ADVERTISEMENT

ಪ್ರಥಮ ಸ್ವದೇಶಿ ಓಟಿಪಿ ಮೆಮೊರಿ: ಏನೇನು ವಿಶೇಷತೆ?

ಸುಧೀರ್ ಎಚ್.ಎಸ್
Published 3 ಮೇ 2022, 20:30 IST
Last Updated 3 ಮೇ 2022, 20:30 IST
OTP
OTP   

ಪ್ರತಿಯೊಮ್ಮೆ ನಾವು ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವಾಗ ನಮ್ಮ ಕೆಲವು ಅತ್ಯವಶ್ಯಕ ಖಾಸಗಿ ಮಾಹಿತಿಯನ್ನು ರಕ್ಷಿಸಲು ಡೇಟಾ ಎನ್‌ಕ್ರಿಪ್ಶನ್ ಅಗತ್ಯವಿದೆ. ಇದಲ್ಲದೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಿದ್ಧವಾಗುವ ಹೊಸ ಅಪ್ಲಿಕೇಶನ್‌ಗಳಿಂದ ಸೃಷ್ಟಿಯಾಗುವ ಲಾಭಗಳಿಗೆ ಮಿತಿಯೇ ಇಲ್ಲ. ಇದರ ಬೆನ್ನಲ್ಲೇ ಜಾಗತಿಕವಾಗಿ ಮೆಮೊರಿ ತಂತ್ರಜ್ಞಾನಗಳು ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತಿವೆ.

ಇದಲ್ಲದೆ ಸಿಲಿಕಾನ್ ಚಿಪ್-ಆಧಾರಿತ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವೈಫೈ ರೂಟರ್‌ಗಳು ಮತ್ತು ಸ್ಮಾರ್ಟ್ ಸಾಧನಗಳಲ್ಲಿ ಲಾಜಿಕ್ ಸರ್ಕ್ಯೂಟ್‌ಗಳು ಇರುತ್ತವೆ. ಇವುಗಳಲ್ಲಿ ಸಾಧನದ ಐಡೆಂಟಿಟಿ ಅಥವಾ ಭದ್ರತಾ ಕೀಯಂತಹ ಡೇಟಾವನ್ನು ಹಿಡಿದಿಟ್ಟುಕೊಳ್ಳಲು ಕೆಲವು ಮೆಮೊರಿ ಅಂಶಗಳ ಅಗತ್ಯವಿರುತ್ತದೆ. ಹಣಕಾಸಿನ ವಹಿವಾಟುಗಳು, ನೆಟ್‌ಫ್ಲಿಕ್ಸ್‌ನಂತಹ ಚಂದಾದಾರಿಕೆಗಳು ಅಥವಾ ನಮ್ಮ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿಡಲು ಭದ್ರತಾ ಕೀ ಬಹಳ ಅವಶ್ಯಕ. ಹಾಗಾಗಿ ಮೆಮೊರಿ ತಂತ್ರಜ್ಞಾನದಲ್ಲಿಯ ನಾವೀನ್ಯವು ಅರೆವಾಹಕಗಳ (ಸೆಮಿಕಂಡಕ್ಟರ್) ಉದ್ಯಮವನ್ನು ಒಂದು ಮಟ್ಟದಲ್ಲಿ ಮುಂದೆ ಸಾಗಿಸುತ್ತಿದೆ.

ಇಂದು ಇ-ಕಾಮರ್ಸ್‌ ಪೋರ್ಟಲ್‌ಗಳಲ್ಲಿ ನಮ್ಮ ಐಡೆಂಟಿಟಿಯನ್ನು ಸುರಕ್ಷಿತಗೊಳಿಸಬೇಕಾಗಿದೆ. ನಮ್ಮ ಮಾಹಿತಿಯನ್ನು ಕ್ಲೌಡ್‌ನಲ್ಲಿ ಇಡುತ್ತಿರುವುದರಿಂದ ಇದರ ಸುರಕ್ಷತೆ ಪ್ರಾಮುಖ್ಯವನ್ನು ಪಡೆದಿದೆ. ನಮ್ಮ ದೇಶದ ಭದ್ರತೆಯ ನಿಟ್ಟಿನಲ್ಲಿ ಕೂಡ ಹೊರ ದೇಶದ ಮೆಮೊರಿ ತಂತ್ರಜ್ಞಾನದ ಅವಲಂಬನೆ ಅಸುರಕ್ಷಿತ. ಹೀಗಾಗಿ ನಮ್ಮ ದೇಶದಲ್ಲೆ ಮೆಮೊರಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿತ್ತು.

