ADVERTISEMENT

ಜಯದೇವ ಹೃದಯ ಸ್ಪಂದನ: ಹೃದ್ರೋಗಿಗಳ ಕ್ಷೇಮಕುಶಲಕ್ಕೊಂದು ಆ್ಯಪ್‌

ರೇಷ್ಮಾ
Published 16 ಫೆಬ್ರುವರಿ 2021, 15:39 IST
Last Updated 16 ಫೆಬ್ರುವರಿ 2021, 15:39 IST
ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸದಾಶಿವೆ ಗೌಡ ಅವರೊಂದಿಗೆ ಆ್ಯಪ್ ರಚಿಸಿದ ಮನೋಜ್ ಆತ್ರೆಯ, ಪರೀಕ್ಷಿತ್ ಎಚ್‌. ಹಾಗೂ ನಾಗ ರಜತ್‌ ಎಸ್‌. ಎಮ್‌.
ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸದಾಶಿವೆ ಗೌಡ ಅವರೊಂದಿಗೆ ಆ್ಯಪ್ ರಚಿಸಿದ ಮನೋಜ್ ಆತ್ರೆಯ, ಪರೀಕ್ಷಿತ್ ಎಚ್‌. ಹಾಗೂ ನಾಗ ರಜತ್‌ ಎಸ್‌. ಎಮ್‌.   

ಕೊರೊನಾ ಬಂದಾಗಿನಿಂದ ಆಸ್ಪತ್ರೆಗೆ ಹೋಗಲು ಜನ ಹಿಂಜರಿಯುತ್ತಿದ್ದಾರೆ. ತೀರಾ ಗಂಭೀರ ಸಮಸ್ಯೆಗಳನ್ನು ಹೊರತು ಪಡಿಸಿದರೆ ಸಾಮಾನ್ಯ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವುದು ಅಪರೂಪವಾಗಿದೆ. ಆದರೆ ಸರ್ಜರಿ ಮಾಡಿಸಿಕೊಂಡವರು ಪದೇ ಪದೇ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಲೇಬೇಕು. ಹಾರ್ಟ್ ಸರ್ಜರಿ ಮಾಡಿಸಿಕೊಂಡವರು ತಿಂಗಳಿಗೊಮ್ಮೆ, ಹದಿನೈದು ದಿನಕ್ಕೊಮ್ಮೆ ಆಸ್ಪತ್ರೆಗೆ ಬರುವುದನ್ನು ತಪ್ಪಿಸುವ ಸಲುವಾಗಿ ಆ್ಯಪ್‌ವೊಂದನ್ನು ರಚಿಸಲಾಗಿದೆ. ಈ ಆ್ಯಪ್‌ ವೈದ್ಯರು ಹಾಗೂ ರೋಗಿಯ ನಡುವಿನ ಸಂವಹನಕ್ಕೆ ಅನುಕೂಲ ಮಾಡಿಕೊಡುತ್ತದೆ. ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಆ್ಯಪ್‌ಗೆ ‘ಜಯದೇವ ಹೃದಯ ಸ್ಪಂದನ(Jayadeva Hrudaya Spandana)’ ಎಂದು ಹೆಸರಿಸಲಾಗಿದೆ. ಇದನ್ನು ಸದ್ಯ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿಯ ಜಯದೇವ ಸಮೂಹದ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ.

