ADVERTISEMENT

ಭಾರತೀಯ ಡಿಜಿಟಲ್ ಗೇಮ್‌ಗಳು

ಕೃಷ್ಣ ಭಟ್ಟ
Published 15 ಫೆಬ್ರುವರಿ 2022, 19:30 IST
Last Updated 15 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತೀಯ ಪರಿಕಲ್ಪನೆಗಳನ್ನು ಇಟ್ಟುಕೊಂಡು ಡೆವಲಪ್ ಮಾಡಿರುವ ಗೇಮ್‌ಗಳು ಭಾರತೀಯ ಸಂಸ್ಕೃತಿ, ಪರಿಸರ ಹಾಗೂ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತವೆ. ಇದರಿಂದ, ಮಕ್ಕಳಿಗೆ ಗೇಮ್‌ನ ಖುಷಿ ಸಿಗುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವೂ ಆಗುತ್ತದೆ.

ಮೊಬೈಲ್‌ ನಮ್ಮೆಲ್ಲರ ಕೈಗೆ ಬರುವುದಕ್ಕೂ ಮೊದಲು ಚಿನ್ನಿದಾಂಡು, ಬುಗುರಿಗಳೆಲ್ಲ ಭಾರಿ ಕುತೂಹಲ ಕೆರಳಿಸುವ ಆಟಗಳಾಗಿದ್ದವು. ಆಮೇಲೆ ಕ್ರಿಕೆಟ್ ಕ್ರೇಜ್ ಬಂತು. ಕ್ರಿಕೆಟ್ ನೋಡುವುದಷ್ಟೇ, ಆಡುವುದೂ ಇತ್ತು. ಕೈಗೆ ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಮಕ್ಕಳು ಮೈದಾನಕ್ಕಿಳಿದು ಬೆವರುವುದಿಲ್ಲ. ಮನೆಯಲ್ಲಿನ ಕೋಚ್‌ನಲ್ಲೋ ಬೀನ್‌ಬ್ಯಾಗ್‌ನಲ್ಲೋ ಕುಳಿತು ಬೆನ್ನು ಬೆವರಿಸಿಕೊಳ್ಳುತ್ತಾ, ಸ್ಮಾರ್ಟ್‌ಫೋನ್‌ನಲ್ಲಿನ ಗೇಮ್‌ನಲ್ಲಿ ಮುಳುಗುತ್ತಾರೆ.

ಅಲ್ಲಿ ಚಿನ್ನಿದಾಂಡು, ಬುಗುರಿಗಳೆಲ್ಲ ಇಲ್ಲ. ಅಲ್ಲಿರುವುದು ಏನಿದ್ದರೂ ಗನ್, ಬಾಂಬ್‌, ಕತ್ತಿ, ಕುದುರೆಗಳೇ! ವಿದೇಶದ ಯಾವುದೋ ಒಂದು ರಾಜ ಮನೆತನ. ಅದರಲ್ಲಿ ಕಳ್ಳಕಾಕರು, ಅವರನ್ನು ಸದೆಬಡಿಯುವುದು ಅಥವಾ ಇನ್ನೂ ಹುಚ್ಚು ಕ್ರೇಜ್ ಬೇಕೆಂದರೆ, ಆಡುವವರೇ ಕಳ್ಳರು! ಆ ಅರಮನೆಯನ್ನು ಲೂಟಿ ಮಾಡುವುದು. ಇಂಥ ಗೇಮ್‌ಗಳು ಜನಪ್ರಿಯವಾಗುತ್ತಾ ಹಲವು ವರ್ಷಗಳೇ ಸಂದಿವೆ. ಆದರೆ, ಇಲ್ಲಿ ಇರುವುದೆಲ್ಲವೂ ವಿದೇಶಿ ಸೆಟ್ಟಿಂಗ್‌ಗಳು. ಏಕೆಂದರೆ, ಇವನ್ನೆಲ್ಲ ಡೆವಲಪ್ ಮಾಡಿರುವುದು ವಿದೇಶಿ ಗೇಮಿಂಗ್ ಡೆವಲಪ್ ಮಾಡುವ ಸಂಸ್ಥೆಗಳೇ. ಹೀಗಾಗಿ, ಅವು ಸಹಜವಾಗಿ ವಿಶ್ವದ ಎಲ್ಲ ಜನರನ್ನೂ ಮೆಚ್ಚಿಸುವುದಕ್ಕಾಗಿ ಯುರೋಪ್ ದೇಶಗಳ ಸೆಟ್ಟಿಂಗ್‌ಗಳನ್ನೇ ಮೂಲವನ್ನಾಗಿ ಇಟ್ಟುಕೊಳ್ಳುತ್ತವೆ.

