ಒಟಿಟಿ ಫ್ಲಾಟ್‌ಫಾರ್ಮ್‌ಗಳ ಈ ಯುಗದಲ್ಲಿ ಗ್ರಾಹಕನೇ ರಾಜ. ನಮಗೆ ಬೇಕಾದ ಚಾನೆಲ್ ಮಾತ್ರ ನೋಡಬಹುದು, ಜಾಹೀರಾತುಗಳ ಹಾವಳಿಯೂ ಇರುವುದಿಲ್ಲ. ಜೇಬಿಗೂ ಅತಿಹಗುರ.
ಟೆಲಿಕಾಂ ರಂಗದ ಕ್ರಾಂತಿಯಿಂದಾಗಿ ಸ್ಥಿರ ದೂರವಾಣಿಯಿಂದ ಸಂಚಾರಿ ದೂರವಾಣಿಗೆ ನಮ್ಮ ಸ್ಥಾನಮಾನವನ್ನು ಏರಿಸಿಕೊಂಡ ಬಳಿಕ,ಎಸ್ಎಂಎಸ್ (ಕಿರು ಸಂದೇಶ ಸೇವೆ) ಕೇವಲ ಅಧಿಕೃತ ಸಂವಹನಕ್ಕೆ ಸೀಮಿತವಾಗಿಬಿಟ್ಟಿದೆ. ಫೀಚರ್ ಫೋನ್‌ಗಳು ಸ್ಮಾರ್ಟ್ ಫೋನ್‌ಗಳಾಗಿ ಬದಲಾದವು. ಜನರು ದಿನದ ಜಂಜಡವನ್ನು ಕಳೆಯಲು, ಒತ್ತಡ, ಕಾರ್ಯಬಾಹುಳ್ಯದ ನಡುವೆ ಮನಸ್ಸನ್ನು ಒಂದಿಷ್ಟು ಪ್ರಫುಲ್ಲಗೊಳಿಸಿ ನವಚೈತನ್ಯ ಪಡೆಯಲು ಮನೋರಂಜನೆಗಾಗಿಯೇ ಇವನ್ನು ಬಳಸಲಾರಂಭಿಸಿದರು. ಸ್ಮಾರ್ಟ್ ಹೆಸರಿನಲ್ಲಿ ತಂತ್ರಜ್ಞಾನವು ಬೆಳೆದ ಬಗೆಯಿದು.
ಮೊಬೈಲ್ ಸೇವಾ ಕ್ಷೇತ್ರದ ಪೈಪೋಟಿ ರಂಗಕ್ಕೆ ಜಿಗಿದ ಜಿಯೋ, ಅಂತರಜಾಲ ಜಾಲಾಟದ ತುಡಿತಕ್ಕೆ ಜೀವ ತುಂಬಿದಂದಿನಿಂದ ಡೇಟಾ ದರ ಇಳಿಕೆಯ ಪೈಪೋಟಿಯಲ್ಲಿ ಅತೀ ಹೆಚ್ಚು ಲಾಭವಾಗಿದ್ದು ಗ್ರಾಹಕನಿಗೆ. ಜನ ಕೂಡ ಇದನ್ನು ಹೆಚ್ಚಾಗಿ ಬಳಸಿಕೊಂಡಿದ್ದು ಅಂತರಜಾಲ ತಾಣಗಳಲ್ಲಿ ಲಭ್ಯವಿದ್ದ ಮನೋರಂಜನೆಯ ವಿಡಿಯೊಗಳನ್ನು ನೋಡಲು. ಈ ಪರಿಯಾಗಿ ಸ್ಮಾರ್ಟ್ ಆಗಿ ಬದಲಾದ ಜನರ ಮನಸ್ಥಿತಿಗೆ ಅನುಗುಣವಾಗಿ, ಕೇಬಲ್ ಹಾಗೂ ಡಿಟಿಎಚ್ (ಡೈರೆಕ್ಟ್ ಟು ಹೋಂ) ಎಂಬ ರೇಡಿಯೋ/ ಟಿವಿ ವ್ಯವಸ್ಥೆಯೂ ಸದ್ದಿಲ್ಲದೇ ಸ್ಮಾರ್ಟ್ ಆಗಿ ಬಡ್ತಿ ಪಡೆಯಲಾರಂಭಿಸಿತ್ತು. ದಪ್ಪನೆಯ ಕ್ಯಾಥೋಡ್ ರೇ ಟ್ಯೂಬ್ (ಸಿಆರ್‌ಟಿ) ಇರುವ ಅನಲಾಗ್ ಟಿವಿಗಳು ಮರೆಯಾಗಿ, ತೆಳ್ಳಗಿನ ಟಿವಿ ಪರದೆಗಳು ಬರಲಾರಂಭಿಸಿದವು. ಮನರಂಜನಾ ಕ್ಷೇತ್ರದಲ್ಲಿ ಸದ್ದಿಲ್ಲದೇ ನಡೆದ ಈ ಕ್ರಾಂತಿಯು ಪಟ್ಟಣಿಗರನ್ನು ಮೋಹಪರವಶಗೊಳಿಸಿತು; ಆದರೆ ಅದೇ ವೇಳೆಗೆ ಬಹುತೇಕರನ್ನು ಗೊಂದಲದಲ್ಲಿ ತಳ್ಳಿದ್ದೂ ಹೌದು.
