ADVERTISEMENT

ತಂತ್ರಜ್ಞಾನವೂ ಸೈನ್ಸ್‌ ಫಿಕ್ಷನ್ನೂ...

ಶರತ್ ಭಟ್ಟ ಸೇರಾಜೆ
Published 14 ಜೂನ್ 2022, 22:30 IST
Last Updated 14 ಜೂನ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲೆ ಜೀವನವನ್ನು ಅನುಕರಿಸುತ್ತದೋ, ಜೀವನ ಕಲೆಯನ್ನು ಅನುಕರಿಸುತ್ತದೋ – ಎಂಬ ಪ್ರಶ್ನೆ ತಾತ್ತ್ವಿಕರನ್ನು ಮೊದಲಿನಿಂದಲೂ ಕಾಡುತ್ತಾ ಬಂದಿದೆ. ‘Life doesn't imitate art, it imitates bad television’ ಎಂದು ವುಡಿ ಅಲನ್ ತಮಾಷೆ ಮಾಡಿದ್ದೂ ಉಂಟು. ‘ಬಂಗಾರದ ಮನುಷ್ಯ’ ಸಿನೆಮಾ ನೋಡಿ, ಹಳ್ಳಿಗೆ ಹೋಗಿ ಕೃಷಿ ಮಾಡಿದವರಿದ್ದರಂತೆ. ‘ಮಂಕುತಿಮ್ಮನ ಕಗ್ಗ’ವನ್ನು ಓದಿ ಯಾರಾದರೂ ದುಷ್ಟರು ಒಳ್ಳೆಯವರಾಗಿ ಬದಲಾದರೋ ಹೇಳಬರುವಂತಿಲ್ಲ. ಇದೆಲ್ಲ ಏನೇ ಇದ್ದರೂ, ಸಾಹಿತ್ಯಕೃತಿಗಳು ನಿಜಜೀವನದ ಮೇಲೆ ಅಸಾಧಾರಣ ಪ್ರಭಾವ ಬೀರಿರುವುದು ಬಹುಶಃ ನೀವು ಊಹಿಸಿರಿದ ಪ್ರಕಾರವೊಂದರಲ್ಲಿ - ಅದು ‘ಸೈನ್ಸ್ ಫಿಕ್ಷನ್ ಅಂತ ಕರೆಸಿಕೊಳ್ಳುವ, ವೈಜ್ಞಾನಿಕ ಕಥೆ ಕಾದಂಬರಿಗಳ ಪ್ರಕಾರದಲ್ಲಿ.

‘Ralph 124C 41+’ ಎಂಬ ವಿಚಿತ್ರ ಹೆಸರಿನ ಕಾದಂಬರಿಯೊಂದು 1914ರಲ್ಲಿ ಬಂದಿತ್ತು, ಅದು ಅಷ್ಟೇನೂ ಜನಪ್ರೀತಿ ಗಳಿಸಿದ ಕೃತಿಯೇನೂ ಅಲ್ಲ; ದೂರ ದೂರ ಇರುವವರು ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು ಮಾಡುವ ವೀಡಿಯೊ ಕಾಲ್ ಈ ಕೃತಿಯಲ್ಲಿ ಆ ಕಾಲದಲ್ಲೇ ಬಂದಿದೆ, ಸ್ಕೈಪ್ ಅನ್ನೋ ಜೂಮ್ ಅನ್ನೋ ಕಂಡುಹಿಡಿದವರು ಇದನ್ನು ಓದಿರುವುದು ಅನುಮಾನ. ಆಶ್ಚರ್ಯ ಎಂದರೆ ರಾಡಾರ್ ತಂತ್ರಜ್ಞಾನ ಬಂದಮೇಲೆ ಅದು ಯಾವ ತಂತ್ರ ಬಳಸಿ ಕೆಲಸ ಮಾಡುತ್ತಿತ್ತೋ ಆ ತಂತ್ರವನ್ನು ಚೆನ್ನಾಗಿಯೇ ಹೋಲುವ ಯಂತ್ರವೊಂದೂ ಈ ಕಾದಂಬರಿಯಲ್ಲಿ 1914ರಲ್ಲಿಯೇ ಬಂದಿದೆ!

