ಸ್ಮಾ ರ್ಟ್ ಫೋನ್, ಸ್ಮಾರ್ಟ್ ಟಿ.ವಿ, ಸ್ಮಾರ್ಟ್ ಸಿಟಿ – ಹೀಗೆ ಅನೇಕ ರೀತಿಯಲ್ಲಿ ಅಧುನಿಕ ಡಿಜಿಟಲ್ ತಂತ್ರಜ್ಞಾನದ ಬಳಕೆ ಜನಪ್ರಿಯವಾಗುತ್ತಿದೆ. ಇವುಗಳೊಡನೆ ಬಂದಿದೆ ಸ್ಮಾರ್ಟ್ ಕಟ್ಟಡ ಮತ್ತು ಸ್ಮಾರ್ಟ್ ಮನೆಗಳು. ವಿಶೇಷವಾಗಿ ಕಟ್ಟಡ ಮತ್ತು ಗೃಹನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳು, ವಾಸ್ತುಶಿಲ್ಪಿಗಳು, ಸಿವಿಲ್ ಎಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ ಪಡೆದು ನೌಕರಿ ಅಥವಾ ಸ್ವಯಂ ಉದ್ಯೋಗ ಮಾಡಲು ಇಚ್ಛಿಸುವವರು ಮತ್ತು ನವೋದ್ಯಮಿಗಳಿಗೆ ಈ ಕ್ಷೇತ್ರದಲ್ಲಿ ಬಹಳ ಅವಕಾಶಗಳಿವೆ. ವರ್ಷ 2025ರ ಹೊತ್ತಿಗೆ ವಿಶ್ವದಾದಂತ್ಯ ಸ್ಮಾರ್ಟ್ ಮನೆಗಳ ಮಾರುಕಟ್ಟೆ ಐದು ಲಕ್ಷ ಕೋಟಿ ರೂಪಾಯಿಗಳಾಗುತ್ತದೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಸಂಸ್ಥೆಯೊಂದು ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಕೂಡ ಬಹಳ ಶ್ರೀಮಂತರು ಮಾತ್ರ ಇಂತಹ ಮನೆಗಳನ್ನು ಕಟ್ಟಿಸಬಹುದು ಎನ್ನುವ ಭಾವನೆ ದೂರವಾಗಿ, ಸ್ವಂತ ಮನೆ ಕಟ್ಟಲು ಮುಂದಾಗುವ ಮಧ್ಯಮ ವರ್ಗದ ಜನರಿಗೂ ಅತ್ಯಾಧುನಿಕ ಸೌಲಭ್ಯಗಳಿರುವ ಸ್ಮಾರ್ಟ್ ಮನೆಯನ್ನು ಹೊಂದುವುದು ಸಾಧ್ಯವಿದೆ ಎಂದು ವಿಶ್ವವಿಖ್ಯಾತ ಸ್ಯಾಮ್ ಸಂಗ್ ಸಂಸ್ಥೆಯ ಉಪಾಧ್ಯಕ್ಷರೊಬ್ಬರು ಹೇಳಿದ್ದಾರೆ.
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಮನೆಗಳಿಗೆ ಅಗತ್ಯವಾದ ಸೇವೆಗಳನ್ನು ನೀಡಲು ರಿಲಯನ್ಸ್ ಜಿಯೋ, ಏರ್ವೆಲ್ ಮೊದಲಾದ ಟೆಲಿಕಾಮ್ ಸಂಸ್ಥೆಗಳು ಮುಂದಾಗಿವೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗುವುದರಿಂದ, ಸ್ಮಾರ್ಟ್ ಮನೆಗಳ ಬೇಡಿಕೆ ಹಲವು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಸ್ಮಾರ್ಟ್ ಮನೆಯಲ್ಲಿ ಏನುಂಟು, ಏನಿಲ್ಲ?
