ADVERTISEMENT

ತಂತ್ರಜ್ಞಾನ: ಪೊಟ್ಟಣಕ್ಕೆ ಒಲಿದ ‘ಅಮೃತಧಾರೆ’

‘ಅಮೃತಧಾರೆ’ (ಮಿಲ್ಕ್‌ ಡಿಸ್ಪೆನ್ಸರ್‌) ಎಂಬ ಸರಳ ಸಾಧನವನ್ನು ಪರಿಚಯಿಸಿದ್ದಾರೆ, ಸಂಶೋಧಕ ಆರ್. ಪ್ರಕಾಶ್ ಅರಸ್

ಇ.ಎಸ್.ಸುಧೀಂದ್ರ ಪ್ರಸಾದ್
Published 16 ಜುಲೈ 2024, 21:16 IST
Last Updated 16 ಜುಲೈ 2024, 21:16 IST
<div class="paragraphs"><p>ಆಮೃತಧಾರೆ ಸಾಧನ ಬಳಸಿ ಹಾಲನ್ನು ಪೊಟ್ಟಣದಿಂದ ಪಾತ್ರೆಗೆ ಹಾಕಿಕೊಳ್ಳುತ್ತಿರುವ ಆರ್. ಪ್ರಕಾಶ್ ಅರಸ್</p></div>

ಆಮೃತಧಾರೆ ಸಾಧನ ಬಳಸಿ ಹಾಲನ್ನು ಪೊಟ್ಟಣದಿಂದ ಪಾತ್ರೆಗೆ ಹಾಕಿಕೊಳ್ಳುತ್ತಿರುವ ಆರ್. ಪ್ರಕಾಶ್ ಅರಸ್

   

ಪ್ಲಾಸ್ಟಿಕ್‌ನ ಬಳಕೆ ಅವ್ಯಾಹತವಾಗಿದೆ. ಇದಕ್ಕೆ ದಿನನಿತ್ಯ ಬಳಕೆಯ ಹಾಲು, ಮೊಸರು, ತುಪ್ಪ, ಎಣ್ಣೆ ಮುಂತಾದವುಗಳ ಪೊಟ್ಟಣಗಳೂ ಕೊಡುಗೆಯನ್ನು ನೀಡುತ್ತಿವೆ. ಈ ಪೊಟ್ಟಣಗಳು ನೇರವಾಗಿ ಪಾಲಿಕೆಯ ಕಸ ವಿಲೇವಾರಿ ಘಟಕ ಸೇರುತ್ತಲೇ ಇದ್ದರೂ, ಅವನ್ನು ಕತ್ತರಿಸಿದಾಗ ಸಿಗುವ ಪುಟ್ಟ ಪುಟ್ಟ ತುಂಡುಗಳು ಮಾತ್ರ ಪರಿಸರವನ್ನು ಸೇರುತ್ತಿವೆ; ಈ ಪ್ರಮಾಣವೂ ದೊಡ್ಡದು. 

ಇದನ್ನು ತಡೆಯುವ ನಿಟ್ಟಿನಲ್ಲಿ ‘ಅಮೃತಧಾರೆ’ (ಮಿಲ್ಕ್‌ ಡಿಸ್ಪೆನ್ಸರ್‌) ಎಂಬ ಸರಳ ಸಾಧನವನ್ನು ಪರಿಚಯಿಸಿದ್ದಾರೆ, ಸಂಶೋಧಕ ಆರ್. ಪ್ರಕಾಶ್ ಅರಸ್. ಇವರು ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಇನ್ನೋವೇಟರ್ಸ್‌ ಅಸೋಸಿಯೇಷನ್‌ ಸದಸ್ಯರೂ ಆಗಿದ್ದಾರೆ. ಇವರು ಅಭಿವೃದ್ಧಿಪಡಿಸಿರುವ ಈ ಸಾಧನವು ಪ್ಲಾಸ್ಟಿಕ್‌ನ ಕತ್ತರಿಸಿದ ಚಿಕ್ಕ ತುಣುಕು ಪರಿಸರವನ್ನು ಸೇರುವುದನ್ನು ತಡೆಯುವುದಲ್ಲದೇ, ಇಂಧನ ಹಾಗೂ ವಿದ್ಯುತ್ ಶುಲ್ಕವನ್ನು ತಡೆಗಟ್ಟಲೂ ಸಹಕಾರಿ ಎಂಬುದು ಅಚ್ಚರಿಯಾದರೂ ನಿಜ.