ಆ್ಯಪ್ ರಚಿಸಲು ಕಾರಣ

ಕೊರೊನಾ ಕಾಲದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳೊಂದಿಗೆ ನೇರ ಸಂಪರ್ಕದಲ್ಲಿರುವುದು ಕಷ್ಟ. ಆದರೆ ರೋಗಿಗಳ ದಿನಚರಿ ಹಾಗೂ ಕೆಲವೊಂದು ವರದಿಗಳನ್ನು ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ದಿನಕ್ಕೊಮ್ಮೆ ಪರಿಶೀಲಿಸಲೇಬೇಕು. ಹಾಗಾಗಿ ವರ್ಚುವಲ್‌ ರೂಪದಲ್ಲಿ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದರೆ ಉತ್ತಮ ಎಂಬ ಕಾರಣಕ್ಕೆ ಜಯದೇವ ಸಂಸ್ಥೆ ಆ್ಯಪ್‌ವೊಂದನ್ನು ರಚಿಸಿಕೊಡಲು ವಿದ್ಯಾವರ್ಧಕ ಕಾಲೇಜಿನವರನ್ನು ಸಂಪರ್ಕ ಮಾಡಿದ್ದರು. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಯೊಂದಿಗೆ ವೈದ್ಯರು ಪ್ರತಿನಿತ್ಯ ಸಂಪರ್ಕ ನಡೆಸಲು ಹಾಗೂ ಅವರ ದಿನಚರಿಗಳನ್ನು ತಿಳಿದುಕೊಳ್ಳಲು ನೆರವಾಗುವಂತೆ ಆ್ಯಪ್‌ ರಚಿಸಲು ಕೇಳಿಕೊಂಡಿದ್ದರು. ‘ಸರ್ಜರಿ ಆದ ಮೇಲೆ ರೋಗಿಯು ಪ್ರತಿ ತಿಂಗಳು ಆಸ್ಪತ್ರೆಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ತಿಳಿದುಕೊಳ್ಳಲೇಬೇಕು, ಅದರೊಂದಿಗೆ ತುರ್ತು ಸಮಯದಲ್ಲೂ ಅವರ‌ನ್ನು ಸಂಪರ್ಕ ಮಾಡಲು ನೆರವಾಗಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಯವರು ನಮಗೆ ಈ ಆ್ಯಪ್ ರಚಿಸಲು ತಿಳಿಸಿದ್ದರು’ ಎನ್ನುತ್ತಾರೆ ಜಯದೇವ ಹೃದಯ ಸ್ಪಂದನ ಆ್ಯಪ್‌ ರಚನೆಯ ತಂಡದಲ್ಲಿರುವ ಮನೋಜ್ ಆತ್ರೇಯ.

ADVERTISEMENT

ಆ್ಯಪ್‌ ಕೆಲಸ ಮಾಡುವ ರೀತಿ

ಬೇರೆಲ್ಲಾ ಆ್ಯಪ್‌ಗಳಂತೆ ಜಯದೇವ ಹೃದಯ ಸ್ಪಂದನದಲ್ಲೂ ಮೊದಲು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಬೇಕು. ಶಸ್ತ್ರಚಿಕಿತ್ಸೆಯಾಗಿ ಡಿಸಾರ್ಚ್ ಆಗುವ ವೇಳೆಗೆ ಆಸ್ಪತ್ರೆಯವರೇ ಆ್ಯಪ್ ಇನ್‌ಸ್ಟಾಲ್ ಮಾಡಿ ರೋಗಿಯ ಹೆಸರು, ವೈಯಕ್ತಿಕ ಮಾಹಿತಿ, ಎತ್ತರ, ತೂಕ ಸೇರಿದಂತೆ ಬೇಸಿಕ್‌ ಮಾಹಿತಿಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ. ಶಸ್ತ್ರಚಿಕಿತ್ಸೆವರೆಗಿನ ಪ್ರತಿ ಮಾಹಿತಿಯನ್ನು ಆ್ಯಪ್‌ನಲ್ಲಿ ಸೇರಿಸಿರುತ್ತಾರೆ.

ಈ ಆ್ಯಪ್‌ ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರೋಗಿಗೆ ಯಾವ ಭಾಷೆ ಸೂಕ್ತ ಎನ್ನುವುದನ್ನು ತಿಳಿದುಕೊಂಡು ಆಸ್ಪತ್ರೆಯವರು ಆ ಭಾಷೆಯನ್ನೇ ಸೆಟ್ ಮಾಡಿರುತ್ತಾರೆ. ಇದರಲ್ಲಿ ಪ್ರಶ್ನೋತ್ತರ ವಿಭಾಗವೂ ಇದೆ. ಆ್ಯಪ್‌ನಲ್ಲಿರುವ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಈ ರೂಪದಲ್ಲಿ ರೋಗಿ ಉತ್ತರಿಸಬಹುದು.