ಈಗಾಗಲೇ ಸ್ಮಾರ್ಟ್ ಟಿವಿ, 4ಕೆ ಟಿವಿ, ಹೆಚ್‌ಡಿ, ಫುಲ್ ಹೆಚ್‌ಡಿ, ಅಲ್ಟ್ರಾ ಹೆಚ್‌ಡಿ ಅಂದರೇನೆಂಬ ಬಗೆಗೆಲ್ಲಾ ಜನರಿಗಿದ್ದ ಗೊಂದಲವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡ ಟಿವಿ ತಯಾರಿಕಾ ಕಂಪನಿಗಳು ಒಂದು ಕಡೆಯಿಂದ ಮಾರುಕಟ್ಟೆಯಲ್ಲಿ ಹೊಸತನದ ಸುಳಿಗಾಳಿಯನ್ನು ಮೂಡಿಸಿದವು. ಅಂಥ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಕೇಳಿಬರತೊಡಗಿದ್ದೇ ಒಟಿಟಿ. ಆದರೆ ಟಿವಿಯನ್ನು ಸ್ಮಾರ್ಟ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒಟಿಟಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಹೆಚ್ಚಾಗಿ ನಡೆದಿಲ್ಲ.
ಏನಿದು ಒಟಿಟಿ?
'ಓವರ್ ದಿ ಟಾಪ್' ವಿಡಿಯೊ ಸ್ಟ್ರೀಮಿಂಗ್ ವ್ಯವಸ್ಥೆಯ ಸಂಕ್ಷಿಪ್ತ ರೂಪ ಒಟಿಟಿ. ಇದನ್ನು ಹೇಗೆ ಅರ್ಥೈಸಬಹುದು? ಸಸ್ಯಗಳಲ್ಲಿ ಪರಾಗಸ್ಪರ್ಶ ಕ್ರಿಯೆಯ ಮೂಲಕ ಸಂತಾನೋತ್ಪತ್ತಿ ಎಂಬುದೆಲ್ಲ ವಿಜ್ಞಾನಪಠ್ಯಗಳಲ್ಲಿ ನಾವು ಓದಿದ ವಿಚಾರ. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪರಾಗರೇಣುಗಳು ಮತ್ತೊಂದು ಹೂವಿನ ಶಲಾಕಾಗ್ರಕ್ಕೆ ಸ್ಪರ್ಶವಾಗಿ, ಹೊಸ ಸಾಧ್ಯತೆಗೆ (ಸಂತಾನೋತ್ಪತ್ತಿ) ಕಾರಣವಾಗುತ್ತವೆ. ಅಕ್ಕ ಪಕ್ಕದ ಗಿಡಗಳಲ್ಲಿರುವ ಹೂವುಗಳು ಪರಸ್ಪರ ಸಂಧಿಸಿದಾಗಲೂ ನಡೆಯಬಹುದಾದ ಪ್ರಕ್ರಿಯೆ ಇದು. ಆದರೆ, ಈ ಪ್ರಕ್ರಿಯೆಯು ಪಾತರಗಿತ್ತಿ ಮುಂತಾದ ಕೀಟಗಳ ಮೂಲಕ ನಡೆದರೆ? ಹೊಸ ತಳಿಗಳು, ಸಾಧ್ಯತೆಗಳು ದೊರೆಯುತ್ತವೆ.
ದೂರದಲ್ಲೆಲ್ಲೋ ಇದ್ದ ಪರಾಗರೇಣುಗಳುಭೃಂಗದ ಬೆನ್ನೇರಿ (Over the Top) ಬಂದು ಪ್ರಕೃತಿ ನಿಯಮವನ್ನು ಸುಲಭವಾಗಿಸುತ್ತವೆ. ಒಟಿಟಿ ಎಂದರೆ ಇದೇ. ಆನ್‌ಲೈನ್ ಅಥವಾ ಅಂತರಜಾಲದಲ್ಲಿರುವ ಮನರಂಜನಾ ವಿಷಯವಸ್ತುಗಳನ್ನು (ಕಂಟೆಂಟ್) ಆ್ಯಪ್‌ಗಳ ಬೆನ್ನೇರಿಸಿ, ನಮಗೆ ಬೇಕಾದ ಪರದೆಯಲ್ಲಿ ನೋಡುವ ವಿಧಾನ. ಇದೊಂದು ರೀತಿಯಲ್ಲಿ ವೈರ್‌ಡ್ ಜಗತ್ತನ್ನು ವೈರ್‌ಲೆಸ್ ಆಗಿಸುವಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯೆಂದರೂ ತಪ್ಪಲ್ಲ.
