ಬೆಂಗಳೂರಿನ ದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಬೆಂಗಳೂರು ಇಂಡಿಯಾ ನ್ಯಾನೊ ಟೆಕ್ನಾಲಜಿ ಸಮಾವೇಶ ಆರಂಭವಾಗಿದೆ. ನ್ಯಾನೊ ತಂತ್ರಜ್ಞಾನವನ್ನು ಪ್ರಯೋಗಾಲಯದಿಂದ ಮಾರುಕಟ್ಟೆಗೆ ತರುವ ಉದ್ದೇಶದಿಂದ ಮೂರು ದಿನಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ನ್ಯಾನೊ ತಂತ್ರಜ್ಞಾನದ ವಿಶ್ವರೂಪವೇ ಅನಾವರಣಗೊಂಡಿದೆ
ನಿತ್ಯವೂ ಕೊಳೆಯಾದ ಬಟ್ಟೆಗಳನ್ನು ತೊಳೆದು ತೊಳೆದು ಬೇಸತ್ತ ಮಹಿಳೆಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ತಿಂಗಳುಗಟ್ಟಲೇ ಕೊಳೆಯಾಗದ ಬಟ್ಟೆಗಳು ಶೀಘ್ರ ಮಾರುಕಟ್ಟೆಗೆ ಬರಲಿವೆ. ಪದೇ ಪದೇ ಈ ಬಟ್ಟೆಗಳನ್ನು ಸೋಪಿನಿಂದ ಉಜ್ಜಿ ತೊಳೆಯುವ ಜಂಜಾಟವಿಲ್ಲ. ಹಲವು ದಿನ ತೊಟ್ಟರು ಅಕ್ಕಪಕ್ಕದವರಿಗೆ ಬೆವರಿನ ಘಾಟು ವಾಸನೆ ಬರುವುದಿಲ್ಲ!
ನ್ಯಾನೊ ಸಿಲ್ವರ್ ಆ್ಯಂಟಿ ಮೈಕ್ರೋಬಿಯಲ್ ನಾರುಗಳನ್ನು ನೈಸರ್ಗಿಕ ನೂಲಿನೊಂದಿಗೆ ಸೇರಿಸಿ ತಯಾರಿಸಲಾಗುವ ಬಟ್ಟೆಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿವೆ. ದೀರ್ಘ ಬಾಳಿಕೆ ಮತ್ತು ಕೊಳೆಯಾಗದಂತಹ ಭವಿಷ್ಯದ ಮ್ಯಾಜಿಕ್ ಬಟ್ಟೆಗಳುಮಹಿಳೆಯರ ತಲೆನೋವು ಮಾತ್ರವಲ್ಲ, ಯುದ್ಧಭೂಮಿಯಲ್ಲಿರುವ ಯೋಧರ ಸಂಕಷ್ಟವನ್ನೂ ದೂರ ಮಾಡಲಿವೆ. ತಿಂಗಳುಗಟ್ಟಲೇ ಯುದ್ಧಭೂಮಿ, ಕಾಡುಮೇಡಿನಲ್ಲಿರುವ ಯೋಧರು ಈ ಬಟ್ಟೆ ತೊಟ್ಟರೆ ತೊಳೆಯುವ ಅಗತ್ಯವಿರುವುದಿಲ್ಲ.
ಇಂತಹ ಬಟ್ಟೆ ತಯಾರಿಸುವ ನ್ಯಾನೊ ತಂತ್ರಜ್ಞಾನ ಬೆಂಗಳೂರಿನ ದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಪ್ರದರ್ಶನಕ್ಕಿದೆ. ಸೋಮವಾರದಿಂದ ಆರಂಭವಾದ ಮೂರು ದಿನಗಳ ಬೆಂಗಳೂರು ಇಂಡಿಯಾ ನ್ಯಾನೊ ಟೆಕ್ನಾಲಜಿ ಸಮಾವೇಶದಲ್ಲಿಇಂತಹ ಅನೇಕ ಕೌತುಕ ಮತ್ತು ವಿಸ್ಮಯಗಳ ಲೋಕವೇ ನಿಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ.
ಬದಲಾಗುವ ಸ್ಮಾರ್ಟ್ ವಿಂಡೊ
ಕಚೇರಿ ಕ್ಯಾಬಿನ್‌ನಲ್ಲಿ ಕುಳಿತ ಬಾಸ್ ತನ್ನ ಕೆಲಸಗಾರರ ಮೇಲೆ ಕಣ್ಣಿಡಲು ಮತ್ತು ಕಿಟಕಿಗಳ ಗಾಜಿನಿಂದ ತೂರಿ ಬರುವ ಸೂರ್ಯನ ಶಾಖ, ಬೆಳಕು ಹೆಚ್ಚು, ಕಡಿಮೆ ಮಾಡಲು ಪದೇ ಪದೇ ಎದ್ದು ಬಂದು ಕಿಟಕಿಯ ಕರ್ಟನ್ ಸರಿಸುವ ಅಗತ್ಯವಿಲ್ಲ. ನ್ಯಾನೊ ಲಿಕ್ವಿಡ್‌ಕ್ರಿಸ್ಟಲ್‌ಗಳನ್ನು ಬಳಸಿ ತಯಾರಿಸಿದ ಗಾಜು ಅಳವಡಿಸಿದರೆ ಸಾಕು! ರಿಮೋಟ್ ಬಟನ್ ಒತ್ತಿದರೆ ಗಾಜು ಸ್ಫಟಿಕದಂತೆ ಪಾರದರ್ಶಕವಾಗುತ್ತವೆ. ಬೇಡ ಎಂದರೆ ದಟ್ಟವಾದ ಮಂಜು ಮುಸುಕಿದಂತೆ ಬದಲಾಗುತ್ತದೆ.
ಭವಿಷ್ಯದ ದಿನಗಳಲ್ಲಿ ಇಂತಹ ಗಾಜುಗಳು ಮೊಬೈಲ್, ಕಂಪ್ಯೂಟರ್, ಗ್ಯಾಜೆಟ್‌ಗಳ ಗಾಜುಗಳಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನ್ಯಾನೊ ಗಾಜುಗಳು ಮುನ್ನುಡಿ ಬರೆಯಲಿವೆ. ಮನೆ, ಕಚೇರಿ, ಹೋಟೆಲ್, ಕಂಪ್ಯೂಟರ್, ಮೊಬೈಲ್, ಗ್ಯಾಜೆಟ್, ಬಸ್, ವಿಮಾನ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇಂತಹ ಗಾಜುಗಳು ಅನಿವಾರ್ಯವಾಗಲಿವೆ.ಬೆಂಗಳೂರಿನ ಸೆಂಟರ್ ಫಾರ್ ನ್ಯಾನೊ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್‌ನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಈ ಮ್ಯಾಜಿಕ್ ಗಾಜು ತಯಾರಿಸಿದೆ.
ಲೀಥಿಯಂ ಬದಲು ನ್ಯಾನೊ ಬ್ಯಾಟರಿ
ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಮುಗಿದು ಹೋಗುತ್ತದೆಯಾ? ಒಮ್ಮೆ ಚಾರ್ಜ್ ಮಾಡಿದರೆ ಒಂದು ದಿನವೂ ಬಾಳಿಕೆ ಬರುವುದಿಲ್ಲವೇ? ಹಾಗಾದರೆ ಇನ್ನು ಮುಂದೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಚಿಂತೆಯನ್ನು ದೂರ ಮಾಡುವ ಮ್ಯಾಜಿಕ್ ಬ್ಯಾಟರಿ ಮಾರುಕಟ್ಟೆಗೆ ಬರಲಿದೆ. ಒಮ್ಮೆ ಮೊಬೈಲ್ ಚಾರ್ಜ್ ಮಾಡಿದರೆ ಸಾಕು. ಕನಿಷ್ಠ ಐದಾರು ದಿನ ಮಾತನಾಡಬಹುದು!
ಮುಂದಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಗ್ಯಾಜೆಟ್‌ಗಳಲ್ಲಿ ಬಳಸುತ್ತಿರುವ ಲೀಥಿಯಂ ಬ್ಯಾಟರಿಗಳ ಜಾಗವನ್ನು ಪುಟ್ಟ ನ್ಯಾನೊ ಬ್ಯಾಟರಿ ಆಕ್ರಮಿಸಿಕೊಳ್ಳಲಿವೆ.
