ಬೆಂಗಳೂರು: ಚಾಟ್ ಜಿಪಿಟಿ ಎಂಬ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸೃಷ್ಟಿ ಮಾಡಿ ಟೆಕ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಓಪನ್‌ಎಐ ಕಂಪನಿಯ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಆ ಕಂಪನಿಯಿಂದ ಮೊನ್ನೆಯಷ್ಟೇ ವಜಾ ಮಾಡಲಾಗಿತ್ತು.
ಇದೀಗ ಸ್ಯಾಮ್ ಆಲ್ಟ್‌ಮನ್ ಅವರನ್ನು ಟೆಕ್ ದೈತ್ಯ ಮೈಕ್ರೊಸಾಫ್ಟ್ ಕಂಪನಿಗೆ ಸೇರಿಸಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಳ್ಳ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
‘ನಮ್ಮ ಸುಧಾರಿತ ಎಐ ಸಂಶೋಧನಾ ತಂಡವನ್ನು ಮುನ್ನಡೆಸಲು ಸ್ಯಾಮ್ ಆಲ್ಟ್‌ಮನ್ ಮತ್ತು ಓಪನ್‌ಎಐ ಸಹಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್ ಮೈಕ್ರೋಸಾಫ್ಟ್‌ಗೆ ಸೇರುತ್ತಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಯಶಸ್ಸಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಸತ್ಯ ನಾದೆಳ್ಳ X ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಸ್ಯಾಮ್ ಅವರನ್ನು ಸಿಇಒ ಸ್ಥಾನದಿಂದ ಕಿತ್ತುಹಾಕಿರುವುದು ತಂತ್ರಜ್ಞಾನ ಯುಗದಲ್ಲಿ ಅಚ್ಚರಿ ಮೂಡಿಸಿದೆ. ಮೈಕ್ರೊಸಾಫ್ಟ್‌ನಲ್ಲಿ ಸ್ಯಾಮ್ ಆಲ್ಟ್‌ಮನ್ ಅವರ ಹುದ್ದೆ ಏನಾಗಿರಲಿದೆ ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ. ಮೈಕ್ರೊಸಾಫ್ಟ್ ಕೂಡ ಇತ್ತೀಚಿಗೆ ಒಪನ್‌ಎಐ ತಂತ್ರಜ್ಞಾನದಲ್ಲಿ ಕೆಲಸವನ್ನು ಕೇಂದ್ರಿಕರಿಸಿದೆ.
ಸತ್ಯಾ ನಾದೆಲ್ಲಾ ಅವರ ಟ್ವೀಟ್ ಅನ್ನು ಹಂಚಿಕೊಂಡು ಗುರಿ ಮುಂದುವರೆಯುತ್ತದೆ ಎಂದು ಸ್ಯಾಮ್ X ನಲ್ಲಿ ಬರೆದುಕೊಂಡಿದ್ದಾರೆ.
ವರ್ಷದ ಹಿಂದೆ ಚಾಟ್ ಜಿಪಿಟಿ ಬಿಡುಗಡೆ ಮಾಡುವ ಮೂಲಕ ತಂತ್ರಜ್ಞಾನ ಲೋಕದಲ್ಲಿ ಕೃತಕ ಬುದ್ಧಿಮತ್ತೆಯ ಕಡೆಗೆ ಸ್ಯಾಮ್ ಆಲ್ಟ್‌ಮನ್ ಹೆಚ್ಚಿನ ಆಸಕ್ತಿ ಮೂಡಿಸಿದ್ದರು.
ಆಡಳಿತ ಮಂಡಳಿಯೊಂದಿಗೆ ಅವರು ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಆಡಳಿತ ಮಂಡಳಿಯ ಹೊಣೆಗಾರಿಕೆಗಳನ್ನು ನಿಭಾಯಿಸಲು ಅಡ್ಡಿಪಡಿಸುತ್ತಿದ್ದರು. ಅವರ ಮೇಲೆ ಕಂಪನಿಯು ವಿಶ್ವಾಸ ಕಳೆದುಕೊಂಡಿದೆ ಎನ್ನುವ ಕಾರಣಗಳನ್ನು ಆಡಳಿತ ಮಂಡಳಿ ನೀಡಿತ್ತು.
ಓಪನ್‌ಎಐ ಕಂಪನಿಯ ಸಿಇಒ ಸ್ಥಾನಕ್ಕೆ ಮಧ್ಯಂತರ ಅವಧಿಗೆ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದ (ಸಿಟಿಒ) ಆಗಿದ್ದ ಮಿರಾ ಮುರಾಟಿ ಅವರನ್ನು ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.