ADVERTISEMENT

ಸೋಷಿಯಲ್ ಮೀಡಿಯಾದಿಂದ ಮೆಟಾವರ್ಸ್‌ ಕಡೆಗೆ!

ಕೃಷ್ಣ ಭಟ್ಟ
Published 9 ನವೆಂಬರ್ 2021, 19:30 IST
Last Updated 9 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫೇಸ್‌ಬುಕ್ ತನ್ನ ಮೂಲಕಂಪನಿಯ ಹೆಸರನ್ನ ‘ಮೆಟಾ’ ಎಂದು ಬದಲಿಸಿಕೊಳ್ಳುತ್ತಿದ್ದಂತೆಯೇ ಹೊಸದೊಂದು ಲೋಕಸೃಷ್ಟಿಗೆ ಯಂತ್ರಪೂಜೆ ಮಾಡಿದ ಹಾಗೆ ತಂತ್ರಜ್ಞಾನ ವಲಯ ಪ್ರತಿಕ್ರಿಯಿಸುತ್ತಿದೆ. ಎಲ್ಲ ಕಂಪನಿಗಳೂ ತಮ್ಮ ಹಲವು ಉತ್ಪನ್ನ, ಸೇವೆಗಳನ್ನು ಒಂದೇ ಸೂರಿನಡಿ ತರುವುದಕ್ಕಾಗಿ ಒಂದು ಮೂಲಕಂಪನಿಯನ್ನು ಸ್ಥಾಪಿಸಿಕೊಳ್ಳುತ್ತವೆ. ಆರಂಭದಲ್ಲಿ ಒಂದು ಸೋಷಿಯಲ್‌ ವೆಬ್‌ಸೈಟ್ ಆಗಿ ಶುರುವಾಗಿದ್ದ ಫೇಸ್‌ಬುಕ್‌ ಕಾಲಾನಂತರದಲ್ಲಿ ಅಗಾಧವಾಗಿ ಬೆಳೆಯಿತು. ಈಗ ಅದರ ಅಡಿಯಲ್ಲಿ ಹಲವು ಉತ್ಪನ್ನಗಳಿವೆ. ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಮ್‌ಗಳೂ ಅದರ ಅಡಿಯಲ್ಲಿ ಇವೆ. ಹೀಗಾಗಿ ಅದಕ್ಕೊಂದು ಮೂಲಕಂಪನಿ ಹೆಸರು ಬೇಕೆಂದಾಯಿತು. ಆಗ ಭವಿಷ್ಯವನ್ನೂ, ಭವಿಷ್ಯದಲ್ಲಿ ತಾನು ಹೋಗಬಹುದಾದ ದಾರಿಯನ್ನೂ ಗಮನದಲ್ಲಿಟ್ಟುಕೊಂಡು ‘ಮೆಟಾ’ ಎಂಬ ಹೆಸರನ್ನು ಇಟ್ಟುಕೊಂಡಿತು.

ಈ ಹಿಂದೆ ಗೂಗಲ್ ಕೂಡ ತನ್ನ ಮೂಲಕಂಪನಿ ಹೆಸರನ್ನು ‘ಆಲ್ಫಾಬೆಟ್’ ಎಂದು ಬದಲಿಸಿಕೊಂಡಿತ್ತು. ಆದರೆ, ಆಲ್ಫಾಬೆಟ್ ಎಂಬುದು ಯಾವುದೇ ನಿರ್ದಿಷ್ಟ ಧ್ಯೇಯವನ್ನು ಸೂಚಿಸುತ್ತಿರಲಿಲ್ಲ. ಹೀಗಾಗಿ, ಇದೊಂದು ಸಾಮಾನ್ಯ ಹೆಸರು ಬದಲಾವಣೆ ಎಂದಷ್ಟೇ ತಂತ್ರಜ್ಞಾನ ವಲಯ ಪರಿಗಣಿಸಿತ್ತು. ಆದರೆ, ಫೇಸ್‌ಬುಕ್‌ ಮಾಡಿದ ಈ ಹೆಸರು ಬದಲಾವಣೆ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು, ಇತ್ತೀಚೆಗೆ ಫೇಸ್‌ಬುಕ್ ಎದುರಿಸಿದ ಹಲವು ಟೀಕೆ, ವಿವಾದಗಳಿಂದ ಗಮನ ಬೇರೆಡೆ ಸೆಳೆಯಲು ಮಾಡಿದ ತಂತ್ರ ಎಂದೂ ಜರಿದವರಿದ್ದಾರೆ.

