ಕಿರುಬೆರಳು ಮೊಬೈಲ್‌ನ ಭಾರವನ್ನು ಹೊತ್ತಿರುತ್ತದೆ. ತೋರುಬೆರಳು, ಉಂಗುರದ ಬೆರಳು, ಮಧ್ಯದ ಬೆರಳುಗಳು ಮೊಬೈಲ್‌ನ ಬೆನ್ನನ್ನು ಹಿಡಿದುಕೊಂಡಿರುತ್ತದೆ. ಹೆಬ್ಬೆರಳು ಮೊಬೈಲ್ ಸ್ಕ್ರೀನ್ ಮೇಲೆ ಓಡಾಡುತ್ತಿರುತ್ತದೆ. ಬೆಡ್ ಮೇಲೆ ಮಲಗಿಯೋ, ಚೇರ್ ಮೇಲೆ ಕೂಳಿತೋ, ಬಸ್‌ನಲ್ಲಿ, ಕಾರ್‌ನಲ್ಲಿ, ಅಲ್ಲಿ ಇಲ್ಲಿ ಅಂತ ಎಲ್ಲಾ ಕಡೆ ಈ ರೀತಿ ಮೊಬೈಲ್ ಹಿಡಿದುಕೊಳ್ಳುತ್ತೇವೆ. ಮೊಬೈಲ್ ಸ್ಕ್ರೀನ್ ಕಾಣಬೇಕು ಎನ್ನುವ ಕಾರಣಕ್ಕೆ ಮುಂಗೈಯನ್ನು ಸ್ವಲ್ಪ ಬಾಗಿಸಿ ನಮ್ಮ ಮುಖಕ್ಕೆ ಹಿಡಿದುಕೊಂಡಿರುತ್ತೇವೆ ಅಲ್ವಾ? ಹೀಗೆ ಮೊಬೈಲ್ ಹಿಡಿದುಕೊಳ್ಳುವುದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಆಗುತ್ತದೆ ಎನ್ನುತ್ತದೆ ವೈದ್ಯಲೋಕ.
ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್ ನೋಡುವುದನ್ನು ಎಲ್ಲರೂ ನಿಯಂತ್ರಿಸಬೇಕಾದದ್ದೇ. ಅದರಲ್ಲಿ ಅನುಮಾನ ಇಲ್ಲ. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಉತ್ತಮವಾದ ಬೆಳವಣಿಗೆ. ಅದರಿಂದ ಮನಸ್ಸು ಶಾಂತವಾಗಿರುತ್ತದೆ; ಕ್ರಿಯಾಶೀಲವಾಗುತ್ತದೆ. ಇದರ ಜೊತೆಗೆ ದೈಹಿಕ ಆರೋಗ್ಯಕ್ಕೂ ಇದು ಒಳ್ಳೆಯದು. ಇದು ಒಂದು ಕಡೆಯಾದರೆ, ಕಡಿಮೆ ಸಮಯ ಮೊಬೈಲ್ ಹಿಡಿದುಕೊಂಡರೂ, ಅದನ್ನು ಹೇಗೆ ಹಿಡಿದುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿದೆ. ಇದುರಿಂದ ಕೈಬೆರಗಳು, ಕೈಗಳ ಆರೈಕೆಗೂ ತೊಂದರೆ ಆಗುತ್ತದೆ ಎನ್ನುವುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ.
ಮೊಬೈಲ್ ಹಿಡಿದುಕೊಂಡ ಸಂದರ್ಭದಲ್ಲಿ ಕಿರುಬೆರಳು ಮತ್ತು ಹೆಬ್ಬೆರಳುಗಳು ಹೆಚ್ಚು ನೋಯುತ್ತದೆ. ಈ ಅನುಭವ ಎಲ್ಲರಿಗೂ ಆಗಿರಲೂ ಬಹುದು. ಇದಕ್ಕೆ ಕಾರಣ, ಮೊಬೈಲ್ ಹಿಡಿದುಕೊಂಡಾಗ ಅದರ ಭಾರ ಈ ಬೆರಳುಗಳ ಮೇಲೆ ಹೆಚ್ಚು ಬೀಳುತ್ತದೆ. ಆದ್ದರಿಂದ ಬೆರಳುಗಳ ಸೆಳೆತ ಅಥವಾ ಉರಿ ಕೂಡ ಆಗಬಹುದು.
ಮೊಬೈಲ್ ಭಾರವನ್ನು ಬೆರಳುಗಳು ಹೊತ್ತು, ಮೊಬೈಲ್‌ನ ಸ್ಕ್ರೀನ್ ಕಾಣುವುದಕ್ಕೆ ಮಣಿಕಟ್ಟನ್ನು ಕೆಳಗೆ ಮಾಡಿ ನೋಡುವುದು ಅಲ್ನರ್ ನರಕ್ಕೆ ಹೆಚ್ಚು ಒತ್ತಡವನ್ನು ನೀಡುತ್ತದೆ. ಅಲ್ನರ್ ನರವು ಕೈಯ ಮೂರು ಮುಖ್ಯ ನರಗಳಲ್ಲಿ ಒಂದಾಗಿದೆ.
