ದುರ್ಗಮ ಪ್ರದೇಶಗಳಲ್ಲಿ ಸೆಲ್ಯುಲಾರ್ ನೆಟ್‌ವರ್ಕ್‌ನ ಟವರ್‌ಗಳಿರುವುದಿಲ್ಲ, ಅಳವಡಿಸುವುದೂ ಕಷ್ಟ ಮತ್ತು ದುಬಾರಿ. ಇಂಥ ಸಂದರ್ಭಗಳಲ್ಲಿ ಸಂವಹನಕ್ಕೆ ನೆರವಾಗುವುದು ಉಪಗ್ರಹಗಳು.
ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳಲ್ಲಿ ಸಿಮ್ ಕಾರ್ಡ್ ಸಂಪರ್ಕ (ಸೆಲ್ಯುಲಾರ್ ನೆಟ್‌ವರ್ಕ್) ಇಲ್ಲದಿದ್ದರೂ ಕಿರು ಸಂದೇಶಗಳನ್ನು (ಎಸ್ಎಂಎಸ್) ಕಳುಹಿಸುವಂತಾದರೆ ಹೇಗಿರುತ್ತದೆ? ಸಾಧ್ಯವಿಲ್ಲ ಎಂದಿರಾ? ಟೆಲಿಕಾಂ ಸೇವಾ ಕ್ಷೇತ್ರದಲ್ಲಿ ಖಾಸಗಿಯವರಿಗೆ ಪೈಪೋಟಿ ನೀಡಿ, ಗತವೈಭವಕ್ಕೆ ಮರಳಲು ಟೊಂಕ ಕಟ್ಟಿ ನಿಂತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ‘ಬಿಎಸ್ಎನ್ಎಲ್’ ಈ ಬಗ್ಗೆ ಹೊಸ ಆಶಾವಾದವನ್ನು ಮೂಡಿಸಿದೆ. ‘ಡೈರೆಕ್ಟ್ ಟು ಡಿವೈಸ್’ (ನೇರವಾಗಿ ನಿಮ್ಮ ಸಾಧನಕ್ಕೆ) ಎಂಬ ಉಪಗ್ರಹ ಆಧಾರಿತ ತಂತ್ರಜ್ಞಾನದ ಸಾಧ್ಯತೆಯ ಬಗ್ಗೆ ಬಿಎಸ್ಎನ್ಎಲ್ ಇತ್ತೀಚೆಗೆ ಮಾಡಿರುವ ಘೋಷಣೆಯು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
‘ಡೈರೆಕ್ಟ್ ಟು ಡಿವೈಸ್’ (ಡಿ2ಡಿ) ಬಗ್ಗೆ ಸರಳವಾಗಿ ಹೇಳುವುದಿದ್ದರೆ, ಇಂಟರ್ನೆಟ್ ಅಥವಾ ಸೆಲ್ಯುಲಾರ್ ಸಂಪರ್ಕವಿಲ್ಲದೆಯೇ ಉಪಗ್ರಹದ ನೆರವಿನಿಂದ ಎರಡು ಸಾಧನಗಳ ಮಧ್ಯೆ ನೇರ ಸಂವಹನವನ್ನು (ಸಂದೇಶ, ಕರೆ, ಇಂಟರ್‌ನೆಟ್ ಇತ್ಯಾದಿ) ಸಾಧಿಸುವುದು. ಇದುವರೆಗೆ ಈ ವ್ಯವಸ್ಥೆಯನ್ನು ರಕ್ಷಣಾಪಡೆಗಳು ಮತ್ತು ಕೆಲವು ಪರವಾನಗಿ ಪಡೆದಿರುವ ಸಂಸ್ಥೆಗಳು ಮಾತ್ರ ಬಳಸುತ್ತಿದ್ದವು. ಇದಕ್ಕೆ ಪ್ರತ್ಯೇಕ ಸೆಟಲೈಟ್ ಫೋನ್ ಬೇಕಾಗುತ್ತಿತ್ತು. ಬೆಟ್ಟ-ಗುಡ್ಡಗಳ ನಡುವೆ, ದಟ್ಟ ಕಾನನದಲ್ಲಿ, ಸಮುದ್ರದ ಮಧ್ಯೆ, ಹಿಮಾಚ್ಛಾದಿತ ಪರ್ವತ ಪ್ರದೇಶಗಳೇ ಮುಂತಾದ, ಸೆಲ್ಯುಲಾರ್ ನೆಟ್‌ವರ್ಕ್ ತಲುಪದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ಪ್ರಾಕೃತಿಕ ವಿಕೋಪಗಳಂತಹ ಸಂದರ್ಭದಲ್ಲಿ ಸಂವಹನಕ್ಕೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿತ್ತು. ಇನ್ನೀಗ ಈ ಸೇವೆಯು ಸಾರ್ವಜನಿಕರಿಗೂ ದೊರೆಯಲಿದೆ ಎಂಬ ಮಾಹಿತಿ ದೊರೆತದ್ದು, ಕಳೆದ ತಿಂಗಳು ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಹೆಚ್ಚು ಸದ್ದು ಮಾಡದೇ ನಡೆಸಿದ ಕಾರ್ಯಕ್ರಮವೊಂದರಲ್ಲಿ.
