‘ಮ್ಯಾಪ್’ ಇಲ್ಲದ ಸಂದರ್ಭದಲ್ಲಿ ಅಲ್ಲಿಲ್ಲಿ ಕೇಳಿಕೊಂಡು ಒಂದೆರಡು ರೌಂಡ್ ತಪ್ಪಿ ಹೊಡೆದು, ಗುರಿ ಮುಟ್ಟುವ ಸಂತಸ ಈಗಿಲ್ಲ. ಜನರು ಕಂಡರೆ, ಅವರೂ ಗೂಗಲ್‍ಮ್ಯಾಪ್ ಹಿಡಿದೇ ತೋರಿಸಿದರೂ ಪರವಾಗಿಲ್ಲ, ‘ಹಲೋ’ ‘ನಮಸ್ಕಾರ’ ಎಂದು ಹೇಳಿ ದಾರಿ ಕೇಳುವ ಮಜಾ ಕಳೆದುಕೊಳ್ಳದಿರೋಣ...
ಪ್ರವಾಸಗಳಿಗೆ ಬಾಲ್ಯದಲ್ಲಿ ನಾವು ಹೋಗುತ್ತಿದ್ದ ನೆನಪು ಚೆನ್ನಾಗಿದೆ. ಕಾರು ಮಧ್ಯೆ ಮಧ್ಯೆ ನಿಲ್ಲಿಸಿ ನಮಗೆ ಬೇಕಾದ ಸ್ಥಳವನ್ನು ಜನರ ಹತ್ತಿರ ಕೇಳಿಕೊಂಡು ಸಾಗುವುದು ಪ್ರವಾಸದ ಅವಿಭಾಜ್ಯ ಅಂಗವೇ ಆಗಿದ್ದ ದಿನಗಳು. ಕೈಯಲ್ಲೊಂದು ‘ಮ್ಯಾಪು’ ಹಿಡಿದು ನಾವಿರುವ ಸ್ಥಳವನ್ನು ಗುರುತಿಸಿ, ನಂತರ ನಾವು ಹೋಗಬೇಕಾದ ‘ಗುರಿ’ಯನ್ನು ಅದರಲ್ಲಿ ಗುರುತಿಸಿಕೊಂಡು ಮುಖವೆತ್ತಿಕೊಂಡು ಹುಡುಕುತ್ತಾ ನಡೆಯುವ ಹೊರದೇಶಗಳಲ್ಲಿರುವ ಅಭ್ಯಾಸ ನಮಗೆ ಭಾರತೀಯರಿಗೆ ತುಂಬಾ ‘ಟೈಂ ವೇಸ್ಟ್’, ‘ಪೆದ್ದು’ ಎಂದೇ ಅನಿಸುತ್ತಿತ್ತು. ಅದರ ಬದಲು ಸೀದಾ ನಮ್ಮ ಚಾಲಕನಿಗೆ ಗೊತ್ತಿರುವ ನಮ್ಮ ಗುರಿಯ ಹತ್ತಿರದ ಸ್ಥಳ ತಲುಪುವುದು, ಅಲ್ಲಿ ಆ ಸ್ಥಳದ ಬಗ್ಗೆ ಪರಿಚಯವಿರುವವರನ್ನು ಮಾತನಾಡಿಸಿ, ನಿರ್ದೇಶನ ಕೇಳಿ, ಒಂದೆರಡು ರೌಂಡ್ ತಪ್ಪಿ ಹೊಡೆದು, ಕೊನೆಗೂ ನಮ್ಮ ಗುರಿ ಮುಟ್ಟುವ ಸಂತಸ. ಕಾರಿನಲ್ಲಿ ಹೋಗದೆ ಬಸ್ಸು-ರೈಲುಗಳಲ್ಲಿ ಹೋಗಿಳಿದರೆ, ಆಟೊ ಚಾಲಕನೇ ನಮ್ಮ ಅತ್ಯುತ್ತಮ ಮಾರ್ಗದರ್ಶಕ.
