ADVERTISEMENT

ವಿಂಡೋಸ್ 11ರಲ್ಲಿ ಕೆಲಸ ಸುಲಭವಾಗಿಸಲು ಒಂದಿಷ್ಟು ಟ್ರಿಕ್ಸ್ ಇಲ್ಲಿವೆ..

ಅವಿನಾಶ್ ಬಿ.
Published 3 ಮೇ 2022, 15:49 IST
Last Updated 3 ಮೇ 2022, 15:49 IST
ಮೈಕ್ರೋಸಾಫ್ಟ್ ವಿಂಡೋಸ್ 11
ಮೈಕ್ರೋಸಾಫ್ಟ್ ವಿಂಡೋಸ್ 11   

ಕಂಪ್ಯೂಟರ್ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಬಳಸುತ್ತಿರುವವರಲ್ಲಿ ಹೆಚ್ಚಿನ ಮಂದಿ ಇತ್ತೀಚೆಗೆ ಹೊಚ್ಚ ಹೊಸ ವಿಂಡೋಸ್ 11 ಕಾರ್ಯಾಚರಣೆ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿರಬಹುದು ಅಥವಾ ಹೊಸ ವಿಂಡೋಸ್ ಸಾಧನ ಖರೀದಿಸಿದಾಗ ವಿಂಡೋಸ್ 11 ಜೊತೆಯಾಗಿ ಬಂದಿರಬಹುದು. ಹೊಸ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಬಂದಾಗಲೆಲ್ಲಾ ಏನೋ ವಿಶೇಷವಿದೆ ಎಂಬ ಬಗ್ಗೆ ಕುತೂಹಲ ಸಹಜ. ಹಿಂದಿನ ಸಾಧನಗಳಂತಲ್ಲದ ವಿಂಡೋಸ್ 11 ಒಎಸ್, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇಂಥದ್ದರಲ್ಲಿ, ಈ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯ ಪರಿಪೂರ್ಣ ಪ್ರಯೋಜನಕ್ಕೆ ಸಹಕರಿಸಬಲ್ಲ ಕೆಲವೊಂದು ಟಿಪ್ಸ್ ಇಲ್ಲಿವೆ.

ಹಿಂದಿನ ಸ್ಥಾನಕ್ಕೆ ಟಾಸ್ಕ್‌ಬಾರ್
ವಿಂಡೋಸ್‌ನಲ್ಲಿ ಸ್ಟಾರ್ಟ್ ಬಟನ್ ಹಾಗೂ ಟಾಸ್ಕ್ ಬಾರ್‌ನಲ್ಲಿರುವ (ಕೆಳಭಾಗದಲ್ಲಿ ಅಪ್ಲಿಕೇಶನ್‌ಗಳ ಐಕಾನ್‌ಗಳಿರುವ ಪಟ್ಟಿ) ಐಕಾನ್‌ಗಳು ಈಗ ಮಧ್ಯ ಭಾಗಕ್ಕೆ ಬಂದಿರುವುದನ್ನು ಹೆಚ್ಚಿನವರು ಗಮನಿಸಿರಬಹುದು. ಬಹುತೇಕರಿಗೆ ಇದು ಇಷ್ಟವಾಗಿದೆ. ಆದರೆ, ಹಿಂದಿನ ರೀತಿಯಲ್ಲೇ ಎಡಭಾಗದಲ್ಲೇ ಈ ಟಾಸ್ಕ್ ಬಾರ್ ಗೋಚರಿಸಬೇಕೆಂದಾದರೆ, ಟಾಸ್ಕ್ ಬಾರ್ ಮೇಲೆ ಬಲ-ಕ್ಲಿಕ್ ಮಾಡಿ, ಟಾಸ್ಕ್‌ಬಾರ್ ಸೆಟ್ಟಿಂಗ್ಸ್ ಆಯ್ಕೆ ಮಾಡಿ, ಕೆಳಭಾಗದಲ್ಲಿ 'ಟಾಸ್ಕ್‌ಬಾರ್ ಬಿಹೇವಿಯರ್ಸ್' ವಿಭಾಗಕ್ಕೆ ಹೋದಾಗ, ಆರಂಭದಲ್ಲಿರುವ 'ಟಾಸ್ಕ್‌ಬಾರ್ ಅಲೈನ್‌ಮೆಂಟ್'ನ ಬಲಕ್ಕಿರುವ ಡ್ರಾಪ್‌ಡೌನ್ ಮೆನುವಿನಿಂದ 'ಎಡ' ಆಯ್ಕೆ ಮಾಡಿದರಾಯಿತು.

