ADVERTISEMENT

ಆಧುನಿಕ ‘ಸ್ಮಾರ್ಟ್’ ಒಡವೆಗಳು: ಯಾವವು? ಏನು ಕೆಲಸ ಗೊತ್ತಾ?

ಸುಧೀರ್ ಎಚ್.ಎಸ್
Published 11 ಅಕ್ಟೋಬರ್ 2022, 23:45 IST
Last Updated 11 ಅಕ್ಟೋಬರ್ 2022, 23:45 IST
 Smart Ornaments For Modern World 
 Smart Ornaments For Modern World    

ಇಂದಿನ ಸ್ಮಾರ್ಟ್‌ಯುಗದಲ್ಲಿ ನಮ್ಮ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಬಹುತೇಕ ಎಲ್ಲ ಉಪಕರಣಗಳು ಸ್ಮಾರ್ಟ್ ಆಗುತ್ತಿವೆ. ಮನೆಯೊಳಗೆ ಬಳಸುವ ಉಪಕರಣಗಳಿಂದ ಹಿಡಿದು ಕಾರ್ಖಾನೆಗಳ ತನಕ ಸ್ಮಾರ್ಟ್ ಉಪಕರಣಗಳು ಬಳಕೆಗೆ ಬಂದಿವೆ. ಈಗಾಗಲೇ ದೀಪಗಳು, ಫ್ಯಾನ್, ಟಿ.ವಿ ಮತ್ತು ರಸ್ತೆಗಳಲ್ಲಿ ಸಿಗ್ನಲ್‌ಗಳು ಸಹ ಸ್ಮಾರ್ಟ್ ಆಗಿವೆ.

ಸ್ಮಾರ್ಟ್ ವಾಚ್‌ಗಳು ಕೂಡ ಪ್ರಚಲಿತವಾಗಿವೆ. ಸ್ಮಾರ್ಟ್ ವಾಚ್ ಧರಿಸಿದವರು ಒಂದು ದಿನದಲ್ಲಿ ಎಷ್ಟು ಹೆಜ್ಜೆ ನಡೆದರು, ಎಷ್ಟು ಕ್ಯಾಲೋರಿ ಕರಗಿಸಿದರು, ಎಷ್ಟು ಹೊತ್ತು ನಿಂತಿದ್ದರು, ರಕ್ತದಲ್ಲಿ ಎಷ್ಟು ಆಮ್ಲಜನಕ ಇದೆ, ಆಟವಾಡಿದಾಗ ಅಥವಾ ವ್ಯಾಯಾಮ ಮಾಡಿದಾಗ ಹೃದಯದ ಬಡಿತ ಹೇಗಿತ್ತು ಮತ್ತು ಎಷ್ಟು ಹೊತ್ತು ನಿದ್ದೆ ಮಾಡಿದೆ ಎಂದೆಲ್ಲ ಮಾಹಿತಿಯನ್ನು ಕಲೆ ಹಾಕುತ್ತದೆ.

ಇಂತಹ ಉಪಕರಣಗಳು ‘ಸ್ಮಾರ್ಟ್’ ಎಂದು ಹೇಳಲು ಅವು ಸಂಗ್ರಹಿಸಿದ ಮಾಹಿತಿಯನ್ನು ತ್ವರಿತವಾಗಿ ಅಥವಾ ನಿಯಮಿತವಾಗಿ ಅಂತರ್ಜಾಲದಲ್ಲಿ ರವಾನಿಸಿ, ನಿಗದಿತ ಕಡೆ ಅದನ್ನು ಇರಿಸಿ, ಬೇಕಾದಾಗ ಸೂಕ್ತವಾಗಿ ಅದನ್ನು ವಿಶ್ಲೇಷಿಸಲು ಅನುವು ಆಗುವುದಕ್ಕೆ ಹೇಳಬಹುದು. ಕೆಲವೊಮ್ಮೆ ಹೀಗೆ ವಿಶ್ಲೇಷಿಸಿ ಕೆಲವು ಅವಶ್ಯಕ ನಿರ್ಧಾರಗಳನ್ನು ತೆಗೆದುಕೊಂಡು ಮುಂದಿನ ಪೂರ್ವನಿಯೋಜಿತ ಕಾರ್ಯಗಳನ್ನು ಕೈಗೊಳ್ಳಲು ಪೂರಕವಾಗಬಹುದು.

