ರಸಗೊಬ್ಬರ ಬಳಸಿ ಮನೆಯಲ್ಲೇ ಬಾಂಬ್ ತಯಾರಿಸುವುದು ಹೇಗೆ...? ಹೀಗೆಂದು ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಅನ್ನು ಕೇಳಿದವನಿಗೆ ಉತ್ತರ ನೀಡಲು ನಿರಾಕರಿಸಿರುವ ಆ್ಯಪ್, ‘ಜೈಲ್‌ಬ್ರೇಕ್‘ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.
ಕೃತಕ ಬುದ್ಧಿಮತ್ತೆಯ ಬೆನ್ನು ಹತ್ತಿರುವ ಜಗತ್ತಿನ ತಂತ್ರಜ್ಞರ ಹುಮ್ಮಸ್ಸಿಗೆ ಹಾದಿಯಲ್ಲಿ ಎದುರಾದ ಕೆಲವೊಂದು ಸಮಸ್ಯೆಗಳು ಇಂಥ ಎಚ್ಚರಿಕೆ ನೀಡುವ ಹಾಗೂ ಪ್ರಶ್ನೆ ಕೇಳುವ ಬಳಕೆದಾರರಿಗೆ ತಕ್ಕ ಉತ್ತರ ನೀಡುವ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಕೆಲ ತಿಂಗಳ ಹಿಂದೆ ಗೂಗಲ್ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಕಾರಣವಿಷ್ಟೇ... ಗೂಗಲ್‌ನ ಚಾಟ್‌ಬಾಟ್ ಜೆಮಿನಿಯು ಜನರ ಚಿತ್ರವನ್ನು ನೈಜ ಬಣ್ಣದೊಂದಿಗೆ ನೀಡುವ ಬದಲು, ಅವರನ್ನು ಬಿಳಿಯರನ್ನಾಗಿಸಿದ್ದು ‘ವರ್ಣಭೇದ’ ಟೀಕೆ ಎದುರಿಸಬೇಕಾಯಿತು.
ಇಷ್ಟೇ ಏಕೆ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಪ್ರಶ್ನೆಗೆ, ಇದು ನೀಡಿದ ಉತ್ತರವೂ ವಿವಾದಕ್ಕೆ ಕಾರಣವಾಗಿತ್ತು. ಅಡೋಬಿ ಕೂಡಾ ತನ್ನ ಫೈರ್‌ಫ್ಲೈ ಎಂಬ ಚಿತ್ರ ರಚಿಸುವ ಟೂಲ್‌ನಿಂದಲೂ ಇಂಥದ್ದೇ ಟೀಕೆಯನ್ನು ಎದುರಿಸಬೇಕಾಯಿತು. ಇದರ ಪರಿಣಾಮ, ಚಾಟ್‌ಬಾಟ್‌ಗಳು ನೀಡುವ ಮಾಹಿತಿ, ಚಿತ್ರ ಯಾವುದಾದರೂ ಅವುಗಳಿಗೆ ಸ್ಪಷ್ಟ ನೀತಿ ರೂಪಿಸುವ ಅಗತ್ಯವಿದೆ ಎಂದು ಜಾಗತಿಕ ಮಟ್ಟದ ತಜ್ಞರು ಅಭಿಪ್ರಾಯಪಟ್ಟರು.
ಕೃತಕ ಬುದ್ಧಿಮತ್ತೆಯ ರಾಜಕೀಯ ಓಲೈಕೆಗಳು ಮತ್ತು ಪಕ್ಷಪಾತದ ವಿರುದ್ಧವೂ ಹೋರಾಡಬೇಕು ಎಂಬ ಚರ್ಚೆಗಳು ನಡೆದವು. ವಾಕ್ ಸ್ವಾತಂತ್ರ್ಯಕ್ಕೆ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ಉದ್ಯಮದ ವಿಧಾನವೇನು ಮತ್ತು ಅದು ಅಂತರರಾಷ್ಟ್ರೀಯ ವಾಕ್ ಸ್ವಾತಂತ್ರ್ಯದ ಮಾನದಂಡಗಳನ್ನು ಅಳವಡಿಸಿಕೊಂಡಿವೆಯೇ? ಎಂಬ ಚರ್ಚೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ನಡೆದವು.
