ಬೆಂಗಳೂರು: ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕ್ಲಿಪ್ಪಿ ಎಂಬ ಹೆಲ್ಪ್ ಫೀಚರ್ ಅನ್ನು ಮತ್ತೆ ಪರಿಚಯಿಸಲು ಮುಂದಾಗಿದೆ.
ಮೈಕ್ರೋಸಾಫ್ಟ್ ಆಫೀಸ್ 97 ಆವೃತ್ತಿಯಲ್ಲಿ ಪರಿಚಯಿಸಲಾಗಿದ್ದ ಕ್ಲಿಪ್ಪಿ, ಆಫೀಸ್ ಬಳಕೆದಾರರು ಎಂಎಸ್ ವರ್ಡ್, ಪವರ್‌ಪಾಯಿಂಟ್, ಎಕ್ಸೆಲ್ ಬಳಕೆ ಸಂದರ್ಭದಲ್ಲಿ ಹೆಲ್ಪ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು.
2001ರಲ್ಲಿ ಆಫೀಸ್ ಎಕ್ಸ್‌ಪಿ ಆವೃತ್ತಿ ಪರಿಚಯಿಸಿದ ಸಂದರ್ಭದಲ್ಲಿ, ಕ್ಲಿಪ್ಪಿ ಅನ್ನು ಮೈಕ್ರೋಸಾಫ್ಟ್ ತೆಗೆದು ಹಾಕಿತ್ತು.
ಪಿಳಿಪಿಳಿ ಎಂದು ಕಣ್ಣು ಮಿಟುಕಿಸುತ್ತಿದ್ದ ಕ್ಲಿಪ್ಪಿ ಫೀಚರ್ ಅನ್ನು ಮತ್ತೆ ಬಳಕೆಗೆ ಒದಗಿಸಿ ಎಂದು ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರರು ಕೇಳುತ್ತಲೇ ಬಂದಿದ್ದರು. ಆದರೆ ಮೈಕ್ರೋಸಾಫ್ಟ್ ಮಾತ್ರ ಮುಂದಿನ ಓಎಸ್ ಆವೃತ್ತಿಗಳಲ್ಲಿ ಕ್ಲಿಪ್ಪಿಯನ್ನು ಕೈಬಿಟ್ಟಿತ್ತು.
ಮೈಕ್ರೋಸಾಫ್ಟ್ ಮತ್ತೆ ಕ್ಲಿಪ್ಪಿಯನ್ನು ಬಳಕೆದಾರರಿಗೆ ಒದಗಿಸಲು ಮುಂದಾಗಿದ್ದು, ಟ್ವೀಟ್ ಮಾಡಿ ಜನರ ಅಭಿಪ್ರಾಯ ಕೇಳಿದೆ. ಕ್ಲಿಪ್ಪಿ ಚಿತ್ರವನ್ನು ಪೋಸ್ಟ್ ಮಾಡಿರುವ ಮೈಕ್ರೋಸಾಫ್ಟ್, ಈ ಚಿತ್ರಕ್ಕೆ 20 ಸಾವಿರ ಲೈಕ್ಸ್ ದೊರೆತರೆ, ಪೇಪರ್‌ಕ್ಲಿಪ್ ಎಮೊಜಿಯನ್ನು ಮೈಕ್ರೋಸಾಫ್ಟ್ 365ನಲ್ಲಿ ಕ್ಲಿಪ್ಪಿಗೆ ಬದಲಾಯಿಸುತ್ತೇವೆ ಎಂದು ಹೇಳಿದೆ.
ಮೈಕ್ರೋಸಾಫ್ಟ್ ಟ್ವೀಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡುವ ಮೂಲಕ ಕ್ಲಿಪ್ಪಿ ಮರಳಿ ತರೆತನ್ನಿ ಎಂಬ ಸಂದೇಶ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.