‘……. ಹೋಟೆಲಿನಿಂದ ಕದ್ದದ್ದು’ ಎನ್ನುವ ಗುರುತು ಹಾಕಿರುವ ತಟ್ಟೆ, ಲೋಟಗಳನ್ನು ಹೋಟೆಲಿನಲ್ಲಿ ನೋಡಿದ್ದೀರಲ್ಲ. ತಮ್ಮ ವಸ್ತುವನ್ನು ಯಾರೂ ಕದಿಯದಿರಲಿ. ಕದ್ದರೂ ಅದನ್ನು ಗುರುತಿಸುವುದು ಸುಲಭವಾಗಲಿ ಎಂದು ಈ ರೀತಿಯಲ್ಲಿ ಹಚ್ಚೆ ಹಾಕುತ್ತಾರಷ್ಟೆ. ಎಐ ಬಳಸಿ ಬರೆಯುವ ಪಾಠದಲ್ಲಿಯೂ ಹೀಗೆ ಗುರುತು ಹಚ್ಚಬಹುದಂತೆ.
ಇತ್ತೀಚೆಗೆ ಗೂಗಲ್ ಜೆಮಿನಿಯ ವಿಜ್ಞಾನಿಗಳು ಅಂತಹುದೊಂದು ತಂತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ನೇಚರ್ ಪತ್ರಿಕೆ ವರದಿ ಮಾಡಿದೆ. ಸಿಂಥ್‌ಐಡಿ ಎಂದು ಹೆಸರಿಸಿದ ಈ ತಂತ್ರಜ್ಞಾನವನ್ನು ಗೂಗಲ್ ಮೈಂಡ್ ಸಂಸ್ಥೆಯ ಸುಮಂತ್ ದತ್ತಾತ್ರಿ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.
ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಮೊದಲಾದ ಪಠ್ಯಗಳನ್ನು ಸೃಷ್ಟಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಏಐ ಅಥವಾ ಯಾಂತ್ರಿಕ ಬುದ್ಧಿಮತ್ತೆಯ (ಯಾಂಬು) ತಂತ್ರಜ್ಞಾನಗಳು ಕಳೆದ ಎರಡು ವರ್ಷಗಳಿಂದ ಸುದ್ದಿ ಮಾಡುತ್ತಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸುವ ಪರೀಕ್ಷೆಗಳಲ್ಲಿ ಚಾಟ್‌ಜಿಪಿಟಿ ಬಳಸಿ ಉತ್ತರಗಳನ್ನು ಬರೆಯದಂತೆ ನಿಷೇಧವನ್ನೂ ಹೇರಲಾಗಿದೆ. ಕದಿಯಬೇಡ ಎನ್ನುವುದು ಸುಲಭ. ಕದ್ದರೇ, ಇಲ್ಲವೇ ಎನ್ನುವುದನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವೆ. ಚಾಟ್‌ಜಿಪಿಟಿ, ಗೂಗಲ್ ಜೆಮಿನಿ, ಮೆಟಾಏಐ ಮೊದಲಾದ ಯಾಂಬು-ತಂತ್ರಾಂಶಗಳು ಈ ತೊಂದರೆಯನ್ನು ಎದುರಿಸಲು ಹೆಣಗುತ್ತಿವೆ.
ಕಳೆದ ವರ್ಷ ಮಾಧ್ಯಮಗಳಿಗೆ ಛಾಯಾಚಿತ್ರಗಳನ್ನು ಒದಗಿಸುವ ಗೆಟ್ಟಿ ಇಮೇಜಸ್ ಸಂಸ್ಥೆ ಏಐ ತಂತ್ರಜ್ಞಾನವನ್ನು ಬಳಸಿ ಚಿತ್ರಗಳನ್ನು ಒದಗಿಸುವ ಹಲವು ಸಂಸ್ಥೆಗಳ ವಿರುದ್ಧ ದಾವೆ ಹೂಡಿತ್ತು. ಈಗಾಗಲೇ ಇರುವ ಚಿತ್ರಗಳನ್ನು ಬಳಸಿಕೊಂಡು, ತಿದ್ದಿ, ಹೊಸ ಚಿತ್ರ ಅಥವಾ ಕಲೆಯಂತೆ ಮಾಡಬಹುದು. ನಿಮ್ಮದೇ ಫೋಟೋವನ್ನು ಹಾಕಿದಾಗ ಅದು ಮುಂದೆಂದೋ ನೀವು ಕಾಣಬಹುದಾದ ರೀತಿಯಲ್ಲಿ ತಿದ್ದಿ ಪ್ರಕಟಿಸುವ ಆಪ್‌ಗಳನ್ನು ತಮಾಷೆಗೆ ಬಳಸಿರಬಹುದಷ್ಟೆ. ನೀವು ಕೊಟ್ಟ ನಿಮ್ಮ ಚಿತ್ರಗಳನ್ನು ಈ ಆಪ್‌ಗಳು ಅಥವಾ ಅವುಗಳಂತಹ ಇತರೆ ತಂತ್ರಾಂಶಗಳು ಮುಂದೆ ಬಳಸಿಕೊಂಡು ಹೊಸ ಚಿತ್ರಗಳನ್ನು ಸೃಷ್ಟಿಸುತ್ತವೆ. ಅಂತಹ ಸಂದರ್ಭದಲ್ಲಿ ಆ ಚಿತ್ರದ ಒಡೆಯ ನೀವೋ, ಅಥವಾ ಆ ತಂತ್ರಾಂಶವೋ? ನಿಮ್ಮ ಚಿತ್ರವನ್ನು ಬಳಸಿಕೊಂಡದ್ದಕ್ಕೆ ಆ ಕಂಪೆನಿ ಒಪ್ಪಿಗೆ ಪಡೆಯಬೇಕೇ? ಚಿತ್ರದ ಹಕ್ಕು ಸ್ವಾಮ್ಯ ನಿಮ್ಮದಾಗಿದ್ದರೆ, ಆ ಹೊಸ ಚಿತ್ರವೂ ನಿಮ್ಮದೇ? ಇಲ್ಲವಾದರೆ ಏನು ಮಾಡಬೇಕು?
ಇದು ಒಂದು ಸಮಸ್ಯೆ. ಇಂಟರ್‌ನೆಟ್ಟಿನಲ್ಲಿ ದೊರೆಯುವ ಮಾಹಿತಿ, ಚಿತ್ರಗಳು, ದತ್ತಾಂಶಗಳೆಲ್ಲವನ್ನೂ ಜೆಮಿನಿ, ಮೆಟಾ ಮೊದಲಾದ ತಂತ್ರಜ್ಞಾನಗಳು ಬಳಸಿಕೊಳ್ಳುತ್ತವೆ. ಯಾರದ್ದೋ ಹಕ್ಕುಸ್ವಾಮ್ಯ ಇರುವಂತಹ ಚಿತ್ರಗಳನ್ನು ಇನ್ಯಾರೋ ತಿದ್ದಿ ಬಳಸಿಕೊಂಡು ಲಾಭ ಮಾಡಿಕೊಳ್ಳಬಹುದು. ಇದನ್ನು ತಡೆಯಲು ಚಿತ್ರಗಳಲ್ಲಿಯೇ ಕಂಡೂ ಕಾಣದಂತಹ ಕೆಲವು ಗುರುತುಗಳನ್ನು ಮಾಡುತ್ತಾರೆ. ಇವನ್ನು ವಾಟರ್‌ಮಾರ್ಕ್ ಎನ್ನುತ್ತಾರೆ. ಚಿತ್ರಗಳನ್ನು ನೀವು ಬಳಸಿದಾಗಲೂ ಇವು ಉಳಿದುಕೊಂಡಿರುತ್ತವೆ. ಆ ಚಿತ್ರದ ಮೂಲ ಎಲ್ಲಿಯದು ಎಂದು ತಿಳಿದುಬಿಡುತ್ತದೆ.
ಆದರೆ ಪಾಠಗಳ ವಿಷಯದಲ್ಲಿ ಇದು ಸುಲಭವಲ್ಲ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿ ಚಾಟ್‌ಜಿಪಿಟಿ ಬಳಸಿಕೊಂಡು ಉತ್ತರವನ್ನು ಬರೆಯಬಹುದು. ಆ ಮಟ್ಟಿಗೆ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ನೀವೇ ಬರೆದಷ್ಟು ಸುಂದರವಾಗಿ ಎಲ್ಲ ಮಾಹಿತಿಯನ್ನು ಒಟ್ಟು ಮಾಡಿ ಲೇಖನವನ್ನು ಯಾಂಬು-ತಂತ್ರಜ್ಞಾನಗಳು ಬರೆಯಬಲ್ಲುವು. ಹಾಗೆ ಏಐ ಬಳಸಿ ವೈಜ್ಞಾನಿಕ ಪ್ರಬಂಧಗಳನ್ನೂ ಬರೆದವರಿದ್ದಾರೆ. ಇಡೀ ಪುಸ್ತಕವನ್ನೂ ಯಾಂಬು ಬಳಸಿ ಬರೆಯಲಾಗಿದೆ. ಕಾರೊಂದರ ಚಿಪ್‌ನಲ್ಲಿ ಇದ್ದ ಅದರ ಓಡಾಟದ ಮಾಹಿತಿಯನ್ನು ಹಾಗೂ ಜಿಪಿಎಸ್ ನಕ್ಷೆಗಳನ್ನು ನೀಡಿ, ಅದರ ಆಧಾರದ ಮೇಲೆ ಏಐ ವನ್ ದಿ ರೋಡ್ ಎನ್ನುವ ಪುಸ್ತಕವನ್ನು ಆರೇಳು ವರ್ಷಗಳ ಹಿಂದೆಯೇ ರಚಿಸಿತ್ತು.
