ADVERTISEMENT

ಪೆಗಾಸಸ್‌ ಪೆಡಂಭೂತ ಸೃಷ್ಟಿಸಿದ ಎನ್ಎಸ್ಒ: ಇಸ್ರೇಲಿ ಕಂಪನಿಯ ಇತಿಹಾಸ

ಸ್ಪೈವೇರ್ ತಯಾರಕ ಕಂಪನಿಯ ಹಿಂದೆ ಭಾರತೀಯನ ಜಾಡೂ ಇದೆ

ಅವಿನಾಶ್ ಬಿ.
Published 19 ಜುಲೈ 2021, 2:27 IST
Last Updated 19 ಜುಲೈ 2021, 2:27 IST
NSO ಗ್ರೂಪ್
NSO ಗ್ರೂಪ್   

‘ಪೆಗಾಸಸ್’ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಸೈಬರ್‌ ಅಸ್ತ್ರಗಳನ್ನು ಸೃಷ್ಟಿಸುತ್ತಿರುವ ಇಸ್ರೇಲ್‌ ಮೂಲದ ಕಂಪನಿಯು ಪೆಗಾಸಸ್‌ ಕು–ತಂತ್ರಾಂಶವನ್ನೂ ಅಭಿವೃದ್ಧಿ ಪಡಿಸಿದೆ. 2016ರಿಂದ ಹೆಚ್ಚು ಚರ್ಚೆಗೆ ಬಂದಿರುವ ಆ ಸೈಬರ್‌ ಸೆಕ್ಯುರಿಟಿ ಕಂಪನಿಯ ಕುರಿತಾದ ವಿವರ ಇಲ್ಲಿದೆ.

ಪೆಗಾಸಸ್! ಜಗತ್ತಿನಲ್ಲಿ ಇಂಟರ್ನೆಟ್ಟಿಗರನ್ನು ಪ್ರೈವೆಸಿ ಹೆಸರಲ್ಲಿ ಬೆಚ್ಚಿ ಬೀಳಿಸಿರುವ ಇನ್ನೊಂದು ಹೆಸರು. ಜಾಗತಿಕವಾಗಿ ರಾಜಕೀಯ ಮುಖಂಡರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮಾತ್ರವೇ ಅಲ್ಲ, ಉಗ್ರಗಾಮಿಗಳ ಕಿವಿ ಕೂಡ ಪೆಗಾಸಸ್ ಕಡೆ ನೆಟ್ಟಿರುವುದು ಸುಳ್ಳಲ್ಲ.

ಇಸ್ರೇಲಿನ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಎಂಬ ತಂತ್ರಜ್ಞಾನ ಕಂಪನಿಯೊಂದು ಹೊರಬಿಟ್ಟಿರುವ ತಂತ್ರಾಂಶವೇ ಪೆಗಾಸಸ್. ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೇ (ಕರೆ ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ) ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನೊಳಗೆ ಕುಳಿತುಕೊಳ್ಳಬಲ್ಲ ಕು-ತಂತ್ರಾಂಶ (ಮಾಲ್‌ವೇರ್). ಸಂಪರ್ಕ ಸಂಖ್ಯೆಗಳು, ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್‌ ಸಂದೇಶಗಳು, ಫೋಟೊ-ವೀಡಿಯೊಗಳು ಮಾತ್ರವೇ ಅಲ್ಲ, ಆತನ ಮಾತುಗಳನ್ನು ಕೇಳಿಸಿಕೊಂಡು, ಎಲ್ಲಿ ಹೋದನೆಂಬುದನ್ನು ತಿಳಿದುಕೊಂಡು, ಎಲ್ಲ ಮಾಹಿತಿಯನ್ನು ನಿಗದಿತ ವ್ಯಕ್ತಿಗೆ ರವಾನಿಸುವ ಸಾಮರ್ಥ್ಯವುಳ್ಳ ಸ್ಪೈವೇರ್ ಅಥವಾ ಗೂಢಚರ್ಯೆ ತಂತ್ರಾಂಶವಿದು.