ADVERTISEMENT

ಚುಚ್ಚುಮದ್ದನ್ನು ನೀಡುವ ಸಿರೆಂಜ್‌ನ ದೊಡ್ಡ ಗಾತ್ರದಂತೆಯೇ ಕಂಡುಬರುವ ಈ ‘ಅಮೃತಧಾರೆ’ ಸಾಧನವು, ಹಾಲು, ಮೊಸರು, ಎಣ್ಣೆ ಪೊಟ್ಟಣಗಳಿಗೆ ಚುಚ್ಚಿದ ತಕ್ಷಣ ಪೊಟ್ಟಣವನ್ನೇ ಅದು ಕಚ್ಚಿಕೊಳ್ಳಲಿದೆ. ಇದರ ಇನ್ನೊಂದು ತುದಿಗೆ ಅಳವಡಿಸಿರುವ ಮುಚ್ಚಳವಿರುವ ಬಾಯಿಯಿಂದ ಹಾಲು–ಮೊಸರು ಮುಂತಾದವನ್ನು ಬೇಕಾದಷ್ಟನ್ನು ಮಾತ್ರವೇ ಪಾತ್ರೆಗೆ ಸುರಿದುಕೊಂಡು, ಮತ್ತೆ ಅದನ್ನು ಮುಚ್ಚಿಡಲು ಅನುಕೂಲವಾಗುವಂತೆ ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.

70 ಲಕ್ಷ ತುಣುಕುಗಳು!

‘ಪ್ರತಿ ದಿನ ಬೆಂಗಳೂರಿನಲ್ಲೇ 70 ಲಕ್ಷ ಹಾಲಿನ ಪೊಟ್ಟಣಗಳ ಕತ್ತರಿಸಿದ ತುಣುಕುಗಳು ಸಂಗ್ರಹವಾಗುತ್ತವೆ.ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಇಂಥ ತುಣುಕುಗಳ ಸಂಗ್ರಹ ಕೋಟಿ ಟನ್‌ಗೂ ಹೆಚ್ಚು ಎಂಬ ಅಂದಾಜಿದೆ. ಪರಿಸರಕ್ಕೆ ಸೇರುತ್ತಿರುವ ಇಂಥ ಮೈಕ್ರೊ ಪ್ಲಾಸ್ಟಿಕ್‌ನ ಸಮಸ್ಯೆಗಳು ನೂರಾರು. ಜಲಮೂಲಗಳಿಂದ ಜೀವಿಗಳ ದೇಹವನ್ನು ಸೇರುವ ಮೈಕ್ರೊ ಪ್ಲಾಸ್ಟಿಕ್‌, ನಮ್ಮ ದೇಹದ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಇಂಗ್ಲೆಂಡ್‌ನ ತಜ್ಞರು ಪ್ರಪಂಚದ ಶೇ 10ರಿಂದ 15ರಷ್ಟು ಜನರ ದೇಹದಲ್ಲಿ ಈಗಾಗಲೇ ಈ ಮೈಕ್ರೊ ಪ್ಲಾಸ್ಟಿಕ್‌ನ ಅಂಶ ಪ್ರವೇಶಿಸಿದೆ ಎಂದಿದ್ದಾರೆ. ಇದು ಮೂತ್ರಪಿಂಡ, ಯಕೃತ್, ನರಕೋಶ, ಮಿದುಳು, ಚರ್ಮದ ಸಮಸ್ಯೆಗೆ ಕಾರಣವಾಗಿದೆ. ತಲೆಕೂದಲು ಉದುರುವಿಕೆ ಹಾಗೂ ಸಂತಾನೋತ್ಪತ್ತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳಿದ್ದಾರೆ’ ಎನ್ನುತ್ತಾರೆ, ಅರಸ್.

