ಭಾರತ-ಚೀನಾ ಗಡಿ ಬಿಕ್ಕಟ್ಟು ಮತ್ತು ಚೀನಾದಿಂದ ಬಂದಿರುವ ಕೊರೊನಾ ವೈರಸ್ ಹಾವಳಿ - ಈ ಎರಡು ವಿಷಯಗಳು ಭಾರತೀಯರ ಮನಸ್ಸಿನಲ್ಲಿ ತಮ್ಮ ದೇಶದ ಮೇಲಿನ ಪ್ರೀತಿಯನ್ನು ಬಡಿದೆಬ್ಬಿಸಿದೆ. ಈ ಕಾರಣಕ್ಕಾಗಿ, ಚೀನಾದ ಯಾವುದೇ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಕೂಗು ಒಂದು ಕಡೆಯಿಂದ ಜೋರಾಗಿ ಕೇಳಿಸುತ್ತಿದ್ದರೆ, ಮತ್ತೊಂದೆಡೆಯಿಂದ ನಮ್ಮ ಮೊಬೈಲ್‌ನಲ್ಲಿರುವ ಚೀನಾ ಆ್ಯಪ್‌ಗಳನ್ನು ತೆಗೆದುಹಾಕಿ, ಚೀನಾಕ್ಕೆ ಪಾಠ ಕಲಿಸೋಣ ಎಂಬರ್ಥದ ಅಭಿಯಾನವೂ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ, ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿನ ಚೀನಾ ಆ್ಯಪ್‌ಗಳನ್ನು ಗುರುತಿಸಿ, ಅದನ್ನು ಅಳಿಸಲು ಸಹಾಯ ಮಾಡುವ 'ರಿಮೂವ್ ಚೀನಾ ಆ್ಯಪ್ಸ್' ಹೆಸರಿನ ಆ್ಯಪ್ ಈಗ ವೈರಲ್ ಆಗಿದೆ. ಮೇ 17ರಂದು ಬಿಡುಗಡೆಯಾಗಿದ್ದ ಈ ಆ್ಯಪ್, ಹತ್ತೇ ದಿನಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ. ಇದಕ್ಕೆ ಬಳಕೆದಾರರಿಂದ ಉತ್ತಮ ರೇಟಿಂಗ್ ಸಿಕ್ಕಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ 'Remove China Apps' ಎಂಬ ಆ್ಯಪ್ ಹುಡುಕಿ ಅಳವಡಿಸಿಕೊಂಡರೆ, ಅದು ನಮ್ಮ ಮೊಬೈಲ್ ಫೋನ್‌ನಲ್ಲಿರುವ ಚೀನಾ ಮೂಲದ ಎಲ್ಲ ಆ್ಯಪ್‌ಗಳನ್ನೂ ಗುರುತಿಸಿ ಪಟ್ಟಿ ಮಾಡುತ್ತದೆ. ನಮಗೆ ಬೇಡವೆಂದಾದರೆ, ಅದನ್ನು ಅಲ್ಲಿಂದಲೇ ಅನ್-ಇನ್‌ಸ್ಟಾಲ್ ಕೂಡ ಮಾಡಬಹುದು, ಬೇಕಿದ್ದರೆ ಉಳಿಸಿಕೊಳ್ಳಬಹುದು.
ಜೈಪುರ ಮೂಲದ ಒನ್ ಟಚ್ ಆ್ಯಪ್ ಲ್ಯಾಬ್ಸ್ ಎಂಬ ಕಂಪನಿಯು ಇದನ್ನು ತಯಾರಿಸಿದ್ದು, 'ನಿರ್ದಿಷ್ಟ ದೇಶದ ಆ್ಯಪ್ ಯಾವುದು ಎಂದು ಗುರುತಿಸಲು ಮಾತ್ರ' ಎಂದು ಕಂಪನಿಯು ಹೇಳಿದೆ. ಆದರೆ, ಬಳಕೆದಾರರು ಪ್ಲೇ ಸ್ಟೋರ್ ಮತ್ತಿತರ ಕಡೆಯಿಂದ ಇನ್‌ಸ್ಟಾಲ್ ಮಾಡಿಕೊಂಡ ಆ್ಯಪ್‌ಗಳನ್ನಷ್ಟೇ ಇದು ಗುರುತಿಸುತ್ತದೆಯೇ ಹೊರತು, ಚೀನಾ ಮೊಬೈಲ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬರುವ ಆ್ಯಪ್‌ಗಳನ್ನು ಗುರುತಿಸುವುದಿಲ್ಲ.
ದೇಶದಲ್ಲಿ ಚೀನಾ-ವಿರೋಧಿ ಭಾವನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ಚೀನಾ ಮೂಲದ ಟಿಕ್-ಟಾಕ್ ಎಂಬ ವಿಡಿಯೊ ಶೇರಿಂಗ್ ಆ್ಯಪ್ ಅನ್ನು ಜನರು ಭಾರಿ ಪ್ರಮಾಣದಲ್ಲಿ ಅನ್-ಇನ್‌ಸ್ಟಾಲ್ ಮಾಡಿಕೊಂಡಿದ್ದರು ಮತ್ತು ಪ್ಲೇ ಸ್ಟೋರ್‌ನಲ್ಲಿ ಅದರ ರೇಟಿಂಗ್ ಕೂಡ 1.8ಕ್ಕೆ ಇಳಿದಿತ್ತು. ಆದರೆ ಕೆಲವೇ ದಿನಗಳಲ್ಲಿ ಮರಳಿ ಅದರ ರೇಟಿಂಗ್ 4.4ಕ್ಕೆ ಏರಿಕೆಯಾಗಿರುವುದು ಅಚ್ಚರಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.