ADVERTISEMENT

ಡಿಜಿಟಲ್ ಲೋಕದ ಮಾರ್ಜಾಲಸನ್ಯಾಸಿ

ಗಣೇಶ್ ಭಟ್ ನೆಲಮಾವ್
Published 27 ಸೆಪ್ಟೆಂಬರ್ 2023, 0:38 IST
Last Updated 27 ಸೆಪ್ಟೆಂಬರ್ 2023, 0:38 IST
   

ಹತ್ತು ವರ್ಷಗಳ ಕಾಲ ಟ್ರಾಯ್ ನಗರಕ್ಕೆ ಮುತ್ತಿಗೆ ಹಾಕಿ, ಟ್ರಾಯ್‍ನ ಅಭೆೇದ್ಯ ಕೋಟೆಯನ್ನು ಗೆಲ್ಲಲು ತವಕಿಸುತ್ತಿದ್ದ ಗ್ರೀಕ್ ಸೈನಿಕರು ಕೈಚೆಲ್ಲಿ ಹಿಂದೆಗೆದಿದ್ದನ್ನು ನೋಡಿದ ಟ್ರಾಯ್ ಜನರ ಖುಷಿಗೆ ಪಾರವೇ ಇರಲಿಲ್ಲ. ಸೋತವರು ಕಪ್ಪ–ಕಾಣಿಕೆ ಸಲ್ಲಿಸುವ ರೀತಿಯಲ್ಲಿ, ಬೃಹದ್ಗಾತ್ರದ ಮರದ ಕುದುರೆಯೊಂದನ್ನು ಕೋಟೆಯ ಹೆಬ್ಬಾಗಿಲಿನ ಬಳಿ ಗ್ರೀಕ್ ಸೈನಿಕರು ಬಿಟ್ಟು ಹೋಗಿದ್ದರು. ಆ ಕುದುರೆಯನ್ನು ತಮ್ಮ ಗೆಲುವಿನ ಸಂಕೇತವಾಗಿ ನಗರದ ನಡುವೆ ನಿಲ್ಲಿಸಿದ ಟ್ರಾಯ್ ಜನರು ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ, ಮದಿರೆಯ ನಶೆಯಲ್ಲಿ ಮುಳುಗಿದರು. ರಾತ್ರಿಯ ವೇಳೆ ಕುದುರೆಯಲ್ಲಿ ಅಡಗಿದ್ದ ಗ್ರೀಕ್ ಸೈನಿಕರು ಹೊರಬಂದು ಕೋಟೆಯ ಬಾಗಿಲನ್ನು ತೆರೆದು ಉಳಿದ ಗ್ರೀಕ್ ಸೈನಿಕರು ಒಳಬರಲು ಅನುವು ಮಾಡಿದರು. ಹೀಗೆ ಟ್ರಾಯ್ ನಗರ ಪತನವಾಯಿತು.

ಇದು ಗ್ರೀಕ್ ಪುರಾಣದಲ್ಲಿ ಕಾಣಿಸುವ ಒಂದು ಪ್ರಸಂಗ. ಈ ಪ್ರಸಂಗದಿಂದ, ‘ಗೋಮುಖವ್ಯಾಘ್ರ’ ಎಂದು ನಾವು ಹೇಳುವಂತೆ, ‘ಟ್ರೋಜನ್ ಹಾರ್ಸ್’ ಎಂಬ ನುಡಿಗಟ್ಟು ಇಂಗ್ಲಿಷಿನಲ್ಲಿ ಬಳಕೆಗೆ ಬಂತು. ನಿರುಪದ್ರವಿಯ ವೇಷವನ್ನು ಧರಿಸಿ ನಂಬಿಕೆ ಹುಟ್ಟಿಸಿ, ಅನಂತರ ತನ್ನ ದುರುದ್ದೇಶ ಸಾಧಿಸಲು ತೊಡಗುವಂಥದನ್ನು ‘ಟ್ರೋಜನ್ ಹಾರ್ಸ್’ (Trojan Horse) ಎನ್ನುತ್ತಾರೆ. ಸಾವಿರಾರು ವರ್ಷಗಳಷ್ಟು ಹಳೆಯದಾದರೂ ಈ ತಂತ್ರ ಈಗಲೂ ಬಳಕೆಯಲ್ಲಿದೆ, ವಿಶೇಷವಾಗಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ.

