ADVERTISEMENT

ಇದೋ ತಂತ್ರಜ್ಞಾನ: ಸೊಳ್ಳೆಯನ್ನು ಕರೆಯುವ ವೈರಸ್!

ಸೋಂಕು ಹರಡುವ ಸೊಳ್ಳೆಯನ್ನು ಕೈ ಬೀಸಿ ಕರೆಯುವಂತೆ ಮಾಡುತ್ತವೆ ವೈರಸ್ಸುಗಳು!

ಕೊಳ್ಳೇಗಾಲ ಶರ್ಮ
Published 12 ಜುಲೈ 2022, 20:30 IST
Last Updated 12 ಜುಲೈ 2022, 20:30 IST
ಇದೋ ತಂತ್ರಜ್ಞಾನ: ಸೊಳ್ಳೆಯನ್ನು ಕರೆಯುವ ವೈರಸ್!
ಇದೋ ತಂತ್ರಜ್ಞಾನ: ಸೊಳ್ಳೆಯನ್ನು ಕರೆಯುವ ವೈರಸ್!   

ಪಕ್ಕದಲ್ಲೇ ಇರುವವರು ಆರಾಮವಾಗಿರುವಾಗ ನಿಮ್ಮನ್ನಷ್ಟೆ ಸೊಳ್ಳೆ ಕಚ್ಚಿರುವುದು ನೆನಪಿದೆಯಲ್ಲ? ನೀವೇ ಏಕೆ ಅದಕ್ಕೆ ಗುರಿಯಾಗಿರಬೇಕು?

ಸೊಳ್ಳೆಯನ್ನು ಯಾರಾದರೂ ಕೈ ಬೀಸಿ ಕರೆಯುವುದುಂಟೆ? ಹೆಚ್ಚೆಂದರೆ ಕೈ ಬೀಸಿ ಅದನ್ನು ಕೊಲ್ಲಲು ವಿಫಲ ಪ್ರಯತ್ನ ನಡೆಸಬಹುದು. ಇಲ್ಲವೇ ಅದನ್ನು ದೂರ ಓಡಿಸಲು ಪ್ರಯತ್ನಿಸಬಹುದು. ಹಾಗೆಂದು ನೀವು ಭಾವಿಸಿದ್ದರೆ ತಾಳಿ. ವೈರಸ್ಸುಗಳು ಸೊಳ್ಳೆಯನ್ನು ನೀವು ಕೈ ಬೀಸಿ ಕರೆಯುವಂತೆ ಮಾಡುತ್ತವೆಯಂತೆ. ಇತ್ತೀಚೆಗೆ ‘ಸೆಲ್‌’ ಪತ್ರಿಕೆಯಲ್ಲಿ ಅಮೆರಿಕೆಯ ಕನೆಕ್ಟಿಕಟ್‌ ವಿಶ್ವವಿದ್ಯಾನಿಲಯದ ವಿಜ್ಞಾನಿ ಪೆಂಗುವಾ ವಾಂಗ್‌ ಮತ್ತು ಸಂಗಡಿಗರು ಪ್ರಕಟಿಸಿರುವ ಸಂಶೋಧನೆ ಹೀಗೊಂದು ಸ್ವಾರಸ್ಯಕರ ಸಂಗತಿಯನ್ನು ಮುಂದಿಟ್ಟಿದೆ.

