ADVERTISEMENT

2020ರಲ್ಲಿ ಫೇಸ್‌ಬುಕ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ ಆಗಿದೆ ಟಿಕ್‌ಟಾಕ್: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2020, 7:47 IST
Last Updated 11 ಡಿಸೆಂಬರ್ 2020, 7:47 IST
ಟಿಕ್‌ಟಾಕ್ ಮತ್ತು ಫೇಸ್‌ಬುಕ್ ಲೋಗೊ (ರಾಯಿಟರ್ಸ್ ಚಿತ್ರ)
ಟಿಕ್‌ಟಾಕ್ ಮತ್ತು ಫೇಸ್‌ಬುಕ್ ಲೋಗೊ (ರಾಯಿಟರ್ಸ್ ಚಿತ್ರ)   

ನವದೆಹಲಿ: ವಿಶ್ವದಾದ್ಯಂತ 2020ರಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆ್ಯಪ್‌ಗಳ ಯಾದಿಯಲ್ಲಿ ಫೇಸ್‌ಬುಕ್‌ ಅನ್ನು ಟಿಕ್‌ಟಾಕ್ ಹಿಂದಿಕ್ಕಿದೆ ಎಂದು ಮೊಬೈಲ್ ಆ್ಯಪ್ ವಿಶ್ಲೇಷಣಾ ಕಂಪನಿ ‘ಆ್ಯಪ್ ಆನಿ’ ವರದಿ ತಿಳಿಸಿದೆ.

ವಿಡಿಯೊ ಕಾನ್ಫರೆನ್ಸ್ ಆ್ಯಪ್ ‘ಝೂಮ್’ 219 ಸ್ಥಾನ ಮೇಲೇರಿದ್ದು ವಾಟ್ಸ್‌ಆ್ಯಪ್ ಮೆಸೆಂಜರ್‌ ನಂತರದ ಸ್ಥಾನ ಕಾಯ್ದುಕೊಂಡಿದೆ.

ಮುಂದಿನ ವರ್ಷದ ವೇಳೆಗೆ ಟಿಕ್‌ಟಾಕ್‌ 100 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಉಳಿದಂತೆ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಸೇರಿ ಫೇಸ್‌ಬುಕ್‌ನ ಒಡೆತನದ ಆ್ಯಪ್‌ಗಳು ಅತಿಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್‌ಗಳ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಗುರುತಿಸಿಕೊಂಡಿವೆ.

ADVERTISEMENT

ಪ್ರಪಂಚದಾದ್ಯಂತ ಅನೇಕ ಉದ್ಯಮಗಳ ಕಾರ್ಯವೈಖರಿ ಬದಲಾಗಿರುವುದರಿಂದ ಝೂಮ್ ಮತ್ತು ಗೂಗಲ್ ಮೀಟ್ ಆ್ಯಪ್‌ಗಳ ಡೌನ್‌ಲೋಡ್‌ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ಮೊಬೈಲ್ ಬಳಕೆ ಸಂಖ್ಯೆಯೂ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ 2021ರಲ್ಲಿಯೂ ಮನೆಯಿಂದಲೇ ಮೊಬೈಲ್ ಸೇವೆಗಳ ಬಳಕೆ ಪ್ರಮಾಣವೂ ಹೆಚ್ಚಿರಲಿದೆ. ‘ಕೋವಿಡ್–19 ಲಸಿಕೆಗೆ ಸಂಬಂಧಿಸಿ ನವೆಂಬರ್‌ನಲ್ಲಿ ಆಶಾದಾಯಕ ಸುದ್ದಿ ಬಿತ್ತರವಾಗಿದೆ. ಜಗತ್ತು ಸಹಜ ಸ್ಥಿತಿಗೆ ಮರಳುವ ವೇಳೆಯೂ ಮೊಬೈಲ್‌ ಸಂಪರ್ಕದ ಕೇಂದ್ರ ಬಿಂದುವಾಗಿ ಇರಲಿದೆ’ ಎಂದೂ ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.