ಹಿಂದೆ ಪ್ರವಾಸಗಳಲ್ಲಿ ನಡೆಯುತ್ತಿದ್ದ ಜಗಳಗಳಲ್ಲಿ ಪ್ರಮುಖವಾದದ್ದೆಂದರೆ ಹೆಚ್ಚಾಗಿ ಹೆಂಡತಿ ‘ಕೇಳಿ ಕನ್‍ಫರ್ಮ್ ಮಾಡಿಕೊಳ್ಳೋಣ’ ಎನ್ನುವುದು. ಗಂಡ ಬಹುಬಾರಿ ‘ಬೇಡ, ನಾವೇ ಹುಡುಕಿ ಹೋಗೋಣ’ ಎಂದು ತಡೆಯುವುದು. ಗಂಡ ತಾನೇ ಹುಡುಕುವಷ್ಟರಲ್ಲಿ ಹೆಂಡತಿಯ ಸಹನೆ ಮೀರಿ, ಗಂಡನಿಗೆ ಸುಸ್ತಾಗಿ ‘ಗುರಿ’ ತಲುಪುವ ಮುನ್ನವೇ ಒಂದು ಜಗಳ ನಡೆದೇ, ಇದೂ ಪ್ರವಾಸದ ಒಂದು ಹಂತ ಎಂದು ದೃಢಪಡುವುದು.
ಭಾಷೆ ಕಲಿಯಲು, ಸ್ಥಳೀಯರೊಂದಿಗೆ ಮಾತನಾಡಲು ಇದೆಲ್ಲ ಒಂದು ಮಾರ್ಗವೇ ಆಗಿತ್ತು. ಕೊಡೈಕೆನಾಲ್‍ಗೆ ಒಮ್ಮೆ ಹೋಗುವಾಗ ಧರ್ಮಾವರಂ ಬಳಿ ‘ನ್ಯಾರ ಪೋರದ’ ಎಂದು ಒಬ್ಬ ಮಾರ್ಗದರ್ಶನ ನೀಡಿದ್ದು, ನಾವು ಇಡೀ ತಮಿಳುನಾಡು ಪ್ರವಾಸದ ‘ಕೀ ಫ್ರೇಸ್’ ಆಗಿ ನ್ಯಾರ ಪೋರದವನ್ನು (ನೇರ ಪೋರದಾ) ಮತ್ತೆ ಮತ್ತೆ ಆಡಿದ್ದು ಈಗ ‘ಹಿಸ್ಟರಿ’ ಆಗಿಹೋಗಿದೆ!
ಜಿಪಿಎಸ್ ಎಂಬ ವ್ಯವಸ್ಥೆಯ ಬಗ್ಗೆ ನಾನು ಮೊದಲು ನೋಡಿದ್ದು ಸಿಡ್ನಿಯಲ್ಲಿ. ನಮ್ಮನ್ನು ಹೋಟೆಲಿಗೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಆತ್ಮೀಯ ವೈದ್ಯರ ಕಾರಿನಲ್ಲಿ ದಾರಿಯ ನಿರ್ದೇಶನಗಳನ್ನು ನೀಡುವ ಮಹಿಳಾ ದನಿಯೊಂದು ಆಗಾಗ್ಗೆ ಉಲಿಯುತ್ತಿತ್ತು. ಹೊರಡುವಾಗ ಅವರ ಪತ್ನಿ ನಮ್ಮನ್ನು ಎಚ್ಚರಿಸಿದ್ದರು: ‘ಇವರಿಗೆ ಅದಿದೇಂತ ತೋರಿಸ್ಬೇಕು. ಆದರೆ ‘ಅವಳು’ ತುಂಬಾ ಸಲ ತಪ್ಪೇ ತೋರಿಸೋದು!’. ಅದಕ್ಕೆ ಸರಿಯಾಗಿ ಧ್ವನಿಯ ನಿರ್ದೇಶನದಂತೆ ಸುತ್ತು ಹೊಡೆದೂ ಹೊಡೆದೂ ನಾವು ಒಂದು ಗಂಟೆಯ ಮೇಲೆ ಬಂದು ಮುಟ್ಟಿದ್ದೆವು. ಜೊತೆಗಿದ್ದ, ಭಾರತದಲ್ಲಿ ಎಂಥ ಟ್ರಾಫಿಕ್‍ನಲ್ಲೂ ಕಾರ್/ಬೈಕ್ ನಡೆಸುವ ವೀರರೂ -ದಾರಿಯನ್ನು- ಶಾರ್ಟ್‌ಕಟ್‍ಗಳ ಮೂಲಕ ಶೀಘ್ರ ಸವೆಸುವುದರಲ್ಲಿ ಪರಿಣತರೂ ಆಗಿದ್ದ ನನ್ನ ಅಪ್ಪ-ಪತಿ ಇಬ್ಬರೂ, ‘ಕಾಲು ಗಂಟೆಯ ದಾರಿಗೆ ಒಂದು ಗಂಟೆಯ ಸಮಯ ತೆಗೆದುಕೊಂಡ ಪುಣ್ಯಾತ್ಮ, ಆ ಧ್ವನಿಯ ಹಿಂದೆ ಬಿದ್ದು’ ಎಂದು ನಕ್ಕಿದ್ದರು.