ಆದರೆ ಆಗೆಲ್ಲ ಇದೊಂದು ಸಮಸ್ಯೆ ಎನ್ನಿಸುತ್ತಿರಲಿಲ್ಲ. ಯಾಂಬು ಎಲ್ಲರ ಕೈಗೂ ಎಟುಕುವ ಸಾಧನವಾಗಿರಲಿಲ್ಲ. 2023 ಅದನ್ನು ಬದಲಿಸಿತು. ಓದದೆಯೇ ಪ್ರಬಂಧಗಳ ಸಾರವನ್ನು ಒಟ್ಟು ಮಾಡಬಹುದಾಯಿತು. ಆ ಸಾರವನ್ನು ಆಧರಿಸಿ ಲೇಖನ, ಪ್ರಬಂಧ, ಪುಸ್ತಕವನ್ನೂ ಬರೆಯಬಹುದಲ್ಲ? ಹೀಗೆ ತಮ್ಮದೇ ಬರೆಹ ಎನ್ನುವಂತೆ ಬಿಂಬಿಸಿಕೊಂಡ ಬರೆಹವನ್ನು ಏಐ ಸೃಷ್ಟಿ ಎಂದು ಗುರುತಿಸುವುದು ಅವಶ್ಯಕವೆನ್ನಿಸಿತು. ವಿಜ್ಞಾನ ಹಾಗೂ ವಾಣೀಜ್ಯ ಪ್ರಪಂಚದಲ್ಲಿ ಕೃತಿಚೌರ್ಯ ಎನ್ನುವುದು ಕಾಳಜಿಯ ವಿಷಯ. ಬೇರೊಬ್ಬರ ಬರೆಹವನ್ನು ಕದ್ದದ್ದನ್ನು ಪತ್ತೆ ಹಚ್ಚಲು ಕಾಪಿಸ್ಕೇಪ್ ಮೊದಲಾದ ಹಲವು ಕೃತಿಚೌರ್ಯ ಪತ್ತೆ ತಂತ್ರಾಂಶಗಳಿವೆ. ಆದರೆ ಯಾಂಬುವಿನ ಬರೆಹವನ್ನೇ ಕದ್ದರೆ ಅದನ್ನು ಪತ್ತೆ ಮಾಡುವುದು ಹೇಗೆ?
ಯಾಂಬುವಿನ ಬಳಕೆಯನ್ನು ಪತ್ತೆ ಹಚ್ಚಲು ಈ ಹಿಂದೆಯೂ ಪ್ರಯತ್ನಗಳು ನಡೆದಿದ್ದುವು. ಯಾಂಬು ಬಳಸಿ ತಿದ್ದಿದ ಚಿತ್ರಗಳನ್ನು ಮೂಲದೊಂದಿಗೆ ಹೋಲಿಸುವ ತಂತ್ರಾಂಶಗಳಿವೆ. ಇಷ್ಟು ಶ್ರಮ ಪಡುವ ಬದಲು ಯಾಂಬು ಬರೆಹಗಳಲ್ಲಿಯೇ ಅದನ್ನು ಪತ್ತೆ ಮಾಡುವ ವಾಟರ್‌ಮಾರ್ಕ್ ಬಚ್ಚಿಟ್ಟರೆ ಹೇಗೆ? ಸಿಂಥ್‌ಐಡಿ ಈ ತಂತ್ರವನ್ನು ಬಳಸುತ್ತದೆ.