ನ್ಯಾನೊ ಪಾರ್ಟಿಕಲ್ಸ್ ಬಳಸಿ ತಯಾರಿಸಿದ ಬ್ಯಾಟರಿಗಳು ಅತ್ಯಂತ ಚಿಕ್ಕ ಗಾತ್ರದ್ದಾಗಿದ್ದು, ದೀರ್ಘ ಬಾಳಿಕೆ ಬರುತ್ತವೆ. ಒಮ್ಮೆ ಚಾರ್ಜ್ ಮಾಡಿದರೆ ಐದಾರು ದಿನ ಬಾಳಿಕೆ ಬರುತ್ತವೆ. ನ್ಯಾನೊ ಬ್ಯಾಟರಿ ಬಳಕೆಗೆ ಬಂದರೆ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಬ್ಯಾಟರಿ ಮೇಲೆ ಕೆಲಸ ಮಾಡುವ ಎಲೆಕ್ಟ್ರಾನಿಕ್ ಸಾಧನಗಳ ಗಾತ್ರಗಳು ಮತ್ತಷ್ಟು ಚಿಕ್ಕದಾಗಲಿವೆ.ನ್ಯಾನೊ ಬ್ಯಾಟರಿಗಳನ್ನು ಒಮ್ಮೆ ಚಾರ್ಜ್ ಮಾಡಿದರೆ (ಒಂದು ಗಂಟೆ)ವಾಹನಗಳು ಕನಿಷ್ಠ 200 ಕಿ.ಮೀ ಓಡುತ್ತವೆ!
ಕೊರೊನಾ ವೈರಸ್ ಇದ್ದಂತೆ!
ಕೋವಿಡ್ 19 ಅಥವಾ ಕೊರೊನಾ ವೈರಸ್ ಕಣ್ಣಿಗೆ ಕಾಣದಷ್ಟು ಸೂಕ್ಷ್ಮಾಣು ಜೀವಿಯಾದರೂ ಅದರ ಪರಿಣಾಮ ಮಾತ್ರ ಇಡೀ ಜಗತ್ತು ಬೆಚ್ಚಿ ಬೀಳುವಷ್ಟು ಅಗಾಧ. ನ್ಯಾನೊ ತಂತ್ರಜ್ಞಾನ ಕೂಡ ಹಾಗೆಯೇ. ಕೊರೊನಾ ವೈರಸ್ ಇದ್ದಂತೆ! ನ್ಯಾನೊ ಎಂದರೆ ಅತ್ಯಂತ ‘ಚಿಕ್ಕ‘ ಎಂದರ್ಥ. ಆರ್ಟಿಫಿಸಿಯಲ್ ಟೆಕ್ನಾಲಜಿ (ಎಐ), ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ), ರೊಬಾಟಿಕ್ಸ್ ರೀತಿ ನ್ಯಾನೊ ಟೆಕ್ನಾಲಜಿ ಕೂಡ ಭವಿಷ್ಯದ ತಂತ್ರಜ್ಞಾನ.
ಯಾವುದೇ ಕಣಗಳ ಗಾತ್ರ ಚಿಕ್ಕದಾದಷ್ಟು ಅವುಗಳ ಪರಿಣಾಮ ಅಗಾಧವಾಗಿರುತ್ತದೆ. ಇದೇ ನ್ಯಾನೊ ತಂತ್ರಜ್ಞಾನದ ಮೂಲ ತತ್ವ. ಅಣ್ವಸ್ತ್ರ, ಪರಮಾಣು ರಿಯಾಕ್ಟರ್‌ಗಳಲ್ಲಿ ಕೂಡ ಇದೇ ವೈಜ್ಞಾನಿಕ ಸಿದ್ಧಾಂತದ ಆಧಾರ ಮೇಲೆ ನಿಂತಿವೆ. ಅತ್ಯಂತ ಸೂಕ್ಷ್ಮವಾದ ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್‌ಗಳಿಂದ ಹೊರಹೊಮ್ಮುವ ಶಕ್ತಿಯನ್ನು ಊಹಿಸಲಾಗದು. ಭವಿಷ್ಯದ ಬೃಹತ್ ಕೈಗಾರಿಕೆ,ಉದ್ಯಮ ಮತ್ತು ತಂತ್ರಜ್ಞಾನ ನ್ಯಾನೊ ಎಂಬ ಚಿಕ್ಕ ಕಣಗಳ ಆಧಾರಿತವಾಗಿರುತ್ತದೆ ಎನ್ನುವುದು ತಜ್ಞರ ಅಭಿಮತ.