ADVERTISEMENT

ಆದರೆ, ಕಳೆದ 2-3 ವರ್ಷಗಳಿಂದ ಭಾರತೀಯ ಗೇಮ್‌ಗಳಿಗೂ ಇದೇ ರೀತಿಯ ಆಸಕ್ತಿ ಮೂಡಿದೆ. ಹಲವು ಹೂಡಿಕೆದಾರರು ಭಾರತೀಯ ಹಿನ್ನೆಲೆಯನ್ನು ಹೊಂದಿರುವ ಗೇಮ್ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗಾಗಲೇ, ‘ರಾಜಿ: ಆ್ಯನ್ ಏನ್ಶಿಯಂಟ್ ಎಪಿಕ್‌’ ಎಂಬ ಗೇಮ್‌ ಬಿಡುಗಡೆಯಾಗಿದ್ದು, ಅದು ಸಾಕಷ್ಟು ಸದ್ದನ್ನೂ ಮಾಡಿದೆ. ಪುಣೆ ಮೂಲದ ನಾಡ್ಡಿಂಗ್ ಹೆಡ್ಸ್‌ ಗೇಮ್ಸ್‌ ಎಂಬ ಸಂಸ್ಥೆ ಈ ಗೇಮ್‌ ಡೆವಲಪ್ ಮಾಡಿದೆ. 2020 ರಲ್ಲೇ ಬಿಡುಗಡೆಯಾದ ಈ ಗೇಮ್‌ಗೆ ಹಲವು ಪ್ರಶಸ್ತಿಗಳೂ ಸಂದಿವೆ. ಈ ಗೇಮ್‌ ಸಾಕಷ್ಟು ಸದ್ದು ಮಾಡುತ್ತಿದ್ದಂತೆಯೇ, ಭಾರತೀಯ ಮೂಲದ ಇಂಥ ಗೇಮ್‌ಗಳತ್ತ ಡೆವಲಪರ್‌ಗಳ ಚಿತ್ತ ಹರಿದಿದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಮಕ್ಕಳು ಮನೆಯಲ್ಲಿ ಹೆಚ್ಚು ಕಾಲ ಇರುವುದು ಮತ್ತು ಶಾಲಾಶಿಕ್ಷಣದಲ್ಲಿ ವ್ಯತ್ಯಯ ಆಗಿರುವುದರಿಂದ ಗೇಮ್‌ಗಳ ಬಳಕೆದಾರರ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗಿದೆ. ಮಕ್ಕಳು ಮೊದಲಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದಾರೆ. ಅದರ ಜೊತೆಗೆ, ಪಿಸಿ ಹಾಗೂ ಎಕ್ಸ್‌ಬಾಕ್ಸ್ ಗೇಮಿಂಗ್‌ಗೂ ಭಾರತದಲ್ಲಿ ಮಕ್ಕಳು ಉತ್ಸಾಹ–ಆಸಕ್ತಿಗಳನ್ನು ತೋರಿಸುತ್ತಿದ್ದಾರೆ.

ಭಾರತದಲ್ಲಿ ಗೇಮ್ ಡೆವಲಪರ್‌ಗಳಿಗೇನೂ ಕೊರತೆ ಇಲ್ಲ. ಆದರೆ, ಗೇಮ್ ಡೆವಲಪ್ ಮಾಡುವಲ್ಲಿ ಭಾರತೀಯತೆಯ ಕೊರತೆ ಇದೆ. ರಾಜಿ ಜೊತೆಗೆ ‘ಯೋಧ’ ಕೂಡ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹೈದರಾಬಾದ್ ಮೂಲದ ಆಗ್ರೆ ಹೆಡ್ ಸ್ಟೂಡಿಯೋಸ್‌ ‘ಯೋಧ’ ಎಂಬ ಗೇಮ್ ಅಭಿವೃದ್ಧಿಪಡಿಸುತ್ತಿದೆ. ಇವೆಲ್ಲ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದು ಅತ್ಯಂತ ಕುತೂಹಲದ ಸಂಗತಿ.