‘ರೋಗಿಯ ಲ್ಯಾಬ್ ವರದಿ, ಪ್ರಶ್ನೋತ್ತರದ ಎಲ್ಲವೂ ವೈದ್ಯರ ಬಳಿ ಇರುವ ಆ್ಯಪ್‌ಗೆ ವರ್ಗಾವಣೆಯಾಗುತ್ತದೆ. ಆ ಮೂಲಕ ವೈದ್ಯರು ರೋಗಿಯ ಬಗ್ಗೆ ತಿಳಿದುಕೊಂಡು ಮುಂದಿನ ಪರೀಕ್ಷೆಗಳ ಬಗ್ಗೆ ತಿಳಿಸುತ್ತಾರೆ. ವೈದ್ಯರು ಹೇಳಿದ ಪರೀಕ್ಷೆಗಳನ್ನು ಸ್ಥಳೀಯ ಪ್ರಯೋಗಾಲಯದಲ್ಲೇ ಮಾಡಿಸಿ ಅದರ ವರದಿಯನ್ನು ಆ್ಯಪ್‌ನಲ್ಲಿ ಅಟ್ಯಾಚ್‌ ಮಾಡಬೇಕು. ಆ ವರದಿಯನ್ನು ಆಧರಿಸಿ ವೈದ್ಯರು ರೋಗಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾರೆ. ತುರ್ತು ಸಮಸ್ಯೆಗಳು ಕಾಣಿಸಿಕೊಂಡಾಗ ಕಾಮೆಂಟ್ ವಿಭಾಗದಲ್ಲಿ ಕಳುಹಿಸಬೇಕು. ಆ ಕಾಮೆಂಟ್‌ ಎಮರ್ಜೆನ್ಸಿ ವಿಭಾಗದ ವೈದ್ಯರಿಗೆ ತಕ್ಷಣಕ್ಕೆ ತಲುಪುತ್ತದೆ. ನೋಟಿಫಿಕೇಶನ್‌ ಬಂದ ತಕ್ಷಣಕ್ಕೆ ಅವರು ಉತ್ತರ ನೀಡುತ್ತಾರೆ. ಆ್ಯಪ್‌ನ ಲರ್ನಿಂಗ್‌ ಮೆಟಿರೀಯಲ್ ವಿಭಾಗದಲ್ಲಿ ಚಿಕಿತ್ಸೆ, ಸರ್ಜರಿ, ಸರ್ಜರಿ ನಂತರ ಅನುಸರಿಸಬೇಕಾದ ಕ್ರಮಗಳು, ಪಥ್ಯೆ ಈ ವಿಚಾರಗಳ ಬಗ್ಗೆಲ್ಲಾ ಸಮಗ್ರ ಮಾಹಿತಿ ಇದೆ. ಒಟ್ಟಾರೆ ಈ ಆ್ಯಪ್‌ ಸರ್ಜರಿ ಮಾಡಿಸಿಕೊಂಡ ರೋಗಿಗಳಿಗೆ ವರದಾನ’ ಎಂದು ಆ್ಯಪ್‌ನ ಸ್ವರೂಪವನ್ನು ವಿವರಿಸುತ್ತಾರೆ ಮನೋಜ್‌.

ಆ್ಯಪ್‌ ರಚಿಸಿದ ವಿದ್ಯಾರ್ಥಿಗಳ ತಂಡ

ಮನೋಜ್ ಆತ್ರೇಯ, ಪರಿಕ್ಷಿತ್ ಎಚ್‌., ನಾಗ ರಜತ್ ಎಸ್‌.ಎಂ., ಅಧಿತ್‌ ಎ. ಈ ನಾಲ್ವರು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಗುರುರಾಜ್ ಎಚ್‌. ಎಲ್‌. ಹಾಗೂ ಪ್ರಾಂಶುಪಾಲರಾದ ಡಾ. ಸದಾಶಿವೆ ಗೌಡ ಅವರ ಸಹಕಾರದೊಂದಿಗೆ ಈ ಆ್ಯಪ್‌ ಅನ್ನು ರಚಿಸಿದ್ದಾರೆ. ಇವರಿಗೆ ಕಾಲೇಜಿನ ವಿಭಾಗದ ಮುಖ್ಯಸ್ಥರ ಸಹಕಾರವೂ ಇತ್ತು.

ಸದ್ಯ 150 ರಿಂದ 200 ಮಂದಿ ಆ್ಯಪ್ ಬಳಸುತ್ತಿದ್ದು ಪ್ರತಿ ತಿಂಗಳು 50 ರಿಂದ 60 ಮಂದಿ ಹೆಚ್ಚಾಗುತ್ತಿದ್ದಾರೆ. ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.