ಸೊಳ್ಳೆ ಮತ್ತು ವೈರಸ್ಸುಗಳ ಸಂಬಂಧ ಹೊಸತೇನಲ್ಲ. ಡೆಂಗಿ, ಯೆಲ್ಲೋ ಫೀವರ್‌ ಎನ್ನುವ ಜ್ವರ, ಹಲವಾರು ಮಿದುಳುಜ್ವರಗಳು ಸೊಳ್ಳೆಗಳ ಮೂಲಕ ಹರಡುವ ವೈರಸ್‌ ಸೋಂಕುಗಳು. ಹೀಗಾಗಿ ಇದುವರೆವಿಗೂ ವೈರಸ್ಸುಗಳನ್ನು ಸೊಳ್ಳೆಯನ್ನೇರಿ ಸವಾರಿ ಮಾಡುವ ರೋಗಾಣು ಎಂದಷ್ಟೆ ನಂಬಲಾಗಿತ್ತು. ಆದರೆ ಈ ವೈರಸ್ಸುಗಳು ಮನುಷ್ಯರೇ ತಮ್ಮ ವಾಹನವನ್ನು ಕರೆಯುವಂತೆ ಮಾಡುತ್ತವೆನ್ನುವುದು ಹೊಸ ವಿಷಯ. ವೈರಸ್‌ ಸವಾರಿ ಮಾಡುತ್ತಿರುವ ಸೊಳ್ಳೆಯು ಮನುಷ್ಯರ ರಕ್ತವನ್ನು ಕುಡಿದಾಗ ಇವು ಸೊಳ್ಳೆಯ ದೇಹವನ್ನು ಸೇರುತ್ತದೆ. ಅಲ್ಲಿಗೆ ವೈರಸ್ಸಿನ ಪಯಣ ಕೊನೆಯಾಗುವುದಿಲ್ಲವಂತೆ. ಅದು ಆ ಮನುಷ್ಯನೇ ಬೇರೆ ಸೊಳ್ಳೆಗಳನ್ನು ಕರೆಯುವಂತೆ ಮಾಡಿ, ಬೇರೊಬ್ಬನ ದೇಹಕ್ಕೆ ಸೇರುವ ಹಾದಿಯನ್ನು ಹುಡುಕುತ್ತದೆ ಎನ್ನುವುದು ವಾಂಗ್‌ ಅವರ ಸಂಶೋಧನೆ. ಹೀಗೆ ಸೋಂಕು ವ್ಯಾಪಕವಾಗಿ ಹರಡುತ್ತದೆ.

ADVERTISEMENT

ಸ್ವಾರಸ್ಯಕರ ಎನ್ನಿಸಿತೇ? ಇದಕ್ಕಿಂತಲೂ ಸ್ವಾರಸ್ಯಕರ ಪ್ರಶ್ನೆ ಇನ್ನೊಂದಿದೆ. ಕಗ್ಗತ್ತಲ ರಾತ್ರಿಯಲ್ಲಿಯೂ, ಕವುದಿಯನ್ನು ಚೆನ್ನಾಗಿ ಹೊದ್ದುಕೊಂಡಿರುವಾಗಲೂ, ಸೊಳ್ಳೆಗಳು ಸಂದಿಯೊಳಗೆಲ್ಲೋ ಇಣುಕಿದ ಮೂಗು, ಕಿವಿಯ ಹಿಂಭಾಗವನ್ನೇ ಗುರಿಯಿಟ್ಟು ದಾಳಿ ಮಾಡುತ್ತವಲ್ಲ? ಅದು ಹೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಿದ ವಿಜ್ಞಾನಿಗಳಿಗೆ ಹಲವು ಸೂಚನೆಗಳು ದೊರಕಿವೆ. ಮನುಷ್ಯನಂತಹ ಪ್ರಾಣಿಗಳ ಬಿಸಿರಕ್ತವೇ ಸೊಳ್ಳೆಗೆ ಆಕರ್ಷಣೆಯಾಗಿರಬಹುದು ಎನ್ನುವುದು ಇವುಗಳಲ್ಲಿ ಒಂದು. ಅಥವಾ ಪ್ರಾಣಿಗಳು ಉಸಿರಾಡುವ ಕಾರ್ಬನ್‌ ಡಯಾಕ್ಸೈಡ್‌ ಸೊಳ್ಳೆಗಳನ್ನು ಆಕರ್ಷಿಸುತ್ತಿರಬಹುದು. ಇದಲ್ಲದೆ ಸೊಳ್ಳೆಗಳನ್ನು ಆಕರ್ಷಿಸುವ ವಾಸನೆಯನ್ನೂ ಇಂತಹ ಪ್ರಾಣಿಗಳು ಬೀರುತ್ತಿರಬಹುದೋ ಎನ್ನುವ ಗುಮಾನಿಯೂ ಇದೆ. ಪಕ್ಕದಲ್ಲೇ ಇರುವವರು ಆರಾಮವಾಗಿರುವಾಗ ನಿಮ್ಮನ್ನಷ್ಟೆ ಸೊಳ್ಳೆ ಕಚ್ಚಿರುವುದು ನೆನಪಿದೆಯಲ್ಲ? ನೀವೇ ಏಕೆ ಅದಕ್ಕೆ ಗುರಿಯಾಗಿರಬೇಕು?

