ADVERTISEMENT

Illusion Diffusion AI: ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ!

ಅವಿನಾಶ್ ಬಿ.
Published 27 ಸೆಪ್ಟೆಂಬರ್ 2023, 0:32 IST
Last Updated 27 ಸೆಪ್ಟೆಂಬರ್ 2023, 0:32 IST
ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿರುವ ವಿಶಿಷ್ಟ ಚಿತ್ರಗಳು. ಯಶ್ ಹೋಲಿಕೆ. ಶೇರ್ ಮಾಡಿದವರು ಧೀರಜ್ ಪೊಯ್ಯೆಕಂಡ
ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿರುವ ವಿಶಿಷ್ಟ ಚಿತ್ರಗಳು. ಯಶ್ ಹೋಲಿಕೆ. ಶೇರ್ ಮಾಡಿದವರು ಧೀರಜ್ ಪೊಯ್ಯೆಕಂಡ   

ಅತ್ಯಾಕರ್ಷಕ ಪ್ರಕೃತಿ, ನೀರಿನ ನಡುವಿನಲ್ಲೊಂದು ದ್ವೀಪ, ದೋಣಿಗಳು, ಹರಿಯುವ ತೊರೆ, ಹಚ್ಚ ಹಸಿರಿನ ಬೆಟ್ಟಗುಡ್ಡಗಳು, ಝರಿ, ಅಲ್ಲೊಂದು ಸುಂದರ ಮನೆ - ಈ ಚಿತ್ರ ಯಾರಿಗಿಷ್ಟವಾಗುವುದಿಲ್ಲ? ಆದರೆ ಇದರಲ್ಲಿ ಇಷ್ಟೇ ಇರುವುದಲ್ಲ. ನಿಮ್ಮ ನೆಚ್ಚಿನ ನಾಯಕನ ಮುಖವೂ ಅಲ್ಲಿ ನಿಮಗೆ ಕಂಡೀತು!

ಇದುವೇ ‘ಆಪ್ಟಿಕಲ್ ಇಲ್ಯೂಶನ್’ ಅಥವಾ ‘ದೃಗ್‌ಭ್ರಾಂತಿ’ (ದೃಷ್ಟಿಭ್ರಮೆ). ದೃಷ್ಟಿಗೆ ನೇರವಾಗಿ ಕಾಣುವ ದೃಶ್ಯವೇ ಒಂದು, ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಕಾಣಿಸುವ ಚಿತ್ರಣವೇ ಇನ್ನೊಂದು. ‘ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು’ ಅಥವಾ ‘ನೋಡಿದ್ದು ಸುಳ್ಳಾಗಬಹುದು’ ಎಂಬೆಲ್ಲ ಗಾದೆಮಾತುಗಳು ಇದಕ್ಕೆ ಅನ್ವಯವೇ. ಇನ್ನು, ಅವರವರ ಭಾವಕ್ಕೆ, ಬುದ್ಧಿಶಕ್ತಿಗೆ ತಕ್ಕ ನೋಟ ಎಂಬ ಮಾತು ಕೂಡ ಅನ್ವಯವಾಗಬಲ್ಲದು. ಏಕೆಂದರೆ, ‘ನಾನು ನೋಡಿದ್ದೇ ಸರಿ’ ಎಂದು ಇಲ್ಲಿ ದರ್ಪ ತೋರುವಂತಿಲ್ಲ. ಒಟ್ಟಾರೆಯಾಗಿ ಇದರರ್ಥ, ಒಂದು ನೋಟಕ್ಕೆ ಹಲವು ಭಾವಗಳಿರಬಹುದು.

ಕಳೆದ ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಫೋಟೊಗಳದ್ದೇ ಕಾರುಬಾರು. ಸುಂದರ ಪ್ರಕೃತಿಯ ಆಕರ್ಷಕ ಚಿತ್ರಗಳನ್ನು ಸರಿಯಾಗಿ ಗಮನಿಸಿದಾಗ, ಅಲ್ಲೊಬ್ಬ ವ್ಯಕ್ತಿಯ ಮುಖ ಕಾಣಿಸುತ್ತದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕೀಯ ಮುಖಂಡರ ಚಿತ್ರಗಳೆಲ್ಲ ಈ ರೀತಿಯಾಗಿ ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು.