ಅಂತರಜಾಲದಲ್ಲಿ 'ಕಂಟೆಂಟ್' ಎಂದು ಕರೆಯಲಾಗುವ ವಿಡಿಯೊ, ಆಡಿಯೋ, ಫೋಟೋ, ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ, ನೇರ ಪ್ರಸಾರ... ಹೀಗೆ, ಈಗಿರುವ ಕೇಬಲ್ ಅಥವಾ ಡಿಟಿಹೆಚ್ ವ್ಯವಸ್ಥೆಯ ಮೂಲಕ ಬರುವ ಎಲ್ಲವೂ ಕೂಡ ಒಂದು ಪುಟ್ಟ ಆ್ಯಪ್ ಮೂಲಕ ಬರತೊಡಗಿವೆ. ಗರಿಷ್ಠ ವೇಗದ ಇಂಟರ್ನೆಟ್ ಮೂಲಕ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳನ್ನು ಗ್ರಾಹಕರು ಸ್ಟ್ರೀಮಿಂಗ್ ಮೂಲಕ ತಮಗೆ ಬೇಕಾದ ಸಾಧನಗಳಲ್ಲಿ ನೋಡಬಹುದಾದ ವ್ಯವಸ್ಥೆಯಿದು. ಈ ರೀತಿಯ ಮಾಹಿತಿ- ಮನರಂಜನೆಯ ಕಂಟೆಂಟ್ ಪೂರೈಕೆದಾರರು ತಮ್ಮದೇ ಆದ ರೀತಿಯಲ್ಲಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ, ಚಂದಾದಾರಿಕೆಯ ಮೂಲಕ ಗ್ರಾಹಕರಿಗೆ ತಲುಪಿಸತೊಡಗಿದರು.
ಈ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳ ಯುಗದಲ್ಲಿ ಗ್ರಾಹಕನೇ ರಾಜ. ಯಾಕೆಂದರೆ, ನಮಗೆ ಯಾವ ಕಂಟೆಂಟ್ ಬೇಕು ಎಂಬುದನ್ನು ನಾವೇ ನಿರ್ಧರಿಸಿ, ನಮಗೆ ಬೇಕಾದುದನ್ನು ಮಾತ್ರವೇ ನೋಡಬಹುದು. ಮಾತ್ರವಲ್ಲ, ಬೇಕಾದ ಸಾಧನಗಳಲ್ಲಿಯೂ ನೋಡಬಹುದು. ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್ ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್, ಕಂಪ್ಯೂಟರ್, ಟಿವಿ... ಹೀಗೆ ನಮ್ಮಿಷ್ಟದ ಸ್ಮಾರ್ಟ್ ಸಾಧನಗಳ ಪರದೆಯಲ್ಲಿ ವೀಕ್ಷಿಸಬಹುದು.
ಒಟಿಟಿ ಮಾರುಕಟ್ಟೆಯ ಆವೇಗ
ಪ್ರೈಸ್ ವಾಟರ್‌ಹೌಸ್ ಕೂಪರ್ಸ್ (ಪಿಡಬ್ಲ್ಯುಸಿ) ವರದಿಯ ಪ್ರಕಾರ, 2023ರ ವೇಳೆಗೆ ಭಾರತದಲ್ಲಿ ಒಟಿಟಿ ಮಾರುಕಟ್ಟೆಯು ಶೇ.22ರ ದರದಲ್ಲಿ ವೃದ್ಧಿಯಾಗಿ, ವಹಿವಾಟು ಮೌಲ್ಯ ₹ 12 ಸಾವಿರ ಕೋಟಿಗೆ ಏರಲಿದೆ. ಈಗಾಗಲೇ ದೇಶದಲ್ಲಿ ಗರಿಷ್ಠ ವೇಗದ ಇಂಟರ್ನೆಟ್ ಒದಗಿಸುವ 5ಜಿ ತಂತ್ರಜ್ಞಾನದ ಮಾತುಗಳೂ ಕೇಳಿಬರುತ್ತಿದ್ದು, ಅದು ಅನುಷ್ಠಾನಕ್ಕೆ ಬಂದರಂತೂ ಒಟಿಟಿ ಮಾರುಕಟ್ಟೆ ಬೆಳೆಯುವ ವೇಗ ಊಹಿಸಲಸಾಧ್ಯ. ಈಗಾಗಲೇ ವಿದೇಶೀ ಕಂಪನಿಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್, ಆ್ಯಪಲ್ ಟಿವಿ ಪ್ಲಸ್, ಸೋನಿ ಲೈವ್ ಸೇರಿದಂತೆ ಸುಮಾರು 30ಕ್ಕೂ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳು ಅಂದರೆ ಸ್ಟ್ರೀಮಿಂಗ್ ಆ್ಯಪ್‌ಗಳು ಈ ಕ್ಷೇತ್ರದಲ್ಲಿ 'ಕೃಷಿ' ಆರಂಭಿಸಿವೆ. ಗೂಗಲ್ ಒಡೆತನದ ಯೂಟ್ಯೂಬ್ ಅಂತೂ ಎಲ್ಲರಿಗೂ ಇಷ್ಟವಾಗಿದೆ.