ADVERTISEMENT

ಇದರ ಹಿನ್ನೆಲೆಯಲ್ಲಿಯೇ ಐಐಟಿ ಬಾಂಬೆಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಉದಯನ್ ಗಂಗೂಲಿ ಮತ್ತು ಅವರ ತಂಡವು ಇಂತಹ ಸುರಕ್ಷಿತ ಅಪ್ಲಿಕೇಶನ್‌ಗಳಿಗಾಗಿ ದೇಶೀಯ ಸೆಮಿಕಂಡಕ್ಟರ್ ಮೆಮೊರಿಯನ್ನು ರಚಿಸುವ ಪ್ರಯತ್ನವನ್ನು ಮಾಡಿದ್ದಾರೆ. ಲ್ಯಾಬ್‌ನಿಂದ ಫ್ಯಾಬ್‌ಗೆ ಒಯ್ಯಲಾಗುತ್ತಿರುವ ಮೊದಲ ದೇಶೀಯ ಮೆಮೊರಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ಕೀರ್ತಿ ಇವರದ್ದಾಗಿದೆ.

ಚಂಡೀಗಢದ ಸೆಮಿಕಂಡಕ್ಟರ್ ಲ್ಯಾಬ್‌ಗಳ ಸಹಭಾಗಿತ್ವದಲ್ಲಿ, ಪ್ರೊ. ಗಂಗೂಲಿ ಮತ್ತು ಅವರ ತಂಡವು, ಒಮ್ಮೆ ಮಾತ್ರ ಪ್ರೋಗ್ರಾಂ ಮಾಡಬಲ್ಲ ಮೆಮೊರಿ (ಒನ್-ಟೈಮ್-ಪ್ರೊಗ್ರಾಮೆಬಲ್, ಓಟಿಪಿ) ಮೆಮೊರಿ, ತಂತ್ರಜ್ಞಾನವನ್ನು ಪ್ರದರ್ಶಿಸಿದ್ದಾರೆ. ಇದನ್ನು ಸುರಕ್ಷಿತ ಮೆಮೊರಿ, ಹಾರ್ಡ್‌ವೇರ್ ಎನ್‌ಕ್ರಿಪ್ಶನ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಬಳಸಬಹುದು.

ಸಂಶೋಧಕರು ಮೆಮೊರಿ ಕೋಶಕ್ಕೆ ನ್ಯಾನೊಸ್ಕೇಲ್ ರಚನೆಯನ್ನು ಅಳವಡಿಸಿದ್ದಾರೆ. ಎರಡು ಲೋಹದ ಪದರಗಳ ನಡುವೆ ಸಿಲಿಕಾನ್ ಆಕ್ಸೈಡ್‌ನ ತೆಳುವಾದ ಪದರವನ್ನು ಸ್ಯಾಂಡ್ವಿಚ್ ಮಾಡಲಾಗಿದೆ. ಈ ಸಿಲಿಕಾನ್ ಆಕ್ಸೈಡ್ ಪದರವು ಕೇವಲ 2.5 ನ್ಯಾನೊಮೀಟರ್ ಇರುತ್ತದೆ. ಅಂದರೆ ಇದು ಕೇವಲ 15 ಪರಮಾಣುಗಳಷ್ಟು ದಪ್ಪ! ಈ ರಚನೆಯು ನ್ಯಾನೊಕ್ಯಾಪ್ಯಾಸಿಟರ್ ಅನ್ನು ರೂಪಿಸುತ್ತದೆ ಮತ್ತು ಕರೆಂಟ್ ಹಾದುಹೋಗಲು ಬಿಡುವುದಿಲ್ಲ. ಈ ರೀತಿಯಲ್ಲಿ ಸೇರಿದ ಶುದ್ಧ ಸಿಲಿಕಾನ್ ಆಕ್ಸೈಡ್ ಒಂದು ಬಗೆಯ ಶೂನ್ಯಸ್ಥಿತಿಯಂತೆ ರೂಪಿಸಲಾಗುತ್ತದೆ.

