಡಿದರೆ, ನಿಮ್ಮ ಫೋನ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಆಗುತ್ತದೆ. ಅದರ ಮೂಲಕ ಫೋನ್ ಹ್ಯಾಕ್ ಆಗಬಹುದು.
ಉಚಿತ ವೈಫೈ
ಸಾರ್ವಜನಿಕ ವೈಫೈ ಬಳಕೆ ಮಾಡುವಾಗಲೂ, ಅದರ ಮೂಲಕವೂ ಸ್ಪೈವೇರ್ ನಿಮ್ಮ ಫೋನ್ ಪ್ರವೇಶಿಸಬಹುದು. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಬಳಸುವಾಗ ಎಚ್ಚರಿಕೆ ವಹಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.