ADVERTISEMENT

ಏನಿದು?

ಇದು ಎಐ ಚಮತ್ಕಾರ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಕ್ರಾಂತಿಕಾರಿ ತಂತ್ರಜ್ಞಾನದ ಫಲವಿದು. ಯಾವಾಗ ಚಾಟ್‌ಜಿಪಿಟಿ ಎಂಬ ಆ್ಯಪ್/ವೆಬ್ ಇಂಟರ್‌ಫೇಸ್ ಜನಸಾಮಾನ್ಯರಿಗೆ ಸುಲಭವಾಗಿ ದೊರೆಯತೊಡಗಿತೋ, ಅಲ್ಲಿ ಸೃಜನಶೀಲ ಸಾಹಿತ್ಯ ಮತ್ತು ಇತರ ಕಂಟೆಂಟ್ ರಚನೆಯೂ ಹೆಚ್ಚಾಗತೊಡಗಿತು. ಪಠ್ಯವಷ್ಟೇ ಅಲ್ಲ, ಧ್ವನಿ ಹಾಗೂ ವೈವಿಧ್ಯಮಯವಾದ ವಿಡಿಯೊಗಳು ಕೂಡ ಸಾಕಷ್ಟು ನಿರ್ಮಾಣಗೊಂಡವು. ನಾವು ನಿರ್ದಿಷ್ಟ ವಿಷಯದ ಕುರಿತು ಒಂದು ಸುದ್ದಿ ಅಥವಾ ಲೇಖನ ಮಾಡಿಕೊಡು ಎಂದು ಎಐ ಎಂಜಿನ್‌ಗೆ ಆದೇಶಿಸಿದರೆ ಕೆಲವೇ ಕ್ಷಣಗಳಲ್ಲಿ ಆ ಕುರಿತ ಸಮಗ್ರ ವರದಿ ಅಥವಾ ಲೇಖನವೊಂದು ಸಿದ್ಧವಾಗುತ್ತದೆ. ಅಥವಾ ವಿಡಿಯೊಗೆ ಬೇಕಾದ ಸ್ಕ್ರಿಪ್ಟ್ ಸಿದ್ಧ. ಅದನ್ನು ಓದುವುದಕ್ಕೆ ಆ್ಯಂಕರ್‌ಗಳನ್ನೂ ನೇಮಿಸಬೇಕಿಲ್ಲ, ನಿರೂಪಕರನ್ನು ಕೂಡ ಆನ್‌ಲೈನ್‌ನಲ್ಲೇ ಸಿದ್ಧಪಡಿಸುವ ವಿಡಿಯೊ ತಂತ್ರಜ್ಞಾನಗಳೀಗ ಉಚಿತವಾಗಿಯೂ ಲಭ್ಯವಾಗತೊಡಗಿವೆ. ಅದಕ್ಕೆ ಹೊಸ ಸೇರ್ಪಡೆ ವಿನ್ಯಾಸಭರಿತ ಚಿತ್ರಗಳು. ಕೆಲವು ವರ್ಷಗಳ ಹಿಂದೆ ದೇವರ ಅಥವಾ ದೃಶ್ಯಗಳ 3ಡಿ ಚಿತ್ರಪಟಗಳನ್ನು ಕೆಲವರಾದರೂ ನೋಡಿರುತ್ತೀರಿ. ಸ್ವಲ್ಪವೇ ಓರೆಯಾಗಿಸಿದರೆ ಅದು ಬೇರೆ ದೇವರ ಚಿತ್ರವನ್ನು ಅಥವಾ ದೃಶ್ಯವನ್ನು ತೋರಿಸುತ್ತಿತ್ತು. ಅದರ ಮುಂದುವರಿದ ರೂಪವೇ ಈ ತಂತ್ರಜ್ಞಾನ.