ADVERTISEMENT

ಉದಾಹರಣೆಗೆ, ಹೃದಯದ ಬಡಿತದಲ್ಲಿ ನಿರ್ದಿಷ್ಟ ಮಟ್ಟಕ್ಕಿಂತ ಏನಾದರೂ ವ್ಯತ್ಯಾಸವಾದರೆ ಸ್ಮಾರ್ಟ್ ವಾಚ್ ಧರಿಸಿದವರಿಗೆ ಅಲರ್ಟ್ ಕೊಡುತ್ತದೆ. ಜೊತೆಗೆ ನಿರ್ದಿಷ್ಟ ವ್ಯಕ್ತಿಗಳಿಗೂ ಕರೆ / ಮೆಸೇಜ್ ಕೂಡ ಮಾಡುವುದು. ಇಂತಹ ಸ್ಮಾರ್ಟ್ ವಾಚ್ ಧರಿಸಿದವರು ಅಕಸ್ಮಾತ್ತಾಗಿ ಹೃದಯಾಘಾತಕ್ಕೆ ತುತ್ತಾದರೆ, ತುರ್ತುಚಿಕಿತ್ಸೆ ಪಡೆಯಬೇಕೆಂದು ಕೂಡ ಅದೇ ಸೂಚನೆಯನ್ನು ಕೊಡಬಹುದು.

ಇಂಥ ಮಾಹಿತಿಗಳನ್ನು ಈಗಾಗಲೇ ಟಿ.ವಿ ಅಥವಾ ಸಾಮಾಜಿಕ ಜಾಲಾತಾಣಗಳಿಂದ ತಿಳಿದಿರಬಹುದು. ಈಗ ಇಷ್ಟನ್ನೂ ಮೀರಿ ಈ ಸ್ಮಾರ್ಟ್ ಉಪಕರಣಗಳು ಒಂದು ಹೆಜ್ಜೆ ಮುಂದೆ ಸಾಗಿದೆ.

ನಿತ್ಯದ ಔಷಧ ತೆಗೆದುಕೊಳ್ಳುವುದನ್ನು ನೀವು ಎಂದಾದರೂ ತಪ್ಪಿಸಿದ್ದೀರಾ? ಒಮ್ಮೊಮ್ಮೆ ತಪ್ಪಿದಾಗ ಇನ್ನು ಮುಂದೆ ಸರಿಯಾಗಿ ತೆಗೆದುಕೊಳ್ಳುವೆವು ಎಂದು ನಾವೇ ಸಮಾಧಾನ ಮಾಡಿಕೊಂಡಿರಬಹುದು. ಆದರೆ ಔಷಧದ ಒಂದು ಡೋಸ್‌ನ ವ್ಯತ್ಯಯದಿಂದ ಅನೇಕ ಸಂದರ್ಭಗಳಲ್ಲಿ ಗಂಭೀರವಾಗಿಲ್ಲದಿದ್ದರೂ, ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾದವರು ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು.

