ADVERTISEMENT

ವರ್ಚುವಲ್ ಟೋಲ್ ವ್ಯವಸ್ಥೆ

ಸುಲಲಿತ ಸಂಚಾರ, ಸಮಯ ಉಳಿತಾಯ

ಅವಿನಾಶ್ ಬಿ.
Published 30 ಅಕ್ಟೋಬರ್ 2024, 0:00 IST
Last Updated 30 ಅಕ್ಟೋಬರ್ 2024, 0:00 IST
<div class="paragraphs"><p>ಟೋಲ್ ಬೂತ್‌ಗಳಲ್ಲಿ ವಾಹನಗಳ ಸರತಿ ಸಾಲು. </p></div>

ಟೋಲ್ ಬೂತ್‌ಗಳಲ್ಲಿ ವಾಹನಗಳ ಸರತಿ ಸಾಲು.

   

(ಪ್ರಜಾವಾಣಿ ಸಂಗ್ರಹ ಚಿತ್ರ)

ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಸಹಿತ ದೇಶದ ಹಲವಾರು ಪ್ರಮುಖ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ರಸ್ತೆ ಸುಂಕ ವಸೂಲಿ ಮಾಡುವ ವ್ಯವಸ್ಥೆಯನ್ನು ಇತ್ತೀಚೆಗೆ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಘೋಷಿಸಿದೆ. ದೇಶದಾದ್ಯಂತ ಟೋಲ್ ಬೂತ್‌ಗಳನ್ನು ಇಲ್ಲವಾಗಿಸುವ ಪ್ರಯತ್ನದ ಭಾಗವಿದು. ಟೋಲ್ ಬೂತ್‌ಗಳಲ್ಲಿ ಈ ಹಿಂದೆ ಇದ್ದ ನಗದು ವ್ಯವಸ್ಥೆ ಮತ್ತು ಈಗ ಇರುವ RFID ಆಧಾರಿತ ಫಾಸ್ಟ್ಯಾಗ್ ರೀಡಿಂಗ್ ವ್ಯವಸ್ಥೆಯ ಮೂಲಕ ಟೋಲ್ ಬೂತ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಹೀಗಾಗಿ, ಟೋಲ್ ಬೂತ್‌ಗಳನ್ನೇ ರದ್ದು ಮಾಡಿ, ಸ್ವಯಂಚಾಲಿತ ಉಪಕರಣವೊಂದರ ಮೂಲಕ ಹೆದ್ದಾರಿ ಸುಂಕವನ್ನು ಲೆಕ್ಕಾಚಾರ ಹಾಕಿ, ಪ್ರೀಪೇಯ್ಡ್ ವ್ಯವಸ್ಥೆಯ ಮೂಲಕ ಸಂಗ್ರಹಿಸುವ ವ್ಯವಸ್ಥೆಯನ್ನು ಭಾರತ ಸರಕಾರ ಪರಿಗಣಿಸಿದೆ.

ADVERTISEMENT

ಏನಿದು ಜಿಎನ್ಎಸ್ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆ?

ಹಿಂದೊಮ್ಮೆ ಹೊಸದಾಗಿ 2 ಸಾವಿರ ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳು ಬಂದಾಗ, ಚರ್ಚೆಗೊಳಗಾದ ಒಂದು ವಿಚಾರ ನೆನಪಿರಬಹುದು. ಆ ನೋಟಿನೊಳಗೆ ಒಂದು ಚಿಪ್ ಇರಿಸಲಾಗುತ್ತದೆ, ನೋಟನ್ನು ಎಲ್ಲೇ ಬಚ್ಚಿಟ್ಟರೂ ಸುಲಭವಾಗಿ ಪತ್ತೆ ಮಾಡಬಹುದು ಅಂತ. ಈ ತಂತ್ರಜ್ಞಾನ ಅಸಾಧ್ಯವಾದುದೇನಲ್ಲ. ಇಂಥದ್ದೇ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಸಾಧನಗಳಲ್ಲಿ, ಅಂದರೆ ಸ್ಮಾರ್ಟ್ ಫೋನ್‌ಗಳಲ್ಲಿ, ಬ್ಯಾಗುಗಳಿಗೆ ಲಗತ್ತಿಸಬಹುದಾದ ಟ್ಯಾಗ್‌ಗಳಲ್ಲಿ, ಸ್ಮಾರ್ಟ್ ವಾಚ್‌ಗಳಲ್ಲಿ ಮತ್ತು ಫಿಟ್ನೆಸ್ ಟ್ರ್ಯಾಕರ್ ಆ್ಯಪ್‌ಗಳಲ್ಲಿ ಬಳಕೆಯಾಗುತ್ತಿದೆ. ಎಲ್ಲೇ ಇದ್ದರೂ ಅದನ್ನು ಪತ್ತೆ ಮಾಡುವುದು ಸುಲಭ. ಇದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ಎಂಬ ತಂತ್ರಜ್ಞಾನದ ಫಲ.

