ADVERTISEMENT

ಬೆಳಗಾವಿಯ ಬ್ಯಾಂಬೂ ಸೈಕಲ್

ಜಕ್ಕಣಕ್ಕಿ ಎಂ ದಯಾನಂದ
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
bamboo cycle
bamboo cycle   

‘ಬಿದಿರಿನ ಸೈಕಲ್ ನೋಡಿದ್ದೀರಾ...’
ಹೀಗೆ ಪ್ರಶ್ನೆ ಮಾಡಿದರೆ, ಕೆಲವರು ಪ್ರಶ್ನಿಸಿದವರ ಮುಖ ನೋಡಿ ಅಚ್ಚರಿವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು, ‘ಅಂಥ ಸೈಕಲ್ ಇರಲು ಸಾಧ್ಯವೇ’ ಎಂದು ಕುತೂಹಲ ವ್ಯಕ್ತ ಪಡಿಸುತ್ತಾರೆ.

ಖಂಡಿತ ಸಾಧ್ಯವಿದೆ. ಬೆಳಗಾವಿಯ ಅಗಡಿ ಸಹೋದರರು, ಅಂಥ ಬಿದಿರು ಫ್ರೇಮ್‌ನ ಸೈಕಲ್ ಸಿದ್ಧಪಡಿಸಿದ್ದಾರೆ. ಈ ಸೈಕಲ್‌ಗಳು ಈಗಾಗಲೇ ಹುಬ್ಬಳ್ಳಿ, ಬೆಳಗಾವಿ, ಗೋವಾ, ಪುಣೆ ಸೇರಿದಂತೆ ದೇಶದ ಹಲವು ರಾಜ್ಯಗಳ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಮಾತ್ರವಲ್ಲ, ವಿದೇಶಗಳ ರಸ್ತೆಗೂ ಇಳಿದಿವೆ.

ನಿಜ, ಬೆಳಗಾವಿಯ ಅಗಡಿ ಕುಟುಂಬದ ಪ್ರವೀಣ್‌, ಕಿರಣ್‌ ಮತ್ತು ಅರುಣ್‌ ಎಂಬ ಯುವಕರು ವರ್ಷದ ಹಿಂದೆ ಪರಿಸರ ಸ್ನೇಹಿ ಬಿದಿರು ಸೈಕಲ್ (Bamboo cycle) ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಹಲವು ವರ್ಷಗಳಿಂದ ಹುಬ್ಬಳ್ಳಿ, ಬೆಳಗಾವಿಯಲ್ಲಿ ಆಟೊಮೊಬೈಲ್ ವ್ಯವಹಾರ ನಡೆಸುತ್ತಿದ್ದ ಇವರು ಪರಿಸ್ನೇಹಿ ವಾಹನಗಳ ತಯಾರಿಕೆಯತ್ತ ಚಿಂತನೆ ಮಾಡಿದಾಗ, ಈ ಸೈಕಲ್ ತಯಾರಿಕೆಯ ಐಡಿಯಾ ಹೊಳೆದಿದೆ.

ADVERTISEMENT

ಚೀನಾ ಎಕ್ಸ್ಪೊದಲ್ಲಿ...
2015ರ ಅಕ್ಟೋಬರ್‌ನಲ್ಲಿ ಕಿರಣ್ ಅವರು ಚೀನಾದಲ್ಲಿ ನಡೆದ ವಸ್ತು ಪ್ರದರ್ಶನವೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಪೆಡಲ್‌ ಎಲೆಕ್ಟ್ರಿಕ್‌ ಬೈಸಿಕಲ್‌ ಇವರ ಕಣ್ಣಿಗೆ ಬಿತ್ತು. ಆ ಬೈಸಿಕಲ್‌ ತಯಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಲ್ಲಿಂದ ವಾಪಸಾದ ಮೇಲೂ ಭಿನ್ನವಾದ, ಪರಿಸರ ಸ್ನೇಹಿ ಸೈಕಲ್ ತಯಾರಿಕೆ ಆಲೋಚನೆ ಮುಂದುವರಿಸಿದರು. ‘ನಾವೂ ಏಕೆ ಇದಕ್ಕಿಂತ ವಿಭಿನ್ನವಾದ ಸೈಕಲ್ ತಯಾರಿಸಬಾರದು’ ಎಂಬ ಪ್ರಶ್ನೆಯೂ ಮೂಡಿತು. ಇದೇ ವಿಚಾರವಾಗಿ ಎರಡು ಮೂರು ತಿಂಗಳು ಒಂದಷ್ಟು ಹುಡುಕಾಟ, ಸಂಶೋಧನೆ ನಡೆಸಿದರು. ಆಗ ಹೊಳೆದದ್ದೇ ಬಿದಿರು ಸೈಕಲ್ ತಯಾರಿ.