ಯಾವುದೇ ಪಾಠವನ್ನು ಬರೆಯುವಂತೆ ತಿಳಿಸುವ ನಿರ್ದೇಶಗಳು ಮೂಲಪಾಠಗಳಂತೆ. ಇವುಗಳಲ್ಲಿರುವ ಪದಗಳನ್ನು ಆಧರಿಸಿ ಯಾಂಬು ಹೊಸ ಪಾಠವನ್ನು ಬರೆಯುತ್ತದೆ. ಇದು ವಿವಿಧ ಹಂತಗಳಲ್ಲಿ ನಡೆಯುವ ಕ್ರಿಯೆ. ಪ್ರತಿ ಹಂತದಲ್ಲಿಯೂ ಹೀಗೆ ಬರೆಯುವಾಗ ಮೂಲಪಾಠದಲ್ಲಿರುವ ಯಾವುದೋ ಒಂದು ಪದವನ್ನು ಬದಲಿಸುತ್ತದೆ. ಅದಕ್ಕೆ ಒಂದು ಗುಪ್ತಸಂಖ್ಯೆಯನ್ನೂ ಅಂಟಿಸಿಬಿಡುತ್ತದೆ. ಅಂತಿಮವಾಗಿ ಪಾಠ ಸಿದ್ಧವಾಗುವಾಗ ಈ ಬದಲಾಯಿಸಿದ ಪದ, ಅಂಶಗಳ ಸಂಖ್ಯೆ ಬರುತ್ತದಷ್ಟೆ. ಇದೇ ವಾಟರ್ ಮಾರ್ಕ್. ಈ ಪಾಠವನ್ನು ಯಾಂಬೂವಿನಿಂದ ಕದ್ದದ್ದು ಎಂದು ಬರೆದ ಹಾಗೆ.
ಅನಂತರ ಹೊಸ ಪಾಠವೊಂದನ್ನು ಗುರುತಿಸಲು ನೀಡಿದರೆ ಇದೇ ಯಾಂಬು, ಆ ಗುಪ್ತಸಂಖ್ಯೆ ಎಷ್ಟಿರಬಹುದು ಎಂದು ಲೆಕ್ಕಿಸುತ್ತದೆ. ಅದು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿದ್ದಲ್ಲಿ ಯಾಂಬುಸೃಷ್ಟಿ ಎಂದೂ, ಕಡಿಮೆ ಇದ್ದಲ್ಲಿ ಸ್ವಂತ ಬರೆಹವೆಂದೂ ತೀರ್ಮಾನಿಸಿಬಿಡುತ್ತದೆ. ಹೀಗೆ ಇದು ಪ್ರತಿಯೊಂದು ಸೃಷ್ಟಿಗೂ ವಿಭಿನ್ನ ವಾಟರ್ ಮಾರ್ಕ್ ನೀಡಬಲ್ಲುದು. ಇದು ನೀಡುವ ವಾಟರ್ ಮಾರ್ಕ್ ಬರೆದ ಪಾಠದಲ್ಲಿ ಇದೆ ಎಂದೇ ತಿಳಿಯುವುದಿಲ್ಲ. ಇಂತಹ ಸುಮಾರು ಎರಡು ಕೋಟಿ ಪಾಠಗಳಲ್ಲಿ ಇದ್ದ ವಾಟರ್‌ಮಾರ್ಕ್ ಜನರಿಗೆ ಕಾಣಿಸಲೇ ಇಲ್ಲ.
ಹಾಗಿದ್ದರೆ ಈ ರೀತಿಯ ಪರಿಶೀಲನೆ ನಡೆಯುವಾಗ ಯಾಂಬು ನಿಧಾನವಾಗುವುದಿಲ್ಲವೇ? ಇಲ್ಲವಂತೆ. ಸಾಮಾನ್ಯವಾಗಿ 15.527 ಮಿಲಿಸೆಕೆಂಡಿನೊಳಗೆ ಪಾಠವನ್ನು ಸೃಷ್ಟಿಸುವ ವ್ಯವಸ್ಥೆಯಲ್ಲಿ ವಾಟರ್‌ಮಾರ್ಕ್ ಕೂಡಿಸಿದರೆ ಅದು ಕೇವಲ 0.57 ನಿಧಾನವಾಗುತ್ತದೆ. 15.615 ಮಿಲಿಸೆಕೆಂಡಿನೊಳಗೆ ಪ್ರತಿಕ್ರಯಿಸುತ್ತದೆ ಎನ್ನುತ್ತಾರೆ ಸಿಂಥ್‌ಐಡಿ ಕರ್ತರು.
ಇದನ್ನೂ ಅಳಿಸಿಬಿಡಬಹುದಂತೆ. ಆದರೆ ಹಾಗೆ ಮಾಡಬೇಕಾದರೆ ಯಾಂಬು-ಲಿಖಿತ ಪಾಠವನ್ನು ತಿದ್ದಬೇಕು. ಅದೂ ಅರ್ಧಕ್ಕರ್ಧ ಪಾಠವನ್ನು ತಿದ್ದಬೇಕಾಗಿ ಬರಬಹುದು. ಹಾಗೆ ಮಾಡಿದರೂ, ಹೊಸ ಬರೆಹ ಸೃಷ್ಟಿಸಿದ ಹಾಗೆಯೇ ಅಲ್ಲವೇ? ಆಗ ಅದು ಯಾಂಬುಬರೆಹ ಎನ್ನಿಸಿಕೊಳ್ಳಲಿಕ್ಕಿಲ್ಲ. .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.