ಅದೇ ರೀತಿ, ನಮ್ಮ ಸ್ಮಾರ್ಟ್ ಫೋನ್‌ಗಳಲ್ಲಿರುವ ಮ್ಯಾಪ್ ಹೆಸರಿನ ಆ್ಯಪ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಯೋಚಿಸಿದರೆ, ನಾವು ಎಲ್ಲಿಗೆಲ್ಲ ಹೋಗುತ್ತೇವೆ, ಯಾವ ಗಲ್ಲಿಯಲ್ಲಿ ತಿರುಗುತ್ತೇವೆ, ಎಲ್ಲಿ ಬಲಕ್ಕೆ ಹೋಗಬೇಕು, ಎಲ್ಲಿ ಎಡಕ್ಕೆ ಹೊರಳಬೇಕು ಎಂಬಿತ್ಯಾದಿಯಾಗಿ ನಮ್ಮನ್ನು ಹಿಂಬಾಲಿಸುತ್ತಲೇ ನಮಗೆ 'ಮಾರ್ಗ' ದರ್ಶನ ಮಾಡುತ್ತಾ ಇರುತ್ತದೆಯಲ್ಲ ಆ್ಯಪ್? ಇಂಟರ್ನೆಟ್ ಇಲ್ಲದಿದ್ದರೂ, ನೇರವಾಗಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿರುವ ಉಪಗ್ರಹಕ್ಕೆ ನೇರ ಸಂಪರ್ಕಿಸುವ ಜಿಪಿಎಸ್ ವ್ಯವಸ್ಥೆಯ ಮೂಲಕ ಇದು ಸಾಧ್ಯವಾಗುತ್ತದೆ.

ಇದೇ ಜಿಪಿಎಸ್ ಜೊತೆಗೆ ಭಾರತದ್ದೇ ಆದ ಜಿಪಿಎಸ್ ಆಧಾರಿತ ಜಿಯೋ ಆಗ್ಮೆಂಟೆಡ್ ನ್ಯಾವಿಗೇಶನ್ (GAGAN) ಮತ್ತು ನಾವಿಕ್ (ನ್ಯಾವಿಗೇಶನ್ ವಿತ್ ಇಂಡಿಯನ್ ಕಾನ್‌ಸ್ಟಲೇಶನ್)ತಂತ್ರಜ್ಞಾನಗಳನ್ನು ಬಳಸಿ, ಉಪಗ್ರಹ ಸಂಕೇತಗಳನ್ನು ಹೊಂದಿಸಿಕೊಂಡು ಜಾಗತಿಕ ನ್ಯಾವಿಗೇಶನ್ ಉಪಗ್ರಹ ವ್ಯವಸ್ಥೆ (GNSS) ಕಾರ್ಯಾಚರಿಸುತ್ತದೆ. ಇದನ್ನು ಹೊಂದಿರುವ ವ್ಯಕ್ತಿಯ ಇರವನ್ನು ಖಚಿತವಾಗಿ ತಿಳಿಯಬಹುದಾಗಿದ್ದು, ಆತ ಅಥವಾ ಆತನ ವಾಹನವು ಯಾವ ಸಮಯದಲ್ಲಿ ಎಷ್ಟು ದೂರ ಕ್ರಮಿಸಿದೆ ಎಂಬುದನ್ನು ನಿಖರವಾಗಿ ಲೆಕ್ಕಾಚಾರ ಹಾಕುವುದು ಸಾಧ್ಯವಾಗುತ್ತದೆ. ಇದಕ್ಕೆ ಭಾರತ ಸರ್ಕಾರದೊಂದಿಗೆ ಕೈಜೋಡಿಸಿರುವುದು ಮೆಟ್ರೋ ಇನ್ಫ್ರಾಸಿಸ್ ಎಂಬ ಸಂಸ್ಥೆ.

ಜಿಎನ್ಎಸ್ಎಸ್ ಹೇಗೆ ಕೆಲಸ ಮಾಡುತ್ತದೆ?

