ADVERTISEMENT

ಆನ್‍ಲೈನ್‍ನಲ್ಲಿ ಕಲಿಯೋಣ!

ಕಲ್ಗುಂಡಿ ನವೀನ್
Published 25 ಡಿಸೆಂಬರ್ 2018, 19:30 IST
Last Updated 25 ಡಿಸೆಂಬರ್ 2018, 19:30 IST
   

‘...ಅ ವನು, ಪದವಿ ಬದಲು ಇಂರ್ಟ್‌ನೆಟ್‌ನಲ್ಲಿ ಅದೇನೋ ಕೋರ್ಸ್ ಮಾಡ್ತಿದಾನಂತೆ’ - ತಂದೆತಾಯಿ ಗಣಕದ ಮುಂದೆ ಕೂತ ಗಡ್ಡ, ಬರ್ಮುಡಾಧಾರಿ ಮಗನನ್ನು ನೋಡುತ್ತಾ ಗಾಬರಿಯಿಂದ ಹೇಳಿಕೊಳ್ಳುತ್ತಿದ್ದದ್ದು ಅಂರ್ತಜಾಲಯುಗ ಪ್ರಾರಂಭವಾಗುತ್ತಿದ್ದ ಸಂದರ್ಭದಲ್ಲಿ ಪ್ರಚಲಿತವಾಗಿದ್ದ ಒಂದು ನಗೆಹನಿ! ಇಂದು ಅದು ಸತ್ಯವಾದ, ಅನಂತ ಅವಕಾಶಗಳನ್ನು ತೆರೆದಿಡುವ ವ್ಯವಸ್ಥೆಯಾಗಿದೆ. ಇದೇ ತಂತ್ರಜ್ಞಾನದ ಬೆಳಕು.

ಇಂದು ಕಲಿಕೆ ಮಾತ್ರವಲ್ಲ, ಯಾವ ಕೋರ್ಸ್‌ ಮಾಡಿದರೆ ತನ್ನ ಹಿನ್ನೆಲೆಗೆ ಅನುಕೂಲ ಇತ್ಯಾದಿ ವಿಷಯಗಳನ್ನು ಸಹ ತಿಳಿಸುವ ಜಾಲತಾಣಗಳಿವೆ. ಇನ್ನು ಹತ್ತನೆ ತರಗತಿ ಮತ್ತು ಪದವಿಪೂರ್ವ ಕಾಲೇಜಿನಂತಹ ಪ್ರಮುಖ ಹಂತಗಳಲ್ಲಿ ಸಹಾಯಕವಾಗುವ ನೂರಾರು ಆಪ್‍ಗಳು, ತಾಣಗಳು ಬಂದಿವೆ. ಆದರೆ, ಎಲ್ಲವೂ ನಂಬಿಕೆಗೆ ಅರ್ಹವಲ್ಲ. ಈ ಹೊಸ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ನಿರ್ಮಿತಿಗೆ ಬಳಸಿಕೊಳ್ಳಲು ಎಚ್ಚರ, ತಿಳಿವಳಿಕೆ ಹಾಗೂ ಶಿಕ್ಷಕರ ಮಾರ್ಗದರ್ಶನ ಬೇಕಾಗುತ್ತದೆ. ಇದನ್ನು ವಿಶದವಾಗಿ ತಿಳಿದುಕೊಳ್ಳೋಣ.

ಇಂದು ವಿದ್ಯಾರ್ಥಿಗಳಿಗೆ ಮೊಬೈಲ್‍ ಕರಭೂಷಣ ಎಂದಾಗಿದೆ. ಅದನ್ನು ಬಳಸುವುದರಲ್ಲಿ ಅವರು ನಿಷ್ಣಾತರು. ಇದೇ ಅವರ ಉತ್ತಮ ಭವಿಷ್ಯಕ್ಕೂ ಕಾರಣವಾಗುವಂತೆ ನೋಡಿಕೊಳ್ಳಬೇಕಾದ ಕರ್ತವ್ಯ ಅಧ್ಯಾಪಕರು, ತಜ್ಞರೂ ಸೇರಿದಂತೆ ಸುತ್ತಲಿನ ಸಮಾಜದ್ದು. ಇದರಲ್ಲಿ ವಿದ್ಯಾರ್ಥಿಗಳ ಪಾಲಿಲ್ಲ ಎಂದಲ್ಲ, ಅದೂ ಮುಖ್ಯವೇ. ಆ ಕಡೆಗೆ ಅವರ ಗಮನವನ್ನು ಸೆಳೆಯುವುದು ಮಾತ್ರ ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು (ಹಾಗೆ ನೋಡಿದರೆ ಎಲ್ಲರೂ!) ವಿಪರೀತ ಬಳಸುವ ಫೇಸ್‍ಬುಕ್‍ ಮತ್ತು ವಾಟ್ಸಾಪ್‍ಗಳಿಂದಲೇ ಇದು ಆರಂಭವಾಗುತ್ತದೆ. ವಿದ್ಯಾರ್ಥಿಗಳು ನಾನು ಏಕಾಗಿ ಫೇಸ್‍ಬುಕ್‍ ಮತ್ತು ವಾಟ್ಸಾಪಿನಲ್ಲಿ ಇದ್ದೀನಿ? ಮನೋರಂಜನೆ, ಸಮಯ ಕಳೆಯುವಿಕೆಯ ಹೊರತಾಗಿ ಇದರಿಂದ ನನಗೇನು ಪ್ರಯೋಜನ? ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗಿನಿಂದಲೇ ಅವರ ಯಶೋಗಾಥೆ ಆರಂಭವಾಗುತ್ತದೆ!