ಇನ್ನೊಮ್ಮೆ ಲಂಡನ್‍ನಲ್ಲಿಯೂ ಇದೇ ರೀತಿಯ ‘ಟಾಮ್ ಟಾಮ್’ ಎಂಬ ಧ್ವನಿ ಸಹಾಯ ಮಾಡಲು ಹೋಗಿ ಸುತ್ತು ಹೊಡೆದೂ ಹೊಡೆದು, ಒಂದು ರಸ್ತೆಯ ಅಂಗಡಿಗಳೆಲ್ಲ ಮಕ್ಕಳಿಗೆ ಬಾಯಿಪಾಠವಾಗಿ ಹೋಗಿದ್ದವು. ತೆಲುಗು ಮೂಲದವರಾಗಿದ್ದ ನನ್ನ ವೈದ್ಯ ಸ್ನೇಹಿತನ ಪತ್ನಿ, ನಮ್ಮ ಹೋಟೆಲ್ ಮುಂದೆ ಕಾರು ನಿಂತಾಕ್ಷಣ ‘ಬುಜ್ಜಿ (ಡಿಯರ್), ನೀಕು, ಟಾಮ್‍ಟಾಮ್‍ಕು ನಾದಿ ಪೆದ್ದ ನಮಸ್ಕಾರಂ’ ಎಂದು ಬಿಟ್ಟಿದ್ದಳು.
ನನಗೆ ಅಚ್ಚರಿಯಾಗಿತ್ತು. ‘ಅರೆರೆ ಗಂಡಸರು ‘ಮ್ಯಾಪ್’ನ್ನು, ಅದರೊಂದಿಗೇ ಬಂದಿರುವ ಮ್ಯಾಪ್‍ನ ವಿವಿಧ ಡಿಜಿಟಲ್ ವ್ಯವಸ್ಥೆಗಳನ್ನು ಹೇಗೆ ತಮ್ಮ ಆತ್ಮೀಯರಂತೆ ನೋಡುತ್ತಾರೆ, ಅದೇ ಈ ಎಲ್ಲಾ ಸಾಧನಗಳನ್ನು ಹೆಂಗಸರು ತಮ್ಮ ಪ್ರತಿಸ್ಪರ್ಧಿಗಳಾಗಿ ನೋಡುತ್ತಾರೆ’ ಅಂತ! ಅದಕ್ಕೆ ಸರಿಯಾಗಿ ನಾನು ಉಪಯೋಗಿಸಿರುವ, ನೋಡಿರುವ ಬಹಳಷ್ಟು ಇಂತಹ ಡಿಜಿಟಲ್ ಮ್ಯಾಪ್‍ಗಳಲ್ಲಿ ಉಲಿಯುವುದು ಹೆಣ್ಣಿನ ಧ್ವನಿಯೇ!