ಇತರೆಡೆ ಮೂರೇ ತಿಂಗಳಲ್ಲಿ ಮೂರು ಕೋಟಿ ಚಂದಾದಾರರನ್ನು ಸೆಳೆದುಕೊಂಡಿರುವ ಡಿಸ್ನಿ ಪ್ಲಸ್ ಕೂಡ ಭಾರತಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ಭಾರತದ್ದೇ ಆದ ಝೀ5, ಆಲ್ಟ್‌ಬಾಲಾಜಿ, ವೂಟ್, ಜಿಯೋಪ್ಲೇ, ಎರೋಸ್ ನೌ, ಎಂಎಕ್ಸ್ ಪ್ಲೇಯರ್, ಡಿಟ್ಟೋ ಟಿವಿ ಮುಂತಾದವು ಕೂಡ ಈ ಕ್ಷೇತ್ರದಲ್ಲಿ ತಮ್ಮ ಪಾಲಿನ ತುತ್ತಿಗಾಗಿ ಕಾಲೂರುತ್ತಿದ್ದು, ಕೋಟಿ ಕೋಟಿ ಚಂದಾದಾರನ್ನು ಸೆಳೆದುಕೊಳ್ಳಲು ಆರಂಭಿಸಿದೆ. ಈ ಆಧುನಿಕ ತಂತ್ರಜ್ಞಾನವೀಗ ನಿಧಾನವಾಗಿ ಎಲ್ಲರ ಮನೆಯೊಳಗೂ ಬಲಗಾಲಿಟ್ಟು ಒಳಬರುವುದಕ್ಕೆ ಯಾವ ರೀತಿಯ ಸಿದ್ಧತೆಯಾಗುತ್ತಿದೆ ಎಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು.
ಜೇಬಿಗೂ ಹಗುರ
ಇಂಟರ್ನೆಟ್ ಮೂಲಕ ಬರುವ ಈ ಸೇವೆಗಳು ಜೇಬಿಗೂ ಹಗುರ. ಏರ್‌ಟೆಲ್ ಡಿಜಿಟಲ್, ಟಾಟಾ ಸ್ಕೈ, ಸನ್ ಡೈರೆಕ್ಟ್, ಡಿಶ್ ಟಿವಿ, ವಿಡಿಯೊಕಾನ್ ಡಿ2ಹೆಚ್, ಇಂಡಿಪೆಂಡೆಂಟ್ (ರಿಲಯನ್ಸ್‌ನ ಬಿಗ್) ಹಾಗೂ ಡಿಡಿ ಫ್ರೀ ಡಿಶ್ ಎಂಬ ಡಿಟಿಹೆಚ್ ಸೇವೆಗಳು ಭಾರತದಲ್ಲಿ ಈಗಾಗಲೇ ಇವೆ. ಏಷ್ಯಾ ಪೆಸಿಫಿಕ್ ಪ್ರದೇಶದ ಎರಡನೇ ಅತೀ ದೊಡ್ಡ ಚಂದಾದಾರರ ಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ 800ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಬಂದುಬಿಟ್ಟಿವೆ.
ಮಳೆ ಬಂದರೆ ಇವುಗಳ ಚಂದಾದಾರರು ಯಾವುದೇ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ತೊಂದರೆ ಎದುರಿಸುತ್ತಾರೆ. ಅಲ್ಲದೆ, ಇದರಲ್ಲಿ ಕೇವಲ ಉಚಿತ ಚಾನೆಲ್‌ಗಳನ್ನು ನೋಡಬೇಕಿದ್ದರೂ ಕನಿಷ್ಠ ₹ 153 ನೀಡಬೇಕು. ಉಳಿದಂತೆ, ಪಾವತಿ ಮಾಡಬೇಕಾದ ಚಾನೆಲ್‌ಗಳನ್ನು ಒಂದೊಂದಾಗಿ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಶುಲ್ಕ ತೆರಬೇಕು. ಸಾಮಾನ್ಯವಾಗಿ ನಾಲ್ಕೈದು ಅಂತ ಪೇಯ್ಡ್ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡರೂ ತಿಂಗಳಿಗೆ ಕನಿಷ್ಠ ₹ 200ರಿಂದ 250 ನೀಡಬೇಕಾಗುತ್ತದೆ. ಕೇಬಲ್‌ನವರು ಕೂಡ ಬಹುತೇಕ ಇಷ್ಟೇ ಶುಲ್ಕ ವಿಧಿಸುತ್ತಾರೆ.
