ನಮ್ಮ ಕಂಪ್ಯೂಟರ್, ಮೊಬೈಲ್‌ನಲ್ಲಿರುವ ಇ–ಮೇಲ್, ಬ್ಯಾಂಕ್ ಖಾತೆಗಳ ಪಾಸ್‌ವರ್ಡ್‌ನಂತಹ ವೈಯಕ್ತಿಕ ರಹಸ್ಯ ಮಾಹಿತಿ ಕದಿಯಲು ಹಳೆಯ ಕಳ್ಳ ತಂತ್ರಾಂಶವೊಂದು ಹೊಸವೇಷದಲ್ಲಿ ಬಂದಿದೆ. ಸ್ವಲ್ಪ ಯಾಮಾರಿದರೂ ಕತೆ ಮುಗಿದಂತೆ. ಹೊಂಚು ಹಾಕಿ ಕುಳಿತಿರುವ ಈ ಹೊಸ ಮಾಲ್‌ವೇರ್ ನಮ್ಮ ಕಂಪ್ಯೂಟರ್ ಅಥವಾ ಇ–ಮೇಲ್ ಹೊಕ್ಕು ಬಿಡುತ್ತದೆ.
ಹ್ಯಾಕರ್‌ಗಳು ಹೊಸದಾಗಿ ಸೃಷ್ಟಿಸಿ, ಹರಿಬಿಟ್ಟಿರುವ ಹೊಸ ಕಳ್ಳ ಕುತಂತ್ರಾಂಶದ ಹೆಸರು ‘ಬ್ಲ್ಯಾಕ್‌ರಾಕ್’. ಸುಲಭವಾಗಿ ಕನ್ನ ಹಾಕಬಲ್ಲ ಚಾಕಚಕ್ಯತೆ ಹೊಂದಿರುವ ಈ ಮಾಲ್‌ವೇರ್ ಮೊದಲು ಪತ್ತೆಯಾಗಿದ್ದು ಇದೇ ಮೇ ತಿಂಗಳ ಕೊನೆಯಲ್ಲಿ.
ಈಗಾಗಲೇ ಜಿಮೇಲ್ ಸೇರಿದಂತೆ ಒಟ್ಟು 337 ಆ್ಯಪ್‌ಗಳಲ್ಲಿ ಕಾಣಿಸಿಕೊಂಡಿರುವ ಈ ಮಾಲ್‌ವೇರ್‌ಪಾಸ್‌ವರ್ಡ್ ಮತ್ತು ರಹಸ್ಯ ದತ್ತಾಂಶಗಳಿಗೆ ಕನ್ನ ಹಾಕುವ ಮೂಲಕ ಎರಡು ತಿಂಗಳಲ್ಲಿ ಎಲ್ಲರ ನಿದ್ದೆಗೆಡಿಸಿದೆ.
ಜಿಮೇಲ್, ಉಬರ್, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಸೇರಿದಂತೆ ಡೇಟಿಂಗ್ ಆ್ಯಪ್, ಸೋಷಿಯಲ್ ಮೀಡಿಯಾ, ಬ್ಯಾಂಕಿಂಗ್ ಮತ್ತು ಮೆಸೇಜಿಂಗ್ ನಂತಹ ಜನಪ್ರಿಯ ಆ್ಯಪ್‌ಗಳೇ ‘ಬ್ಲ್ಯಾಕ್‌ರಾಕ್’ ಶಿಕಾರಿಗಳು!
ಈ ಮೊದಲಿನ ಕುಖ್ಯಾತ ಮಾಲ್‌ವೇರ್ ಝೆರಕ್ಸಿಸ್ (Xerxes) ಪರಿಷ್ಕೃತ ರೂಪವಾದ ಬ್ಲ್ಯಾಕ್‌ರಾಕ್ ಹೊಸ ವೇಷ ಮತ್ತು ಕಳ್ಳಾಟಗಳೊಂದಿಗೆ ನೆಟ್ ಬಳಕೆದಾರರನ್ನು ಯಾಮಾರಿಸುತ್ತಿದೆ.
ಇತರ ಎಲ್ಲ ಆ್ಯಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್‌ಗಳಂತೆ ಇದು ಕೂಡ ಕಂಪ್ಯೂಟರ್, ಮೊಬೈಲ್ ಲಾಗಿನ್ ಪಾಸ್‌ವರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಇನ್ನಿತರ ರಹಸ್ಯ ಮಾಹಿತಿಗಳನ್ನು ಸುಲಭವಾಗಿ ಕದಿಯುತ್ತದೆ ಎಂದುಮೊಬೈಲ್ ಸೆಕ್ಯುರಿಟಿ ಕಂಪನಿ ಥ್ರೆಟ್ ಫ್ಯಾಬ್ರಿಕ್ ಎಚ್ಚರಿಕೆ ನೀಡಿದೆ. ಮೊದಲ ಬಾರಿಗೆ ಇದನ್ನು ಪತ್ತೆ ಹಚ್ಚಿದ್ದು ಇದೇ ಕಂಪನಿ.
ಬಳಕೆದಾರರು ಯಾವುದಾದರೊಂದು ಆ್ಯಪ್‌ನಲ್ಲಿ ವ್ಯವಹರಿಸುವಾಗ ಮಧ್ಯೆ ತೂರಿಕೊಳ್ಳುವ ವೈರಸ್ ನಕಲಿ ವಿಂಡೊ ತೋರಿಸಿ ಯಾಮಾರಿಸುತ್ತದೆ. ನಂತರ ಬಳಕೆದಾರರ ಪಾಸ್‌ವರ್ಡ್ ಮತ್ತು ದತ್ತಾಂಶಗಳನ್ನು ಕದಿಯುತ್ತದೆ. ‘ಓವರ್‌ಲೇಸ್’ (overlays) ಪದ್ಧತಿಯಲ್ಲಿ ಕಾರ್ಯನಿರ್ವಹಿಸುವ ಕಳ್ಳತಂತ್ರಾಂಶ ಹಣಕಾಸು ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಸುಲಭವಾಗಿ ಕನ್ನ ಹಾಕುತ್ತದೆ ಎಂದು ಝೆಡ್‌ನೆಟ್ ತಂತ್ರಜ್ಞಾನ ವೆಬ್‌ಸೈಟ್ ವರದಿ ಮಾಡಿದೆ.
ಶಾಪಿಂಗ್, ಲೈಫ್‌ಸ್ಟೈಲ್, ನ್ಯೂಸ್, ಟ್ವಿಟರ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಂ, ಉಬರ್ ಮುಂತಾದ ಆ್ಯಪ್‌ಗಳಿಗೆ ಬ್ಲ್ಯಾಕ್‌ರಾಕ್ ಕನ್ನ ಹಾಕಬಲ್ಲದು. ಹಳೆಯ ಆ್ಯಂಡ್ರಾಯ್ಡ್ ಮಾಲ್‌ವೇರ್ ಮಾದರಿಯಲ್ಲಿಯೇ ಇದು ಕೂಡ ಕೆಲಸ ಮಾಡುತ್ತದೆ. ಆದರೆ, ಅವುಗಳಿಗಿಂತ ಭಿನ್ನ ಮತ್ತು ಸ್ಮಾರ್ಟ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡುತ್ತದೆ ಎನ್ನುತ್ತದೆಥ್ರೆಟ್ ಫ್ಯಾಬ್ರಿಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.