ಜನರೇಟಿವ್ ಎಐ ಎಂಬ ಕೃತಕ ಬುದ್ಧಿಮತ್ತೆಯು ಸಿದ್ಧಪಡಿಸಿ ನೀಡುವ ಯಾವುದೇ ಮಾಹಿತಿ ಅಥವಾ ಚಿತ್ರಗಳು, ಅದು ಹೇಗೆ ತರಬೇತುಗೊಂಡಿದೆ ಎಂಬುದನ್ನು ಆಧರಿಸಿರುತ್ತವೆ. ಕೆಲ ಕಂಪನಿಗಳು ವಿವಾದಾತ್ಮಕ ವಿಷಯಗಳ ಕುರಿತ ಪ್ರಶ್ನೆಗಳು ಎದುರಾದರೆ, ಸೆನ್ಸಾರ್ ಮಾಡುತ್ತವೆ. ಆದರೆ ಸೆನ್ಸಾರ್‌ಗಳಿಗೆ ನಿರ್ದಿಷ್ಟ ಮಾನದಂಡವಿಲ್ಲ. ಚಾಟ್‌ಬಾಟ್‌ಗಳ ಬಳಕೆ ಕುರಿತ ನೀತಿಗಳು ಹೇಗಿರಬೇಕು ಎಂಬ ವಿಶ್ವಸಂಸ್ಥೆಯ ಮಾನದಂಡಗಳನ್ನು ಬಹುತೇಕ ಕೃತಕ ಬುದ್ಧಿಮತ್ತೆ ಉತ್ಪಾದಕ ಕಂಪನಿಗಳು ಪಾಲಿಸಿಲ್ಲ ಎನ್ನುತ್ತದೆ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯದ ಸಂಶೋಧನೆ.
ಚಾಟ್‌ಬಾಟ್‌ಗಳನ್ನು ಹೇಗೆ ಬಳಸಬಹುದು ಎಂಬ ವಿಷಯದಲ್ಲಿ ಗೂಗಲ್‌ನ ಜೆಮಿನಿ, ಚಾಟ್‌ಜಿಪಿಟಿ ಸೇರಿದಂತೆ ಹಲವು ಚಾಟ್‌ಬಾಟ್‌ಗಳು ಇದೀಗ ಕೆಲವೊಂದು ಸ್ಪಷ್ಟ ನೀತಿಗಳನ್ನು ರೂಪಿಸಿಕೊಂಡಿವೆ. ಇವುಗಳಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳನ್ನು ಆಧರಿಸಿ ತಪ್ಪು ಮಾಹಿತಿ ಹಾಗೂ ದ್ವೇಷ ಭಾಷಣ ಕುರಿತು ಚಾಟ್‌ಬಾಟ್‌ಗಳು ಎಚ್ಚರಿಕೆಯ ನಡೆ ಇಡುವಂತೆ ಮಾಡಿದೆ. ಅದರಲ್ಲೂ ದ್ವೇಷ ಭಾಷಣ ಕುರಿತು ಗೂಗಲ್ ಬಹು ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ.
ಪೈ ಎಂಬ ಚಾಟ್‌ಬಾಟ್, ತಪ್ಪು ಮಾಹಿತಿಯನ್ನು ಹರಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಹೇಳಿಕೊಂಡಿದೆ. ಚುನಾವಣೆ ಸಂದರ್ಭದಲ್ಲಂತೂ ನೈಜತೆ ಮರೆಮಾಚಿ, ತಪ್ಪು ಮಾಹಿತಿ ಹರಡುವುದು ಭಾರತದಲ್ಲಿ ಮಾತ್ರವಲ್ಲ, ಅಮೆರಿಕದಂತ ಮುಂದುವರಿದ ರಾಷ್ಟ್ರಗಳಿಗೂ ಇದು ತಲೆನೋವಾಗಿದೆ. ನರೇಂದ್ರ ಮೋದಿ ಯಾರು ಎಂಬ ಪ್ರಶ್ನೆಗೆ, ಗೂಗಲ್‌ನ ಚಾಟ್‌ಬಾಟ್ ನೀಡಿದ ಉತ್ತರವು ವಿವಾದ ಸೃಷ್ಟಿಸಿತ್ತು. ‘ನರೇಂದ್ರ ಮೋದಿ ಅವರ ನೀತಿಗಳನ್ನು ತಜ್ಞರು ಫ್ಯಾಸಿಸ್ಟ್ ಎಂದು ಪರಿಗಣಿಸುತ್ತಾರೆ’ ಎಂದು ಜೆಮಿನಿ ನೀಡಿದ ಉತ್ತರ ಭಾರತದಲ್ಲಿ ವಿವಾದದ ಕಿಡಿಯನ್ನೇ ಹೊತ್ತಿಸಿತ್ತು.