ಒನ್-ಟೈಮ್-ಪ್ರೋಗ್ರಾಮೆಬಲ್ (ಓಟಿಪಿ) ಮೆಮೊರಿಯನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಪ್ರೊ. ಗಂಗೂಲಿ ವಿವರಿಸುತ್ತಾರೆ: ‘ನಾವು ಈ ಕೆಪಾಸಿಟರ್ ಒಳಗೆ ಮಿಂಚಿನ ಸಮಾನತೆಯ ಕರೆಂಟನ್ನು ಹಾಯಿಸಿದರೆ, ಇನ್ಸುಲೇಟರ್‌ ಹಾಳಾಗುತ್ತದೆ ಮತ್ತು ಕರೆಂಟ್ ಹಾದುಹೋಗಲು ಸಾಧ್ಯವಾಗುತ್ತದೆ. ಈ ಹಾಳಾದ ಇನ್ಸುಲೇಟರ್‌ ಒಳಗೆ ಒಂದು ಲೈನ್ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಹಾಗಾಗಿ ಕರೆಂಟ್ ಸಾಗಲು ಅನುವು ಆಗುತ್ತದೆ. ಇದರಿಂದಾಗಿ, ಎರಡು ಸ್ಥಿತಿಗಳು ರಚನೆಯಾದಂತೆ ಆಗುತ್ತದೆ. ಒಂದು, ಕರೆಂಟ್ ಸಾಗದ ಶುದ್ಧವಾದ ಸಿಲಿಕಾನ್ ಆಕ್ಸೈಡ್ ಹೊಂದಿದ ಶೂನ್ಯ ಸ್ಥಿತಿ; ಇನ್ನೊಂದು, ಹೆಚ್ಚಿನ ಕರೆಂಟ್ ಸಾಗಲು ಅನುವು ಮಾಡುವ ಹಾಳಾದ ಇನ್ಸುಲೇಟರ್ ಲೈನ್. ಈ ಬಗೆಯ ಪ್ರೋಗ್ರಾಮಿಂಗ್ ಅನ್ನು ಕೇವಲ ಒಮ್ಮೆ ಮಾಡಬಹುದು ಹೊರತು, ಆದರೆ ಇದನ್ನು ಶಾಶ್ವತವಾಗಿ ಹಲವಾರು ಬಾರಿ ಓದಬಹುದು.’

ಹಲವಾರು ಉತ್ಪಾದನಾ ಸಿದ್ಧತೆ ಮಟ್ಟವನ್ನು ಹಾದುಹೋದ ನಂತರ, ತಂತ್ರಜ್ಞಾನವು ಉತ್ಪಾದನೆಗೆ ಸಿದ್ಧವಾಗಿದೆ. ಇಂಜಿನಿಯರ್‌ಗಳು ಮೂಲಭೂತ ಉತ್ಪಾದನಾ ಪ್ರಕ್ರಿಯೆಯನ್ನು ಒಟ್ಟು ಎಂಟು ಹಂತಗಳಲ್ಲಿ ರೂಪಿಸಿದ್ದಾರೆ. ಮೊದಲ ಪೈಲಟ್ ಹಂತದಲ್ಲಿ ಕಡಿಮೆ ಮಟ್ಟದಲ್ಲಿ ಉತ್ಪಾದನೆಯನ್ನು ಮಾಡಿದ್ದು, ಈಗ ಸಂಪೂರ್ಣ ರೀತಿಯಲ್ಲಿ ಉತ್ಪಾದನೆ ಮಾಡಲು ಸಾಮರ್ಥ್ಯ ಬಂದಿದೆ.

ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದರಿಂದ ಇದನ್ನು ಬಳಸಬಹುದಾದ ಅಪ್ಪ್ಲಿಕೇಷನ್‌ಗಳು ಆಗಲೇ ಸೂಚಿಸಿದಂತೆ ಸಾಕಷ್ಟಿದೆ.