ADVERTISEMENT

ಜತೆಗೆ, ಕಳೆದ ವರ್ಷದ ಅ. 2ರಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಕರ್ತ ಜಮಾಲ್ ಅಹಮದ್ ಖಶೋಗಿಯು ಹತ್ಯೆಗೀಡಾಗಿರುವುದಕ್ಕೂ ಆತನ ಮೊಬೈಲ್‌ನೊಳಗೆ ಕುಳಿತಿದ್ದ ಪೆಗಾಸಸ್ ಪ್ರಭಾವ ಇತ್ತೆಂಬುದು ಮತ್ತೆ ಚರ್ಚೆಯಾಗತೊಡಗಿದೆ. ಈ ಪೆಗಾಸಸ್ ಖರೀದಿಸಿದ್ದು ಸೌದಿ ಸರಕಾರ.

ನಮ್ಮದು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಇರುವ ಸಂದೇಶವಾಹಕ ಸೇವೆ ಎಂದು ಹೇಳಿಕೊಳ್ಳುತ್ತಾ, ‘ನಿಮ್ಮ ಎಲ್ಲ ಸಂದೇಶಗಳು ಗೌಪ್ಯವಾಗಿಯೇ ರವಾನೆಯಾಗುತ್ತವೆ.ಮೂರನೇ ವ್ಯಕ್ತಿಗಳು ಇದನ್ನು ನೋಡಲು ಸಾಧ್ಯವೇ ಇಲ್ಲ’ ಎಂದು ಭರವಸೆ ನೀಡಿ ನಂಬಿಸಿದ್ದ ವಾಟ್ಸ್ ಆ್ಯಪ್ (ಫೇಸ್‌ಬುಕ್ ಮಾಲೀಕತ್ವ) ಕೂಡ ಒಮ್ಮೆಗೇ ಬೆಚ್ಚಿಬಿದ್ದು, ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯಕ್ಕೆ ‘ನಮಗೇ ಗೊತ್ತಿಲ್ಲದಂತೆ ನಮ್ಮ ವೇದಿಕೆ ಬಳಸಿ ಗೂಢಚರ್ಯೆ ನಡೆಸಿದ್ದಾರೆ’ ಎಂದು ಎನ್‌ಎಸ್ಒ ವಿರುದ್ಧ ದೂರು ನೀಡಿದೆ ಅಂತಾದರೆ, ಇಂಟರ್ನೆಟ್ ಯುಗದಲ್ಲಿ ನಮ್ಮ ಖಾಸಗಿತನದ ರಕ್ಷಣೆ ಎಷ್ಟರ ಮಟ್ಟಿಗೆ ದುರ್ಬಲವಾಗಿದೆ ಎಂಬುದು ವೇದ್ಯವಾಗುತ್ತದೆ. ಈ ಡಿಜಿಟಲ್ ಯುಗದಲ್ಲಿ ತಂತ್ರಾಂಶಕ್ಕೆ ಪ್ರತಿಯಾಗಿ ಕುತಂತ್ರಾಂಶಗಳೂ ಬೆಳೆಯುತ್ತಿವೆ ಎಂಬುದು ಗಮನಿಸಬೇಕಾದ ವಿಚಾರ.

‘ಜಗತ್ತಿನಲ್ಲಿ ಸಾವಿರಾರು ಜನರ ರಕ್ಷಣೆಗಾಗಿ, ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳ ತಡೆ ಹಾಗೂ ತನಿಖೆಗಾಗಿ, ಸರಕಾರಿ ಏಜೆನ್ಸಿಗಳಿಗೆ ನೆರವಾಗಲು ನಾವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂಬುದು ಎನ್‌ಎಸ್ಒ ಗ್ರೂಪ್‌ನ ಘೋಷ ವಾಕ್ಯ. ಪೆಗಾಸಸ್ ವಿಚಾರ ಬಯಲಾದಾಗ, ‘ಅವುಗಳನ್ನು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರವೇ ನಾವು ಮಾರಾಟ ಮಾಡುತ್ತೇವೆ’ ಅಂತ ಎನ್‌ಎಸ್ಒ ಹೇಳಿಕೆ ನೀಡಿ ಕೈತೊಳೆದುಕೊಂಡಿತು.

