ADVERTISEMENT

ಪ್ರಧಾನಿಯಿಂದ ದೇಶದ ಮೊದಲ 5ಜಿ ಕರೆ: ಮೆಟ್ರೊ ಕಾರ್ಮಿಕರೊಂದಿಗೆ ಸಂವಹನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2022, 10:56 IST
Last Updated 3 ಅಕ್ಟೋಬರ್ 2022, 10:56 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ನವದೆಹಲಿ: ದೇಶವೀಗ 4ಜಿ ತಂತ್ರಜ್ಞಾನದಿಂದ 5ಜಿಗೆ ವರ್ಗಾಂತರಗೊಳ್ಳುತ್ತಿದೆ. ಈಗಾಗಲೇ ವೋಡಾಫೋನ್‌ ಐಡಿಯಾ(ವಿಐ) 5ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಈ ವ್ಯವಸ್ಥೆ ಬಳಸಿ ಮೊದಲು ಕರೆ ಮಾಡಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶನಿವಾರದ ದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿಗೆ ಚಾಲನೆ ನೀಡಿದ ಮೋದಿ, ದೆಹಲಿಯ ಮೆಟ್ರೊ ಸುರಂಗ ನಿರ್ಮಾಣ ಕಾರ್ಮಿಕರೊಂದಿಗೆ 5ಜಿ ತಂತ್ರಜ್ಞಾನ ಬಳಸಿ ಸಂವಹನ ನಡೆಸಿದ್ದಾರೆ. ‘ವಿಐ 5ಜಿ ಡಿಜಿಟಲ್‌ ಟ್ವಿನ್‌’ತಂತ್ರಜ್ಞಾನ ಬಳಸಿ ಮೋದಿ ಅಲ್ಲಿನ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ.

ವಿಐ 5ಜಿ ತಂತ್ರಜ್ಞಾನದಲ್ಲಿ ದೆಹಲಿ ಮೆಟ್ರೊ ಟನಲ್‌ನಲ್ಲಿ 3ಡಿ ಡಿಜಿಟಲ್‌ ಟ್ವಿನ್‌ ಸೃಷ್ಟಿಸಲಾಗಿದೆ. ಇದರಿಂದಾಗಿ ಪ್ರಧಾನಿ ಮೋದಿ ಸ್ಥಳದ ನೈಜ ಕ್ಷಣದ ಚಿತ್ರಣಗಳನ್ನು ಪರಾಮರ್ಶಿಸಲು ಸಾಧ್ಯವಾಯಿತು. ಕೆಲಸದ ಸ್ಥಳದ ಸ್ಥಿತಿ ಮತ್ತು ಕಾರ್ಮಿಕರ ಯೋಗಕ್ಷೇಮಕ್ಕೆ ತೆಗೆದುಕೊಳ್ಳಲಾದ ಕ್ರಮಗಳನ್ನು ಮೋದಿ ಪರಿವೀಕ್ಷಣೆ ನಡೆಸಿದರು‌ ಎನ್ನಲಾಗಿದೆ.

ಉತ್ಕೃಷ್ಟ ವೇಗದ 5ಜಿ ನೆಟ್‌ವರ್ಕ್‌ನೊಂದಿಗೆ ಸುರಂಗ, ಅಂಡರ್‌ಗ್ರೌಂಡ್‌ ಕಾಮಗಾರಿ, ಗಣಿಯಂತಹ ಸಂಕೀರ್ಣ ಪ್ರದೇಶಗಳಲ್ಲಿ ಕೆಲಸಗಾರರ ಸುರಕ್ಷತೆಗೆ ತಂತ್ರಜ್ಞಾನ ಬಳಕೆಯನ್ನು ವಿಐ 2022ರ ಭಾರತೀಯ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಿತ್ತು. ಆಸ್ಪತ್ರೆಯಲ್ಲಿ ನೈಜ ಸಮಯದ ಶಸ್ತ್ರಚಿಕಿತ್ಸೆಯಿಂದ ಹಿಡಿದು 5ಜಿ ತಂತ್ರಜ್ಞಾನದ ಹಲವಾರು ಉಪಯುಕ್ತತೆಗಳ ಪ್ರಾತ್ಯಕ್ಷತೆಯನ್ನು ಕಂಪನಿ ನಡೆಸಿತ್ತು.

ADVERTISEMENT

‘5ಜಿ ಸೇವೆಯನ್ನು ದೇಶದಲ್ಲಿ ನೀಡುವ ನಿಟ್ಟಿನಲ್ಲಿ ಮೊಬೈಲ್‌ ಸೇವಾ ಪ್ರವರ್ತಕ ವಿಐ ಮೊದಲ ಹೆಜ್ಜೆ ಇಟ್ಟಿದೆ. ಈ ಮೂಲಕ ದೇಶದ ಹೊಸ ತಲೆಮಾರಿನ ತಂತ್ರಜ್ಞಾನ ವರ್ಗಾಂತರದಲ್ಲಿ ಮಹತ್ತರ ಮೈಲುಗಲ್ಲು ಸೃಷ್ಟಿಸಲಿದೆ. 1.3 ಶತಕೋಟಿ ಭಾರತೀಯರಿಗೆ ಈ ಸೇವೆ ಲಭ್ಯವಾಗಲಿದೆ’ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್‌ ಮಂಗಲಂ ಬಿರ್ಲಾ ಹೇಳಿದ್ದಾರೆ.

ಅಟ್‌ಹಾನೆಟ್‌ ಮತ್ತ ಟಾಟಾ ಕಮ್ಯೂನಿಕೇಷನ್‌(ಟಿಸಿಟಿಎಸ್‌) ಸಹಭಾಗಿತ್ವದಲ್ಲಿ ವಿಐ ದೆಹಲಿಯ ದ್ವಾರಕ ವಲಯದ ದೆಹಲಿ ಮೆಟ್ರೊದಲ್ಲಿ ಡಿಜಿಟಲ್‌ ಟ್ವಿನ್‌ ಸೃಷ್ಟಿಸಿದೆ. ವಿಐ ತಂತ್ರಜ್ಞಾನ ಕಂಪನಿಗಳು ಮತ್ತು ಡೊಮೇನ್‌ ನಾಯಕರೊಂದಿಗಿನ ಪಾಲುದಾರಿಕೆಯಲ್ಲಿ 5ಜಿ ಬಳಕೆ ವಲಯ ಅಭಿವೃದ್ಧಿಗೊಳಿಸಿದೆ.

ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ. ಖಾಸಗಿ ನೆಟ್‌ವರ್ಕ್‌ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿ ಮಾಡಿದೆ. ಆಯ್ದ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆಗೆ ಚಾಲನೆ ನೀಡಲಾಗಿದ್ದು, ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.