ಆದರೆ ಈ ಒಟಿಟಿ ಎಂಬ ಸೌಕರ್ಯವಂತೂ ತೀರಾ ಅಗ್ಗ. ನಮಗೆ ಬೇಕಾದ ಚಾನೆಲ್ ಮಾತ್ರ ನೋಡಬಹುದು, ಜಾಹೀರಾತುಗಳ ಹಾವಳಿಯೂ ಇರುವುದಿಲ್ಲ. ಆಲ್ಟ್‌ಬಾಲಾಜಿಯಂತೂ ಮೂರು ತಿಂಗಳಿಗೆ ₹ 100ರಷ್ಟು ಕಡಿಮೆ ಶುಲ್ಕಕ್ಕೆ ಸೇವೆ ಒದಗಿಸುತ್ತಾ ಚಂದಾದಾರರನ್ನು ಒಟ್ಟುಗೂಡಿಸಲು ಮುಂದಾಗಿದ್ದರೆ, ಹಾಟ್‌ಸ್ಟಾರ್ 3 ತಿಂಗಳಿಗೆ ₹ 199 ಮೂಲಕ ಸೇವೆ ಒದಗಿಸುತ್ತಿದೆ. ನೆಟ್‌ಫ್ಲಿಕ್ಸ್ ಶುಲ್ಕ ಸ್ವಲ್ಪ ಹೆಚ್ಚಾದರೂ ಅಗಾಧ ಬಹುಮಾಧ್ಯಮ ಕಂಟೆಂಟ್‌ನ ಸಾಗರ ಅಲ್ಲಿದೆ.
ಈ ಒಟಿಟಿ ತಂತ್ರಜ್ಞಾನದ ಅತಿದೊಡ್ಡ ಉಪಯೋಗದ ಬಗ್ಗೆ ಒಂದು ಮಾತು. ತಥಾಕಥಿತ ಅವಸರದ ಯುಗದಲ್ಲಿ ಧಾರಾವಾಹಿ ಮಿಸ್ ಮಾಡಿಕೊಳ್ಳುವುದೆಂದರೆ ಕೆಲವರಿಗಂತೂ ಪ್ರಾಣವೇ ಹಾರಿ ಹೋದಂತಾಗಿರುತ್ತದೆ. ಆದರೆ, ಸಮೀಪದ ಬಂಧುಗಳ ಮದುವೆಗೋ ಅಥವಾ ಬೇರೇನೋ ತುರ್ತು ಕೆಲಸವೋ ಇದ್ದರೆ, ಇಷ್ಟದ ಧಾರಾವಾಹಿ/ಕಾರ್ಯಕ್ರಮ ಮಿಸ್ ಆಗುತ್ತದೆ ಎಂಬ ಹಪಾಹಪಿಗೂ ಮದ್ದು ಒಟಿಟಿಯಲ್ಲಿದೆ. ಈ ಆ್ಯಪ್‌ಗಳಿಗೆ ಹೋದರೆ, ಧಾರಾವಾಹಿಯ ಹಿಂದಿನ ಕಂತುಗಳನ್ನು ಯಾವಾಗ ಬೇಕಿದ್ದರೂ ನೋಡಬಹುದು. ಮಕ್ಕಳಿಗಾಗಿ ಕಾರ್ಯಕ್ರಮಗಳು, ಹಿರಿಯರಿಗಾಗಿ ಆಧ್ಯಾತ್ಮಿಕ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಕ್ರಿಕೆಟ್, ಫುಟ್ಬಾಲ್ ಪಂದ್ಯಾವಳಿಗಳು... ಈ ರೀತಿ ಮಾಹಿತಿ- ಮನರಂಜನೆಯ ಎಲ್ಲವನ್ನೂ ತಮಗೆ ಲಭ್ಯ ಸಮಯದಲ್ಲಿ ನೋಡಬಹುದು. ಇಷ್ಟವಾದರೆ ಮತ್ತೆ ಮತ್ತೆ ವೀಕ್ಷಿಸಬಹುದು.