ಈ ಇಸ್ರೇಲಿ ಕಂಪನಿಯ ಮೂಲ ಕೆದಕಿದರೆ ಭಾರತೀಯನ ಜಾಡು ಕೂಡ ಸಿಗುತ್ತದೆ. 1999ರಲ್ಲಿ ಭಾರತೀಯ ಮೂಲದ ದೀಪಾಂಜನ್ ‘ಡಿಜೆ’ ದೇಬ್, ಸ್ಯಾನ್‌ಫರ್ಡ್ ರಾಬರ್ಟ್‌ಸನ್, ಬೆಂಜಮಿನ್ ಬಾಲ್ ಹಾಗೂ ನೀಲ್ ಗಾರ್ಫಿಂಕೆಲ್ ಎಂಬವರು ಸೇರಿಕೊಂಡು, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ, ಫ್ರಾನ್ಸಿಸ್ಕೊ ಪಾರ್ಟ್‌ನರ್ಸ್ ಎಂಬ ತಂತ್ರಜ್ಞಾನ ಕಂಪನಿಯೊಂದನ್ನು ಹುಟ್ಟು ಹಾಕುತ್ತಾರೆ. ಈ ಕಂಪನಿಯ ಮುಖ್ಯ ಉದ್ದೇಶವೆಂದರೆ, ತಂತ್ರಜ್ಞಾನವನ್ನು ವಿಶೇಷವಾಗಿ ಗೂಢಚರ್ಯೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಣ್ಣಪುಟ್ಟ ಕಂಪನಿಗಳ ಕೈಹಿಡಿದು ಮೇಲೆತ್ತುವುದು ಅಂದರೆ, ತೀರಾ ಕಡಿಮೆ ಮೊತ್ತಕ್ಕೆ ಅವನ್ನು ಖರೀದಿಸಿ, ಬೆಳೆಸಿ, ಮರು ಮಾರಾಟ ಮಾಡುವುದು.

ಈಕ್ವಿಟಿ ಕಂಪನಿಗಳಲ್ಲಿ ಇಂಥ ಪ್ರಕ್ರಿಯೆ ಸರ್ವೇಸಾಮಾನ್ಯ. 2010ರಲ್ಲಿ ಹುಟ್ಟಿಕೊಂಡು, ಪುಟ್ಟ ಕಂಪನಿಯಾಗಿದ್ದ ಎನ್‌ಎಸ್ಒ ಗ್ರೂಪ್ ಅನ್ನು ಫ್ರಾನ್ಸಿಸ್ಕೊ ಪಾರ್ಟ್‌ನರ್ಸ್ ಕಂಪನಿಯು 2014ರಲ್ಲಿ ಸುಮಾರು 12 ಕೋಟಿ ಡಾಲರ್‌ಗೆ ಖರೀದಿಸಿ, ಬೆಳೆಸಿತು. 2019ರ ಫೆಬ್ರವರಿ ತಿಂಗಳಲ್ಲಿ 100 ಕೋಟಿ ಡಾಲರ್‌ಗೆ ಅದೇ ಕಂಪನಿಯ ಸಹಸಂಸ್ಥಾಪಕರಾಗಿದ್ದ ಶಾಲೆವ್ ಹುಲಿಯೊ ಹಾಗೂ ಒಮ್ರಿ ಲಾವಿ ಅವರಿಗೆ ಮಾರಿತು. ಯೂರೋಪಿನ ಬಂಡವಾಳ ಕಂಪನಿ ನೋವಾಲ್ಪಿನಾ ಕ್ಯಾಪಿಟಲ್‌ನ ಹಣಕಾಸು ಬೆಂಬಲ ಇದಕ್ಕಿತ್ತು. ಎನ್‌ಎಸ್ಒ ಸಂಸ್ಥಾಪಕರಾದ ನಿವ್ ಕಾರ್ಮಿ, ಒಮ್ರಿ ಲಾವಿ ಹಾಗೂ ಶಾಲೊವ್ ಹುಲಿಯೊ ಅವರು, ಇಸ್ರೇಲ್ ರಕ್ಷಣಾ ಇಲಾಖೆಗಾಗಿ ಸಂಕೇತಾಕ್ಷರ ಗೂಢಚರ್ಯೆ ಸಂಗ್ರಹಿಸುವ ಹೊಣೆ ಹೊತ್ತಿದ್ದ ‘ಇಸ್ರೇಲಿ ಇಂಟಲಿಜೆನ್ಸ್ ಕಾರ್ಪ್ಸ್‌’ನ ಘಟಕವಾಗಿರುವ ‘ಯುನಿಟ್ 8200’ ಎಂಬ ಕಂಪನಿಯ ಸದಸ್ಯರಾಗಿದ್ದವರು ಎಂಬುದು ಗಮನಿಸಬೇಕಾದ ವಿಚಾರ.