ನೀವು ಬೆಳಿಗ್ಗೆ ಏಳುವ ಮೊದಲೇ ಮನೆಯ ಕಸ ಗುಡಿಸಿ, ಸಾರಿಸಿ ಶುಭ್ರಗೊಳಿಸಿರುತ್ತದೆ, ರೋಬೋ ಕ್ಲೀನರ್. ರಾತ್ರಿ ಕಳೆದು ಸೂರ್ಯೋದಯವಾಗುತ್ತಿದ್ದಂತೆ ನೀವು ರಾತ್ರಿ ಮನೆಯ ಮುಂದೆ ಹಾಕಿದ ದೀಪ, ತಾನಾಗಿಯೇ ಆಫ್ ಆಗಿರುತ್ತದೆ. ರಾತ್ರಿ ನಿಮ್ಮ ಮನೆಯಿರುವ ಪ್ರದೇಶದಲ್ಲಿ ವಿದ್ಯುತ್ ಬಳಕೆ ಕಡಿಮೆ ಇರುವ ಸಮಯದಲ್ಲಿ ನೀರಿನ ಸಂಪ್‍ನಿಂದ ಮನೆಯ ಮೇಲಿನ ಟ್ಯಾಂಕಿಗೆ ನೀರು ಭರ್ತಿಯಾಗಿರುತ್ತದೆ. ಅದೇ ಸಮಯದಲ್ಲಿ ವಾಷಿಂಗ್ ಮಶಿನ್‍ನಲ್ಲಿರುವ ಬಟ್ಟೆಗಳನ್ನು ಒಗೆಯಲಾಗಿರುತ್ತದೆ.
ಇನ್ನು ನೀವು ಬೆಳಿಗ್ಗೆ ಎದ್ದು, ಪ್ರಾತಃವಿಧಿಗಳನ್ನು ಪೂರೈಸಲು ಬಾತ್‍ರೂಮಿಗೆ ಹೋಗುವಿರಿ. ನಿಮಗೆ ಇಷ್ಟವಾದಷ್ಟು ಹದಕ್ಕೆ ಮಾತ್ರ ಬಿಸಿಯಾಗಿರುವ ನೀರು ನಿಮಗಾಗಿ ಕಾದಿರುತ್ತದೆ. ಈಗ ತಾನೆ ಎದ್ದಿರುವುದು, ಬಾಯ್ಲರ್ ಆನ್ ಕೂಡ ಮಾಡಿಲ್ಲ, ಆದರೂ ನೀರು ಹೇಗೆ ಬಿಸಿಯಾಗಿದೆ? ಬಿಸಿ ನೀರಿಗೆ ಮತ್ತೆ ತಣ್ಣೀರು ಬೆರೆಸಿ ಬಳಸುವ ಅಗತ್ಯವೂ ಇಲ್ಲ. ನಿಮಗೆ ಇಷ್ಟವಾದ ಹದಕ್ಕೆ ಬಿಸಿಯಾಗಿರುವ ನೀರು ರೆಡಿಯಾಗಿದೆ. ಅಷ್ಟು ಮಾತ್ರವಲ್ಲ, ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ಬಾತ್‍ರೂಮಿಗೆ ಹೋದಾಗ ಅವರಿಗೆ ಇಷ್ಟವಾದ ಹದಕ್ಕೆ ಬಿಸಿನೀರು ಲಭ್ಯವಿರುತ್ತದೆ.
ಮುಂದೆ ನೀವು ಪೂಜೆಯ ಕೊಠಡಿಗೆ ಬರುವಿರಿ. ಆಗ, ನಿಮಗೆ ಇಷ್ಟವಾದ ಪ್ರಾರ್ಥನೆಯನ್ನು ಮತ್ತು ಮಂತ್ರಗಳನ್ನು ಅಲೆಕ್ಸಾದಂತಹ ಡಿಜಿಟಲ್ ಅಸಿಸ್ಟೆಂಟ್ ಕೇಳಿಸುತ್ತದೆ. ನೀವು ಪೂಜೆ ಮಾಡುತ್ತಿರುವಾಗ ಯೋಗ ಮಾಡುತ್ತಿರುವ ಮಡದಿ, ವ್ಯಾಯಾಮ ಮಾಡುತ್ತಿರುವ ಮಗಳಿಗೆ ಮಾತ್ರ ಕೇಳುವಂತೆ ಅವರಿಗೆ ಇಷ್ಟವಾದ ಹಿನ್ನಲೆ ಸಂಗೀತವನ್ನು ಡಿಜಿಟಲ್ ಅಸಿಸ್ಟೆಂಟ್ ಕೇಳಿಸುತ್ತದೆ.