‘ಬಿದಿರು ಕೂಡ ಸ್ಟೀಲ್‌ನಷ್ಟೇ ಗಟ್ಟಿಯ ಗುಣಮಟ್ಟ ಹೊಂದಿದ್ದು, ಹೆಚ್ಚು ಫ್ಲೆಕ್ಸಿಬಲ್‌ ಸಾಮಗ್ರಿಯಾಗಿದೆ. ಇದನ್ನೇ ಫ್ರೇಮ್‌ ಆಗಿ ಬಳಸಿಕೊಂಡು ಬೈಸಿಕಲ್‌ ತಯಾರಿಸಬಹುದಲ್ಲಾ’ ಎಂದು ಚಿಂತಿಸುತ್ತಾ, ಸೈಕಲ್‌ ತಯಾರಿಯ ನಿರ್ಧಾರಕ್ಕೂ ಬಂದರು. ‘ಟ್ರಯಲ್ ಅಂಡ್ ಎರರ್’ ವಿಧಾನ ಅನುಸರಿಸುತ್ತಲೇ ವರ್ಷದ ಹಿಂದೆ ಬಿದಿರಿನ ಸೈಕಲ್ ಸಿದ್ಧವಾಯಿತು. ಮಾರುಕಟ್ಟೆಗೂ ಬಂತು.

ಬಿದಿರು ಸೈಕಲ್ ಸಿದ್ಧಪಡಿಸುತ್ತಿರುವ ಕುರಿತು ಕಿರಣ್ ಅವರು ತಮ್ಮ ಕಂಪನಿ ನಾಗಶಾಂತಿ ಗ್ರೂಪ್‌ನ ವೆಬ್‌ಸೈಟ್, ಫೇಸ್‌ಬುಕ್‌ ಖಾತೆ, ಲಿಂಕ್ಡ್‌ ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಕೆಲವರು ಸೈಕಲ್ ತಯಾರಿ ಕುರಿತು ಪೂರಕ ಸಲಹೆ ನೀಡಿದರೆ, ಇನ್ನೂ ಕೆಲವರು ಸೈಕಲ್ ಖರೀದಿಗೂ ಆಸಕ್ತಿ ತೋರಿದರು. ಬ್ರಿಟನ್‌ನಿಂದ ಒಬ್ಬರು ‘ನಾವೂ ಮಾಡುತ್ತೇವೆ. ಸೈಕಲ್ ಬಗ್ಗೆ ಮಾಹಿತಿ ಕೊಡಿ’ ಎಂದು ಕೇಳಿದ್ದರಂತೆ. ‘ಈಗ ಬೇರೆ ಬೇರೆ ಕಡೆಗಳಿಂದ ಜನರೂ ಕೇಳಲಾರಂಭಿಸಿದ್ದಾರೆ. ಆದರೆ ಬೇಡಿಕೆಯನ್ನು ಒಂದೇ ಸಲಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಕಿರಣ್‌.