25 ಮೊಬೈಲ್ ಫೋನ್‌ಗಳ ಮೇಲೆ ಹದ್ದಿನ ಕಣ್ಣಿಡಲು ಬಳಸುವ ಪೆಗಾಸಸ್‌ಗಾಗಿ ಎನ್‌ಎಸ್‌ಒ ಗ್ರೂಪ್‌ಗೆ ವರ್ಷವೊಂದಕ್ಕೆ ನೀಡಬೇಕಾಗಿರುವ ಹಣ ಸುಮಾರು 80 ಲಕ್ಷ ಡಾಲರ್. ಆದರೆ ಇಷ್ಟು ಮೊತ್ತ ನೀಡಿ ಇದನ್ನು ಭಯೋತ್ಪಾದಕರು, ಕ್ರಿಮಿನಲ್‌ಗಳು ವಶಪಡಿಸಿಕೊಳ್ಳಲಾರರು ಎಂಬುದಕ್ಕೇನಿದೆ ಗ್ಯಾರಂಟಿ? ಕಂಪನಿಯೊಳಗಿನವರೇ ಅಕ್ರಮವಾಗಿ ಮಾರಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಕಣ್ಣ ಮುಂದಿರುವಾಗ, ನಾವೆಷ್ಟು ಸುರಕ್ಷಿತರು? ಇವುಉತ್ತರ ಸಿಗದ ಪ್ರಶ್ನೆಗಳು.

ಈಗ, ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್, ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯಕ್ಕೆ ದೂರು ನೀಡಿದೆ. ‘ಎನ್‌ಎಸ್ಒ ಗ್ರೂಪ್ ನಮ್ಮ ಆ್ಯಪ್ ಬಳಸಿ ನಮ್ಮ ಬಳಕೆದಾರರ ಮೇಲೆ ಗೂಢ ಚರ್ಯೆ ನಡೆಸುತ್ತಿದೆ’ ಅಂತ. ಆದರೆ ಇದನ್ನು ಖಡಾಖಂಡಿತವಾಗಿತಳ್ಳಿ ಹಾಕಿರುವ ಎನ್‌ಎಸ್ಒ ಗ್ರೂಪ್, ‘ನಾವು ಪರವಾನಗಿ ಪಡೆದಿರುವ ಅಧಿಕೃತ ಸರಕಾರಿ ಏಜೆನ್ಸಿಗಳಿಗೆ ಅಥವಾ ಗುಪ್ತಚರ ಸಂಸ್ಥೆಗಳಿಗೆ ಮಾತ್ರವೇ ಪೆಗಾಸಸ್ ಮಾರಾಟ ಮಾಡುತ್ತೇವೆ. ನಮ್ಮದೇನಿದ್ದರೂ ಭಯೋತ್ಪಾದನೆ ತಡೆ ಹಾಗೂ ಅಪರಾಧ ತಡೆಯಲು ಯತ್ನಿಸುವ ತಂತ್ರಾಂಶ ಅಭಿವೃದ್ಧಿಯ ಕೆಲಸ’ ಎಂದು ಹೇಳುತ್ತಿದೆ.