ಸೆಟ್ಟಿಂಗ್ಸ್‌ಗೆ ನೇರವಾಗಿ ಹೋಗಲು
ಕಂಪ್ಯೂಟರ್‌ನ ಸೆಟ್ಟಿಂಗ್ಸ್ ವಿಭಾಗಕ್ಕೆ ನೇರವಾಗಿ ಹೋಗಲು ಶಾರ್ಟ್‌ಕಟ್ ವಿಧಾನ ಎಂದರೆ ಕೀಬೋರ್ಡ್‌ನಲ್ಲಿರುವ ವಿಂಡೋಸ್ ಬಟನ್ ಹಾಗೂ ಐ (I) ಅಕ್ಷರಗಳನ್ನು ಏಕಕಾಲಕ್ಕೆ ಒತ್ತುವುದು.

ಫೋಕಸ್ ಅಸಿಸ್ಟ್
ತುಂಬ ತುರ್ತಾದ ಮತ್ತು ಏಕಾಗ್ರತೆ ಬಯಸುವ ಕೆಲಸ ಮಾಡುತ್ತಿರುವಾಗ, ನೋಟಿಫಿಕೇಶನ್‌ಗಳಿಂದ ತೊಂದರೆಯಾಗದಂತೆ ವ್ಯವಸ್ಥೆಗೊಳಿಸುವ ವೈಶಿಷ್ಟ್ಯವೇ ಫೋಕಸ್ ಅಸಿಸ್ಟ್. ನೋಟಿಫಿಕೇಶನ್‌ಗಳ ಮೇಲೆ ನಿಯಂತ್ರಣ ಹೇರಲು, ಸೆಟ್ಟಿಂಗ್ಸ್ ತೆರೆದು, 'ಸಿಸ್ಟಂ' ವಿಭಾಗದಲ್ಲಿ 'ಫೋಕಸ್ ಅಸಿಸ್ಟ್' ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಅಲಾರಂ ಮಾತ್ರ ಎಂದು ಆಯ್ಕೆ ಮಾಡಿದಲ್ಲಿ, ಅಲಾರಂ ಹೊರತಾಗಿ ಬೇರೆಲ್ಲ ನೋಟಿಫಿಕೇಶನ್‌ಗಳು ಕಾಣಿಸುವುದಿಲ್ಲ. ಇಲ್ಲೇ ಆದ್ಯತೆಯುಳ್ಳವನ್ನು ಮಾತ್ರ ಅನುಮತಿ ನೀಡಲು ಆಯ್ಕೆ ಮಾಡಿಕೊಳ್ಳಬಹುದು. ಮತ್ತು ಯಾವ ಸಮಯದಲ್ಲಿ 'ಫೋಕಸ್ ಅಸಿಸ್ಟ್' ಸ್ವಯಂಚಾಲಿತವಾಗಿ ಚಾಲೂ ಆಗಬೇಕೆಂದು ಸಮಯವನ್ನು ಹೊಂದಿಸುವ ಆಯ್ಕೆಯೂ ಇಲ್ಲೇ ಇದೆ.

ವಿಂಡೋಗಳ ಜೋಡಣೆ
ಹೆಚ್ಚು ಅಪ್ಲಿಕೇಶನ್‌ಗಳನ್ನು ತೆರೆದಿಟ್ಟು ಹಲವು ವಿಂಡೋಗಳಲ್ಲಿ ಕೆಲಸ ಮಾಡಬೇಕಾಗಿ ಬಂದಾಗ, ಸ್ಕ್ರೀನ್‌ನಲ್ಲಿ ಇವು ಒಂದೇ ಕಡೆ ಗೋಚರಿಸಿದರೆ ಅನುಕೂಲವಾಗುತ್ತದೆ. ಇದಕ್ಕೆ ವಿಂಡೋಸ್ 11ರ 'ಸ್ನ್ಯಾಪ್' ವೈಶಿಷ್ಟ್ಯ ನೆರವಿಗೆ ಬರುತ್ತದೆ. ಯಾವುದೇ ವಿಂಡೋದ ಬಲ ಮೇಲ್ಭಾಗದಲ್ಲಿರುವ ದೊಡ್ಡದಾಗಿಸುವ/ಕಿರಿದಾಗಿಸುವ ಐಕಾನ್ (ಚೌಕಾಕೃತಿ) ಮೇಲೆ ಮೌಸ್ ಅನ್ನು ಹೋವರ್ ಮಾಡಿದರೆ (ಕ್ಲಿಕ್ ಮಾಡದೆ ಪಾಯಿಂಟರ್ ಮಾತ್ರ ತೋರಿಸಿದಾಗ), ತೆರೆದಿರುವ ವಿಂಡೋಗಳನ್ನು ಯಾವ ವಿನ್ಯಾಸದಲ್ಲಿ ಸ್ಕ್ರೀನ್ ಮೇಲೆ ಕಾಣಿಸುವಂತೆ ಜೋಡಿಸಬೇಕೆಂಬ (ಕೊಲಾಜ್ ರೂಪದಲ್ಲಿ) ಟೆಂಪ್ಲೇಟ್ ಕಾಣಿಸುತ್ತದೆ. ನಮಗೆ ಬೇಕಾಗಿರುವ ವಿನ್ಯಾಸದ (ಲೇಔಟ್) ಮೇಲೆ ಕ್ಲಿಕ್ ಮಾಡಿದರಾಯಿತು.