ADVERTISEMENT

ತಮ್ಮ ಆಸಕ್ತಿಯ ಕ್ಷೇತ್ರದ ತಜ್ಞರನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿ ಅವರ ‘ಸ್ನೇಹ’ ಗಳಿಸುವುದು, ಅನುಸರಿಸುವುದು ಮೊದಲ ಹಂತ. ಅಲ್ಲಿ ಇವರಿಂದ ಮಾಹಿತಿಗಳು - ಇತರೆಡೆ ಬಹಳ ಕಷ್ಟಪಟ್ಟರೂ ಸಿಗದಂತಹದ್ದು - ಸಿಗುತ್ತವೆ! ಅವರ ಪೋಸ್ಟುಗಳಿಂದಲೂ ಅಷ್ಟೆ. ಇಲ್ಲಿ ಇವರೂ ಸಹ ಆ ತಜ್ಞರು ಮೆಚ್ಚುವಂತಹ ಪೋಸ್ಟುಗಳನ್ನು ಹಾಕುತ್ತಿರಬೇಕಾಗುತ್ತದೆ ಎಂಬುದು ಗುಟ್ಟು. ಅದಕ್ಕಾಗಿ ಇವರ ಓದು ಆಲೋಚನೆ ಆ ದಿಕ್ಕಿನಲ್ಲಿ ಸಾಗುತ್ತದೆ, ಇದು ಮತ್ತೊಂದು ಹೆಜ್ಜೆಯಿಟ್ಟಂತೆಯೇ.

ಇಲ್ಲಿ ವಿದ್ಯಾರ್ಥಿಯ ಸಾಮರ್ಥ್ಯವೇನು, ಎಷ್ಟು, ಒಲವು (ಓರಿಯೆಂಟೇಷನ್‍ ಎಂಬ ಅರ್ಥದಲ್ಲಿ) ಯಾವ ಕಡೆಗಿದೆ – ಎಂಬುದೂ ತುಂಬ ಮುಖ್ಯ. ಸಾಮಾನ್ಯವಾಗಿ ಕಲೆ, ಸಂಗೀತ, ನೃತ್ಯ ಮತ್ತಿತರ ಮೇಲುನೋಟಕ್ಕೆ ‘ಕಾಸಿಲ್ಲದ’ ವಿಷಯಗಳ ಆಯ್ಕೆಗೆ ಮೊದಲ ಅಡ್ಡಗಾಲು ಪೋಷಕರಿಂದಲೇ ಬರುತ್ತದೆ. ಆದ್ದರಿಂದ ಇಂದು ಕಾಲ ಬದಲಾಗಿದೆ. ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಯಶಸ್ಸನ್ನು ಗಳಿಸುವುದು ಅಂತಹ ಕಷ್ಟವಲ್ಲ ಎಂಬುದನ್ನು ಅರಿಯಬೇಕು. ಮನಸ್ಸು ಮತ್ತು ಪರಿಣತಿ ಸೇರಿದಾಗ ಮಾತ್ರ ಯಶಸ್ಸು ಸಾಧ್ಯ. ಅಗತ್ಯ ಬೆಂಬಲವನ್ನು ಪೋಷಕರು ನೀಡಲೇಬೇಕು. ನಾನು ಮಾಡಲಾಗದ್ದನ್ನು ನನ್ನ ಮಕ್ಕಳು ಮಾಡಲಿ ಎಂಬುದು ಮುಗ್ಧಭಾವ ಮತ್ತು ಮಕ್ಕಳ ಮೇಲೆ ತಂದೆತಾಯಿಗಳೇ ಎಸಗುವ ದೌರ್ಜನ್ಯ.