ಉತ್ತಮ ಪ್ರತಿಕ್ರಿಯೆ
ಬಿದಿರು ಸೈಕಲ್‌ ಬೆಳಗಾವಿ, ಹುಬ್ಬಳ್ಳಿ, ಗೋವಾದಲ್ಲಿ ರಸ್ತೆಗೆ ಇಳಿದಿವೆ. ಗೋವಾದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿ ಸೈಕಲ್ ಖರೀದಿಸಿದ ಕೆಲವರು 3 ರಿಂದ 4 ಸಾವಿರ ಕಿಲೋ ಮೀಟರ್ ಪ್ರಯಾಣ ಪೂರೈಸಿದ್ದಾರಂತೆ. ಇಷ್ಟಾದರೂ ಈವರೆಗೆ ಯಾವುದೇ ದೂರುಬಂದಿಲ್ಲ ಎಂದು ಕಿರಣ್‌ ಸಂತಸ ವ್ಯಕ್ತಪಡಿಸುತ್ತಾರೆ. ಗೋವಾದಿಂದಲೇ ಸಾಕಷ್ಟು ಮಂದಿ ಸೈಕಲ್‌ಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಇನ್ನು ಪುಣೆ ಹಾಗೂ ಚೆನ್ನೈನಲ್ಲಿ ಹೆಚ್ಚಾಗಿ ಈ ಬೈಸಿಕಲ್ ಖರೀದಿಸಿದ್ದಾರೆ.

ಪೂರ್ಣ ಸ್ಟೀಲ್‌ ಸೈಕಲ್‌ಗಳ ತೂಕಕ್ಕಿಂತ ಬಿದಿರಿನ ಸೈಕಲ್‌ ತೂಕದಲ್ಲಿ ಶೇ 35 ರಿಂದ 40 ರಷ್ಟು ಕಡಿಮೆ ಇರುತ್ತದೆ. ಇದರಿಂದ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಎತ್ತಿಕೊಂಡು ಹೋಗಬಹುದು. ಬಿದಿರಿನ ಸೈಕಲ್‌ಗಳಿಗೆ ಕಂಪನಿಯೇ ಮೂರು ವರ್ಷ ವಾರಂಟಿ ನೀಡುತ್ತಿದೆ. ‘ಪ್ರೇಮ್‌’ಗೆ ಏನೇ ಹಾನಿಯಾದರೂ ವಾಪಸ್ ಮಾಡಲಾಗುತ್ತದೆ. ಆದರೆ ಈವರೆಗೆ ಯಾವುದೇ ದೂರು ಬಂದಿಲ್ಲ ಎನ್ನುತ್ತಾರೆ ಕಿರಣ್‌.

ಬಿದಿರಿನ ಮಾಮೂಲಿ ಸೈಕಲ್‌ಗಳ ಜತೆಗೆ ‘ಇ–ಬೈಸಿಕಲ್‌’ಗಳನ್ನೂ ತಯಾರು ಮಾಡುತ್ತಿದ್ದಾರೆ. ಪೆಡಲ್‌ಗಳಿಗೆ ನೆರವಾಗುವ ಬ್ಯಾಟರಿ ಜೋಡಿಸಿ, ಸೈಕಲ್ ಓಡುವಂತೆ ಮಾಡಲಾಗುತ್ತಿದೆ. ಇಂಥ ಬೈಕ್‌ಗಳು ಗೋವಾ ಮತ್ತು ಹುಬ್ಬಳ್ಳಿಯಲ್ಲಿ ಸಂಚರಿಸುತ್ತಿವೆ.

ಸದ್ಯ ಇವರ ಉತ್ಪಾದನಾ ಘಟಕದಲ್ಲಿ ಎಂಟು ಮಂದಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದಷ್ಟು ಜನರನ್ನು ಸೇರಿಸಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ಇವರಲ್ಲಿ ಇಬ್ಬರು ಹೆಚ್ಚಿನ ಪರಿಣತಿ ಪಡೆದವರಿದ್ದಾರೆ. ಅವರು ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ತರಬೇತಿ ನೀಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬಲ್ಲದು ಎಂಬ ಆಶಾಭಾವ ಇವರದು.

ಬಿದಿರಿನ ಸೈಕಲ್‌ಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ಅರಿವು ಈ ಉದ್ಯಮ ನಡೆಸುವ ಮೂವರಿಗೂ ತಿಳಿದಿದೆ. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೇ, ತಮ್ಮ ಗುರಿ ಸಾಧಿಸಿದ್ದಾರೆ.