ಇನ್ನು ಅಡುಗೆಮನೆಗೆ ಬಂದರೆ, ತಿಂಡಿ ಕಾಫಿಗೆ ಏನು ಮಾಡುವುದು ಎನ್ನುವ ಯೋಚನೆ ಬೇಡ. ನಿಮ್ಮ ರೆಫ್ರಿಜರೇಟರ್‌ನಲ್ಲಿ ಎಷ್ಟು ಹಾಲಿದೆ, ಯಾವ ತರಕಾರಿಗಳಿವೆ ಎನ್ನುವ ವಿವರಗಳನ್ನು, ಕಾಫಿಪುಡಿ, ಸಕ್ಕರೆ ಡಬ್ಬಗಳಲ್ಲಿ ಎಷ್ಟು ಕಾಫಿಪುಡಿ, ಸಕ್ಕರೆ ಇದೆ ಮೊದಲಾದ ವಿವರಗಳನ್ನು ಡಿಜಿಟಲ್ ಅಸಿಸ್ಟೆಂಟ್ ನಿಮಗೆ ತಿಳಿಸುತ್ತದೆ. ಅಷ್ಟೇ ಅಲ್ಲ, ಮನೆಯಲ್ಲಿರುವ ತರಕಾರಿಗಳನ್ನು ಬಳಸಿ ಉಪಾಹಾರಕ್ಕೆ ಏನು ತಿಂಡಿ ಮಾಡಬಹುದು, ಯಾವ ತಿಂಡಿ ಮಾಡಲು ಎಷ್ಟು ಸಮಯ ಬೇಕು, ಈ ತಿಂಡಿಗಳನ್ನು ಮಾಡುವುದು ಹೇಗೆ ಎನ್ನುವ ವಿವರಗಳನ್ನು ಈ ಡಿಜಿಟಲ್ ಅಸಿಸ್ಟೆಂಟ್ ನೀಡಬಲ್ಲದು. ಇನ್ನು ನೀವು ಕಾಫಿ, ತಿಂಡಿ ತಯಾರಿಸಲು ಎಷ್ಟು ಕಾಫಿಪುಡಿ, ಸಕ್ಕರೆ, ಹಾಲು, ದಿನಸಿಗಳನ್ನು ಬಳಸಿದಿರಿ ಎಂದು ಗಮನಿಸುವ ಸ್ಮಾರ್ಟ್ ಕಿಚನ್ ವ್ಯವಸ್ಥೆ, ಯಾವ ವಸ್ತುಗಳು ಖಾಲಿಯಾಗಿವೆ ಅಥವಾ ಖಾಲಿಯಾಗುವ ಹಂತಕ್ಕೆ ಬಂದಿವೆ ಎಂದು ಗುರುತಿಸಿ, ಅವುಗಳನ್ನು ಖರೀದಿಸಲು ಆನ್‍ಲೈನ್ ಶಾಪಿಂಗ್ ಮಾಡುತ್ತದೆ. ಹೀಗೆ ಆನ್‍ಲೈನ್ ಶಾಪಿಂಗ್‍ನಲ್ಲಿ ಖರೀದಿಸಲಾದ ವಸ್ತುಗಳಿಗೆ ಹಣ ಪಾವತಿಯನ್ನು ನೀವು ಸ್ಮಾರ್ಟ್ ಫೋನ್ ಬಳಸಿ ಮಾಡಬಹುದು.
ಇನ್ನು ನೀವು ತಿಂಡಿ, ಕಾಫಿ ಸೇವಿಸಿದ ನಂತರ ಅಥವಾ ಮೊದಲು ಔಷಧಗಳನ್ನು ತಗೆದುಕೊಳ್ಳವವರಾದರೆ, ಅದನ್ನು ನಿಮಗೆ ಜ್ಞಾಪಿಸುವ ಕೆಲಸವನ್ನೂ ಡಿಜಿಟಲ್ ಅಸಿಸ್ಟೆಂಟ್ ಮಾಡುತ್ತದೆ.
ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಕಾರ್ಯನಿಮಿತ್ತ ಮನೆಯಿಂದ ಹೊರಡುವಿರಿ. ಬಾಯ್ಲರ್‌ನ ಸ್ವಿಚ್ ಆರಿಸಿಲ್ಲ, ರೂಮಿನಲ್ಲಿ ಫ್ಯಾನ್ ತಿರುಗುತ್ತಿದೆ, ಲೈಟ್ ಆರಿಸಿಲ್ಲ ಎನ್ನುವ ಚಿಂತೆ ಬೇಡ. ನಿಮ್ಮ ಸ್ಮಾರ್ಟ್ ಫೋನ್‍ನಿಂದ ಸೂಚನೆ ನೀಡಿದರೆ ಸಾಕು, ಮನೆಯಲ್ಲಿರುವ ವಿದ್ಯುತ್ ದೀಪಗಳು, ಟಿ.ವಿ ಮೊದಲಾದ ಗೃಹೋಪಕರಣಗಳನ್ನು ಆನ್ ಅಥವಾ ಆಫ್ ಮಾಡಬಹುದು. ಈ ಕಷ್ಟವೂ ಬೇಡವೆಂದರೆ ಮನೆಯಲ್ಲಿರುವ ಸ್ಮಾರ್ಟ್ ವ್ಯವಸ್ಥೆ ನೀವು ಮರೆತು ಹೋದ ಬಾಯ್ಲರ್, ಟಿ.ವಿ, ದೀಪಗಳನ್ನು ಆರಿಸುವ ಕೆಲಸವನ್ನು ಮಾಡುತ್ತದೆ. ಯಾರೋ ಮರೆತು ನಲ್ಲಿಯಲ್ಲಿ ನೀರು ಬಿಟ್ಟಿದ್ದರೆ ಅದನ್ನು ಗುರುತಿಸಿ, ನೀರು ಪೋಲಾಗುವುದನ್ನು ಕೂಡ ಈ ವ್ಯವಸ್ಥೆ ತಡೆಯಬಲ್ಲದು.