ಇತ್ತೀಚೆಗೆ ಬಿಡುಗಡೆಯಾದ ಇನ್ನೊಂದು ಗೇಮ್‌ ಹೊಯ್ಸಳರ ಕಾಲದ ಹಿನ್ನೆಲೆಯನ್ನು ಹೊಂದಿದೆ. ‘ಅನ್‌ಚಾರ್ಟೆಡ್‌: ದಿ ಲಾಸ್ಟ್‌ ಲೆಗಸಿ’ ಎಂಬ ಈ ಗೇಮ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿವಿಧ ಕಡೆಗೆ ಓಡಾಡಿ ಗಣೇಶನ ದಂತವನ್ನು ಹುಡುಕಾಟ ನಡೆಸುವುದೇ ಮುಖ್ಯ ಸಂಗತಿ. ಈ ಗೇಮ್‌ ತುಂಬ ಜನಪ್ರಿಯವೂ ಆಯಿತು. ಇದೇ ರೀತಿ ಟೊರೊಂಟೊ ಮೂಲದ ವಿಸೈ ಸ್ಟೂಡಿಯೋಸ್ ಭಾರತೀಯ ಅಡುಗೆಯ ಗೇಮ್ ‘ವೆನ್‌ಬಾ’ ಅನ್ನು ಎರಡು ವರ್ಷಗಳ ಹಿಂದೆ ಪರಿಚಯಿಸಿತ್ತು. ಇದು ಕೂಡ ಗೇಮ್ ಪ್ರಿಯರಿಗೆ ಇಷ್ಟವಾಗಿತ್ತು.

ಸಾಮಾನ್ಯವಾಗಿ ಭಾರತೀಯ ಗೇಮ್ ಡೆವಲಪರ್‌ಗಳಿಗೆ ಹೂಡಿಕೆದಾರರನ್ನು ಹುಡುಕುವುದೇ ದೊಡ್ಡ ಸಮಸ್ಯೆಯಾಗುತ್ತಿತ್ತು. ಭಾರತೀಯ ಗೇಮ್‌ಗಳು ಕಡಿಮೆ ಬಜೆಟ್‌ನವು ಎಂಬ ಒಂದು ಪೂರ್ವಗ್ರಹ ಗೇಮಿಂಗ್‌ ಮಾರ್ಕೆಟ್‌ನಲ್ಲಿ ಈಗಾಗಲೇ ಬೆಳೆದು ನಿಂತುಬಿಟ್ಟಿದೆ. ಅದನ್ನು ಮೀರಿ, ದೊಡ್ಡ ಬಜೆಟ್‌ನ ಗೇಮ್ ಡೆವಲಪ್ ಮಾಡುವುದು ಸುಲಭದ ಮಾತಲ್ಲ. ಹೂಡಿಕೆದಾರರನ್ನು ಮೆಚ್ಚಿಸಲು
ಇವರು ಪಾಶ್ಚಾತ್ಯ ಸಂಸ್ಥೆಗಳಿಂದ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತಿದೆ. ಏಕೆಂದರೆ, ಮಾರುಕಟ್ಟೆಯಲ್ಲಿ ಭಾರತೀಯವಾದ ದೊಡ್ಡ ಬಜೆಟ್‌ನ ಗೇಮ್‌ಗಳಿಗೆ ಬೇಡಿಕೆ ಇಲ್ಲ ಎಂಬ ಪೂರ್ವಗ್ರಹ ಈಗಾಗಲೇ ಬೇರುಬಿಟ್ಟಿದೆ. ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಗೇಮ್ ಡೆವಲಪ್‌ಮೆಂಟ್ ಸಂಸ್ಥೆಗಳು ಹುಟ್ಟಿಕೊಂಡು ಕಾರ್ಯನಿರತವಾಗಿವೆ.

ಇದೆಲ್ಲದರ ಜೊತೆಗೆ ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಭಾರತೀಯ ಪರಿಕಲ್ಪನೆಗಳನ್ನು ಇಟ್ಟುಕೊಂಡು ಗೇಮ್ ಡೆವಲಪ್ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ವಿದೇಶಿ ಸಂಸ್ಥೆಗಳೂ ಆಸಕ್ತಿ ತೋರಿಸುತ್ತಿವೆ. ಪಶ್ಚಿಮ ಘಟ್ಟದ ಹಿನ್ನೆಲೆ ಹೊಂದಿರುವ ಅನ್‌ಚಾರ್ಟೆಡ್‌ ಗೇಮ್ ಅನ್ನು ಡೆವಲಪ್ ಮಾಡಿದ್ದು ಅಮೆರಿಕದ ನಾಟಿ ಡಾಗ್ ಎಂಬ ಸಂಸ್ಥೆ. ಹಾಗೆಯೇ, ಇದೇ ರೀತಿಯ ಹಲವು ಗೇಮ್‌ಗಳು ಕಳೆದ ಎರಡು ವರ್ಷಗಳಲ್ಲಿ ಮಾರುಕಟ್ಟೆಗೆ ಬಂದಿದ್ದು, ಇವು ಸಾಕಷ್ಟು ಜನಪ್ರಿಯವೂ ಆದವು. ಇವೆಲ್ಲ ಭಾರತೀಯ ಸಂಸ್ಕೃತಿ, ಪರಿಸರ ಹಾಗೂ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತವೆ. ಇದರಿಂದ, ಮಕ್ಕಳಿಗೆ ಗೇಮ್‌ನ ಖುಷಿ ಸಿಗುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.