ಇದನ್ನು ಬಳಸಬಹುದಾದ ಗಮನಾರ್ಹವಾದ ಅಪ್ಲಿಕೇಶನ್‌ಗಳೆಂದರೆ ಇ-ಪಾಸ್‌ಪೋರ್ಟ್‌ಗಳಂತಹ ಸರ್ಕಾರಿ ಗುರುತಿಸುವಿಕೆಗಳು; ಇದಕ್ಕೆ ವರ್ಷಕ್ಕೆ ಸುಮಾರು ನಾಲ್ಕು ಕೋಟಿ ಚಿಪ್‌ಗಳನ್ನು ಬೇಕಾಗುತ್ತದೆ. ಇನ್ನು ನಿಯರ್ ಫೀಲ್ಡ್ ಕಮ್ಯುನಿಕೇಷನ್ ಮತ್ತು ಟಚ್‌ಲೆಸ್ ನಗದು ರಹಿತ ವಹಿವಾಟು ಹೊಂದಿರುವ ಮೊಬೈಲ್ ಫೋನ್‌ಗಳು ಓಟಿಪಿ ಮೆಮೊರಿ ತಂತ್ರಜ್ಞಾನವನ್ನು ಬಳಸಬಹುದು. ಇದಲ್ಲದೆ ಸುರಕ್ಷಿತ ನಾವಿಕ್ ಐಸಿ, ಜಿಪಿಎಸ್ ಮತ್ತು ಹಲವಾರು ದೇಶದ ಭದ್ರತಾ ನಿಟ್ಟಿನಲ್ಲಿ ಬಳಸಬಹುದಾದ ಅಪ್ಲಿಕೇಶನ್‌ಗಳು ಮತ್ತು ಎಂಬೆಡೆಡ್ ಸಿಸ್ಟಮ್‌ಗಳಲ್ಲಿ ಇದನ್ನು ಬಳಸಬಹುದು.

ಅಪ್ಲಿಕೇಶನ್‌ಗಳ ದೃಢೀಕರಣ ಮತ್ತು ಡೇಟಾ ಸುರಕ್ಷತೆಯನ್ನು ಸಕ್ರಿಯಗೊಳಿಸುವ ಹಾರ್ಡ್‌ವೇರ್ ಎನ್‌ಕ್ರಿಪ್ಶನ್, ಎನ್‌ಕ್ರಿಪ್ಟ್ ಮಾಡಿದ ಡೇಟಾವನ್ನು ಹೊಂದಲು ಮೆಮೊರಿಗಳನ್ನು ಸಕ್ರಿಯಗೊಳಿಸುವ ಸುರಕ್ಷಿತ ಮೆಮೊರಿ, ಬಾಹ್ಯಾಕಾಶ ಅಪ್ಲಿಕೇಶನ್‌ಗಳಿಗಾಗಿ ರೇಡಿಯೇಷನ್ ಹಾರ್ಡ್ ಮೆಮೊರಿ ಮತ್ತು ಓಟಿಪಿ ತಂತ್ರಜ್ಞಾನದ ಆಧಾರದ ಮೇಲೆ ನ್ಯೂರಲ್ ನೆಟ್‌ವರ್ಕ್ ಚಿಪ್‌ಗಳು, ಎಲ್ಲ ಈ ಹೊಸ ತಂತ್ರಜ್ಞಾನದ ಪ್ರಯೋಜನ ಪಡೆಯಬಹುದು.

ಈ ತಂತ್ರಜ್ಞಾನ ಒಂದು ಮೈಲಿಗಲ್ಲನ್ನು ಸಾಧಿಸಿದ ನಂತರ, ದೇಶದ ಭದ್ರತೆ ಮತ್ತು ಇತರೆ ವಾಣಿಜ್ಯ ಕ್ಷೇತ್ರಗಳಲ್ಲಿ ಇದರ ಬಳಕೆಯನ್ನು ಸಾಧ್ಯವಾಗಿಸುತ್ತದೆ. ಜಾಗತಿಕವಾಗಿ ಓಟಿಪಿ ಮೆಮೊರಿ ತಂತ್ರಜ್ಞಾನದ ಅಂದಾಜು ಮಾರುಕಟ್ಟೆ ಸುಮಾರು 14 ಕೋಟಿ ಅಮೆರಿಕನ್‌ ಡಾಲರ್‌ನಷ್ಟು ಎಂದು ಊಹಿಸಲಾಗಿದೆ.

ಭಾರತದದ್ದೇ ಆದ ತಂತ್ರಜ್ಞಾನ ಮತ್ತು ವಿನ್ಯಾಸವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.