2016ರಲ್ಲಿ ಬೆಳಕಿಗೆ ಬಂದ ಈ ಪೆಗಾಸಸ್ ಎಂಬ ತಂತ್ರಜ್ಞಾನದ ಪಿಡುಗಿಗೆ 1400 ಮಂದಿ ಸಿಲುಕಿದ್ದಾರೆ ಎನ್ನುವುದು ವಾಟ್ಸ್ಆ್ಯಪ್ ಮೂಲಕ ಇನ್‌ಸ್ಟಾಲ್ ಆದ ಸ್ಮಾರ್ಟ್ ಫೋನ್‌ಗಳ ಲೆಕ್ಕಾಚಾರ ಮಾತ್ರ. ಒಟ್ಟು 45 ದೇಶಗಳಲ್ಲಿ ವಾಟ್ಸ್ಆ್ಯಪ್ ಮಾತ್ರವೇ ಅಲ್ಲದೆ ಟೆಲಿಗ್ರಾಂ, ಫೇಸ್‌ಬುಕ್ ಮುಂತಾದ ಇತರ ಸಂವಹನ ಆ್ಯಪ್‌ಗಳ ಮೂಲಕ ಈ ಗೂಢಚಾರಿ ತಂತ್ರಾಂಶ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಅಮೆರಿಕದ ಸಿಟಿಜನ್ ಲ್ಯಾಬ್ ಕಂಡುಕೊಂಡಿದೆ.

ಪೆಗಾಸಸ್ ಇನ್‌ಸ್ಟಾಲ್ ಆದ ಬಳಿಕ ಐಒಎಸ್ ಹಾಗೂ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಸೆಕ್ಯುರಿಟಿ ಪ್ಯಾಚ್ (ಮಾಲ್‌ವೇರ್ ಬಾಧೆಗೆ ತಡೆಯೊಡ್ಡುವ ತಂತ್ರಾಂಶದ ಅಪ್‌ಡೇಟ್) ನೀಡಲಾಗಿದೆ. ಈ ಕಾರಣಕ್ಕಾಗಿ, ಯಾವುದೇ ಮಾಲ್‌ವೇರ್‌ಗಳು ನಮ್ಮನ್ನು ಬಾಧಿಸದಂತಿರಲು, ಕಾಲಕಾಲಕ್ಕೆ ಬರುವ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನಾವು ನಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಮಟ್ಟಿಗೆ ಇದರಿಂದ ಸುರಕ್ಷಿತವಾಗಿರಬಹುದು ನಾವು.

ಡಿಜಿಟಲ್ ಜಗತ್ತಿನಲ್ಲಿ ಯಾವುದೂ ಖಾಸಗಿಯಾಗಿ ಉಳಿದಿಲ್ಲ, ಉಳಿಯುವುದೂ ಇಲ್ಲ ಎಂಬುದಂತೂ ಅಲಿಖಿತ ವೇದವಾಕ್ಯ. ಹೀಗಿರುವಾಗ ನಮ್ಮ ಗೌಪ್ಯತೆ, ಖಾಸಗಿತನದ ರಕ್ಷಣೆ ನಮ್ಮದೇ ಕೈಯಲ್ಲಿದೆ ಎಂಬುದು ನಮಗೆ ಮನದಟ್ಟಾದರೆ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.