ನನಗೂ ‘ಗೂಗಲ್ ಮ್ಯಾಪ್’ನ ಬಗ್ಗೆ ಅಂತಹುದೇ ಅಸಹನೆಯಿತ್ತು. ಜೊತೆಗೆ ಜನರೊಡನೆ ಕೇಳುವುದು ನನಗೊಂದು ಪ್ರಿಯ ಸಂಗತಿಯೂ ಆಗಿತ್ತು. ಆ ಮೂಲಕ ಸಾಮಾಜಿಕ ಸಂವಹನ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ‘ಮ್ಯಾಪ್’ ಇಟ್ಟುಕೊಂಡರೂ, ಮ್ಯಾಪ್‌ನಲ್ಲಿ ನಾವು ಹೋಗಬೇಕಾದ ಸ್ಥಳ ಗುರುತಿಸಲಾದರೂ ಜನರನ್ನು ಕೇಳಬೇಕಾಗುತ್ತಿತ್ತು. ಆಗಲೂ ಅದು ಕೆಲವೊಮ್ಮೆ ಗೊತ್ತಾಗದ ‘ಪೆದ್ದುತನ’ ನನ್ನದು. ಅಂತಹ ಸಂದರ್ಭವೊಂದರಲ್ಲಿ ಜಪಾನ್‍ನ ಕೋಬೆಯಲ್ಲಿ ರೈಲ್ವೆ ಸ್ಟೇಷನ್‍ನಲ್ಲಿ ಅಂಗಡಿಯೊಂದರಲ್ಲಿದ್ದ ಹುಡುಗಿಯನ್ನು ಕೇಳಿದೆ. ಅದಕ್ಕೆ ಅವಳು ಜಪಾನಿ ಭಾಷೆಯಲ್ಲಿ, ಕೈಕಾಲು ಕುಣಿಸಿ ದಿಕ್ಕು ತೋರಿಸಿದಳು. ನಾನು ಆ ದಿಕ್ಕಿಗೆ ಹೋಗಿ ಸಿಗದೆ ಮತ್ತೆ ವಾಪಸ್ ಬಂದು ಅವಳನ್ನೇ ಕೇಳಿದೆ. ಅದಕ್ಕೆ ಅವಳು ಕರುಣಾಳುವಾಗಿ, ದಾರಿ ತೋರುವ ಗುರುವಾಗಿ ಸುಮಾರು ಅರ್ಧ ಕಿಲೊಮೀಟರ್ ನಡೆದು ಬಂದು ನಾನು ಕೇಳುತ್ತಿದ್ದ ಜಾಗ ತೋರಿಸಿ, ಅದರ ಮೇಲೆ ನನಗೊಂದು ತಲೆಬಾಗಿ ವಂದನೆ ಹೇಳಿ ವಾಪಸ್ಸಾದಳು. ನನಗೋ ಆಶ್ಚರ್ಯ. ಈ ಜಪಾನಿಗರ ಉಪಕಾರ ನಿಷ್ಠೆ, ತಮ್ಮ ಅಂಗಡಿಯನ್ನು ಹೆದರದೇ ಬಿಟ್ಟು ಹೋಗುವ ಧೈರ್ಯ-ತಮ್ಮವರ ಪ್ರಾಮಾಣಿಕತೆಯ ಬಗೆಗಿನ ನಂಬುಗೆ, ಬೇರೆಯವರಿಗಾಗಿ ಅರ್ಧ ಕಿ.ಮೀ. ನಡೆಯುವ ಉಪಕಾರ ಬುದ್ಧಿ ಇವಿಷ್ಟನ್ನೂ ಒಮ್ಮೆಲೇ ಮನವರಿಕೆ ಮಾಡಿಸಿಬಿಟ್ಟಿದ್ದವು.