ದೇಶದಲ್ಲಿ ಮೊದಲ ಬಾರಿ 3ಜಿ ಸೇವೆ ಆರಂಭಿಸಿದ ಬಳಿಕ ನಾನಾ ಕಾರಣಗಳಿಂದಾಗಿ ಸೊರಗಿದ್ದ ಬಿಎಸ್ಎನ್ಎಲ್, ಇತ್ತೀಚೆಗಷ್ಟೇ 4ಜಿ ಸೇವೆಯನ್ನು ನೀಡಲು ಆರಂಭಿಸಿದ್ದು, ಕೆಲವೇ ತಿಂಗಳಲ್ಲಿ 5ಜಿ ಸೇವೆಯನ್ನೂ ಆರಂಭಿಸಿ, ಏರ್‌ಟೆಲ್, ಜಿಯೋ, ವೊಡಾಫೋನ್-ಐಡಿಯಾ (ವಿ) ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಇದರ ಫಲವಾಗಿಯೇ, 5ಜಿ ಸಿದ್ಧವಾಗಿರುವ ಸಿಮ್ ಕಾರ್ಡ್‌ಗಳನ್ನು ವಿತರಿಸಲು ಈಗಾಗಲೇ ಆರಂಭಿಸಿದ್ದು, 4ಜಿ ಸೇವೆಯೂ ಅಲ್ಲಲ್ಲಿ ದೊರೆಯಲಾರಂಭಿಸಿದೆ. ಇದರ ಮಧ್ಯೆ ಡಿ2ಡಿ ಸೇವೆಯ ಘೋಷಣೆ. ಇಲಾನ್ ಮಸ್ಕ್ ಎಂಬ ಅಮೆರಿಕದ ಬಿಲಿಯಾಧಿಪತಿ, ತಂತ್ರಜ್ಞಾನ ದಿಗ್ಗಜ ಈಗಾಗಲೇ ತನ್ನ ಸ್ಟಾರ್ ಲಿಂಕ್ ಹೆಸರಿನ ಉಪಗ್ರಹ ಆಧಾರಿತ ಸೇವೆಯನ್ನು ಭಾರತದಲ್ಲಿಯೂ ಒದಗಿಸುವುದಕ್ಕೆ ಅನುಮತಿಯನ್ನು ಕೋರಿದ್ದಾರೆ. ಅವರಿಗಿನ್ನೂ ಅನುಮತಿ ಸಿಕ್ಕಿಲ್ಲ. ಅಷ್ಟರಲ್ಲೇ ಬಿಎಸ್ಎನ್ಎಲ್ ಒಂದು ಹೆಜ್ಜೆ ಮುಂದೆ ಹೋಗಿದೆ.