ಪರಿಸರ ಸ್ನೇಹಿ ಸೈಕಲ್
ಬಿದಿರು ವಾತಾವರಣದಲ್ಲಿನ ಇಂಗಾಲ ಹೀರಿಕೊಂಡು, ಆಮ್ಲಜನಕವನ್ನು ಹೊರಸೂಸುತ್ತದೆ. ಸೈಕಲ್ ಉತ್ಪಾದನೆಗೆ ಬಿದಿರು ಬಳಸುವುದರಿಂದ ಇದನ್ನು ಬೆಳೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಇದೊಂದು ಪರಿಸರ ಪೂರಕ ಚಟುವಟಿಕೆಯಾಗಲಿದೆ. ಮಾತ್ರವಲ್ಲ ಬಿದಿರು ಬೆಳೆಸುವವರಿಗೂ ಆರ್ಥಿಕವಾಗಿ ಅನುಕೂಲವಾಗಲಿದೆ. ಇಂತಹ ‍ಪೂರಕ ಅಂಶಗಳೇ ಅಗಡಿ ಸಹೋದರರಿಗೆ ಬಿದಿರು ಸೈಕಲ್‌ ತಯಾರಿಸಲು ಕಾರಣವಾಯಿತು.

ಪ್ರಸ್ತುತ ಸಾವಂತವಾಡಿ, ಅಂಬೋಲಿ ಸೇರಿದಂತೆ ಬೆಳಗಾವಿ ಸುತ್ತಮುತ್ತ ಬೆಳೆಯುತ್ತಿರುವ ಬಿದಿರನ್ನು ಸೈಕಲ್ ತಯಾರಿಕೆಗೆ ಬಳಸುತ್ತಿದ್ದಾರೆ. ಕಟಾವು ಮಾಡಿದ ಬಿದಿರನ್ನು ಹುಳ ಹಿಡಿಯದಂತೆ ಟ್ರೀಟ್‌ಮೆಂಟ್‌ ಮಾಡಲಾಗುತ್ತದೆ. ಇದಕ್ಕೂ ಪರಿಸರ ಸ್ನೇಹಿ ವಿಧಾನ ಅನುಸರಿಸಲಾಗುತ್ತದೆ. ರೈತರು ತಮ್ಮ ಹೊಲಗಳ ಬದುಗಳಲ್ಲಿ ಬೆಳೆಸಿದ ಬಿದಿರನ್ನೇ ಇವರು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಈ ಸೈಕಲ್ ಉತ್ಪಾದನೆಯಿಂದ ಬಿದಿರು ಬೆಳೆದವರಿಗೂ ಆದಾಯಬರುತ್ತಿದೆ.

ಬೆಂಗಳೂರಿನಲ್ಲಿ ಪ್ರದರ್ಶನ
ಬೆಂಗಳೂರಿನಲ್ಲಿ ನಡೆದ ಮೇಕರ್ ಫೇರ್‌ನಲ್ಲಿ ಬಿದಿರಿನ ಸೈಕಲ್‌ಗಳನ್ನು ಪ್ರದರ್ಶನ ಮಾಡಿದ್ದಾರೆ. ಇಂಥ ಪ್ರದರ್ಶನಗಳು ನಡೆದಲ್ಲೆಲ್ಲಾ ಮಾಹಿತಿ ನೀಡುವುದಕ್ಕಾಗಿ ಸೈಕಲ್‌ಗಳನ್ನು ಪ್ರದರ್ಶನಕ್ಕಿಡುತ್ತಾರೆ. ಹುಬ್ಬಳ್ಳಿಯಲ್ಲಿ ನಡೆದ ಟೈಕಾನ್‌ ಸಮಾವೇಶದಲ್ಲಿ ಈ ಸೈಕಲ್‌ಗಳು ಜನರನ್ನು ಆಕರ್ಷಿಸಿದ್ದವು.

ಮುಂದಿನ ಯೋಜನೆಗಳೇನು
ಯುರೋಪ್ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬಿದಿರು ಸೈಕಲ್‌ಗಳ ಬಗ್ಗೆ ಪ್ರಚಾರ ಮಾಡುವ ಹಾಗೂ ಅಲ್ಲಿಗೆ ರಫ್ತು ಮಾಡುವ ಗುರಿ ಇಟ್ಟುಕೊಂಡಿದ್ದಾರೆ ಕಿರಣ್‌ ಮತ್ತು ಸಹೋದರರು. ಭಾರತದಲ್ಲೂ ಸೈಕ್ಲಿಂಗ್‌ ಹವ್ಯಾಸ ಬೆಳೆಯುತ್ತಿದೆ. ಇದು ಪರಿಸರ ಸ್ನೇಹಿ ಆಗಿರುವುದರಿಂದ ಯುವಜನರಿಂದ ಬೇಡಿಕೆ ಬರಬಹುದು ಎಂಬ ವಿಶ್ವಾಸ ಅವರದ್ದು.