ಹೊಸ ಚಲನಚಿತ್ರಗಳೂ ಇಲ್ಲೇ ಲಭ್ಯ. ಈಗೀಗಲಂತೂ ಈ ಒಟಿಟಿ ವೇದಿಕೆಗಳಿಗಾಗಿಯೇ ಷೋಗಳನ್ನು ನಿರ್ಮಿಸಲಾಗುತ್ತಿದೆ ಎಂಬುದು ಇದರ ಜನಪ್ರಿಯತೆಗೆ ಸಾಕ್ಷಿ. ಇತ್ತೀಚೆಗೆ ನಡೆದ ಕನ್ನಡದ ‘ಬಿಗ್‌ಬಾಸ್ ಸೀಸನ್ 7’ ರಿಯಾಲಿಟಿ ಷೋದ ಕೆಲವೊಂದು ದೃಶ್ಯಗಳು ವೂಟ್ ಎಂಬ ಆ್ಯಪ್ ಅಥವಾ ಒಟಿಟಿ ವೇದಿಕೆಯಲ್ಲಿ ಮಾತ್ರವೇ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಕಂಪನಿಗಳು ನಟರೊಂದಿಗೆ, ಟಿವಿ ಚಾನೆಲ್‌ಗಳೊಂದಿಗೆ ವಿಶೇಷವಾದ ಒಪ್ಪಂದವನ್ನೂ ಮಾಡಿಕೊಳ್ಳಲು ಆರಂಭಿಸಿವೆ. ಗ್ರಾಹಕರನ್ನು ಹೆಚ್ಚು ತಲುಪಬೇಕು ಎಂಬುದೇ ಎಲ್ಲರ ಗುರಿ. ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಲನಚಿತ್ರಗಳೂ ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ದೊರೆಯುತ್ತವೆ.
ಒಟಿಟಿಯ ಮತ್ತೊಂದು ಪ್ರಯೋಜನವೆಂದರೆ, ಮಳೆ, ಗಾಳಿ ಇದ್ದರೂ ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ವೀಕ್ಷಿಸಬಹುದು. ಕೇಬಲ್ ಟಿವಿ ತರಹ ಅಡಚಣೆ ಇರುವುದಿಲ್ಲ. ಯಾವುದೇ ಸಾಧನದಲ್ಲಿ ನಮ್ಮ ಲಾಗಿನ್ ಕ್ರೆಡೆನ್ಷಿಯಲ್‌ಗಳನ್ನು ಬಳಸಿಕೊಳ್ಳಬಹುದು. ವೇಗವಾದ ಇಂಟರ್ನೆಟ್ ಸೌಕರ್ಯ ಇರಬೇಕಾಗುತ್ತದೆ ಮತ್ತು ನಿಜವಾದ ಅನಿಯಮಿತ (ಅನ್‌ಲಿಮಿಟೆಡ್) ಡೇಟಾ ಪ್ಲ್ಯಾನ್ ಹೊಂದಿರಬೇಕಾಗುತ್ತದೆ ಎಂಬುದು ಇಲ್ಲಿ ಕಡ್ಡಾಯ. ಇದಕ್ಕಾಗಿ ಬ್ರಾಡ್‌ಬ್ಯಾಂಡ್/ ವೈಫೈ ಸೌಕರ್ಯದ ಮೂಲಕ ಟಿವಿಯನ್ನು ಅಂತರಜಾಲಕ್ಕೆ ಸಂಪರ್ಕಿಸಬಹುದು.
ಇನ್ನೂ ಒಂದು ಉಪಯೋಗವಿದೆ. ಕೆಲವರ ಮನೆಗಳಲ್ಲಿ ಬೆಡ್ ರೂಮಲ್ಲೊಂದು, ಹಜಾರದಲ್ಲೊಂದು ಟಿವಿ ಇರಬಹುದು. ಯಾವ ರೀತಿ ಡಿಟಿಹೆಚ್ ಅಥವಾ ಕೇಬಲ್ ಸೇವೆಗೆ ಹೆಚ್ಚುವರಿ ಹಣ ಪಾವತಿಸಿ ಎರಡು- ಮೂರನೇ ಸಂಪರ್ಕ ಪಡೆದುಕೊಳ್ಳಬಹುದೋ ಅದೇ ವ್ಯವಸ್ಥೆ ಒಟಿಟಿಯಲ್ಲೂ ಇದೆ. ಒಬ್ಬ ಚಂದಾದಾರರು ತಮ್ಮ ಲಾಗಿನ್ ಕ್ರೆಡೆನ್ಷಿಯಲ್‌ಗಳನ್ನು ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದೂ ಸಾಧ್ಯ.