‘2016ರಲ್ಲಿ ಈ ಒಂದು ಸಾಧನದ ಶೋಧ ಆರಂಭಗೊಂಡಿತು. ಕ್ಲಿಪ್ ಮಾದರಿಯ ಹಲವು ಅನ್ವೇಷಣೆ ನಡೆಯಿತಾದರೂ ಅವು ಯಾವುವೂ ನಿರೀಕ್ಷಿತ ಮಟ್ಟದ ಯಶಸ್ಸು ನೀಡಲಿಲ್ಲ. ಆದರೆ ಹೀಗೆ ನನ್ನ ಸ್ನೇಹಿತರೊಬ್ಬರ ಮನೆಯಲ್ಲಿನ ಜನ್ಮದಿನದ ಕಾರ್ಯಕ್ರಮಕ್ಕೆ ಒಂದು ದಿನ ನಂತರ ಹೋಗಿದ್ದೆ. ನನ್ನ ಸ್ನೇಹಿತನೇ ಕಾಫಿ ಮಾಡಲು ಸಿದ್ಧತೆ ನಡೆಸಿದ್ದರು. ಹಾಲಿನ ಪೊಟ್ಟಣ ಟೀಪಾಯಿ ಮೇಲಿಟ್ಟಿದ್ದರು. ಅವರ ನಾಲ್ಕು ವರ್ಷದ ಮಗು ಕೈಯಲ್ಲಿ ಪೆನ್ನು ಹಿಡಿದಿತ್ತು. ಅದನ್ನು ತಂದು ಪೊಟ್ಟಣಕ್ಕೆ ಚುಚ್ಚಿತು. ಸ್ನೇಹಿತ ಆತಂಕದಲ್ಲಿ ಕಿರುಚಿದರು. ಮಗು ಗಾಬರಿಯಿಂದ ಅರಚಿತು. ಆದರೆ ಪೆನ್ನು ಪೊಟ್ಟಣಕ್ಕೆ ಸಿಕ್ಕಿಸಿಕೊಂಡೇ ಇತ್ತು. ಒಂದು ಹನಿ ಹಾಲೂ ಹೊರಗೆ ಚೆಲ್ಲಲಿಲ್ಲ. ಇದು ಚುಚ್ಚುವ ಪೋಕರ್ಸ್‌ನ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿತು’ ಎಂದು ಅನ್ವೇಷಣೆ ಹಿಂದಿನ ಪ್ರೇರಣೆಯನ್ನು ಅವರು ತೆರೆದಿಡುತ್ತಾರೆ.

 ಡಿಸ್ಪೆನ್ಸರ್‌ನ ಅನುಕೂಲ

ಸಾಮಾನ್ಯವಾಗಿ ಕನಿಷ್ಠ ಅರ್ಧ ಲೀಟರ್ ಹಾಲು ಖರೀದಿಸಿದರೆ, ಅದರ ಪೂರ್ಣ ಪ್ರಮಾಣವನ್ನು ಮನೆಯಲ್ಲಿ ಬಳಸುವುದು ವಿರಳ. ಅರ್ಧ ಲೀಟರ್ ಹಾಲನ್ನೂ ಪೂರ್ಣವಾಗಿ ಕುದಿಸಿ ನಂತರ ಅದರಲ್ಲಿ ಸ್ವಲ್ಪ ಭಾಗವನ್ನು ಬಳಸುತ್ತೇವೆ. ನಂತರ ಅದನ್ನು ತಣ್ಣಗೆ ಮಾಡುತ್ತೇವೆ. ತದನಂತರ ಅದನ್ನು ಮರಳಿ ರೆಫ್ರಿಜರೇಟರ್‌ನಲ್ಲಿಡುತ್ತೇವೆ. ಮತ್ತೆ ಬೇಕಾದಾಗ ಕುದಿಸಿ ಬಳಸುವುದು ಸಾಮಾನ್ಯ ಪ್ರಕ್ರಿಯೆ. ಇದರಿಂದ ಇಂಧನ ಹಾಗೂ ವಿದ್ಯುತ್ ಎರಡೂ ಖರ್ಚಾಗುತ್ತದೆ. ಆದರೆ ಅಮೃತಧಾರೆ ಮೂಲಕ, ಎಷ್ಟು ಬೇಕೋ ಅಷ್ಟು ಹಾಲನ್ನು ಮಾತ್ರ ಬಳಸಿ, ಉಳಿದಿದ್ದನ್ನು ಡಿಸ್ಪೆನ್ಸರ್‌ ಸಹಿತ ಫ್ರಿಡ್ಜ್‌ನಲ್ಲಿಡಲು ಸಾಧ್ಯ.