ಹೊಸ ಟ್ರೆಂಡ್

‘ಇಲ್ಯೂಶನ್ ಡಿಫ್ಯೂಶನ್ ಎಐ’ (Illusion Diffusion AI) ಎಂಬುದು ಈ ಹೊಸ ತಂತ್ರಜ್ಞಾನದ ಹೆಸರು. ಇದುವರೆಗೆ ಇಂಥದ್ದಿರುವುದು ಸಾಧ್ಯವೇ ಇಲ್ಲ ಎಂದು ನಾವಂದುಕೊಂಡಿರುವ, ವಸ್ತುಗಳು ಅಥವಾ ದೃಶ್ಯಗಳಿಂದ ನೈಜವೆಂಬಂತೆ ತೋರುವ ಚಿತ್ರಗಳನ್ನು ರಚಿಸುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಿದು. ಸುಂದರವಾದ ದೃಶ್ಯವೊಂದು ನಿಧಾನವಾಗಿ ಚದುರುತ್ತಾ ಹೋಗಿ, ಎರಡೂ ಚಿತ್ರಣಗಳನ್ನು ತೋರಿಸುವ ಹಂತದಲ್ಲಿ ಭ್ರಾಮಕ ಚಿತ್ರವೊಂದು ಸೃಷ್ಟಿಯಾಗುತ್ತದೆ. ಇದು ನಿರ್ದಿಷ್ಟವಾದ ಚದುರುವಿಕೆ (ಸ್ಟೇಬಲ್ ಡಿಫ್ಯೂಶನ್) ತಂತ್ರಜ್ಞಾನ.

‘ಯಂತ್ರದ ಕಲಿಕೆ’ (ಮೆಶಿನ್ ಲರ್ನಿಂಗ್) ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳ ಸಮ್ಮಿಲನದ ಮತ್ತೊಂದು ಮಗ್ಗುಲು ಇದು. ಒಂದು ಸುಂದರ ಪ್ರಕೃತಿಯ ದೃಶ್ಯವನ್ನು, ಮನುಷ್ಯನ ಮುಖವಾಗಿ ಪರಿವರ್ತಿಸಬಹುದು. ಈಗಾಗಲೇ, ‘ಇದು ಪ್ರಕೃತಿಯ ಲೀಲೆ, ನೋಡಿ ನಮ್ಮ ನೆಚ್ಚಿನ ನಟ, ನೇತಾರ ಅಥವಾ ಪೂಜನೀಯ ವ್ಯಕ್ತಿಯ ಚಿತ್ರವು ಪ್ರಕೃತಿಯಲ್ಲೇ ಮೂಡಿದೆ’ ಎಂದೆಲ್ಲ ಈಗಾಗಲೇ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲು ಆರಂಭಿಸಿದ್ದಾರೆ. ತಂತ್ರಜ್ಞಾನದ ಅರಿವಿದ್ದವರು, ಈ ರೀತಿಯ ತಂತ್ರಜ್ಞಾನವೂ ಬಂತೇ? ಇನ್ನೂ ಏನೆಲ್ಲಾ ಇದೆಯೋ ಅಂತ ಕುತೂಹಲಿಗಳಾದರೆ, ಅರಿವಿಲ್ಲದವರು ‘ಓಹ್’ ಎನ್ನುತ್ತಾ ಇದನ್ನೇ ನಂಬಿ ಫಾರ್ವರ್ಡ್/ಶೇರ್ ಮಾಡುತ್ತಾರೆ.