ಸಾಫ್ಟ್‌ವೇರ್ ಅಥವಾ ತಂತ್ರಾಂಶದಲ್ಲಿ ‘ಕುತಂತ್ರಾಂಶ’ (ಮಾಲ್‌ವೇರ್‌) ಎನ್ನುವುದು ಒಂದು ವಿಧ. ಕುತಂತ್ರಾಂಶ ಎಂದರೆ, ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸಲು ಕಂಪ್ಯೂಟರ್ ಸಿಸ್ಟಂ, ಮೊಬೈಲ್ ಅಥವಾ ನೆಟ್‌ವರ್ಕ್‌ಗೆ ಸೇರಿಸಲ್ಪಡುವ ಯಾವುದೇ ಒಂದು ಸಾಫ್ಟ್‌ವೇರ್. ಇದರಲ್ಲಿ ಟ್ರೋಜನ್ ಕುದುರೆಯ ಶೈಲಿಯಲ್ಲೇ ಕೆಲಸ ಮಾಡುವ ಕುತಂತ್ರಾಂಶಗಳಿದ್ದು ಅವುಗಳನ್ನು ‘ಟ್ರೋಜನ್‍ಗಳು’ (Trojans) ಎಂದೇ ಕರೆಯಲಾಗುತ್ತದೆ. ಈ ಟ್ರೋಜನ್‍ಗಳು ನೋಡಲು ನೈಜ, ಸುರಕ್ಷಿತ, ಉಪಯುಕ್ತ ಸಾಫ್ಟ್‌ವೇರ್‌ಗಳಂತೆಯೇ ಕಾಣಿಸುತ್ತವೆ. ಆದರೆ ಅವುಗಳನ್ನು ಇನ್ಸ್ಟಾಲ್ ಮಾಡಿದರೆ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್‌ ರಹಸ್ಯವಾಗಿ ಪ್ರವೇಶಿಸಿ ಕಂಪ್ಯೂಟರ್‌ಗೆ ಹಾನಿ ಮಾಡುತ್ತವೆ. ಮನುಷ್ಯ ತಾನು ಒಳ್ಳೆಯವನಂತೆ ಸೋಗು ಹಾಕಿ ವಂಚಿಸುವುದು ಸಾಲದೆಂಬಂತೆ ಸಾಫ್ಟ್‌ವೇರ್‌ಗಳಿಗೂ ಅದನ್ನೇ ಕಲಿಸಿದ್ದಾನೆ.

ADVERTISEMENT

ಪ್ರಸ್ತುತ ಭಾರತೀಯರನ್ನೇ ಪ್ರಮುಖವಾಗಿ ಗುರಿ ಮಾಡುತ್ತಿರುವ ಹೊಸ ಕುತಂತ್ರಾಂಶವೊಂದು ಸುದ್ದಿಯಲ್ಲಿದೆ. ಅದುವೇ DogeRAT. ಬೆಂಗಳೂರಿನ CloudSEK ಎಂಬ ಸೈಬರ್ ಸೆಕ್ಯೂರಿಟಿ ಕಂಪನಿ ಈ ತಂತ್ರಾಂಶವನ್ನು ಮೊದಲು ಪತ್ತೆ ಮಾಡಿದ್ದು ಅವರ ವರದಿಯ ಪ್ರಕಾರ ಬ್ಯಾಂಕಿಂಗ್, ಇನ್ಶೂರೆನ್ಸ್, ಇ–ಕಾಮರ್ಸ್ ಮುಂತಾದ ಹಣಕಾಸಿಗೆ ಸಂಬಂಧಪಟ್ಟ ಕ್ಷೇತ್ರಗಳು ಈ ಕುತಂತ್ರಾಂಶದ ಮುಖ್ಯ ಗುರಿಗಳಾಗಿವೆ.

DogeRAT ಮೊಬೈಲನ್ನು ಹೇಗೆ ಪ್ರವೇಶಿಸುತ್ತದೆ?