ವಾಹನಗಳಲ್ಲಿ ಆನ್-ಬೋರ್ಡ್ ಯುನಿಟ್ (ಒಬಿಯು) ಎಂಬ ಸಾಧನವನ್ನು ಅಳವಡಿಸಬೇಕಾಗುತ್ತದೆ. ಇದು ಉಪಗ್ರಹವನ್ನು ಸಂಪರ್ಕಿಸಿ ವಾಹನದ ಚಲನೆಯನ್ನು ಟ್ರ್ಯಾಕ್ ಮಾಡಲು ಸಹಕಾರಿ. ಟೋಲ್ ಇರುವ ರಾಷ್ಟ್ರೀಯ ಹೆದ್ದಾರಿಗಳಿಗೆ ಪ್ರವೇಶಿಸುವ ಮತ್ತು ಹೆದ್ದಾರಿಯಿಂದ ನಿರ್ಗಮಿಸುವ ಕಡೆಗಳಲ್ಲಿ ಗೇಟ್ ಇರುವ ಟೋಲ್ ಬೂತ್‌ಗಳ ಬದಲಾಗಿ, ಮುಕ್ತವಾಗಿರುವ ದೊಡ್ಡ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ವಾಹನದ ನೋಂದಣಿ ಸಂಖ್ಯೆ, ವಾಹನದ ವಿಧದ ದತ್ತಾಂಶವನ್ನು ಹೊಂದಿರುವ ಒಬಿಯು ಮತ್ತು ರಸ್ತೆಯ ಮೇಲಿರುವ ಕ್ಯಾಮೆರಾಗಳು ಪರಸ್ಪರ 'ಸಂಧಿಸಿ', ಒಳ ಪ್ರವೇಶ ಮತ್ತು ಹೊರಗೆ ಹೋಗುವ ಸ್ಥಳವನ್ನು, ಸಮಯವನ್ನು ಗುರುತು ಮಾಡಿಟ್ಟುಕೊಳ್ಳುತ್ತವೆ.

ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಎಂಬ ವಿಧಾನದ ಮೂಲಕ ತತ್ಸಂಬಂಧಿತ ಅಲ್ಗಾರಿದಂ ಬಳಸಿ ಸಿಸಿ ಟಿವಿ ಕ್ಯಾಮೆರಾಗಳು ದಾಖಲಿಸಿಕೊಳ್ಳುವ ಮಾಹಿತಿಯ ಆಧಾರದಲ್ಲಿ ವಾಹನವು ಎಷ್ಟು ದೂರ ಕ್ರಮಿಸಿತು ಎಂದು ತಿಳಿದುಕೊಂಡು, ಅದಕ್ಕನುಗುಣವಾಗಿ ಎಷ್ಟು ಹಣ ತೆರಬೇಕಾಗುತ್ತದೆ ಎಂಬುದನ್ನು ಪೂರ್ವನಿಗದಿತ ವ್ಯವಸ್ಥೆಯಿಂದ ಲೆಕ್ಕಾಚಾರ ಹಾಕಲಾಗುತ್ತದೆ. ನಂತರ ಒಬಿಯುಗೆ ಸಂಪರ್ಕಗೊಂಡಿರುವ ಡಿಜಿಟಲ್ ವ್ಯಾಲೆಟ್‌ನಿಂದ ಶುಲ್ಕವು ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಫಾಸ್ಟ್ಯಾಗ್‌ನ ಪಾವತಿ ವ್ಯವಸ್ಥೆಯಲ್ಲಿದ್ದ ಪೂರ್ವಪಾವತಿ ವ್ಯವಸ್ಥೆ ಇಲ್ಲೂ ಇರುತ್ತದೆ.

ಹೊಸ ಟೋಲ್ ಪದ್ಧತಿಯಿಂದ ನಮಗೇನು ಪ್ರಯೋಜನ?

ಮುಖ್ಯವಾಗಿ ಟೋಲ್ ಬೂತ್‌ಗಳಲ್ಲಿ ಕಾಯಬೇಕಾದ ಸಂದರ್ಭದಿಂದಾಗಿ ಜನ ರೋಸಿ ಹೋಗಿದ್ದಾರೆ. ಈ ಕಾಯುವಿಕೆಯ ತಾಪತ್ರಯ ಮತ್ತು ಉದ್ದುದ್ದ ಸರತಿಯಲ್ಲಿ ನಿಲ್ಲಿಸಬೇಕಾದ ಪ್ರಮೇಯವು ಹೊಸ ವ್ಯವಸ್ಥೆಯಿಂದ ತಪ್ಪುತ್ತದೆ. ವಾಹನದ ನೋಂದಣಿ ಸಂಖ್ಯೆ, ಯಾವ ವಿಧದ ವಾಹನ ಎಂಬಿತ್ಯಾದಿ ಲಭ್ಯ ದತ್ತಾಂಶಕ್ಕೆ ಅನುಗುಣವಾಗಿ, ಸುಂಕವಿರುವ ಹೆದ್ದಾರಿಯಿಂದ ಹೊರ ಬಂದ ತಕ್ಷಣ ಡಿಜಿಟಲ್ ವ್ಯಾಲೆಟ್‌ನಿಂದ ಶುಲ್ಕವು ತಾನಾಗಿ ಕಡಿತವಾಗುತ್ತದೆ. 2021ರಲ್ಲಿ ಜಾರಿಗೆ ಬಂದಿರುವ ಫಾಸ್ಟ್ಯಾಗ್ ಎಂಬ, ಚಿಪ್ ಇರುವ ಟ್ಯಾಗ್ ಅನ್ನು ಓದಲು ತಗುಲುವ ಸಮಯದ ಉಳಿತಾಯವಾಗಿ, ಯಾವುದೇ ಅಡೆತಡೆಯಿಲ್ಲದೆಯೇ ವಾಹನಗಳು ಸಂಚರಿಸಬಹುದು. 20 ಕಿ.ಮೀ. ವ್ಯಾಪ್ತಿಯ ನಂತರ ಪ್ರಯಾಣಿಸಿದ ದೂರಕ್ಕಷ್ಟೇ ಸುಂಕ ವಿಧಿಸಲಾಗುವುದರಿಂದ, ಹೆದ್ದಾರಿ ಸುತ್ತಮುತ್ತ ಮನೆಗಳಿರುವ ಜನರಿಗೂ ದೊಡ್ಡ ಹೊರೆಯಾಗದು ಎಂಬ ನಿರೀಕ್ಷೆ ಇದೆ.