ಇವತ್ತು ಮನೆಮಾತಾಗಿರುವ ಡ್ರೋನುಗಳು 1965ರಲ್ಲಿಯೇ ಬಂದಿದ್ದ ‘ಡ್ಯೂನ್’ ಎಂಬ ಕಾದಂಬರಿಯಲ್ಲಿ ಬಂದಿದ್ದವು ಎಂದು ಸೈನ್ಸ್ ಫಿಕ್ಷನ್ ಪ್ರಿಯರು ಆಗಾಗ ಹೇಳುತ್ತಿರುತ್ತಾರೆ. ಜಾರ್ಜ್ ಆರ್ವೆಲ್‌ನ ‘1984’ ಕೃತಿಯಲ್ಲಿ ಸರ್ಕಾರ ಜನರ ಮೇಲೆ ನಿಗಾ ಇಡಲು ಬಳಸುವ ಸೆಕ್ಯೂರಿಟಿ ಕ್ಯಾಮೆರಾಗಳು ಹೆಚ್ಚು ಕಮ್ಮಿ ಈಗಿನ ಸಿಸಿಟಿವಿಗಳಂತೆಯೇ ಇವೆ ಎನ್ನುವುದು ಪುಸ್ತಕಪ್ರಿಯರಿಗೆ ಗೊತ್ತಿದ್ದೀತು. 1888ನೇ ಇಸವಿಯಲ್ಲಿ ಬಂದ ‘Looking Backward: 2000–1887’ ಎಂಬ ಕಾದಂಬರಿಯಲ್ಲಿ ಇವತ್ತಿನ ಎಟಿಎಂ ಕಾರ್ಡುಗಳನ್ನು ತಕ್ಕಮಟ್ಟಿಗೆ ಹೋಲುವ ಕ್ರೆಡಿಟ್ ಕಾರ್ಡ್ ಎಂಬ ಹೆಸರಿನ ಕಾರ್ಡುಗಳ ಕಲ್ಪನೆ ಮಾಡಲಾಗಿತ್ತು. ಈಗ ಯಂತ್ರಮಾನವಗಳಿಗೆ ಇರುವ ಹೆಸರಾದ ‘ರೋಬೋಟ್’ ಎಂಬುದೂ ಸೈನ್ಸ್ ಫಿಕ್ಷನ್ ಕೃತಿಯೊಂದರಲ್ಲಿ ಬಳಸಲ್ಪಟ್ಟ ಪದವೇ ಎಂಬ ವಿಚಾರ ಭಾಷಾತಜ್ಞರಲ್ಲದವರಿಗೂ ಗೊತ್ತಿದೆ. ‘ನೆಟ್ ಫ್ಲಿಕ್ಸ್‌’ ಅನ್ನು ಹೋಲುವ ಕಲ್ಪನೆ ‘Infinite Jest’ ಎಂಬ ಕಾದಂಬರಿಯಲ್ಲಿ ಬಂದಿದೆ. (ಸಿನೆಮಾವನ್ನು ಥಿಯೇಟರಿನ ಬದಲು ಟಿವಿಯಲ್ಲೇ ಯಾಕೆ ತೆರೆ ಕಾಣಿಸಬಾರದು ಎಂಬ ಚಿಂತನೆಯನ್ನು ರವಿಚಂದ್ರನ್ ಅವರೂ ನೆಟ್ ಫ್ಲಿಕ್ಸಿಗಿಂತ ಮೊದಲೇ ಮಾಡಿದ್ದರು ಅಂತ ನೆನಪು.)