ದುರ್ಗಮ ಪ್ರದೇಶಗಳಲ್ಲಿ ಸೆಲ್ಯುಲಾರ್ ನೆಟ್‌ವರ್ಕ್‌ನ ಟವರ್‌ಗಳಿರುವುದಿಲ್ಲ, ಅಳವಡಿಸುವುದೂ ಕಷ್ಟ ಮತ್ತು ದುಬಾರಿ. ಇಂಥ ಸಂದರ್ಭಗಳಲ್ಲಿ ಸಂವಹನಕ್ಕೆ ನೆರವಾಗುವುದು ಉಪಗ್ರಹಗಳು. ಸಂದೇಶವನ್ನು ಒಂದು ಸಾಧನದಿಂದ ಬಾಹ್ಯಾಕಾಶದಲ್ಲಿ ತಿರುಗಾಡುತ್ತಿರುವ ಉಪಗ್ರಹದ ಮೂಲಕವಾಗಿ ಮತ್ತೊಂದು ಸಾಧನಕ್ಕೆ ಕಳುಹಿಸುವುದೇ ಡೈರೆಕ್ಟ್ ಟು ಡಿವೈಸ್ ವ್ಯವಸ್ಥೆ. ಇದಕ್ಕೆ ಬಿಎಸ್ಎನ್ಎಲ್ ಜೊತೆಗೆ ಅಮೆರಿಕದ ಸ್ಯಾಟ್‌ಕಾಂ (ಉಪಗ್ರಹ ಆಧಾರಿತ ಸಂವಹನ) ಸಂಸ್ಥೆಯಾಗಿರುವ ‘ವಯಾಸ್ಯಾಟ್’ ಸಹಯೋಗ ನೀಡುತ್ತಿದೆ.
ಇದುವರೆಗೆ ಪ್ರತ್ಯೇಕ ಸಾಧನ ಬೇಕಾಗಿದ್ದ ಈ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ನಮ್ಮಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲೇ ಕೆಲಸ ಮಾಡಬಲ್ಲದು ಎಂಬುದೇ ಈಗ ಕುತೂಹಲಕ್ಕೆ ಕಾರಣವಾಗಿರುವುದು. ಸ್ಯಾಟಲೈಟ್ ಹಾಗೂ ಸೆಲ್ಯುಲಾರ್ ನೆಟ್‌ವರ್ಕ್‌ಗಳು ಪರಸ್ಪರ ಮಾತನಾಡಿಕೊಳ್ಳುತ್ತವೆ. ಉಪಗ್ರಹಗಳೇ ಸೆಲ್ ಟವರ್‌ನಂತೆ ಕೆಲಸ ಮಾಡುತ್ತದೆ. ಸಾಮಾನ್ಯ ಸಂದೇಶ ರವಾನೆ, ಕರೆ ಮತ್ತು ಇಂಟರ್ನೆಟ್ ಬ್ರೌಸಿಂಗ್ ಕೂಡ ಇದರಿಂದ ಸಾಧ್ಯವಾಗಲಿದೆ. ವಿಮಾನಗಳಲ್ಲಿ, ಹಡಗಿನಲ್ಲಿ ಮತ್ತು ದುರ್ಗಮ ಪ್ರದೇಶಗಳಲ್ಲಿ ಇದೇ ತಂತ್ರಜ್ಞಾನವು ಬಳಕೆಯಾಗುತ್ತದೆ.
ಆ್ಯಪಲ್‌ನ ಐಫೋನ್ ಹಾಗೂ ಗೂಗಲ್‌ನ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಉಪಗ್ರಹ ಆಧಾರಿತ ಸಂದೇಶ ಸೇವೆಯು ಈಗಾಗಲೇ ಅಮೆರಿಕ ಮತ್ತು ಕೆನಡಾದಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಈ ಸೇವೆಗಳಿನ್ನೂ ಸಾರ್ವಜನಿಕರಿಗೆ ಲಭ್ಯವಿಲ್ಲ. ಕಳೆದ ತಿಂಗಳು ಬಿಎಸ್ಎನ್ಎಲ್ ಇದರ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಭಾರತದಲ್ಲಿ ಹೊಸ ಸಾಧ್ಯತೆಗೆ ನಾಂದಿ ಹಾಡಿದೆ.
ಈ ಸೇವೆಗೆ ಮೊಬೈಲ್ ಸಾಧನಗಳು ಕೂಡ ಸೂಕ್ತವಾದ ಹಾರ್ಡ್‌ವೇರ್/ಸಾಫ್ಟ್‌ವೇರ್ ಹೊಂದಿರಬೇಕಾಗುತ್ತದೆ. ಸದ್ಯಕ್ಕೆ ಐಒಎಸ್ 18ರಲ್ಲಿ ಕಾರ್ಯಾಚರಿಸುವ ಐಫೋನ್ 14ರ ನಂತರದ ಸಾಧನಗಳು, ಗೂಗಲ್‌ನ ಪಿಕ್ಸೆಲ್ ಹಾಗೂ ಮೋಟೊರೊಲದ ಅತ್ಯಾಧುನಿಕ ಫೋನ್‌ನಲ್ಲಿ ಈ ತಂತ್ರಾಂಶಗಳಿವೆ. ಮುಂಬರುವ ಹೊಸ ಆ್ಯಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಈ ಸೇವೆಗೆ ಅವಕಾಶ ನೀಡುವ ಬಗ್ಗೆ ಗೂಗಲ್ ಈಗಾಗಲೇ ಸುಳಿವು ನೀಡಿದೆ.
