ADVERTISEMENT

4.75 ಕೋಟಿ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ₹75,000ಕ್ಕೆ ಮಾರಾಟ?

ಏಜೆನ್ಸೀಸ್
Published 27 ಮೇ 2020, 13:22 IST
Last Updated 27 ಮೇ 2020, 13:22 IST
ಟ್ರೂಕಾಲರ್‌–ಸಾಂಕೇತಿಕ ಚಿತ್ರ
ಟ್ರೂಕಾಲರ್‌–ಸಾಂಕೇತಿಕ ಚಿತ್ರ   

ಬೆಂಗಳೂರು: ಭಾರತದ 4.75 ಕೋಟಿ ಬಳಕೆದಾರರ ಟ್ರೂಕಾಲರ್‌ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಮಾರಾಟಕ್ಕಿದೆ. ಸೈಬರ್‌ ಅಪಾಯಗಳು, ಮಾಹಿತಿ ಸೋರಿಕೆಗಳ ಕುರಿತು ವರದಿ ಮಾಡುವ ಸೈಬರ್‌ ಈ ಸಂಬಂಧ ವರದಿ ಪ್ರಕಟಿಸಿದೆ. ಆದರೆ, ಡೇಟಾಬೇಸ್‌ನಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಟ್ರೂಕಾಲರ್‌ ಹೇಳಿದೆ.

2019ರಿಂದ ಟ್ರೂಕಾಲರ್‌ ಬಳಕೆದಾರರ ರಾಜ್ಯಗಳು ಹಾಗೂ ನಗರವಾರು ವರ್ಗೀಕರಿಸಲಾಗಿರುವ ಮಾಹಿತಿ ಲಭ್ಯವಿದ್ದು, ಅಂದಾಜು ₹75,000ಕ್ಕೆ ಖರೀದಿಸಬಹುದಾಗಿದೆ. ಫೋನ್‌ ನಂಬರ್‌, ನೆಟ್‌ವರ್ಕ್‌ ಸೇವಾಧಾರ ಕಂಪನಿ, ಹೆಸರು, ಲಿಂಗ, ಇಮೇಲ್‌ ಐಡಿ, ಫೇಸ್‌ಬುಕ್‌ ಐಡಿ ಸೇರಿದಂತೆ ಹಲವು ವಿವರಗಳನ್ನು ಒಳಗೊಂಡ ಬಳಕೆದಾರರ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಸೋರಿಕೆಯಾಗಿದೆ.

ಸೈಬರ್‌ ತನ್ನ ಬ್ಲಾಗ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿ ವಿವರಗಳನ್ನು ಪ್ರಕಟಿಸಿದ್ದು,ಮಾಹಿತಿಬಳಸಿ ಹಗರಣಗಳು, ಗುರುತಿನ ಕಳ್ಳತನ ಹಾಗೂ ಸ್ಪ್ಯಾಮ್‌ ಆಗಬಹುದು ಎಂದು ಹೇಳಿದೆ. ವರದಿ ತಳ್ಳಿ ಹಾಕಿರುವ ಟ್ರೂಕಾಲರ್‌ ಅಂಥ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದಿದೆ.

'ಇದನ್ನುನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ನಮ್ಮ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ ಹಾಗೂ ಮಾಹಿತಿ ಸೋರಿಕೆಯಾಗಿಲ್ಲ. ಸಂಶಯಾಸ್ಪದ ಚಟುವಟಿಕೆಗಳ ಮೇಲೆ ನಾವು ಸದಾ ಗಮನಹರಿಸಿರುತ್ತೇವೆ, ಬಳಕೆದಾರರ ಖಾಸಗಿತದ ಬಗ್ಗೆ ನಾವು ಬಹಳ ಗಂಭೀರವಾಗಿದ್ದೇವೆ. 2019ರ ಮೇನಲ್ಲೂ ಸಹ ಇಂಥದ್ದೇ ಮಾಹಿತಿ ಮಾರಾಟದ ಬಗ್ಗೆ ತಿಳಿದು ಬಂದಿತ್ತು. ಹಿಂದೆ ಇದ್ದಂತಹ ಮಾಹಿತಿಯೇ ಈಗಲೂ ತೋರಿರುವುದು ಕಂಡು ಬಂದಿದೆ. ಹಲವು ಫೋನ್‌ ನಂಬರ್‌ಗಳನ್ನು ಜೊತೆಗೂಡಿಸಿ ಅದಕ್ಕೆ ಟ್ರೂಕಾಲರ್‌ ಸ್ಟ್ಯಾಂಪ್‌ ಹಾಕುವುದು ದುಷ್ಟರಿಗೆ ಸುಲಭದ ಕೆಲಸ. ಇದರಿಂದಾಗಿ ಜೋಡಿಸಲಾದ ಡೇಟಾಗೆ ಸ್ವಲ್ಪ ಮಟ್ಟಿನ ಅಧಿಕೃತತೆ ಸಿಕ್ಕಿದಂತಾಗಿ, ಅದನ್ನು ಮಾರಾಟ ಮಾಡಲು ಸುಲಭವಾಗುತ್ತದೆ. ಜನರಿಗೆ ಮೋಸ ಮಾಡಿ ಹಣ ಸುಲಿಗೆ ಮಾಡುವ ಪ್ರಯತ್ನಗಳಿವು. ಇದಕ್ಕೆ ಕಿವಿಗೊಡಬೇಡಿ' ಎಂದು ಟ್ರೂಕಾಲರ್‌ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.