ಮನೆಯಲ್ಲಿ ಯಾರೂ ಇಲ್ಲ, ಆದರೆ ಮನೆಗೆ ಯಾರೋ ಬಂದಿದ್ದಾರೆ ಏನು ಮಾಡುವುದು ಎನ್ನುವ ಚಿಂತೆ ಬೇಡ. ನಿಮ್ಮ ಮನೆಯಲ್ಲಿರುವ ಸ್ಮಾರ್ಟ್ ಕ್ಯಾಮೆರಾ ಮತ್ತು ತಂತ್ರಾಂಶದ ಸಹಾಯದಿಂದ, ಮನೆಗೆ ಬಂದವರು ಯಾರು ಎಂದು ನಿಮ್ಮ ಸ್ಮಾರ್ಟ್ ಫೋನ್‍ನಲ್ಲಿ ನೋಡಬಹುದು. ಬಂದವರ ಜೊತೆ ಮಾತನಾಡುವುದಿದ್ದರೆ, ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ಮಾತನಾಡಬಹುದು ಕೂಡ. ಯಾರಾದರೂ ಕಳ್ಳತನದಂತಹ ಅಪರಾಧ ಮಾಡಲು ಬಂದರೆ, ಸ್ಮಾರ್ಟ್ ವ್ಯವಸ್ಥೆ ತಕ್ಷಣ ನಿಮಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ತುರ್ತು ಕರೆಯ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ಅಪರಾಧಕೃತ್ಯಕ್ಕೆ ಯತ್ನಿಸುತ್ತಿರುವಾಗಲೇ ಅಪರಾಧಿಗಳನ್ನು ಬಂಧಿಸಲು ಪೋಲಿಸರಿಗೂ ಸಹಾಯವಾದಂತಾಗುತ್ತದೆ.
ಈವರೆಗೆ ನೀಡಿದ ವಿವರಗಳು ಸಾಮಾನ್ಯವಾಗಿ ಸ್ಮಾರ್ಟ್ ಮನೆಗಳಲ್ಲಿ ಕಾಣುವ ವ್ಯವಸ್ಥೆ ಮತ್ತು ಸೌಲಭ್ಯಗಳು. ನಿಮಗೆ ಇಷ್ಟವಾದಂತೆ ಸ್ಮಾರ್ಟ್ ಮನೆಯ ಸೌಲಭ್ಯಗಳನ್ನು ಮಾಡಿಕೊಳ್ಳಬಹುದು ಕೂಡ. ದಿನಬಳಕೆಯ ವಿದ್ಯುತ್, ನೀರು ಮೊದಲಾದ ಸೌಲಭ್ಯಗಳಲ್ಲಿ ಮಿತವ್ಯಯ ಸಾಧಿಸಬೇಕು ಎಂದು ಕೆಲವರು ಅದ್ಯತೆ ನೀಡಿದರೆ, ಮನೆಯ ಸುರಕ್ಷತೆಗೆ ಕೆಲವರು ಅದ್ಯತೆ ನೀಡುತ್ತಾರೆ, ಮನೆಯಲ್ಲಿ ಅತ್ಯಾಧುನಿಕ ಮನರಂಜನೆ ಸೌಲಭ್ಯಗಳಿರಬೇಕು ಎಂದು ಕೆಲವರು ಬಯಸಿದರೆ, ಸ್ಮಾರ್ಟ್ ವ್ಯವಸ್ಥೆ ಇರುವ ಅಡುಗೆಮನೆ ಕೆಲವರಿಗೆ ಇಷ್ಟವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.