ಈ ಕೌತುಕದ ಪ್ರಶ್ನೆಗೆ ಇನ್ನೊಂದು ಸ್ವಾರಸ್ಯಕರವಾದ ಉತ್ತರವನ್ನು ಪೆಂಗುವಾ ವಾಂಗ್‌ ಮತ್ತು ಸಂಗಡಿಗರು ಒದಗಿಸಿದ್ದಾರೆ. ಚಿಕುನ್‌ಗುನ್ಯಾ ಮತ್ತು ಜೀಕಾ ವೈರಸ್‌ಗಳು ಸೋಂಕಿರುವ ಇಲಿಗಳು ಬೇರೆ ಇಲಿಗಳಿಗಿಂತಲೂ ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುತ್ತವೆ ಎಂದು ಗುರುತಿಸಿದ್ದಾರೆ. ಈ ವೈರಸ್‌ಗಳು ತಾವು ಸೋಂಕಿದ ಇಲಿಗಳು ಸೊಳ್ಳೆಗಳನ್ನು ಆಕರ್ಷಿಸುವಂತಹ ರಾಸಾಯನಿಕಗಳನ್ನು ತಯಾರಿಸುವಂತೆ ಪ್ರಚೋದಿಸುತ್ತಿರಬಹುದು ಎನ್ನುವುದು ಇವರ ತರ್ಕ. ಅದಷ್ಟೆ ಅಲ್ಲ ಇದು ಹೇಗಾಗುತ್ತದೆ ಎನ್ನುವುದನ್ನೂ ಪತ್ತೆ ಮಾಡಿದ್ದಾರೆ. ಅದು ಕಾರ್ಬನ್‌ ಡಯಾಕ್ಸೈಡ್‌ನಿನಿಂದಂತೂ ಅಲ್ಲವಂತೆ.

ಏಕೆಂದರೆ ವೈರಸ್ಸು ಸೋಂಕಿರುವ ಇಲಿಗಳು ಅದರಲ್ಲಿಯೂ ಜೀಕಾ ವೈರಸ್ಸು ಸೋಂಕಿದ ಇಲಿಗಳು ಇತರೆ ಇಲಿಗಳಿಗಿಂತ ಕಡಿಮೆ ಕಾರ್ಬನ್‌ ಡಯಾಕ್ಸೈಡನ್ನು ಸ್ರವಿಸುತ್ತವೆ. ಅಂದ ಮೇಲೆ ಕಾರ್ಬನ್‌ ಡಯಾಕ್ಸೈಡ್‌ ಇದಕ್ಕೆ ಕಾರಣವಿರಲಿಕ್ಕಿಲ್ಲ ಎಂದು ತೀರ್ಮಾನಿಸಿದ ಇವರು, ಇಲಿಗಳು ಇದ್ದ ಬೋನಿನಿಂದ ಅವುಗಳ ವಾಸನೆಯನ್ನು ಸಂಗ್ರಹಿಸಿದ್ದಾರೆ. ಈ ವಾಸನೆಯಲ್ಲಿ ಇಲಿಗಳಿಗೇ ವಿಶಿಷ್ಟವಾದಂತಹ ವಾಸನೆಗಳ ರಾಸಾಯನಿಕಗಳನ್ನು ಶೋಧಿಸಿ ಹೊರತೆಗೆದಿದ್ದಾರೆ. ಹೀಗೆ ಉಳಿದ ವಾಸನೆಯನ್ನು ಬೇರೆ ಇಲಿಗಳ ಮೈಗೆ ಹಚ್ಚಿದ್ದಾರೆ. ಅವುಗಳನ್ನೂ, ಬೇರೆ ಇಲಿಗಳನ್ನೂ ಜೊತೆಯಾಗಿ ಇಟ್ಟಾಗ ಕೇವಲ ಈ ವಾಸನೆ ಹಚ್ಚಿದ ಇಲಿಗಳ ಬಳಿಗೇ ಹೆಚ್ಚೆಚ್ಚು ಸೊಳ್ಳೆಗಳು ಬಂದುವಂತೆ. ಈ ವಾಸನೆಯನ್ನು ಮನುಷ್ಯರ ಕೈಗೂ ಹಚ್ಚಿ ಗಮನಿಸಿದಾಗ, ಹೆಚ್ಚು ಸೊಳ್ಳೆಗಳು ಆ ಕೈಯತ್ತ ಆಕರ್ಷಿತವಾದುವು.