ನನ್ನ ರೆಸಿಸ್ಟೆನ್ಸ್- ನಿರೋಧಕತ್ವದ ಮಧ್ಯೆಯೂ ಗೂಗಲ್ ಮ್ಯಾಪ್‍ನ್ನು ನಾನು ಫ್ರೆಂಡಾಗಿಸಿಕೊಂಡದ್ದು ಮೂರು ವರ್ಷಗಳ ಹಿಂದೆ. ಶಿವಮೊಗ್ಗೆಯಿಂದ ರಾತ್ರಿ ರೈಲು ಹಿಡಿದು, 3 ಗಂಟೆಗೆ ಎರಡೇ ನಿಮಿಷ ರೈಲು ನಿಲ್ಲುವ ಯಶವಂತಪುರದಲ್ಲಿ ಇಳಿದು ನಾನು ದೆಹಲಿಯ ವಿಮಾನ ಹಿಡಿಯಬೇಕಾಗಿತ್ತು. ಆಗಲೇ ಗೂಗಲ್ ಮ್ಯಾಪ್‍ನ್ನು ಅವಲಂಬಿಸಿ ನಾನು ಯಶಸ್ವಿಯಾದದ್ದು. ಇತರರನ್ನು ಕೇಳುವುದು, ಅವರಿಗೆ ತೊಂದರೆಯುಂಟು ಮಾಡುವುದು ಅಥವಾ ಅವರ ತಪ್ಪು ನಿರ್ದೇಶನದ ರಿಸ್ಕ್ ತೆಗೆದುಕೊಳ್ಳುವುದು ಇವ್ಯಾವೂ ನನಗೆ ಬೇಕಾಗಿರಲಿಲ್ಲ. ಗೂಗಲ್ ಮ್ಯಾಪ್ ಕರಾರುವಾಕ್ಕಾಗಿ ರೈಲು ಎಲ್ಲಿ ನಿಂತಿದೆ, ಎಷ್ಟು ಹೊತ್ತಿನಲ್ಲಿ ನಿಲ್ದಾಣ ತಲುಪುತ್ತದೆ ಎಂಬುದನ್ನು ತೋರಿಸುವ ಕೆಲಸ ಮಾಡುತ್ತಿತ್ತು. ಒಂದು ರಾತ್ರಿಯಲ್ಲಿ ಗೆಳತಿಯಾಗಿ ಬಿಟ್ಟಿತ್ತು!
ಯಾವ ಚಾಲಕನೂ ಈಗ ‘ನಿಮಗೆ ಈ ಸ್ಥಳ ಗೊತ್ತೆ?’ ಎಂದರೆ ‘ಇಲ್ಲ’ ಎನ್ನುವುದಿಲ್ಲ. ಬದಲಾಗಿ ‘ಮ್ಯಾಪ್ ಹಾಕ್ತೀನಿ ಮೇಡಂ, ಹೋಗೋಣ’ ಎನ್ನುತ್ತಾರೆ. ಮುಂದುವರೆದು ಯಾವ ಮಾರ್ಗದಲ್ಲಿ ಟ್ರಾಫಿಕ್ ಹೆಚ್ಚಿದೆ, ಎಲ್ಲಿ ರಸ್ತೆ ರಿಪೇರಿ ನಡೆಯುತ್ತಿದೆ ಎಲ್ಲವನ್ನೂ ಗೂಗಲ್ ಮ್ಯಾಪ್ ಹೇಳುತ್ತದೆ. ಹತ್ತಿರ ಯಾವ ಹೋಟೆಲ್ ಇದೆ -ಅದು ತೆರೆದಿದೆಯೆ ಇಲ್ಲವೆ, ಹತ್ತಿರವಿರುವ ಪ್ರೇಕ್ಷಣೀಯ ಸ್ಥಳಗಳು ಯಾವುವು, ಅವುಗಳ ತೆರೆದಿರುವ ಸಮಯ ಎಲ್ಲ ಗೂಗಲ್ ಹೇಳಬಲ್ಲುದು.
ಗೂಗಲ್ ಮ್ಯಾಪ್‍ನ್ನು ಆರಾಮವಾಗಿ ಆಪ್ತವಾಗಿಸಿಕೊಂಡು, ಗೈಡ್ ‘ಅದು ಮುಚ್ಚಿರುತ್ತದೆ. ಈಗ ಹೋಗಲು ಕಷ್ಟ’ ಎಂದರೆ ಈಗ ನಾವು ‘ಇಲ್ಲ ಅದು ತೆರೆದಿದೆ, ಹೋಗಲು 15 ನಿಮಿಷ ಅಷ್ಟೆ ಸಾಕು, ಹೋಗಿ ನೋಡಿಯೇ ಬಿಡೋಣ’ ಎಂದು ಹೇಳಬಹುದು. ಪ್ರವಾಸಿಗರಿಗೆ ನಡೆಯುವ ಹಲವು ಮೋಸಗಳನ್ನು ಇಂದು ಗೂಗಲ್ ಕಡಿಮೆಯಾಗಿಸಿದೆ.