ಬದಲಾವಣೆಯ ಯುಗ
ಕಾಲದ ಅನಿವಾರ್ಯತೆಗೆ ಸಿಲುಕಿದ ದೊಡ್ಡ ಡೂಮ್ ಇರುವ ಕ್ಯಾಥೋಡ್ ರೇ ಟಿವಿಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿವೆ. ಈಗೇನಿದ್ದರೂ ಸ್ಲಿಮ್ ಆದ ಟ್ರಿಮ್ ಆದ, ಗೋಡೆಗೇ ಅಂಟಿಸಬಲ್ಲ ಟಿವಿಗಳ ಕಾಲ. ಹೆಚ್‌ಡಿ, ಹೆಚ್‌ಡಿ ಪ್ಲಸ್, ಫುಲ್ ಹೆಚ್‌ಡಿ, ಅಲ್ಟ್ರಾ ಹೆಚ್‌ಡಿ, 4ಕೆ ಎಂಬಿತ್ಯಾದಿ ತಂತ್ರಜ್ಞಾನಗಳ ಮೂಲಕ ಟಿವಿಯ ಪರದೆಯಲ್ಲಿ ಮೂಡಿಬರುವ ಚಿತ್ರಗಳ/ ವಿಡಿಯೊಗಳ ಸ್ಪಷ್ಟತೆಯ ಗುಣಮಟ್ಟವನ್ನು ನಿಖರವಾಗಿ ತೋರಿಸುವುದರಲ್ಲಿ, ಈ ಮೂಲಕ ತಮ್ಮದೇ ಟಿವಿ ಸಾಧನಗಳನ್ನು ಖರೀದಿಸುವಂತೆ ಗ್ರಾಹಕರನ್ನು ಸೆಳೆದುಕೊಳ್ಳುವಲ್ಲಿ ಟಿವಿ ತಯಾರಿಕಾ ಕಂಪನಿಗಳು ಪೈಪೋಟಿಗೆ ಬಿದ್ದಿವೆ.
ಅದ್ಭುತ ಧ್ವನಿ ಸಾಮರ್ಥ್ಯವುಳ್ಳ ಸ್ಪೀಕರ್ ವ್ಯವಸ್ಥೆಯೂ ಇಂತಹ ಟಿವಿಗಳಲ್ಲೇ ಅಳವಡಿಕೆಯಾಗಿ ಬರುವುದರೊಂದಿಗೆ, ಒಂದು ಕಡೆಯಿಂದ ಹೋಂ ಥಿಯೇಟರ್ ಸ್ಪೀಕರ್ ಸಿಸ್ಟಂಗಳ ಮಾರುಕಟ್ಟೆಗೂ ಒಂದಿಷ್ಟು ಹೊಡೆತ ಬಿದ್ದಿರುವುದು ಸುಳ್ಳಲ್ಲ. ಕ್ಯಾಥೋಡ್ ರೇ ಟಿವಿಗಳಷ್ಟು ಬಾಳಿಕೆ ಈ ಆಧುನಿಕ ಟಿವಿಗಳಿಗೆ ಇಲ್ಲದಿದ್ದರೂ, ಜನರು ‘ಕಡಿಮೆ ಜಾಗ ಸಾಕು’, ‘ಪುಟ್ಟ ಮನೆಗೆ ಹೊಂದುತ್ತದೆ’ ಎಂಬೆಲ್ಲ ಕಾರಣಕ್ಕೆ ಅವುಗಳನ್ನೇ ಖರೀದಿಸತೊಡಗಿದ್ದಾರೆ. ಸ್ಲಿಮ್ ಆಗಿರುವುದು ಈಗ ಪ್ರತಿಷ್ಠೆಯ ಮಟ್ಟಕ್ಕೂ ಬೆಳೆದಿದೆ.
ಮೊಬೈಲ್ ಫೋನ್‌ಗಳು ಬಂದು, ಎಸ್ಸೆಮ್ಮೆಸ್ ಸಂದೇಶಗಳು ಜನಪ್ರಿಯವಾದಾಗ ಪೇಜರ್ ಎಂಬ ಸಂದೇಶವಾಹಕ ತಂತ್ರಜ್ಞಾನವು ಸದ್ದಿಲ್ಲದೆ ಕಣ್ಮರೆಯಾಯಿತು. ಹಾಗೆಯೇ ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ ಕಾಯಿನ್ ಬೂತ್‌ಗಳು ಮರೆಯಾದವು. ಡಿಟಿಹೆಚ್ ಸೇವೆ ಬಂದ ಬಳಿಕ ಕೇಬಲ್ ಆಪರೇಟರ್‌ಗಳು ಯಾವ ರೀತಿಯಲ್ಲಿ ಹೊಡೆತ ಅನುಭವಿಸಿದರೋ, ಈಗ ಅದೇ ಮಾದರಿಯ ಒಟಿಟಿ ಎಂಬ ಕಿಲ್ಲರ್ ತಂತ್ರಜ್ಞಾನವು ಡಿಟಿಹೆಚ್ ಸೇವೆಗಳಿಗೆ ಹೊಡೆತ ನೀಡುತ್ತಿದೆ. ಜತೆಜತೆಗೇ ಸಿಆರ್‌ಟಿ ಟಿವಿಗಳಿಗೆ ಹೊಡೆತ ನೀಡಲೂ ಸಜ್ಜಾಗಿದೆ.