ಇಂಡಸ್ಟ್ರಿಗಾಗಿ ಟೆಕ್ನಾಲಜಿ
ನ್ಯಾನೊ ತಂತ್ರಜ್ಞಾನವನ್ನು ಪ್ರಯೋಗಾಲಯದಿಂದ ಮಾರುಕಟ್ಟೆಗೆ ತರುವ ಉದ್ದೇಶದಿಂದ ಮೂರು ದಿನಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಯುವಕರಿಗಾಗಿಯೇ ‘ನ್ಯಾನೊ ಫಾರ್ ಯಂಗ್’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು,ರಾಜ್ಯದ 500 ಪದವೀಧರ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡಲು ಪೋಸ್ಟರ್ ಸೆಷನ್ ಎಂಬ ಕಾರ್ಯಕ್ರಮ ರೂಪಿಸಲಾಗಿದೆ.
ಹೊಗೆ ಉಗುಳದ ವಾಹನಗಳು
ನಿಮ್ಮ ವಾಹನಗಳು ದಟ್ಟವಾದ ಹೊಗೆ ಉಗುಳುತ್ತವೆಯೇ? ರಸ್ತೆಯಲ್ಲಿ ಬೇರೆ ವಾಹನಗಳು ಉಗುಳುವ ಇಂಗಾಲದ ಹೊಗೆಯನ್ನು ಕುಡಿದು ಸಾಕಾಗಿದೆಯೇ? ಹಾಗಾದರೆ ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಪೆಟ್ರೋಲ್, ಡೀಸೆಲ್ ಬಳಸುವ ವಾಹನಗಳಿಂದಲೂ ಹೊಗೆ ಹೊರಗೆ ಬರುವುದಿಲ್ಲ. ಹೌದು! ಇದು ನ್ಯಾನೊ ಪಾರ್ಟಿಕಲ್ಸ್‌ನಿಂದ ತಯಾರಿಸಿದ ಪೆಟ್ರೋಲ್, ಡಿಸೇಲ್, ನೈಸರ್ಗಿಕ ಅನಿಲಗಳ ಕಮಾಲ್...
ಪೆಟ್ರೋಲ್, ಡೀಸೆಲ್‌ಗಳಿಗೆ ನ್ಯಾನೊ ಕಣಗಳನ್ನು ಸೇರಿಸಿದರೆ ಇಂಧನ ಸಂಪೂರ್ಣವಾಗಿ ಉರಿದು ಅವುಗಳಿಂದ ಹೊರಬರುವ ಇಂಗಾಲ ಕಣಗಳು ಕಡಿಮೆಯಾಗುತ್ತವೆ. ಇದರಿಂದ ಮಾಲಿನ್ಯಕ್ಕೆ ಕಡಿವಾಣ ಬೀಳಲಿದೆ. ಇಂತಹ ಇಂಧನ ಬಳಸಿದರೆ ವಾಹನಗಳು ದೀರ್ಘ ಬಾಳಿಕೆ ಬರುತ್ತವೆ. ಕರ್ಕಶವಾದ ಶಬ್ದ ಹೊರಹೊಮ್ಮುವುದಿಲ್ಲ ಎನ್ನುತ್ತಾರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿನಿಧಿ.
ನ್ಯಾನೊ ತಂತ್ರಜ್ಞಾನ ಎಲ್ಲೆಲ್ಲಾ ಉಪಯೋಗ?
* ಸಾರಿಗೆ
* ಶುದ್ಧ ನೀರು ಮತ್ತು ಪರಿಸರ
* ಕೃಷಿ
* ಔಷಧ, ವೈದ್ಯಕೀಯ
* ತಯಾರಿಕಾ ವಲಯ
* ಬಾಹ್ಯಾಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.