ವಿಂಡೋಗಳನ್ನು ಬದಲಿಸಲು
ತೆರೆದಿರುವ ವಿಂಡೋಗಳು ಮತ್ತು ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸಿಕೊಳ್ಳುವುದಕ್ಕಾಗಿ ಆಲ್ಟ್+ಟ್ಯಾಬ್ ಕೀಲಿಯನ್ನು ಹೆಚ್ಚಿನವರು ಬಳಸಿರಬಹುದು. ವಿಂಡೋಸ್ 11ರಲ್ಲಿ ಹೊಸ ವೈಶಿಷ್ಟ್ಯವೇನೆಂದರೆ, ಬ್ರೌಸರ್‌ನಲ್ಲಿ ತೆರೆದಿರುವ ಹಲವು ಟ್ಯಾಬ್‌ಗಳಲ್ಲಿ ತೆರೆದುಕೊಂಡಿರುವ ಪ್ರತ್ಯೇಕ ಪುಟಗಳಿಗೂ ಇದೇ ಕೀಲಿ ಸಂಯೋಜನೆಯನ್ನು ಬಳಸಬಹುದಾಗಿದೆ. ಇದು ಬೇಡವೆಂದಾದರೆ, ಸೆಟ್ಟಿಂಗ್ಸ್>ಸಿಸ್ಟಂ ಎಂಬಲ್ಲಿರುವ Alt+Tab ಪಕ್ಕದಲ್ಲಿರುವ ಡ್ರಾಪ್‌ಡೌನ್ ಮೆನುವಿನಲ್ಲಿ 'ಓಪನ್ ವಿಂಡೋಸ್ ಓನ್ಲಿ' ಆಯ್ಕೆ ಮಾಡಿಕೊಂಡರಾಯಿತು.

ವಿಜೆಟ್‌ಗಳ ಶಾರ್ಟ್ ಕಟ್
ಟಾಸ್ಕ್ ಬಾರ್‌ನಲ್ಲಿರುವ ನೀಲಿ ಬಣ್ಣದ ಬಟನ್ ಅಥವಾ ಕೀಬೋರ್ಡ್‌ನಲ್ಲಿರುವ ವಿಂಡೋಸ್ ಬಟನ್ ಒತ್ತಿದಾಗ, ಒಂದು ವಿಂಡೋದಲ್ಲಿ ಹಲವು ಆ್ಯಪ್‌ಗಳ ವಿಜೆಟ್ ಕಾಣಿಸುತ್ತದೆ. ಹೆಚ್ಚು ಬಳಸುವ ಆ್ಯಪ್ ಅಥವಾ ಅಪ್ಲಿಕೇಶನ್‌ಗಳನ್ನು ಈ ಜಾಗದಲ್ಲಿ ಶಾರ್ಟ್‌ಕಟ್ ರೂಪದಲ್ಲಿ ಜೋಡಿಸಿಟ್ಟುಕೊಳ್ಳಬಹುದು. ಇದಕ್ಕಾಗಿ, ಈ ಬಟನ್ ಕ್ಲಿಕ್ ಮಾಡಿದಾಗ, ಆ್ಯಪ್ ಶಾರ್ಟ್‌ಕಟ್ಸ್ ಕಾಣಿಸುತ್ತವೆ. ಅವುಗಳ ಮೇಲೆ ಬಲ-ಕ್ಲಿಕ್ ಮಾಡಿದಾಗ, ಬೇಕಾದವುಗಳನ್ನು ಸೇರಿಸುವ, ಬೇಡದಿರುವ ಆ್ಯಪ್‌ಗಳನ್ನು ಅಲ್ಲಿಂದ ತೆಗೆಯುವ ಆಯ್ಕೆಗಳು ಕಾಣಿಸುತ್ತವೆ.

