ನವದೆಹಲಿ: ಖಾಸಗಿ ಮಾಹಿತಿ ಸುರಕ್ಷತೆ ಮತ್ತು ಗೋಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಬಳಕೆದಾರರಲ್ಲಿ ಮೂಡಿರುವ ಗೊಂದಲಗಳಿಂದಾಗಿ 'ಸಿಗ್ನಲ್' ಆ್ಯಪ್ ಬಳಕೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಸರಳ ಮತ್ತು ನೇರವಾದ ಸೇವಾ ನಿಯಮಗಳು ಹಾಗೂ ಸುರಕ್ಷತೆ ನಿಯಮಗಳಿಂದಾಗಿ ಸಿಗ್ನಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಿಗ್ನಲ್ ಸಹ–ಸಂಸ್ಥಾಪಕ ಬ್ರಯಾನ್ ಆ್ಯಕ್ಟನ್ ಹೇಳಿದ್ದಾರೆ.
ಫೇಸ್‌ಬುಕ್‌ನೊಂದಿಗೆ ವಾಟ್ಸ್‌ಆ್ಯಪ್ ಬಳಕೆದಾರರ ದತ್ತಾಂಶ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಒಳಗೊಂಡ ಅಪ್‌ಡೇಟ್ ಬಿಡುಗಡೆಯಾಗುತ್ತಿರುವುದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಯಿತು. ಅದರ ಬೆನ್ನಲ್ಲೇ ವಾಟ್ಸ್‌ಆ್ಯಪ್ ಬಳಕೆದಾರರು ಸ್ವಯಂ ಪ್ರೇರಿತರಾಗಿ ಸಿಗ್ನಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರು. ಅದರಲ್ಲೂ ಭಾರತದಲ್ಲಿ ಹೆಚ್ಚು ಜನ 'ಸಿಗ್ನಲ್' ಬಳಕೆ ಶುರು ಮಾಡಿದರು.
'ಭಾರತದಲ್ಲಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಬೆಳವಣಿಗೆ ಕಂಡಿದೆ. ಕಳೆದ 72 ಗಂಟೆಗಳಲ್ಲಿ ಅತಿ ಹೆಚ್ಚು ಬೆಳವಣಿಗೆ ದಾಖಲಾಗಿದೆ, ನಮ್ಮಲ್ಲಿ ಬಹುತೇಕರಿಗೆ ನಿದ್ರಿಸಲು ಅತ್ಯಲ್ಪ ಸಮಯವಷ್ಟೇ ಸಿಗುತ್ತಿದೆ' ಎಂದು ಆ್ಯಕ್ಟನ್ ಹೇಳಿಕೊಂಡಿದ್ದಾರೆ.
ಲಾಭರಹಿತ ಸಂಸ್ಥೆಯಾಗಿರುವ ಸಿಗ್ನಲ್‌ನಲ್ಲಿ ಒಟ್ಟಾರೆ 50ಕ್ಕೂ ಕಡಿಮೆ ಉದ್ಯೋಗಿಗಳಿದ್ದು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಒಟ್ಟು ಹೆಚ್ಚಳವಾಗಿರುವ ಡೌನ್‌ಲೋಡ್ ಸಂಖ್ಯೆಯ ವಿವರಗಳನ್ನು ಬಹಿರಂಗ ಪಡಿಸಿಲ್ಲ. 40 ರಾಷ್ಟ್ರಗಳಲ್ಲಿ ಐಒಎಸ್ ಆ್ಯಪ್ ಸ್ಟೋರ್‌ನ ಅಪ್ಲೇಕೇಷನ್‌ಗಳ ಸಾಲಿನಲ್ಲಿ 'ಸಿಗ್ನಲ್' ಮುಂಚೂಣಿಯಲ್ಲಿದೆ, ಹಾಗೇ 18 ರಾಷ್ಟ್ರಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ ಎಂದು ತಿಳಿಸಿದ್ದಾರೆ.
2009ರಲ್ಲಿ ಜಾನ್ ಕೂಮ್ ಜೊತೆಗೂಡಿ ಬ್ರಯಾನ್ ಆ್ಯಕ್ಟನ್ 'ವಾಟ್ಸ್‌ಆ್ಯಪ್' ಅಭಿವೃದ್ಧಿ ಪಡಿಸಿದರು. ಆದರೆ, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಒಪ್ಪಂದಗಳ ಬಳಿಕ ಆ್ಯಕ್ಟನ್ ಸಂಸ್ಥೆಯಿಂದ ಹೊರಬಂದರು. 2014ರಲ್ಲಿ ಮಾಕ್ಸಿ ಮಾರ್ಲಿನ್‌ಸ್ಪೈಕ್ ಸಹಭಾಗಿತ್ವದಲ್ಲಿ 'ಸಿಗ್ನಲ್ ಆ್ಯಪ್' ರೂಪಿಸಿದರು. ಸಿಗ್ನಲ್‌ನಲ್ಲೂ ಸಹ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ವ್ಯವಸ್ಥೆ ಇರುವುದರಿಂದ ಸಂದೇಶಗಳು ಸೋರಿಕೆಯಾಗುವುದಿಲ್ಲ ಎಂದು ನಂಬಲಾಗಿದೆ.
ಭಾರತದಲ್ಲಿ ಸುಮಾರು 40 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರಿದ್ದಾರೆ. ಹೊಸ ನಿಯಮಗಳಿಂದ ಖಾಸಗಿ ಮಾಹಿತಿಯ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ವಾಟ್ಸ್‌ಆ್ಯಪ್ ಮಂಗಳವಾರಷ್ಟೇ ಸ್ಪಷ್ಟಪಡಿಸಿದೆ. ಆದರೂ ಜಾಹೀರಾತು ರಹಿತ, ಬಳಕೆದಾರರನ್ನು ಟ್ರ್ಯಾಕ್ ಮಾಡದಿರುವ ಬಗ್ಗೆ ಸಿಗ್ನಲ್ ನೀಡಿರುವ ಸರಳ ಸೇವಾ ನಿಯಮಗಳಿಂದ ಹಲವು ಮಂದಿ ಆಕರ್ಷಿತರಾಗಿದ್ದಾರೆ.
ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಮಹೀಂದ್ರಾ ಗೂಪ್‌ನ ಆನಂದ್ ಮಹೀಂದ್ರಾ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು ಸಿಗ್ನಲ್ ಆ್ಯಪ್ ಕಡೆಗೆ ಹೊರಳುತ್ತಿರುವುದಾಗಿ ಪ್ರಕಟಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.