ಆದರೂ ಅಂತರರಾಷ್ಟ್ರೀಯವಾಗಿ ಇನ್ನೂ ಗೂಗಲ್ ಮ್ಯಾಪ್ ಬಳಸುವುದು ಸುಲಭವಲ್ಲ. ಏಕೆಂದರೆ ಕೆಲವು ಯುರೋಪ್ ದೇಶಗಳಲ್ಲಿ ಈ ಮ್ಯಾಪ್‍ಗಳಿರುವುದು ಆಯಾ ದೇಶದ ಭಾಷೆಗಳಲ್ಲಿ. ಗೊತ್ತಿರದ ದಾರಿಗಳಲ್ಲಿ, ಇತರರನ್ನು ಕೇಳದೆ ನಾವು ಏನಾದರೂ ಮುಂದುವರೆದರೆ ಅಪಾಯ ಗ್ಯಾರಂಟಿ. ದಕ್ಷಿಣ ಏಷ್ಯಾದ ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾಗಳಲ್ಲಿ ಇಯರ್‌ಫೋನ್‌ಗಳನ್ನು ಧರಿಸಿ ಮೊಬೈಲ್‍ಗಳಲ್ಲಿ ಹುದುಗಿದ ಜನ, ನಮಗೆ ಕೇಳಲೇ ಮುಜುಗರ ತರಿಸುವ ಸನ್ನಿವೇಶ ಯುರೋಪ್ ದೇಶಗಳಲ್ಲಿ ಸಿಗದು. ನಮ್ಮ ಭಾರತೀಯರು ಜಪಾನೀಯರಷ್ಟಲ್ಲದಿದ್ದರೂ, ಉಪಕಾರಿ -ಸ್ನೇಹಪರರಂತೂ ಹೌದು. ಹಾಗಾಗಿ ಗೂಗಲ್ ಮ್ಯಾಪ್ ಎಂಬ ಗೆಳತಿ ಕೈಯಲ್ಲಿದ್ದರೂ ಜನರನ್ನು ಕೇಳುವ ಅಭ್ಯಾಸ ನಮಗಿನ್ನೂ ಮರೆತಿಲ್ಲ.
ಕೃತಕ ಬುದ್ಧಿಮತ್ತೆ ಅದ್ಭುತವಾಗೇನೋ ಕೆಲಸ ಮಾಡುತ್ತಿದೆ. ತಂತ್ರಜ್ಞಾನ ವಿರೋಧಿಗಳೂ, ತಂತ್ರಜ್ಞಾನ ಪ್ರೇಮಿಗಳಾಗುವಷ್ಟು ಅದರ ಕೈಚಳಕ ಮೂಗಿನ ಮೇಲೆ ಬೆರಳಿಡುವಷ್ಟು ಅಪಾರ. ನಾವು ಹೋಗಬೇಕೆಂದಿರುವ ಕಡೆ ದಾರಿ ತೋರಿಸುವುದನ್ನಷ್ಟೇ ಮಾಡದೆ ನಾವೆಲ್ಲಿ ಹೋಗಬೇಕೆಂಬುದನ್ನು ಅದೇ ನಿರ್ಧರಿಸುವಂತಾಗಿ ಬಿಟ್ಟರೆ?!
ಸ್ವಲ್ಪ ನಿಧಾನಿಸೋಣ. ವಿವೇಚನೆಯಿಂದ ಗೂಗಲ್ ಮ್ಯಾಪ್ ಉಪಯೋಗಿಸೋಣ. ಜನರು ಕಂಡರೆ, ಅವರೂ ಗೂಗಲ್‍ಮ್ಯಾಪ್ ಹಿಡಿದೇ ತೋರಿಸಿದರೂ ಪರವಾಗಿಲ್ಲ, ‘ಹಲೋ’ ‘ನಮಸ್ಕಾರ’ ಎಂದು ಹೇಳಿ ದಾರಿ ಕೇಳುವ ಮಜಾ ಕಳೆದುಕೊಳ್ಳದಿರೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.