ಬೆಂಗಳೂರು: ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೊ) ಮಾನವ ಸಹಿತ ಗಗನಯಾನಕ್ಕೂ ಮುನ್ನ ‘ವ್ಯೋಮ ಮಿತ್ರ’ ಹೆಸರಿನ ‘ಲೇಡಿ ರೋಬೊ’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
ಮಾನವ ಸಹಿತ ಗಗನಯಾನ 2021 ರ ಜೂನ್ ನಡೆಯಲಿದ್ದು, ಅದಕ್ಕೆ ಮೊದಲೇ ಮಹಿಳಾ ರೋಬೊ ಅನ್ನು ಬಾಹ್ಯಾಕಾಶ ನೌಕೆ ನಭಕ್ಕೆ ಒಯ್ದು ಮಾನವ ನಡೆಸುವ ಎಲ್ಲ ರೀತಿಯ ಪ್ರಯೋಗಗಳ ಪರೀಕ್ಷೆ ನಡೆಸಲಿದೆ. ‘ಮಾನವ ಬಾಹ್ಯಾಕಾಶ ಯಾನ ಮತ್ತು ಅನ್ವೇಷಣೆಗಳು ಇಂದಿನ ಸವಾಲುಗಳು ಮತ್ತು ಭವಿಷ್ಯದ ಪ್ರವೃತ್ತಿ’ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಈ ರೋಬೊವನ್ನು ಮೊದಲ ಬಾರಿ ಪ್ರದರ್ಶನಕ್ಕೆ ಇಡಲಾಗಿತ್ತು.
‘ಹಲೋ, ನಾನು ವ್ಯೋಮಮಿತ್ರ, ಮಾನವರೂಪಿ ರೋಬೊ ಮಾದರಿಯಾಗಿದ್ದೇನೆ. ಅಂದಹಾಗೆ, ಮೊದಲ ಮಾನವರಹಿತ ಗಗನಯಾನದಲ್ಲಿ ಭಾಗಿಯಾಗುತ್ತೇನೆ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ರೋಬೊ ಮಾತನಾಡಿದಾಗ ಸಭಿಕರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟರು.
‘ಕಾಲ ಕಾಲಕ್ಕೆ ಎಚ್ಚರಿಕೆ ನೀಡುವುದು, ಜೀವ ರಕ್ಷಕ ಕಾರ್ಯಗಳನ್ನು ನಿರ್ವಹಿಸುವುದರ ಜತೆಗೆ, ಪ್ಯಾನಲ್ ಕಾರ್ಯಚರಣೆಯಂತಹ ಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ’ ಎಂದು ರೋಬೊ ವಿವರಿಸಿತು.
ಈ ಕುರಿತು ಹೆಚ್ಚಿನ ವಿವರ ನೀಡಿದ ಇಸ್ರೊ ಅಧ್ಯಕ್ಷ ಕೆ.ಶಿವನ್, ‘ಮಾನವರೂಪಿ ರೋಬೊ ಬಾಹ್ಯಾಕಾಶದಲ್ಲಿ ಮಾನವ ನಡೆಸುವ ಬಹುತೇಕ ಕಾರ್ಯಗಳನ್ನು ನಿಖರವಾಗಿ ನಿರ್ವಹಿಸುತ್ತದೆ. ಅಲ್ಲದೆ, ಪರಿಸರ ನಿಯಂತ್ರಿತ ಜೀವರಕ್ಷಕ ವ್ಯವಸ್ಥೆಯನ್ನೂ ನಿರ್ವಹಿಸಲಿದೆ’ ಎಂದು ಹೇಳಿದರು.
‘ಗಗನಯಾನ 2021 ರ ಜೂನ್‌ನಲ್ಲಿ ಅಂತಿಮ ಉಡಾವಣೆ ನಡೆಯಲಿದ್ದು, ಅದಕ್ಕೆ ಮುನ್ನ ಪರೀಕ್ಷಾರ್ಥವಾಗಿ ಎರಡು ಉಡಾವಣೆಗಳು ನಡೆಯಲಿವೆ. ಮೂವರು ಗಗನಯಾನಿಗಳನ್ನು ಕಳುಹಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.