ತಯಾರಿಕೆ ಹಂತದಲ್ಲಿ ಒಂದಕ್ಕೆ ₹40 ಖರ್ಚಾಗಿದೆ. ಆದರೆ ಚಿಲ್ಲರೆ ಮಾರಾಟಕ್ಕೆ ಬಂದಾಗ ಸುಮಾರು ₹80ರಿಂದ ₹100ಕ್ಕೆ ಸಿಗಬಹುದು. ಈ ಸಾಧನದ ಗುಣಮಟ್ಟ ಹಾಗೂ ಕಾರ್ಯಕ್ಷಮತೆಗೆ ಕೆಎಂಎಫ್‌ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಉಳಿದಂತೆ ಇತರ ಸಂಸ್ಥೆಗಳೊಂದಿಗೂ ಮಾತುಕತೆ ನಡೆಯುತ್ತಿದೆ. ಈ ಸಾಧನವನ್ನು ಸುಮಾರು ಎರಡು ವರ್ಷಗಳ ಕಾಲ ಬಳಸಬಹುದು. ಇನ್ನೋವೇಷನ್ ಫಾರ್ ಕಮ್ಯುನಿಟಿ, ಕರ್ನಾಟಕ ಸರ್ಕಾರದ ಎಲಿವೇಟ್‌ ಮೂಲಕ ಈ ಯೋಜನೆಗೆ ಸಹಕಾರ ಸಿಕ್ಕಿದೆ

ಶೇ 100ರಷ್ಟು ಪುನರ್ ಬಳಕೆಯ ವಸ್ತುಗಳಿಂದ ಈ ಡಿಸ್ಪೆನ್ಸರ್‌ ಅನ್ನು ರೂಪಿಸಲಾಗಿದೆ. ಪೂಪ್ಸಿ, ಪಾಲಿಕಾರ್ಬನ್, ಬಲರಿನ್ ಎಂಬ ಪದಾರ್ಥಗಳನ್ನು ಬಳಸಲಾಗಿದೆ. ಶುಚಿ ಮಾಡಲೂ ತುಂಬ ಶ್ರಮ ಪಡಬೇಕಿಲ್ಲ; ನಲ್ಲಿಯ ನೀರಿಗೆ ಇದನ್ನು ಹಿಡಿದರೆ ಸಾಕು.

ವಿಭಿನ್ನ ಬಗೆಯ ಉತ್ಪನ್ನಗಳನ್ನು ಅನ್ವೇಷಿಸಿರುವ ಪ್ರಕಾಶ್ ಅರಸ್‌, ಈವರೆಗೂ 18 ಪೇಟೆಂಟ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ‘ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಇನ್ನೋವೇಟರ್ಸ್‌ ಅಸೋಸಿಯೇಷನ್‌’ ಸದಸ್ಯತ್ವ ಮತ್ತು ‘ಇನ್ವೆಂಟರ್‌’ ಎಂಬ ಸ್ಥಾನಮಾನವನ್ನೂ ಇವರಿಗೆ ಅಂತರರಾಷ್ಟ್ರೀಯ ಸಮುದಾಯ ನೀಡಿದೆ. ಈ ಮಿಲ್ಕ್ ಡಿಸ್ಪೆನ್ಸರ್‌, ‘ಅಮೃತಧಾರೆ’ಗೂ ಭಾರತ ಮತ್ತು ಅಂತರರಾಷ್ಟ್ರೀಯ (ಪಿಸಿಟಿ) ಪೇಟೆಂಟ್‌ಗಳು ಲಭ್ಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.