ಸಮಯಕ್ಕೆ ಸರಿಯಾಗಿ ಔಷಧವನ್ನು ಪಡೆಯಲು ಕೆಲವಡೆ ಚುಚ್ಚುಮದ್ದುಗಳನ್ನು ನೀಡುವ ಕೌಶಲದ ಕೊರತೆಯೂ ಕಾಡಬಹುದು. ಅಥವಾ ಸ್ವಾಭಾವಿಕವಾಗಿ ಮರೆತು ತೆಗೆದುಕೊಳ್ಳಲು ಸಾಧ್ಯವಾಗದಿಬಹುದು. ಆದರೆ ಈಗ ತಂತ್ರಜ್ಞಾನದ ಸಹಾಯದಿಂದ ಇಂತಹ ಸನ್ನಿವೇಶಗಳಿಂದ ಮುಕ್ತಿ ಪಡೆದು ಔಷಧಿಯನ್ನು ಸರಿಯಾದ ಡೋಸಿನಲ್ಲಿ ತೆಗೆದುಕೊಳ್ಳಲು ಸೂಕ್ತ ಸಾಧನಗಳು ಸಿದ್ಧವಾಗುತ್ತಿವೆ. ಅವೇ ಧರಿಸಬಹುದಾದ ಸಾಧನಗಳು - ಧರಿಕೆಗಳು (ವೇರಬಲ್ಸ್) ಮತ್ತು ಅಳವಡಿಸಬಹುದಾದ ಸಾಧನಗಳು - ಅಳವಡಿಕೆಗಳು (ಇಂಪ್ಲಾಂಟ್ಸ್). ಈ ಸ್ಮಾರ್ಟ್ ಉಪಕರಣಗಳನ್ನು ‘ಆಧುನಿಕ ಒಡವೆಗಳು’ ಎಂದರೆ ತಪ್ಪಾಗದು. ಇವು ದೇಹದ ಅಗತ್ಯತೆ ಮತ್ತು ಪೂರ್ವ ನಿರ್ಧಾರಿತ ವೇಳಾಪಟ್ಟಿಗೆ ಅನುಗುಣವಾಗಿ ನಿಗದಿತ ಔಷಧಗಳ ಸೇವನೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸಬಹುದು.

ಸಾಂಪ್ರದಾಯಿಕ ಔಷಧ ವಿತರಣಾ ವ್ಯವಸ್ಥೆಗಳಲ್ಲಿ ಗಮನಿಸಲಾದ ಅನಗತ್ಯ ಪುನರಾವರ್ತಿತ ಡೋಸಿಂಗನ್ನು ಕಡಿಮೆ ಮಾಡಲು ಧರಿಕೆಗಳು ಮತ್ತು ಇಂಪ್ಲಾಂಟ್‌ಗಳು ಸಹಾಯ ಮಾಡುತ್ತವೆ. ಇವು ಅಗತ್ಯವಿರುವ ಪ್ರಮಾಣದ ಔಷಧವನ್ನು ನಿಯಂತ್ರಿತ ರೀತಿಯಲ್ಲಿ ಬಿಡುಗಡೆ ಮಾಡುವವು. ಆಗ ಔಷಧಗಳು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತವೆ, ಮತ್ತು ದೇಹದ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ತಪ್ಪಿಸಬಹುದು. ಮಾತ್ರವಲ್ಲ, ಸಕಾಲಿಕ ಔಷಧಸೇವನೆಯ ವ್ಯತ್ಯಯವನ್ನೂ ಈ ಸಾಧನಗಳು ತಪ್ಪಿಸಬಹುದು.