ಮಣಿಕಟ್ಟಿನ ನೋವು ಅಥವಾ ಕೈ ಸಂಬಂಧಿ ಸಮಸ್ಯೆಗಳು ಮತ್ತು ಹೆಚ್ಚಾದ ಮೊಬೈಲ್ ಬಳಕೆಯ ಕುರಿತು ಹಾಂಗ್‌ಕಾಂಗ್‌ನಲ್ಲಿ ಅಧ್ಯಯನ ನಡೆದಿದೆ. ಅದರ ಪ್ರಕಾರ, ಕೈಯಲ್ಲಿ ಬಳಸುವ ಎಲೆಕ್ಟ್ರಾನಿಕ್ ವಸ್ತುವಿನ ಹೆಚ್ಚು ಬಳಕೆಯಿಂದ ಕಾರ್ಪಲ್ ಟನಲ್ ಸಿಂಡ್ರೋಮ್ (ಮಣಿಕಟ್ಟಿನ ಸಮಸ್ಯೆ) ಬರಬಹುದು ಎಂದಿದೆ.
ಮೊಬೈಲ್ ಬಳಕೆ ಅಂತಲ್ಲ, ಹೆಚ್ಚು ಹೆಚ್ಚು ಟೈಪ್ ಮಾಡುವಂಥ ಉದ್ಯೋಗದಲ್ಲಿ ಇದ್ದರೆ ಕೂಡ ಕಾರ್ಪಲ್ ಟನಲ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ಇದರಿಂದ ಮಣಿಕಟ್ಟಿನಲ್ಲಿ ನೋವಾಗುವುದು, ಮರಗಟ್ಟುವುದು ಸರಿಯಾಗಿ ಮುಷ್ಠಿ ಕಟ್ಟಲು ಬರದೇ ಇರುವುದು ಮುಂತಾದವುಗಳು ತಲೆದೋರಬಹುದು.
ಈ ಅಧ್ಯಯನಕ್ಕೆ 500 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಯಿತು. ಇವರುಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪು ದಿನದಲ್ಲಿ ಐದು ತಾಸಿಗೂ ಹೆಚ್ಚು ಮೊಬೈಲ್ ಬಳಕೆ ಮಾಡುವವರು ಮತ್ತು ಐದು ತಾಸಿಗಿಂತ ಕಡಿಮೆ ಬಳಸುವವರು ಎಂದು. ಐದು ತಾಸಿಗೂ ಹೆಚ್ಚಿಗೆ ಮೊಬೈಲ್ ಬಳಕೆ ಮಾಡುವ ಶೇ 54 ಮಂದಿಯಲ್ಲಿ ಸ್ನಾಯು ಸೆಳೆತ, ನೋವು ಕಾಣಿಸಿಕೊಂಡರೆ, ಮತ್ತೊಂದು ಗುಂಪಿನ ಶೇ 12ರಷ್ಟು ಮಂದಿಯಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ.
ಮೊಬೈಲ್ ಬಳಸುವಾಗಿನ ನಮ್ಮ ನಿಲುವು ಸಹ ನೋವುಕಾರಕವಾಗಬಹುದು. ನಿಂತುಕೊಂಡು ಮೊಬೈಲ್ ನೋಡುವಾಗ ಕುತ್ತಿಗೆಯನ್ನು ಕೆಳಗೆ ಹಾಕುತ್ತೇವೆ. ಮಲಗಿ ಮೊಬೈಲ್ ನೋಡುವಾಗ ಕುತ್ತಿಗೆಯನ್ನು ಅಸಹಜವಾಗಿ ಇಟ್ಟುಕೊಂಡಿರುತ್ತೇವೆ. ಇದು ನರಗಳ ಮೇಲೆ ಭಾರ ಬೀಳುವಂತೆ ಮಾಡುತ್ತದೆ. ಕುತ್ತಿಗೆ ನೋವಿಗೂ ನಮ್ಮ ಈ ರೂಢಿಗಳೇ ಕಾರಣ ಎನ್ನುತ್ತವೆ ಅಧ್ಯಯನಗಳು.
ಇಂದಿನ ಆಧುನಿಕ ಜೀವನದಲ್ಲಿ ಮೊಬೈಲ್ ಅನ್ನು ತ್ಯಜಿಸುತ್ತೇವೆ ಎಂದೆಲ್ಲಾ ಅಂದುಕೊಳ್ಳಲು ಅಸಾಧ್ಯ. ಅದು ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅದು ಜೀವನಾಡಿಯಾಗಿ ಹೋಗಿದೆ. ಆದರೆ, ಬಳಕೆಯ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಅಗತ್ಯ ಇದ್ದಷ್ಟು ಮಾತ್ರ ಮೊಬೈಲ್ ಬಳಕೆ ಮತ್ತು ಬೆರಳುಗಳ ಮೇಲೆ, ಮಣಿಕಟ್ಟಿನ ಮೇಲೆ ಹೆಚ್ಚು ಭಾರ ಬೀಳದಂತೆ ಬಳಕೆ ಮಾಡುವುದು, ದೈಹಿಕ ಆರೋಗ್ಯದ
ದೃಷ್ಟಿಯಿಂದ ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.