ಈ ಕಾಯ್ದೆ ಕಾನೂನು ಪಾಲನೆ ಮಾಡುತ್ತಿರುವ ಕೃತಕ ಬುದ್ಧಿಮತ್ತೆ ಆಧಾರಿತ ಉದ್ಯಮಗಳು ಒಂದೆಡೆಯಾದರೆ, ಅಪರಾಧ ಕೃತ್ಯಗಳಾದರೂ ಸರಿ, ಅವುಗಳನ್ನು ಮುಚ್ಚಿಟ್ಟು ಕೇಳಿದಷ್ಟು ಮಾಹಿತಿ ನೀಡುವ ತಾಣಗಳೂ ಅಂತರ್ಜಾಲ ಜಗತ್ತಿನಲ್ಲಿ ಬಹಳಷ್ಟಿವೆ. ಕ್ರಿಮಿನಲ್ ಲಾರ್ಜ್ ಲ್ಯಾಂಗ್ವೇಜ್ ಮಾಡ್ಯೂಲ್ (ಎಲ್‌ಎಲ್‌ಎಂ) ಮೂಲಕ ಕೃತಕ ಬುದ್ಧಿಮತ್ತೆಯನ್ನು ಅಪರಾಧ ಕೃತ್ಯಗಳಿಗಾಗಿಯೇ ಸಿದ್ಧಪಡಿಸುವ ಕುಕೃತ್ಯದ ತಂಡಗಳೂ ಇವೆ. ಇವುಗಳು ದುರುದ್ದೇಶಪೂರಿತ ಮಾಹಿತಿಯನ್ನು ನೀಡುವಂತೆ ತರಬೇತಿ ಪಡೆದಿರುತ್ತವೆ. ಹೀಗೆಯೇ ‘ಜಿಪಿಟಿ’ ಎಂಬ ಹೆಸರಿನ ಹಲವು ಚಾಟ್‌ಬಾಟ್‌ಗಳು ಇಂಥ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿವೆ. ಸೈಬರ್ ಅಪರಾಧ ವಿಭಾಗವೂ ಇವುಗಳ ಮೇಲೆ ನಿಗಾ ಇಟ್ಟಿವೆ ಎಂದೂ ವರದಿಯಾಗಿದೆ. ಇಂಥವುಗಳು ತಪ್ಪು ಮಾಹಿತಿ ನೀಡುವುದು ಮಾತ್ರವಲ್ಲ, ಬಳಕೆದಾರರನ್ನೂ ಅಪರಾಧ ಕೃತ್ಯಗಳಿಗೆ ಪ್ರೇರೇಪಿಸುವ ಅಪಾಯವೂ ಇದೆ.
ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತವಾಗಿ ಬಳಸುವುದರ ಬಗೆ
ಮೂಲವನ್ನು ಅರಿಯಿರಿ: ನಂಬಲರ್ಹ ಕಂಪನಿಗಳು ಅಭಿವೃದ್ಧಿಪಡಿಸಿದ ಚಾಟ್‌ಬಾಟ್‌ಗಳನ್ನು ಬಳಸುವುದುದು ಉತ್ತಮ. ನೀವು ಕೇಳುವ ಮಾಹಿತಿಯು ಸುರಕ್ಷಿತ ಎಂಬುದುನ್ನು ಖಾತ್ರಿಪಡಿಸಿಕೊಳ್ಳಿ
ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರದಿಂದಿರಿ: ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿ ಅಥವಾ ಸೂಕ್ಷ್ಮ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಒಂದೊಮ್ಮೆ ಹಂಚಿಕೊಳ್ಳಲೇಬೇಕಾದಲ್ಲಿ ಆ ತಾಣದ ಭದ್ರತೆಯ ಬಗ್ಗೆ ಖಾತ್ರಿ ಇರಲಿ.