ಔಷಧಗಳನ್ನು ಮೌಖಿಕವಾಗಿ ಸೇವಿಸಿದಾಗ ಅಥವಾ ರಕ್ತನಾಳಕ್ಕೆ ಚುಚ್ಚುಮದ್ದನ್ನು ಬಳಸಿದಾಗ, ಔಷಧವು ಉದ್ದೇಶಿಸದ ದೇಹದ ಕೆಲವು ಭಾಗಗಳ ಮೂಲಕವೂ ಅನಗತ್ಯವಾಗಿ ಹಾದುಹೋಗುತ್ತದೆ. ದೇಹದಲ್ಲಿಯ ಈ ರೀತಿಯ ಸಾಂಪ್ರದಾಯಿಕ ರೀತಿಯ ಔಷಧ ವಿತರಣೆಯು ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ, ರೋಗಿಗೆ ಪುನರಾವರ್ತಿತ ಪ್ರಮಾಣಗಳು ಬೇಕಾಗಬಹುದು; ಅಥವಾ ಔಷಧದ ವಿತರಣೆಯ ಗುರಿಪ್ರದೇಶವನ್ನು ಹೊರತುಪಡಿಸಿ ದೇಹದ ಭಾಗಗಳಿಗೆ ತಲುಪಿ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಆದರೆ ಇಂಪ್ಲಾಂಟ್‌ಗಳು ನೇರವಾಗಿ ಉದ್ದೇಶಿತ ಪ್ರದೇಶ ಮತ್ತು ಅಂಗಕ್ಕೆ ಔಷಧಗಳನ್ನು ತಲುಪಿಸುತ್ತದೆ. ಅಡ್ಡಪರಿಣಾಮಗಳ ಸಾಧ್ಯತೆಯನ್ನೂ ಕಡಿಮೆ ಮಾಡಬಹುದು. ಉದಾಹರಣೆಗೆ, ಸ್ತನಕ್ಯಾನ್ಸರ್‌ ಅಥವಾ ಬಾಯಿಯ ಕ್ಯಾನ್ಸರ್‌ನ ರೋಗಿಗಳಲ್ಲಿ ಇವು ನಿರ್ದಿಷ್ಟ ಗಡ್ಡೆಯ ಸ್ಥಳಕ್ಕೆ ಮಾತ್ರವೇ ಔಷಧವನ್ನು ತಲುಪಿಸುತ್ತವೆ. ಹೀಗಾಗಿ ಈ ವಿಧಾನವು ಸಾಂಪ್ರದಾಯಿಕ ಕೀಮೋಥೆರಪಿಯಲ್ಲಿ ಕಂಡುಬರುವ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುತ್ತದೆ.

ಅನೇಕರು ಮಧುಮೇಹದ ನಿರ್ವಹಣೆಗಾಗಿ ಇನ್ಸುಲಿನನ್ನು ಪಡೆಯಲು ಇನ್ಸುಲಿನ್ ಪಂಪ್‌ಗಳು, ಚುಚ್ಚುಮದ್ದಿನ ಪೆನ್ನುಗಳು ಅಥವಾ ಮೈಕ್ರೊನೀಡಲ್ ಪ್ಯಾಚ್‌ಗಳನ್ನು ಬಳಸುತ್ತಾರೆ. ಸುಧಾರಿತ ಸ್ವಯಂಚಾಲಿತ ಎಲೆಕ್ಟ್ರೋಥರ್ಮಲ್ ಪ್ಯಾಚ್ ಚರ್ಮದ ಮೂಲಕ ಇನ್ಸುಲಿನ್ ಅನ್ನು ನೀಡುತ್ತದೆ; ಇದು ಮೈಕ್ರೊನೀಡಲ್ ಪ್ಯಾಚ್‌ಗಳಿಗಿಂತ ಪರಿಣಾಮಕಾರಿ. ತಪ್ಪಾದ ಮತ್ತು ಅನಿಯಮಿತ ಡೋಸಿಂಗ್ ಸಮಸ್ಯೆಯನ್ನೂ ಇವುಗಳಿಂದ ತಪ್ಪಿಸಬಹುದಾಗಿದೆ.

ದೇಹದ ಚಲನೆ, ಬೆವರು, ಕಣ್ಣೀರು ಅಥವಾ ಹೊರಗಿನ ಬೆಳಕು, ಕಾಂತೀಯ ಬಲ ಅಥವಾ ಅಲ್ಟ್ರಾಸೌಂಡ್‌ನಂತಹ ಬಾಹ್ಯ ಪ್ರಚೋದಕಗಳಿಗೆ ಅನುಗುಣವಾಗಿ ಔಷಧ ಬಿಡುಗಡೆಯ ಪ್ರಮಾಣವನ್ನು ಈ ಧರಿಕೆಗಳು ಮತ್ತು ಅಳವಡಿಕೆಗಳ ಮೂಲಕ ನಿರ್ವಹಿಸಬಹುದು. ವೈರ್‌ಲೆಸ್ ಸಂವಹನವನ್ನು ಬಳಸಿಕೊಂಡು ನಿಯಂತ್ರಿಸಬಹುದಾದ ಸ್ಮಾರ್ಟ್ ಧರಿಕೆಗಳು ಮತ್ತು ಇಂಪ್ಲಾಂಟ್‌ಗಳು ಕೂಡ ಬಳಕೆಗೆ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.