ಪ್ರೋಗ್ರಾಂಗಳು, ಅಪ್ಲಿಕೇಶನ್‌ಗಳಿಗೆ ಶಾರ್ಟ್‌ಕಟ್ಸ್
ವಿಂಡೋಸ್ 11ರ ವಿಭಿನ್ನ ಅಪ್ಲಿಕೇಶನ್‌ಗಳಿಗೆ ಹೋಗುವುದಕ್ಕಾಗಿರುವ ಮೆನುವನ್ನು ನೋಡುವುದಕ್ಕಾಗಿ ಸುಲಭವಾದ ವಿಧಾನವೆಂದರೆ, ಸ್ಟಾರ್ಟ್ ಬಟನ್ (ನಾಲ್ಕು ನೀಲಿ ಚೌಕಗಳಿರುವ) ಮೇಲೆ ಬಲ-ಕ್ಲಿಕ್ ಮಾಡಿ ಅಥವಾ ಕೀಬೋರ್ಡ್‌ನಲ್ಲಿರುವ ವಿಂಡೋಸ್ ಬಟನ್ ಹಾಗೂ X ಕೀ ಒತ್ತಿದರೆ ಸಾಕಾಗುತ್ತದೆ.

ಟಾಸ್ಕ್ ಬಾರ್ ಮರೆಯಾಗಿಸುವುದು
ಸ್ಕ್ರೀನ್‌ನ ತಳಭಾಗದಲ್ಲಿ ಹಲವು ಆ್ಯಪ್‌ಗಳಿಗೆ ಶಾರ್ಟ್‌ಕಟ್ ಐಕಾನ್‌ಗಳಿರುವ ಟಾಸ್ಕ್ ಬಾರ್ ಇರುತ್ತದೆಯಲ್ಲವೇ? ಇದನ್ನು ತಾತ್ಕಾಲಿಕವಾಗಿ ಮರೆಯಾಗಿಸಿದರೆ, ಕೆಲಸ ಮಾಡುವ ವಿಂಡೋವನ್ನು ಪೂರ್ಣ ಪರದೆಯಲ್ಲಿ ನೋಡಬಹುದು. ಇದಕ್ಕಾಗಿ ಟಾಸ್ಕ್‌ಬಾರ್‌ನ ಖಾಲಿ ಜಾಗದಲ್ಲಿ ಬಲ-ಕ್ಲಿಕ್ ಮಾಡಿದಾಗ, ಟಾಸ್ಕ್ ಬಾರ್ ಸೆಟ್ಟಿಂಗ್ಸ್ ಕಾಣಸಿಗುತ್ತದೆ. ತಳಭಾಗದಲ್ಲಿರುವ ಟಾಸ್ಕ್‌ಬಾರ್ ಬಿಹೇವಿಯರ್ಸ್ ವಿಭಾಗದಲ್ಲಿ, ಟಾಸ್ಕ್‌ಬಾರ್ ಅನ್ನು ಸ್ವಯಂ ಆಗಿ ಮರೆಯಾಗಿಸುವ (Automatically hide the taskbar) ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರಾಯಿತು. ಹೀಗೆ ಮಾಡಿದರೆ, ನೀವು ಮೌಸ್ ಪಾಯಿಂಟರನ್ನು ಸ್ಕ್ರೀನ್‌ನ ಕೆಳಭಾಗಕ್ಕೆ ತಂದಾಗ ಮಾತ್ರವೇ ಟಾಸ್ಕ್‌ಬಾರ್ ಕಾಣಿಸುತ್ತದೆ.

ನೇರವಾಗಿ ಡೆಸ್ಕ್‌ಟಾಪ್ ನೋಡಲು
ಎಲ್ಲ ವಿಂಡೋಗಳನ್ನು ಬದಿಗಿಟ್ಟು, ನೇರವಾಗಿ ಡೆಸ್ಕ್‌ಟಾಪ್ ಸ್ಕ್ರೀನ್‌ಗೆ ಹೋಗಬೇಕೆಂದಾದರೆ, ಕೀಬೋರ್ಡ್‌ನಲ್ಲಿರುವ ವಿಂಡೋಸ್ ಬಟನ್ ಜೊತೆಗೆ H ಕೀಲಿ ಒತ್ತಿದರೆ, ಬೇರೆಲ್ಲ ವಿಂಡೋಗಳು ಅಡಗಿ, ಡೆಸ್ಕ್‌ಟಾಪ್ ಮಾತ್ರವೇ ಗೋಚರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.