ಈ ಮೆಟಾ ಎಂಬುದು ‘ಮೆಟಾವರ್ಸ್‌’ ಎಂಬುದರ ಸಂಕ್ಷಿಪ್ತ ರೂಪ. 1992ರಲ್ಲಿ ನೀಲ್ ಸ್ಟೀಫನ್ಸನ್ ತನ್ನ ‘ಸ್ನೋ ಕ್ರ್ಯಾಶ್’ ಎಂಬ ಕಾದಂಬರಿಯಲ್ಲಿ ಮೊದಲು ಈ ಪದವನ್ನು ಬಳಸಿದ. ಮೆಟಾ ಎಂಬುದು ಗ್ರೀಕ್‌ನ ಪದ, ವರ್ಸ್‌ ಎಂಬುದು ಯೂನಿವರ್ಸ್‌ನ ಹ್ರಸ್ವಸ್ವರೂಪ. ಇದನ್ನು ಕನ್ನಡದಲ್ಲಿ ‘ವರ್ಚುವಲ್ ವಿಶ್ವ’ ಎಂದು ಕರೆಯಬಹುದೇನೋ!

ADVERTISEMENT

ವಾಸ್ತವವಾಗಿ ಈ ಮೆಟಾವರ್ಸ್‌ ಎಂಬುದು ಯಾವ ರೂಪದಲ್ಲಿ ನಮ್ಮ ಎದುರು ಅನಾವರಣಗೊಳ್ಳಲಿದೆ ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಈಗಾಗಲೇ ನಾವು ಒಂದಷ್ಟು ಭಾಗ ವರ್ಚುವಲ್ ವಿಶ್ವದಲ್ಲೇ ಬದುಕುತ್ತಿದ್ದೇವೆ. ಅದರಲ್ಲೂ ಕೋವಿಡ್ ಬಂದ ಮೇಲಂತೂ ನಾವು ಹಲವು ವಿಷಯಗಳಲ್ಲಿ ವರ್ಚುವಲ್ ಜಗತ್ತಿಗೆ ನಮ್ಮನ್ನು ತೆರೆದುಕೊಂಡಿದ್ದೇವೆ.

ಕೆಲವರು ಇದನ್ನು ವರ್ಚುವಲ್ ರಿಯಾಲಿಟಿಯದ್ದೇ ಇನ್ನೊಂದು ಹೆಸರು ಎಂದೂ ಹೇಳುತ್ತಾರೆ. ಸದ್ಯದ ಮಟ್ಟಿಗೆ ಮೇಲ್ನೋಟಕ್ಕೆ ಇದು ಹಾಗೆಯೇ ಅನಿಸೀತು. ಈಗಾಗಲೇ ನಾವು ಸ್ಮಾರ್ಟ್‌ಫೋನ್, ಝೂಮ್ ಸಂವಹನ, ಸೋಷಿಯಲ್ ಮೀಡಿಯಾ, ವರ್ಚುವಲ್ ಗೇಮ್, ಟ್ವಿಟರ್ ಸ್ಪೇಸಸ್, ಕ್ಲಬ್‌ಹೌಸ್‌ನಂತಹ ವರ್ಚುವಲ್ ವೇದಿಕೆಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಕುಪ್ಪಳಿಸುತ್ತಾ ಇದ್ದೇವೆ. ಆದರೆ, ಇನ್ನು ಮುಂದಿನ ದಿನಗಳಲ್ಲಿ 5ಜಿ ತಂತ್ರಜ್ಞಾನವೂ ಬಂದು ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳೇ ಒಂದು ವರ್ಚುವಲ್ ವಿಶ್ವವನ್ನೇ ತೋರಿಸುವ ದಿನಗಳು ದೂರವಿಲ್ಲ.

ಈ ಮೆಟಾವರ್ಸ್‌ಗೆ ಒಂದು ಉದಾಹರಣೆಯನ್ನು ಕೊಡಬಹುದಾದರೆ, ಗೆಳೆಯರ ಜೊತೆಗೆ ವಿಆರ್‌ ಟೆನಿಸ್ ಆಡಲು ತೊಡಗುತ್ತೀರಿ. ಆತ ಬೇರೆ ಯಾವುದೋ ದೇಶದಲ್ಲಿದ್ದಾನೆ. ಸ್ವಲ್ಪ ಹೊತ್ತಿನ ನಂತರ ನಿಮಗೆ ಈ ಆಟ ಬೇಸರವಾಗುತ್ತದೆ. ಕೋರ್ಟ್‌ ಬದಲಿಸಿ ವಾಲಿಬಾಲ್ ಆಡಬೇಕು ಎನಿಸುತ್ತದೆ. ನೀವೇ ಕೋರ್ಟ್‌ ಅನ್ನು ವರ್ಚುವಲ್‌ನಲ್ಲೇ ಅಗೆದು ತೆಗೆದು ವಾಲಿಬಾಲ್ ಕೋರ್ಟ್‌ ಮಾಡುತ್ತೀರಿ. ಅದೂ ಬೇಡವೆಂದಾದರೆ, ಜಗಳ ಮಾಡಿಕೊಂಡು ಸ್ನೇಹಿತನ ಜೊತೆ ಹೊಡೆದಾಟವನ್ನೂ ಮಾಡುತ್ತೀರಿ. ಇದೆಲ್ಲವೂ ವರ್ಚುವಲ್‌ನಲ್ಲೇ ನಡೆಯುತ್ತದೆ. ವಾಸ್ತವದಲ್ಲಿನ ನೀವೇ ವರ್ಚುವಲ್‌ನಲ್ಲಿ ನಿಮ್ಮ ಅವತಾರ!