ಚಿಂತನೆಗೆ ಹೊಸ ಹಾದಿ

ಈ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಯಾಗುತ್ತಿದ್ದು, ದೃಶ್ಯ ಮಾಧ್ಯಮದಲ್ಲಿ ಅಸಾಧ್ಯವಾದುದನ್ನೆಲ್ಲ ಸಾಧ್ಯವಾಗಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ನಿಜಜೀವನದಲ್ಲಿ ಯಾವೆಲ್ಲ ಕಸರತ್ತು ಮಾಡಿದರೂ ಒಳ್ಳೆಯ ಕೋನದ ಛಾಯಾಚಿತ್ರ ತೆಗೆಯುವುದು ಸಾಧ್ಯವಿಲ್ಲ ಎಂದು ಕೈಬಿಟ್ಟ ಸನ್ನಿವೇಶಗಳನ್ನೆಲ್ಲಾ, ಈ ಇಲ್ಯೂಶನ್ ಡಿಫ್ಯೂಶನ್ ಎಐ ತಂತ್ರಜ್ಞಾನದಿಂದ ಸಾಧ್ಯವಾಗಿಸಿ, ಫೋಟೋಗ್ರಫಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಲ್ಲುದು. ಈಗಾಗಲೇ ಸರ್ವೇಸಾಮಾನ್ಯವಾಗಿ ತಿರುಚಿದ, ತಿದ್ದುಪಡಿ ಮಾಡಿದ ಚಿತ್ರಗಳನ್ನೇ ನೋಡುತ್ತಾ, ಅದನ್ನೇ ನಿಜವೆಂದು ನಂಬಿ ಸೋಷಿಯಲ್ ಮೀಡಿಯಾಗಳಲ್ಲಿ ಫಾರ್ವರ್ಡ್ ಮಾಡುತ್ತಿದ್ದವರಿಗೆ ಇನ್ನು, ಆಶ್ಚರ್ಯಪಡಲು, ಕುತೂಹಲ ಹೆಚ್ಚಿಸಲು ಮತ್ತೊಂದು ಟೂಲ್ ಸಿಕ್ಕಂತಾಗಿದೆ.

huggingface.co, fal.ai ಮುಂತಾದ ಜಾಲತಾಣಗಳಲ್ಲಿ ನಾವೇ ಇದನ್ನು ಉಚಿತವಾಗಿ ನಿರ್ಮಿಸಿಕೊಳ್ಳಬಹುದು. ಇದಕ್ಕೆ ಯಾವುದೇ ತಾಂತ್ರಿಕ ನೈಪುಣ್ಯ ಬೇಕಿಲ್ಲ. ಸ್ವಲ್ಪ ಓದಿಕೊಂಡು ಮುಂದುವರಿದರಾಯಿತು.

ಹಾಂ, ಒಂದನ್ನು ಗಮನಿಸಬೇಕೀಗ. ಇದು ಟ್ರೆಂಡ್ ಆಗಿರುವುದರಿಂದ ಸುಲಭವಾಗಿ ಎಐ ಆರ್ಟ್ ಸಿದ್ಧಪಡಿಸಿಕೊಳ್ಳಿ ಎಂಬರ್ಥದ ಸಂದೇಶಗಳಿರುವ ಸ್ಪ್ಯಾಮ್ ಅಥವಾ ಮಾಲ್‌ವೇರ್‌ಗಳಿರುವ ಲಿಂಕ್‌ಗಳು ಕೂಡ ನಿಮಗೆ ಸೋಷಿಯಲ್ ಮೀಡಿಯಾ, ಇಮೇಲ್ ಮೂಲಕ ಬರಬಹುದು. ಎಚ್ಚರ ವಹಿಸುವುದು ಅಗತ್ಯ.

ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿರುವ ವಿಶಿಷ್ಟ ಚಿತ್ರಗಳು. ಮೋದಿ ಹೋಲಿಕೆಯ ಚಿತ್ರ ರೂಪಿಸಿದವರು ಮಾಧವ್ ಕೊಹ್ಲಿ

ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿರುವ ವಿಶಿಷ್ಟ ಚಿತ್ರಗಳು. ಜೂ.ಎನ್‌ಟಿಆರ್ ಹೋಲಿಕೆಯ ಚಿತ್ರ ರೂಪಿಸಿದವರು ಶ್ರೀನಿವಾಸ್ ಮೋಹನ್

ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿರುವ ವಿಶಿಷ್ಟ ಚಿತ್ರಗಳು. ರವಿಚಂದ್ರನ್ ಹೋಲಿಕೆಯ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.