ವೈರಸ್ಸು ಸೋಂಕಿದ ಇಲಿಗಳಲ್ಲಿ ಇರುವ ಆಕರ್ಷಕ ವಸ್ತು ಯಾವುದು ಎನ್ನುವುದು ಸಹಜವಾಗಿಯೇ ಮುಂದಿನ ಪ್ರಶ್ನೆ. ವಾಂಗ್‌ ಅವರು ಇಲಿಗಳ ಬೋನಿನಿಂದ ಸಂಗ್ರಹಿಸಿದ ವಾಸನೆಯಲ್ಲಿ ಸುಮಾರು ಇಪ್ಪತ್ತು ರಾಸಾಯನಿಕಗಳಿದ್ದುವು. ಇವುಗಳಲ್ಲಿ ಹದಿನೇಳು ರಾಸಾಯನಿಕಗಳು ವೈರಸ್ಸುಗಳ ಸೋಂಕಿಲ್ಲದ ಇಲಿಗಳಲ್ಲಿಯೂ ಇದ್ದುವು. ಇನ್ನುಳಿದ ಮೂರು ಗಂಧಾನಿಲಗಳು ಬಹುಶಃ ಸೊಳ್ಳೆಗಳನ್ನು ಆಕರ್ಷಿಸುತ್ತಿರಬಹುದು ಎಂದು ವಾಂಗ್‌ ತಂಡ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸಿತು. ಇವುಗಳಲ್ಲಿ ‘ಅಸಿಟೋಫೀನೋನ್‌’ ಎನ್ನುವ ರಾಸಾಯನಿಕ ಸೊಳ್ಳೆಗಳಿಗೆ ಅಯಸ್ಕಾಂತವಿದ್ದಂತೆ ಎನ್ನುತ್ತಾರೆ, ವಾಂಗ್‌.

ಅಸಿಟೋಫೀನೋನ್‌ ಕೇವಲ ವೈರಸ್ಸು ಇರುವ ಇಲಿಗಳಲ್ಲಷ್ಟೆ ಹೇಗೆ ತಯಾರಾಯಿತು ಎನ್ನುವುದು ಇನ್ನೂ ಸ್ವಾರಸ್ಯಕರ ಪ್ರಶ್ನೆ. ಇದು ಇಲಿಗಳ ದೇಹದಲ್ಲಿ ತಯಾರಾಗಿದ್ದೇ ಇಲ್ಲ. ಇಲಿಗಳ ಮೈಮೇಲೆ ಸಹಜವಾಗಿಯೆ ವಾಸಿಸುವ ಕೆಲವು ಬ್ಯಾಕ್ಟೀರಿಯಾಗಳು ವೈರಸ್ಸು ಸೋಂಕಿದ್ದಾಗ ಇವನ್ನು ಹೆಚ್ಚೆಚ್ಚು ತಯಾರಿಸುತ್ತವಂತೆ. ಸಾಮಾನ್ಯ ಇಲಿಗಳಲ್ಲಿ ತಯಾರಾಗುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಅಸಿಟೋಫೀನೋನ್‌ ವೈರಸ್‌ ಸೋಂಕಿದ ಇಲಿಗಳಲ್ಲಿಯೂ ತಯಾರಾಗುತ್ತವೆ.