ಮುಂದೆ ಬಿದಿರು ಸೈಕಲ್‌ ಜತೆಗೆ, ಬ್ಯಾಟರಿ ಚಾಲಿತ ಮತ್ತು ಮಕ್ಕಳಿಗಾಗಿ ಬ್ಯಾಲೆನ್ಸ್ ಸೈಕಲ್‌ಗಳನ್ನೂ ತಯಾರು ಮಾಡುವ ದಾರಿಯಲ್ಲಿದ್ದಾರೆ. ಕಾರ್ಗೊ ಬೈಕ್‌ ಮತ್ತು ಟಾಂಡೆಂ ಬೈಕ್‌ಗಳ ಬಗ್ಗೆಯೂ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ನಡೆಯುತ್ತಿದೆ.

ಬಿದಿರು ಸೈಕಲ್ ಪ್ರಚಾರಕ್ಕಾಗಿಯೇ ಮಾರುಕಟ್ಟೆ ತಂಡವೊಂದನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಹಲವರನ್ನು ನೇಮಿಸಿಕೊ‌ಳ್ಳುತ್ತಿದ್ದಾರೆ. ಅವರೂ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಕಾಲೇಜು, ಕಂಪನಿಗಳಿಗೆ ತೆರಳಿ ಈ ಸೈಕಲ್‌ನ ಮಾಹಿತಿ ನೀಡುತ್ತಿದ್ದಾರೆ. ‘ಬಿದಿರು ಬೇಗ ಮುರಿದು ಹೋಗುತ್ತದೆ’ ಎಂಬ ಭಾವನೆ ಬಿಟ್ಟಾಗ, ಈ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ಕಿರಣ್‌ ಅಗಡಿ.

ವಿದೇಶಗಳಿಗೆ ಫ್ರೇಮ್‌
ಕಿರಣ್ ಮತ್ತು ಸಹೋದರರು ತಯಾರಿಸಿದ ಬಿದಿರು ಸೈಕಲ್‌ನ ಪ್ರೇಮ್‌ಗಳು ನಮ್ಮ ದೇಶದಲ್ಲಿ ಅಲ್ಲದೇ ಬ್ರಿಟನ್‌, ಪೋಲೆಂಡ್, ಸ್ಪೇನ್‌ಗೂ ರಫ್ತಾಗಿವೆ. ಅಲ್ಲಿಯೇ ಇತರ ಬಿಡಿ ಭಾಗಗಳನ್ನು ಜೋಡಿಸಿಕೊಂಡು ಈ ಸೈಕಲ್‌ಗಳು ರಸ್ತೆಗಿಳಿದಿವೆ. ಇನ್ನೂ ಕೆಲವೇ ದಿನಗಳಲ್ಲಿ ಅಮೆರಿಕದ ರಸ್ತೆಗಳಲ್ಲೂ ಬೆಳಗಾವಿಯ ಸೈಕಲ್‌ಗಳು ಸಂಚರಿಸಲಿವೆ. ಇವರ ರಫ್ತು ಉದ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದ್ಯದಲ್ಲೇ ಕೆನಡಾಕ್ಕೂ ಬಿದಿರು ಫ್ರೇಮ್‌ಗಳು ರಫ್ತಾಗಲಿವೆ.

ಬಿದಿರಿನ ಸೈಕಲ್ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9844890453. ವೆಬ್‌ಸೈಟ್‌: www.spotterbikes.in

*


ಐರೋಪ್ಯ ದೇಶಗಳಲ್ಲಿ ಬಿದಿರು ಸೈಕಲ್‌ಗಳನ್ನು ಜನ ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಹಾಗಿಲ್ಲ.
–ಕಿರಣ್‌ ಅಗಡಿ

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.