ಇನ್ನು ಶಿಕ್ಷಕರು ವಿದ್ಯಾರ್ಥಿಗಳ ಒಲವು ಸಾಮರ್ಥ್ಯಗಳಿನುಸಾರವಾದ ಯಾವ ಯಾವ ಕೋರ್ಸುಗಳಿವೆ ಎಂಬುದನ್ನು ತಿಳಿಸಬೇಕು. ಅಂತಿಮ ಆಯ್ಕೆ ವಿದ್ಯಾರ್ಥಿಯದ್ದೇ ಅಗಿರಬೇಕು. ಇಲ್ಲಿ ಅನೇಕ ವೃತ್ತಿಪರ ಸಂಸ್ಥೆಗಳು ನಡೆಸುವ ಕಾರ್ಯಾಗಾರಗಳು ನೆರವಿಗೆ ಬರುತ್ತವೆ. ಇಂದು ಅನೇಕ ಕಾಲೇಜುಗಳು ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಇತರ ತೆರೆದ ಬಾಗಿಲುಗಳ ಕುರಿತಾದ ಮಾಹಿತಿ ಕೊಡುವ ಕಾರ್ಯಾಗಾರಗಳನ್ನು ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ನಡೆಸುತ್ತವೆ.

ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಶಿಕ್ಷಕರೂ ಮುತುವರ್ಜಿವಹಿಸಿ ವಿದ್ಯಾರ್ಥಿಗಳನ್ನು ಇದರಲ್ಲಿ ಭಾಗವಹಿಸುವಂತೆ ಮಾಡಬೇಕು ಮತ್ತು ತಾವೂ ಭಾಗವಹಿಸಬೇಕು. ಇಂತಹ ಕಾರ್ಯಕ್ರಮಗಳ ಜಾಹೀರಾತು ಪತ್ರಿಕೆಗಳಲ್ಲೂ ಮತ್ತು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುತ್ತವೆ. ಇವನ್ನು ಬಳಸಿಕೊಳ್ಳಬೇಕು.

ಹತ್ತನೇ ತರಗತಿ, ಎರಡನೇ ಪಿಯೂಸಿ ಮಕ್ಕಳಿಗೆ ಆನ್‍ಲೈನ್‍ ಪಾಠಗಳನ್ನು ಕೊಡುವ ಆಪ್‍ಗಳು ಹಲವಾರಿವೆ. ಒಮ್ಮೆ ಗೂಗಲಿನಲ್ಲಿ ಹುಡುಕಿದರೆ ಸಾಕಷ್ಟು ಸಿಗುತ್ತವೆ. ಆದರೆ, ಇವುಗಳಲ್ಲಿ ಉತ್ತಮವಾದವನ್ನು ಆರಿಸಿಕೊಳ್ಳಬೇಕು. ಶಿಕ್ಷಕರು ಇವನ್ನು ಕೂಲಂಕಷವಾಗಿ ನೋಡಿ ಮಕ್ಕಳಿಗೆ ಬಳಸಲು ಹೇಳಬೇಕು. ಎನ್‍ಸಿಇಆರ್‍ಟಿಯ ಆಪ್‍ ಉತ್ತಮ ವಿಡಿಯೋಪಾಠಗಳನ್ನು ಸಹ ನೀಡುತ್ತದೆ. ಇನ್ನು ಕೆಲವು ಹಣಪಡೆದು ಅತ್ಯುತ್ತಮ ಗುಣಮಟ್ಟದ ಅನಿಮೇಷನ್‍ವುಳ್ಳ ಪಾಠಗಳನ್ನು ನೀಡುತ್ತಿವೆ.

ಇಂತಹವನ್ನು ಶಿಕ್ಷಕರ ಸಹಾಯದಿಂದ ಮೌಲ್ಯಮಾಪನ ಮಾಡಿಸಿ ತೆಗೆದುಕೊಳ್ಳವುದು ಉತ್ತಮ. ಇದರಿಂದ ಕಲಿಕೆ ತರಗತಿಗೆ ಸೀಮಿತವಾಗುವುದಿಲ್ಲ. ಸಮಯಾನುಸಾರ ನೋಡಿಕೊಳ್ಳಬಹುದಾದ ಸೌಲಭ್ಯವೂ ದೊರಕುತ್ತದೆ. ಮತ್ತೆ ಮತ್ತೆ ನೋಡಬಹುದಾದ್ದರಿಂದ ಕಲಿಕೆ ಸುಲಭವಾಗುತ್ತದೆ. (ಬಾಕ್ಸ್ ನೋಡಿ).