ಬಹುಶಃ ಇದರ ಮೊದಲ ಪ್ರಯತ್ನವಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಫೇಸ್‌ಬುಕ್‌ ಕನೆಕ್ಟ್‌ನಲ್ಲಿ ಒಕುಲಸ್ ಕಂಪನಿ ಸಹಭಾಗಿತ್ವದಲ್ಲಿ ಒಕುಲಸ್ ಹೋಮ್ ಅನ್ನು ಪರಿಚಯಿಸುವುದಾಗಿ ಫೇಸ್‌ಬುಕ್ ಹೇಳಿಕೊಂಡಿತ್ತು. ಈ ಒಕುಲಸ್ ಹೋಮ್ ಮತ್ತು ಒಕುಲಸ್ ವರ್ಡ್‌ ಎಂಬುದು ಒಂದು ವರ್ಚುವಲ್ ರಿಯಾಲಿಟಿ ಜಗತ್ತು. ಅಲ್ಲಿ ಟೆನಿಸ್ ಕೋರ್ಟ್‌ ಇದೆ, ವಾಲಿಬಾಲ್ ಕೋರ್ಟ್‌ ಇದೆ. ಥರಹೇವಾರಿ ಗೇಮ್ ಇವೆ. ಅಡುಗೆ ಮಾಡುವುದಾದರೆ ಅಡುಗೆಮನೆಯೂ ಇದೆ! ಅಷ್ಟೇ ಅಲ್ಲ, ವರ್ಕ್‌ರೂಮ್‌ಗಳೂ ಇವೆ. ಇಲ್ಲೇ ನೀವು ನಿಮ್ಮ ಪ್ರಾಜೆಕ್ಟ್‌ನ 3ಡಿ ರೂಪವನ್ನು ಸಿದ್ಧಪಡಿಸಿ ನಿಮ್ಮ ತಂಡದವರಿಗೆ ತೋರಿಸಬಹುದು. ಫೇಸ್‌ಬುಕ್ ಕನೆಕ್ಟ್‌ನಲ್ಲಿ ಈ ಬಗ್ಗೆ ಹೇಳಿದಾಗ ಇದೊಂದು ಅವಾಸ್ತವಿಕ ಪ್ರಲಾಪದ ಹಾಗೆ ಕಂಡುಬಂದಿತ್ತು. ಹೀಗಾಗಿ, ಇದರ ಬಗ್ಗೆ ಯಾರಿಗೂ ಹೆಚ್ಚು ಆಸಕ್ತಿ ಕುದುರಲಿಲ್ಲ. ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಂಪನಿ ತನ್ನ ಹೆಸರನ್ನೇ ಮೆಟಾ ಎಂದು ಬದಲಿಸಿಕೊಂಡಾಗ, ಇದನ್ನು ಜನರು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತಾಯಿತು.

ಇದೇ ರೀತಿಯ ಪರಿಕಲ್ಪನೆಗಳನ್ನು ಕಳೆದ ವರ್ಷ ಜಿಯೋ ಕಂಪನಿಯೂ ತನ್ನ ಎಜಿಎಂನಲ್ಲಿ ಹೇಳಿತ್ತು. ಇಡೀ ಶಿಕ್ಷಣ ಕ್ಷೇತ್ರವನ್ನೇ ಬದಲಾಯಿಸಿ, ವರ್ಚುವಲ್ ರಿಯಾಲಿಟಿ ಮೂಲಕ ಶಿಕ್ಷಣ ಒದಗಿಸುವ ಬೃಹತ್ ಕಲ್ಪನೆಯನ್ನು ಜಿಯೋ ತನ್ನ ಎಜಿಎಂನಲ್ಲಿ ಹೇಳಿಕೊಂಡಿತ್ತು. ಈ ನಿಟ್ಟಿನಲ್ಲಿ ರಿಲಾಯನ್ಸ್ ತನ್ನ ಹಲವು ಅಂಗಸಂಸ್ಥೆಗಳ ಜೊತೆಗೆ ಕೆಲಸವನ್ನೂ ಮಾಡುತ್ತಿದೆ.

ಇಷ್ಟು ವರ್ಷ ತಂತ್ರಜ್ಞಾನದ ಎಲ್ಲ ಪ್ರಯೋಗಗಳೂ ಕಂಪ್ಯೂಟರ್ ಅನ್ನು ಆಧರಿಸಿರುತ್ತಿದ್ದವು. ಆದರೆ, ಈಗ ಮೆಟಾವರ್ಸ್‌ ಎಂಬ ಹೊಸ ಕಲ್ಪನೆ ಶುರುವಾದ ನಂತರ ಎಲ್ಲರ ಗಮನ ವಿಆರ್‌ ಹೆಡ್‌ಸೆಟ್‌ಗಳ ಮೇಲೆ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.