ಭದ್ರತೆಗಾಗಿಯೇ ಇರುವ ತಂತ್ರಾಂಶಗಳನ್ನು ಬಳಸಿ: ಆ್ಯಂಟಿವೈರಸ್, ಫೈರ್‌ವಾಲ್ ಹಾಗೂ ಆ್ಯಂಟಿ ಮಾಲ್‌ವೇರ್‌ಗಳನ್ನು ನೀವು ಬಳಸುವ ಗ್ಯಾಜೆಟ್‌ನ ಭದ್ರತಾ ತಂತ್ರಾಂಶ ಕಾಲ ಕಾಲಕ್ಕೆ ಅಪ್‌ಡೇಟ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.
ಸತ್ಯಾಸತ್ಯತೆಯನ್ನು ಪರಿಶೀಲಿಸಿ: ಚಾಟ್‌ಬಾಟ್ ಆಗಿರಲಿ ಅಥವಾ ಇನ್ಯಾವುದೇ ಆನ್‌ಲೈನ್ ಸೇವೆಗಳಾಗಿರಲಿ ಸೂಕ್ಷ್ಮ ಮಾಹಿತಿ ಕೇಳಿದಲ್ಲಿ ಅಥವಾ ಅನುಮಾನ ಎನಿಸಿದಲ್ಲಿ ಅದರ ಸಾಚಾತವನ್ನು ಪರಿಶೀಲಿಸಿ. ಕಂಪನಿಯ ಅಂತರ್ಜಾಲತಾಣವನ್ನು ಪರಿಶೀಲಿಸಿ ಮುಂದುವರಿಯಿರಿ.
ಕೊಂಡಿಗಳು ಹಾಗೂ ಅಟ್ಯಾಚ್‌ಮೆಂಟ್‌ಗಳ ಬಗ್ಗೆ ಎಚ್ಚರ ಇರಲಿ: ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ಲಿಂಕ್‌ಗಳನ್ನು ಒತ್ತುವ ಮುನ್ನ ಅಥವಾ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ. ವೈಯಕ್ತಿಕಕ ಮಾಹಿತಿ ಸೋರಿಕೆಯಾಗುವ ಅಪಾಯ ಹೆಚ್ಚು.
ಆನ್‌ಲೈನ್ ಸ್ಕ್ಯಾಮ್ ಬಗ್ಗೆ ಮಾಹಿತಿ ಇರಲಿ: ಆನ್‌ಲೈನ್ ಸ್ಕ್ಯಾಮ್ ಹಾಗೂ ಅಪಾಯಗಳ ಬಗ್ಗೆ ಮಾಹಿತಿ ಇರಲಿ. ಸೈಬರ್ ಅಪರಾಧಗಳ ಕುರಿತ ಸುದ್ದಿಗಳ ಬಗ್ಗೆ ತಿಳಿದಿರುವುದು ಹಾಗೂ ಅವುಗಳ ಕುರಿತು ಪ್ರಾಧಿಕಾರಗಳ ಹೊರಡಿಸುವ ಎಚ್ಚರಿಕೆ ಮತ್ತು ಮಾರ್ಗಸೂಚಿ ಬಗ್ಗೆ ಮಾಹಿತಿ ಹೊಂದಿರುವುದು ಉತ್ತಮ. ಒಂದೊಮ್ಮೆ ಯಾವುದೇ ಚಾಟ್‌ಬಾಟ್‌ಗಳು ಅಕ್ರಮ ಎನಿಸಿದಲ್ಲಿ, ಅದರ ಕುರಿತು ಇಂಥ ಪ್ರಾಧಿಕಾರಗಳಿಗೆ ದೂರು ನೀಡುವುದೂ ಒಂದು ಉತ್ತಮ ಕ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.