ಇಂದಿನ ತಂತ್ರಜ್ಞಾನ ಕಲಿಕೆಗಿದ್ದ ಅನೇಕ ಅಡತಡೆಗಳನ್ನು ತೆಗೆದಿದೆ, ಮಾತ್ರವಲ್ಲ ಅನೇಕ ಅದ್ಭುತವಾದ ಅವಕಾಶಗಳನ್ನು ತೆರೆದಿಟ್ಟಿದೆ. ಇಲ್ಲೇ ಕೂತು ಪ್ರತಿಷ್ಠಿತ ಮೆಸ್ಸಾಚ್ಯುಸೆಟ್ಸ್ ಇನ್ಸಟಿಟ್ಯೂಟ್‍ ಆಫ್ ಟೆಕ್ನಾಲಜಿಯಿಂದ ತಾಂತ್ರಿಕ ವಿಷಯಗಳನ್ನು ಕಲಿಯುವುದು ಇಂದು ಸಾಧ್ಯವಿದೆ! ಅಲ್ಲಿಯ ತಜ್ಞರಿಂದಲೇ, ಅದೂ ಉಚಿತವಾಗಿ!

ಹಾಗೆಯೇ, ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಐಐಟಿಗಳು ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸೇರಿ ಅನೇಕ ಅನೇಕ ಉಚಿತ ಕೋರ್ಸುಗಳನ್ನು ಮಾಡುತ್ತದೆ. ಅವರ ಜಾಲತಾಣದಲ್ಲಿ ನೋಂದಾಯಿಸಿದರೆ ಸಾಕು. ಜಾಗತಿಕ ತಜ್ಞರಿಂದ ಕಲಿಯಬಹುದು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಒಂದು ವರದಾನ.

ಯೂಡೆಮಿ ಎಂಬ ತಾಣ ನೂರಾರು ವಿಷಯಗಳನ್ನು ಕುರಿತ ತರಬೇತಿಯನ್ನು ನೀಡುತ್ತದೆ. ಇದು ಹಣಕೊಟ್ಟು ಕಲಿಯಬೇಕಾದವು. ಕಲೆ, ಹೊಟೇಲ್‍ ಮ್ಯಾನೇಜ್‍ಮೆಂಟ್‍ ನಿಂದ ತೊಡಗಿ ಎಂ. ಎಸ್‍. ಆಫೀಸಿನ ಎಕ್ಸೆಲ್‍ನಂತಹ ವಿಷಯಗಳವರೆಗೆ ಉನ್ನತ ತರಬೇತಿಯನ್ನು ನೀಡುತ್ತದೆ. ಇದನ್ನು ಧಾರಾಳವಾಗಿ ಬಳಸಿಕೊಳ್ಳಬಹುದು.

ಕೋರ್ಸೆರಾ ಎಂಬುದು ಇಂತಹುದೇ ಇನ್ನೊಂದು ವ್ಯವಸ್ಥೆ. ಇದರಲ್ಲಿ ಕೆಲವು ಉಚಿತ, ಕೆಲವು ಹಣಕೊಡಬೇಕಾದಂತಹವು. ಇದರಲ್ಲಿ ಸಹ ನೂರಾರು ವಿಷಯಗಳಿದ್ದು ನಮ್ಮ ಆಸಕ್ತಿ ಅವಶ್ಯಕತೆಗಳಿಗನುಸಾರವಾಗಿ ಕೋರ್ಸುಗಳನ್ನು ತೆಗೆದುಕೊಳ್ಳಬಹುದು.

ಇವೆಲ್ಲವೂ ವಿಷಯವನ್ನು ಜಾಗತಿಕ ತಜ್ಞರಿಂದ ಕಲಿಯುವುದನ್ನು ಸುಲಭಗೊಳಿಸಿವೆ. ಇವುಗಳ ತಾಣಕ್ಕೆ ಹೋಗಿ ಚಂದಾದಾರರಾದರೆ ಅಥವಾ ಹುಡುಕಿದರೂ ಸಾಕು! ಅನೇಕ ಜಾಹೀರಾತುಗಳು ನಿಮ್ಮ ವಿ–ಅಂಚೆಗೆ (ಇ–ಮೇಲ್) ಬಂದು ಬಂದು ಬೀಳುತ್ತವೆ! ಇವುಗಳಲ್ಲಿ ವೃತ್ತಿ ಮಾರ್ಗದರ್ಶನ ಸಹ ಇರುತ್ತದೆ.

ಈ ಎಲ್ಲವನ್ನು ನಮ್ಮ ವಿದ್ಯಾರ್ಥಿಮಿತ್ರರು ಯುಕ್ತವಾಗಿ ಬಳಸಿಕೊಳ್ಳಬೇಕು. ಶಿಕ್ಷಕರು ಬೆಂಬಲಿಸಬೇಕು. ಪೋಷಕರು ಬದಲಾದ ಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲಿಸಿದರೆ ಸುಂದರ ಭವಿಷ್ಯ ನಮ್ಮ ಮಕ್ಕಳದ್ದಾಗುತ್ತದೆ.

ಕೆಲವು ಉಪಯುಕ್ತ ಜಾಲತಾಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.