ಹಾಗಿದ್ದರೆ ಮನುಷ್ಯರಲ್ಲಿಯೂ ಇದೇ ಕಾರಣವಿರಬಹುದೇ? ಏಕೆಂದರೆ ಮನುಷ್ಯರ ಮೈ ಮೇಲೂ, ಅದರಲ್ಲೂ ಬೆವರ ವಾಸನೆ ಸುರಿಸುವ ಕಂಕುಳು, ತೊಡೆ ಸಂದಿಗಳಲ್ಲಿ ಇಂತಹ ಬ್ಯಾಕ್ಟೀರಿಯಾ ಇರುತ್ತದಲ್ಲ – ಎಂದಿರಾ. ಹೌದು – ಎನ್ನುತ್ತಾರೆ ವಾಂಗ್‌. ಡೆಂಗಿಜ್ವರದಿಂದ ಬಳಲುತ್ತಿದ್ದ ರೋಗಿಗಳು ಹಾಗೂ ಸೋಂಕಿಲ್ಲದವರ ಕಂಕುಳಿನಿಂದ ಬೆವರನ್ನು ಒರೆಸಿ, ಬೇರೆಯವರ ಕೈಗೆ ಹಚ್ಚಿ ಪರೀಕ್ಷಿಸಿದ್ದಾರೆ. ಡೆಂಗಿರೋಗಿಯ ಕಂಕುಳ ವಾಸನೆಯನ್ನು ಹಚ್ಚಿದವರ ಕೈಗಳತ್ತ ಹೆಚ್ಚೆಚ್ಚು ಸೊಳ್ಳೆಗಳು ಹಾರಿ ಬಂದುವು. ಅಂದರೆ ವೈರಸ್ಸು ಸೋಂಕಿರುವ ವ್ಯಕ್ತಿಗಳಲ್ಲಿಯೂ ಅಸಿಟೋಫೀನೋನ್‌ ಹೆಚ್ಚೆಚ್ಚು ಬಿಡುಗಡೆಯಾಗುತ್ತಿರಬೇಕು. ಸೊಳ್ಳೆಗಳು ಅವರನ್ನೇ ಹುಡುಕಿ ಬಂದು ಕಚ್ಚುತ್ತಿರಬೇಕು. ಹೀಗೆ ಹೆಚ್ಚೆಚ್ಚು ವೈರಸ್ಸು ಹರಡಲು ಸಾಧ್ಯ ಎನ್ನುತ್ತಾರೆ, ವಾಂಗ್‌. ಈ ವಾಸನೆಯನ್ನು ಹೊಡೆದೋಡಿಸುವ ಉಪಾಯ ತಿಳಿದರೆ ವೈರಸ್ಸು ಹರಡುವುದನ್ನಾದರೂ ಸ್ವಲ್ಪ ತಡೆಯಬಹುದು ಎನ್ನುವುದು ಅವರ ತರ್ಕ.

ತನ್ನ ಉಳಿವಿಗೆ ವೈರಸ್ಸು ಮನುಷ್ಯನ ರಕ್ತವನ್ನೇ ಕುಡಿಯುವ ಸೊಳ್ಳೆಯನ್ನು ಕೈ ಬೀಸಿ ಕುಡಿಯುವಂತೆ ಮಾಡುತ್ತದೆಯಲ್ಲ?! ಹೇಗಿದೆ ನೋಡಿ ನಿಸರ್ಗದ ತಂತ್ರ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.