ಸಂಪರ್ಕ ಸುಲಭವಿಲ್ಲದ ದಟ್ಟ ಅರಣ್ಯ, ಕಡಿದಾದ ಬೆಟ್ಟ ಗುಡ್ಡ, ದುರ್ಗಮ ಪ್ರದೇಶದಲ್ಲಿರುವ ಹಳ್ಳಿಗಳು, ಸಮುದ್ರ ಮುಂತಾದೆಡೆ ಮೊದಲು ಈ ಸೇವೆ ಆರಂಭವಾಗಲಿದ್ದು, ನಿಧಾನವಾಗಿ ಇದೊಂದು ಸಂವಹನ ವ್ಯವಸ್ಥೆಯ ಪರ್ಯಾಯ ರೂಪವಾಗಿ ಬದಲಾಗುವ ನಿರೀಕ್ಷೆಯಿದೆ. ಇದಕ್ಕಾಗಿಯೇ ಲ್ಯಾಂಡಿಂಗ್ ಸ್ಟೇಷನ್‌ಗಳೆಂಬ ಅತ್ಯಾಧುನಿಕ ಸಂವಹನ ವರ್ಗಾವಣಾ ಕೇಂದ್ರಗಳನ್ನು ವಿವಿಧೆಡೆ ಸ್ಥಾಪಿಸಬೇಕಾಗುತ್ತದೆ.
ಅಮೆರಿಕದಂತಹ ದೇಶಗಳಲ್ಲಿ ವಯಾಸ್ಯಾಟ್ ಮೂಲಕ ಈಗಾಗಲೇ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳನ್ನೂ ನೀಡಲಾಗುತ್ತಿದೆ. ಸ್ಯಾಟಲೈಟ್ ಮೆಸೇಜಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಇಲಾನ್ ಮಸ್ಕ್ ಈಗಾಗಲೇ ಸ್ಟಾರ್ ಲಿಂಕ್ ಮೂಲಕ ಸಾಕಷ್ಟು ಉಪಗ್ರಹಗಳ ಮೂಲಕ ವಿದೇಶಗಳಲ್ಲಿ ಈ ಸೇವೆ ಒದಗಿಸುತ್ತಿದ್ದಾರೆ. ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಮುಂತಾದ ದೇಶೀ ಸಂವಹನ ಸಂಸ್ಥೆಗಳಿಂದ ಸ್ಟಾರ್‌ಲಿಂಕ್‌ಗೆ ಪ್ರತಿರೋಧ ವ್ಯಕ್ತವಾಗಿದ್ದು, ಅವು ಕೂಡ ಉಪಗ್ರಹ ಆಧಾರಿತ ಸಂವಹನ ಸೇವೆಯನ್ನು ಆರಂಭಿಸುವ ಸಿದ್ಧತೆಯಲ್ಲಿವೆ.
ಬಹುತೇಕ ಮುಂದಿನ ವರ್ಷದೊಳಗೆ ‘ಸ್ಯಾಟಲೈಟ್ ಮೋಡ್’ಗೆ ಬದಲಿಸಿಕೊಂಡು ಸಂವಹನ ನಡೆಸುವ ಕುರಿತು ಸ್ಪಷ್ಟ ಚಿತ್ರಣವಂತೂ ದೊರೆಯಲಿದೆ. ಮುಂದಕ್ಕೆ ಮೊಬೈಲ್ ಸಾಧನಗಳು, ಸ್ಮಾರ್ಟ್ ವಾಚುಗಳು, ಕಾರುಗಳು ಮತ್ತು ಅತ್ಯಾಧುನಿಕ ಸ್ಮಾರ್ಟ್ ಸಾಧನಗಳು ಕೂಡ ಉಪಗ್ರಹದ ಮೂಲಕ ಬೆಸೆದುಕೊಂಡಲ್ಲಿ, ಇದು ಸಂವಹನ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.