ಸಾಮಾಜಿಕ ಜಾಲತಾಣಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಕುತಂತ್ರಾಂಶವನ್ನು ಹರಡಲಾಗುತ್ತಿದೆ. ಈ ತಂತ್ರಾಂಶವು ನೋಡಲು ಸಾಮಾನ್ಯವಾಗಿ ನಾವು ಬಳಸುವ ಅಧಿಕೃತ ಬ್ಯಾಂಕಿಂಗ್ ಆ್ಯಪ್‌ಗಳು, ಯೂಟ್ಯೂಬ್ ಪ್ರೀಮಿಯಂ, ನೆಟ್ಫ್ಲಿಕ್ಸ್ ಮುಂತಾದವುಗಳಂತೆಯೇ ಕಾಣುತ್ತಿದ್ದು ವಾಸ್ತವದಲ್ಲಿ ಬೇರೆಯೇ ಆಗಿರುತ್ತವೆ. ಒಮ್ಮೆ ಮೊಬೈಲಿನಲ್ಲಿ ಇನ್ಸ್ಟಾಲ್ ಆದ ಬಳಿಕ ಬಳಕೆದಾರರ ಮಾಹಿತಿಯನ್ನು ಕದಿಯುವುದು, ಅನಧಿಕೃತವಾಗಿ ಹಣವನ್ನು ಬೇರೆಯವರಿಗೆ ರವಾನಿಸುವುದು, ಬಳಕೆದಾರರ ಮೊಬೈಲಿನಲ್ಲಿರುವ ಇತರರ ಮೊಬೈಲ್ ಸಂಖ್ಯೆಗಳನ್ನು ಕದಿಯುವುದು, ಎಸ್ಎಂಎಸ್ ಕಳಿಸುವುದು, ಮೊಬೈಲಿನ ಕ್ಯಾಮೆರಾದಿಂದ ಫೋಟೋಗಳನ್ನು ತೆಗೆಯುವುದು, ಮುಂತಾದ ಹಲವು ಚಟುವಟಿಕೆಗಳನ್ನು ಮಾಡತೊಡಗುತ್ತದೆ. ಈ ಎಲ್ಲ ಚಟುವಟಿಕೆಗಳು ಬಳಕೆದಾರರ ಗಮನಕ್ಕೆ ಬರದಂತೆಯೇ ನಡೆಯುತ್ತವೆ. ಆತಂಕಕಾರಿ ಬೆಳವಣಿಗೆ ಎಂದರೆ ಈ ಕುತಂತ್ರಾಂಶವನ್ನು ನಿರ್ಮಿಸಿದವರು ಅದನ್ನು ಒಂದು MaaS (Malware as a Service) ಆಗಿ ನಡೆಸುತ್ತಿರುವುದು. Malware as a Service ಎಂದರೆ ಒಂದು ನಿಗದಿತ ಮೊತ್ತದ ಹಣವನ್ನು ಪಾವತಿಸುವ ಯಾವುದೇ ವ್ಯಕ್ತಿಗೂ ಈ ತಂತ್ರಾಂಶವನ್ನು ಬಳಸಲು ಇದರ ನಿರ್ಮಾತೃಗಳು ಅನುವು ಮಾಡಿಕೊಡುತ್ತಾರೆ. ಇದರಿಂದಾಗಿ ಸಾಫ್ಟ್‌ವೇರ್‌ಗಳ ಬಗ್ಗೆ ಪರಿಣತಿ ಇಲ್ಲದ ಅಪರಾಧಿಗಳು ಕೂಡ ಈ ತಂತ್ರಾಂಶವನ್ನು ಖರೀದಿಸಿ ಸೈಬರ್ ಅಪರಾಧಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಹಣವನ್ನು ದೋಚುವ ದಾರಿಯನ್ನು ಅಪರಾಧಿಗಳಿಗೆ ಒದಗಿಸುತ್ತದೆ ಎಂಬುದು ಸೈಬರ್ ತಜ್ಞರ ಕಳವಳಕ್ಕೆ ಕಾರಣವಾಗಿದೆ.

DogeRAT ಮಾಲ್‌ವೇರ್‌ನಿಂದ ರಕ್ಷಿಸಿಕೊಳ್ಳಲು, ಸಾಮಾನ್ಯವಾಗಿ ಪಾಲಿಸುವ ಸೈಬರ್ ಸುರಕ್ಷತೆಯ ಈ ಕೆಲವು ನಿಯಮಗಳನ್ನೇ ಪಾಲಿಸಬಹುದು:
• ಅನಧಿಕೃತ ಮೂಲಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಗೂಗಲ್ ಪ್ಲೇ ಸ್ಟೋರ್‌ನಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.
• ಅಪರಿಚಿತ ಅಥವಾ ಅನುಮಾನಾಸ್ಪದ ಮೂಲಗಳಿಂದ ಬಂದ ಲಿಂಕ್‌ಗಳನ್ನು, ಫೈಲ್‌ಗಳನ್ನು ತೆರೆಯಬೇಡಿ.
• ಆ್ಯಪ್‌ಗಳಿಗೆ ಕೊಡುವ ಅನುಮತಿಗಳನ್ನು (app permissions) ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡಿ.
• ಮೊಬೈಲಿನ ಸಾಫ್ಟ್‌ವೇರನ್ನು ಅಪ್ಡೇಟ್ ಮಾಡುತ್ತಿರಿ.
ಇದಲ್ಲದೆ, ನೆಟ್ ಬ್ಯಾಂಕಿಂಗ್, UPI ಮುಂತಾದ ವಹಿವಾಟುಗಳಿಗೆಂದೇ ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ಬಳಸುವುದು ಮತ್ತು ಅಂತಹ ಖಾತೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಕಡಿಮೆ ಮೊತ್ತದ ಹಣವನ್ನು ಇಡುವುದು ಉತ್ತಮ. ಹೀಗೆ ಮಾಡುವುದರಿಂದ, ಅಕಸ್ಮಾತ್ತಾಗಿ ಸೈಬರ್ ಅಪರಾಧಿಗಳು ಖಾತೆಯಲ್ಲಿರುವ ಹಣವನ್ನು ಪಡೆಯಲು ಸಾಧ್ಯವಾದರೂ ಸಣ್ಣ ಮೊತ್ತವನ್ನಷ್ಟೇ ಕಳೆದುಕೊಂಡಂತಾಗುತ್ತದೆ. ಉಳಿತಾಯಕ್ಕೆಂದು ಹೆಚ್ಚಿನ ಮೊತ್ತದ ಹಣ ಇಡುವ ಖಾತೆಯಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸದೆ ಇರುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.