ADVERTISEMENT

1898ರಲ್ಲಿ ಎಚ್.ಜಿ. ವೆಲ್ಸ್ ಬರೆದ ‘War of The Worlds’ ಎಂಬ ಕೃತಿ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಬಂದಿತ್ತಂತೆ (ಅದನ್ನು ಆಧರಿಸಿ ಸ್ಟೀವನ್ ಸ್ಪೀಲ್ಬರ್ಗ್‌ ಸೇರಿದಂತೆ ಹಲವರು ಚಲನಚಿತ್ರಗಳನ್ನು ಮಾಡಿದ್ದಾರೆ). ‘ಅದರಲ್ಲಿ ಬರುವ ಅಂತರಗ್ರಹಯಾನದ ಪರಿಕಲ್ಪನೆಯು ನನ್ನ ಕಲ್ಪನೆಯನ್ನು ಭರ್ಜರಿಯಾಗಿಯೇ ಕೆರಳಿಸಿತು’ ಎಂದು 1926ರಲ್ಲಿ ದ್ರವ–ಇಂಧನದ ರಾಕೆಟ್ಟು ಕಂಡುಹಿಡಿದ ರಾಬರ್ಟ್ ಗೊಡಾರ್ಡ್ ಹೇಳಿದ್ದಿತ್ತು. ಹಾಗೆಯೇ, ಹೆಲಿಕಾಪ್ಟರ್ ಕಂಡುಹಿಡಿದವರಿಗೆ ಸ್ಫೂರ್ತಿಯ ಸೆಲೆಯಾದದ್ದು ಜೂಲ್ಸ್ ವರ್ನ್ ಬರೆದ ‘Clipper of the Clouds’ ಎಂಬ ಕೃತಿ. ‘ಸ್ಟಾರ್ ಟ್ರೆಕ್’ ಎಂಬ ಟಿವಿ ಸರಣಿಯಲ್ಲಿ ಬಂದ, ಗಗನನೌಕೆಗಳಲ್ಲಿ ಸಂವಹನಕ್ಕೆ ಬಳಸುವ ಕಮ್ಯೂನಿಕೇಟರ್ ಎಂಬ ಯಂತ್ರ ಜಾತ್ರೆಯಲ್ಲಿ ಸಿಗಬಹುದಾದ ಮೊಬೈಲ್ ಫೋನ್ ಒಂದರಂತೆ ಕಾಣುತ್ತದೆ! ತನ್ನ ಫೋನಿನ ವಿನ್ಯಾಸಕ್ಕೆ ಇದುವೇ ಸ್ಫೂರ್ತಿ ಅಂತ ಮೊದಲ ಮೊಬೈಲ್ ವಿನ್ಯಾಸ ಮಾಡಿದ ಮಾರ್ಟಿನ್ ಕೂಪರ್ ಹೇಳಿದ್ದರು.

ಕಂಡು ಕೇಳರಿಯದ ಕ್ರಾಂತಿಯನ್ನು ಕಳೆದೆರಡು ದಶಕಗಳಲ್ಲಿ ಸೃಷ್ಟಿಸಿದ ಅಂತರ್ಜಾಲಕ್ಕೂ ಒಂದು ಮಟ್ಟದ ಪ್ರೇರಣೆ ಸೈನ್ಸ್ ಫಿಕ್ಷನ್‌ನಿಂದ ಸಿಕ್ಕಿತ್ತು. ಸೈನ್ಸ್ ಫಿಕ್ಷನ್‌ನ ದೈತ್ಯಪ್ರತಿಭೆಗಳಲ್ಲಿ ಒಬ್ಬರಾದ ಅರ್ಥರ್ ಸಿ ಕ್ಲಾರ್ಕ್ ಬರೆದಿದ್ದ ‘Dial F for Frankenstein’ನಲ್ಲಿ ಒಂದರ ಜೊತೆ ಒಂದು ಮಾತಾಡುವ ಗಣಕಯಂತ್ರಗಳಿದ್ದವು; ‘ಅದು ನನ್ನ ಮೇಲೆ ಪ್ರಭಾವ ಬೀರಿತು’ ಎಂದು ಅಂತರ್ಜಾಲದ ಮೂಲಪುರುಷ ಟಿಮ್ ಬರ್ನ್ಸ್ ಲೀ ಹೇಳಿದ್ದಾರೆ. ವಿಶೇಷ ಅಂದರೆ ಹಾಸ್ಯಸಾಹಿತ್ಯದ ದಿಗ್ಗಜ ಮಾರ್ಕ್ ಟ್ವೇನ್‌ ಎಷ್ಟೋ ಮೊದಲು ಬರೆದಿದ್ದ ಕಥೆಯೊಂದರಲ್ಲೂ ಜಾಗತಿಕ ಮಟ್ಟದ ಫೋನುಗಳ ಜಾಲ ಬಂದಿತ್ತು, ಅದರಲ್ಲಿನ ಕೆಲವು ವಿವರಗಳು ಇವತ್ತಿನ ಜಾಲತಾಣಗಳ ಬಗ್ಗೆ ಬರೆದ ಹಾಗೂ ಇವೆ ಎಂದು ಅದನ್ನೋದಿದವರು ಹೇಳುತ್ತಾರೆ.