ಆರಂಭದಲ್ಲಿ ಪೈಲಟ್ ಯೋಜನೆಯಾಗಿ (ಪರೀಕ್ಷಾರ್ಥವಾಗಿ) ಈ ವರ್ಚುವಲ್ ಟಾಲ್ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಫಾಸ್ಟ್ಯಾಗ್ ಜತೆಜತೆಗೇ ಜಿಎನ್ಎಸ್ಎಸ್ ಆಧಾರಿತ ಇಟಿಸಿ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಇದರಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಸರಿಪಡಿಸಿಕೊಂಡು, ಉಳಿದ ಹೆದ್ದಾರಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ.

ಒಂದು ಮಾಹಿತಿಯ ಪ್ರಕಾರ, ಸದ್ಯ ಭಾರತದಲ್ಲಿ ವರ್ಷಕ್ಕೆ ₹40 ಸಾವಿರ ಕೋಟಿಗೂ ಹೆಚ್ಚು ಟೋಲ್ ಅಂದರೆ ಹೆದ್ದಾರಿ ಸುಂಕ ಸಂಗ್ರಹವಾಗುತ್ತಿದೆ ಎಂದರೆ, ವಾಹನಗಳ ಪ್ರಮಾಣ ಎಷ್ಟಿದೆ ಎಂಬುದು ನಿಮ್ಮ ಲೆಕ್ಕಾಚಾರಕ್ಕೆ ಬಿಟ್ಟ ವಿಚಾರ. ವಾಹನಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಿರುವಂತೆಯೇ, ಟೋಲ್ ಬೂತ್‌ಗಳು ಸಮೀಪ ಬಂದಾಗ ವಾಹನದ ವೇಗ ನಿಧಾನ ಮಾಡುವುದು, ನಿರ್ದಿಷ್ಟ ಸಾಲಿನಲ್ಲೇ ಹೋಗುವುದು, ಸರತಿ ಸಾಲಿನಲ್ಲಿ ಕಾಯುವುದೇ ಮುಂತಾದ ರೀತಿಯಲ್ಲಿ ಸಮಯ ವ್ಯಯವಾಗದಂತೆ ತಡೆಯಲು ಈ ಆಧುನಿಕ ಟೋಲ್ ವ್ಯವಸ್ಥೆ ಅನಿವಾರ್ಯ.

ಆದರೆ, 60 ಕಿ.ಮೀ.ಗೆ ಒಂದರಂತೆ ಮಾತ್ರ ಟೋಲ್ ಬೂತ್‌ಗಳಿರುತ್ತವೆ ಎಂದು ಕೇಂದ್ರ ಸಚಿವರು ಸಂಸತ್ತಿನಲ್ಲಿ ಆಡಿದ ಮಾತು ಇನ್ನೂ ಪಾಲನೆಯಾಗಿಲ್ಲ. ಜೊತೆಗೆ, ವಾಹನಗಳಿಗೆ ರಸ್ತೆ ತೆರಿಗೆ ಕಟ್ಟಿದ ಹೊರತಾಗಿಯೂ ಮತ್ತೆ ಟೋಲ್ ತೆರಬೇಕು ಯಾಕೆ ಎಂಬ ಅಸಮಾಧಾನ ಜನರಲ್ಲಿನ್ನೂ ಇದೆ. ಇವುಗಳ ನಡುವೆಯೇ ಜನರು ಈ ಹೊಸ ವ್ಯವಸ್ಥೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.