ಈಗಾಗಲೇ ಸುಮಾರು 25 ಕೋಟಿ ಭಾರತೀಯರು ಸ್ಮಾರ್ಟ್ ಫೋನ್ ಬಳಸುತ್ತಿದ್ದು, ಈ ವರ್ಷಾಂತ್ಯದೊಳಗೆ ಇದು 60 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಇದರಲ್ಲಿ ಶೇಕಡಾ 80ರಷ್ಟು ಮಂದಿ ವೇಗದ ಇಂಟರ್ನೆಟ್ 4ಜಿ ಸೇವೆ ಬಳಸುತ್ತಾರೆ. ಜನರ ಡೇಟಾ ಬಳಕೆಯ ಪ್ರಮಾಣವೂ ಜಿ.ಬಿ.ಗಟ್ಟಲೆ, ಅಂದರೆ ತಿಂಗಳಿಗೆ ಸರಾಸರಿ ಏಳೆಂಟು ಜಿ.ಬಿ ಮಟ್ಟಕ್ಕೆ ಏರಿಬಿಟ್ಟಿದೆ. ಇದರಲ್ಲಿ ವಿಡಿಯೊ ವೀಕ್ಷಣೆಯ ಪಾಲು ಅತ್ಯಧಿಕ. ಟಿವಿಗಳ ಜತೆಗೆ ಬರುವ ರಿಮೋಟ್ ಕಂಟ್ರೋಲರ್‌ನಲ್ಲಿ ಒಟಿಟಿ (ಯೂಟ್ಯೂಬ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್) ಬಟನ್‌ಗಳು ಕೂಡಾ ಬಂದು ಕೂರಲಾರಂಭಿಸಿವೆ. ಮೊಬೈಲ್ ಇಂಟರ್ನೆಟ್ ಸೇವೆಗಳ ಜೊತೆಗೆ ಪ್ಯಾಕೇಜ್ ರೂಪದಲ್ಲಿ ಒಟಿಟಿ ಚಂದಾದಾರಿಕೆಯೂ ದೊರೆಯಲಾರಂಭಿಸಿದೆ.
ಈ ಬೆಳವಣಿಗೆಗಳೊಂದಿಗೆ, ಒಟಿಟಿ ಕಂಪನಿಗಳು ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು, ಒರಿಜಿನಲ್ ಕಂಟೆಂಟ್ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಟಿವಿ ಚಾನೆಲ್‌ಗಳು, ಮೊಬೈಲ್ ಸೇವಾ ಕಂಪೆನಿಗಳು ತಮ್ಮದೇ ಆದ ಒಟಿಟಿ ವೇದಿಕೆಗಳನ್ನು ರೂಪಿಸಿಕೊಳ್ಳುತ್ತಿವೆ. ಸರ್ಕಾರವೂ ಟಿವಿ ಉದ್ಯಮದಲ್ಲಿ ಶೇ.100ರಷ್ಟು ವಿದೇಶೀ ನೇರ ಹೂಡಿಕೆಗೆ ಅನುವು ಮಾಡಿಕೊಟ್ಟಿದೆ.
ಈಗ ನಮ್ಮ ದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಒಟಿಟಿ ಸೇವಾದಾರರಿದ್ದಾರೆ. ಇಲ್ಲೂ ಪೈಪೋಟಿಯಿದೆ. ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಮೂಲಕ ವಿದೇಶೀ ಕಂಪೆನಿಗಳು ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಲೇ ಇವೆ. ಜೇಬು ಗಟ್ಟಿಯಿರುವ, ವಿನೂತನ ಆವಿಷ್ಕಾರದ ಮನಸ್ಸುಳ್ಳ ಒಟಿಟಿ ಸೇವಾದಾರರು ಪೈಪೋಟಿ ಯುಗದಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ. ಕದಡಿದ ಕೊಳವು ಆಗ ತಿಳಿಯಾಗಿ, ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲು ನಿರ್ದಿಷ್ಟತೆಯೊಂದು ಕಂಡುಬರುತ್ತದೆ; ಗ್ರಾಹಕನ ಇಷ್ಟವೇ ಮೇಲುಗೈ ಸಾಧಿಸುತ್ತದೆ. ಅಷ್ಟರವರೆಗೆ ಹ್ಯಾಪೀ ವೀಕ್ಷಣೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.