ಇದೇ ಅರ್ಥರ್ ಸಿ ಕ್ಲಾರ್ಕ್ ಬರೆದಿರುವ ‘2001: An Odyssey in Space’ ಪ್ರಸಿದ್ಧವಾದ ಕೃತಿ, ಸ್ಟಾನ್ಲಿ ಕೂಬ್ರಿಕ್ ನಿರ್ದೇಶಿಸಿದ ಅದರ ಸಿನೆಮಾರೂಪವೂ ಅಷ್ಟೇ ಹೆಸರು ಮಾಡಿತು. ಭೂಮಿ ತಿರುಗಿದ ಹಾಗೇ ತಿರುಗಿ, ಅದರ ಜೊತೆ ಜೊತೆಗೇ ಹೆಜ್ಜೆ ಹಾಕುವುದರಿಂದ ಅವು ಒಂದೇ ಕಡೆ ನಿಶ್ಚಲವಾಗಿ ನಿಂತಿವೆಯೇನೋ ಅನ್ನಿಸುವ ಜಿಯೋ ಸ್ಟೇಷನರಿ ಉಪಗ್ರಹಗಳಿವೆಯಲ್ಲ, ಇವುಗಳ ಸರಿಯಾದ ವಿವರಣೆ ಈ ಕೃತಿಯಲ್ಲಿ ಬಂತು, ನಿಜವಾಗಿಯೂ ಈ ಪರಿಕಲ್ಪನೆಯನ್ನು ಬಳಸಿ ಉಪಗ್ರಹಗಳು ಕಕ್ಷೆಗೆ ಹಾರಿದ್ದು ಈ ಕೃತಿ ಬಂದು ಹದಿನೈದು ವರ್ಷಗಳಾದ ಮೇಲೆ. ಸೂಪರ್ ಕಂಪ್ಯೂಟರೊಂದು ಮನುಷ್ಯರ ಜೊತೆ ಚದುರಂಗದಾಟ ಆಡುವ ಕಲ್ಪನೆಯೂ ಇಲ್ಲಿಯೇ ಇದೆ, ಎಷ್ಟೋ ವರ್ಷಗಳ ಅನಂತರ ಐಬಿಎಮ್ಮಿನವರು ಇದನ್ನು ಮಾಡಿಯೂ ತೋರಿಸಿದರು, ಅದು ಗ್ಯಾರಿ ಕಾಸ್ಪರೋವನನ್ನು ಸೋಲಿಸಿ ಸುದ್ದಿಯೂ ಮಾಡಿತು. ಆ್ಯಪಲ್ ಕಂಪೆನಿಯವರ ಜಗತ್ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಟ್ಯಾಬ್ಲೆಟ್ ಗಣಕವೂ ಈ ಕೃತಿಯಲ್ಲಿ ಬಂದದ್ದೇ ಅಂದರೆ ನಂಬಲೇಬೇಕು.

ಅಂತೂ, ತಂತ್ರಜ್ಞಾನದಲ್ಲಿ ಕೆಲಸ ಮಾಡುವವರೂ, ಸೈನ್ಸ್ ಫಿಕ್ಷನ್‌ನಲ್ಲಿ ಕೆಲಸ ಮಾಡುವವರೂ ಒಂದೇ ರೀತಿ ಯೋಚನೆ ಮಾಡಿ, ‘ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ ಮಂಕುತಿಮ್ಮ’ ಎಂಬಂತಾಗಿಸುವುದು ಒಂದು ವಿಸ್ಮಯವೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.