ನವದೆಹಲಿ:ಡೀಸೆಲ್, ಪೆಟ್ರೋಲ್ ಚಾಲಿತ ವಾಹನಗಳಿಗೆ ಇಂಧನ ತುಂಬಿಸಿದಂತೆ ಎಲೆಕ್ಟ್ರಿಕ್ ವಾಹನಗಳಿಗೆ ಎಲ್ಲೆಂದರಲ್ಲಿ ರಿಚಾರ್ಜ್ ಮಾಡುವುದು ಕಷ್ಟ. ಇದೂ ಕೂಡ ಮೊಬೈಲ್ ಫೋನ್ ಚಾರ್ಜ್ ಮಾಡಿದಷ್ಟೇ ಸುಲಭವಾಗುವ ದಿನಗಳು ಸದ್ಯದಲ್ಲೇ ಬರಬಹುದು!
‘ಮೀರತ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಂಐಇಟಿ)’ ಯ ವಿದ್ಯಾರ್ಥಿಯರಾದ ಸಾಗರ್ ಕುಮಾರ್ ಹಾಗೂ ರೋಹಿತ್ ರಾಜ್‌ಭರ್ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಸಂಶೋಧಿಸಿದ್ದಾರೆ. ಈ ವ್ಯವಸ್ಥೆ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ರಿಚಾರ್ಜ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ. ಆದರೆ, ಕಡಿಮೆ ಸಂಖ್ಯೆಯ ಚಾರ್ಜಿಂಗ್ ಪಾಯಿಂಟ್‌ಗಳಿಂದಾಗಿ ದೀರ್ಘ ದೂರದ ಸಂಚಾರ ಎಲೆಕ್ಟ್ರಿಕ್ ವಾಹನಗಳಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಾಗರ್ ಕುಮಾರ್ ಹಾಗೂ ರೋಹಿತ್ ರಾಜ್‌ಭರ್ ಹೇಳಿದ್ದಾರೆ.
‘ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯಡಿ ರಸ್ತೆ ಬದಿಗಳಲ್ಲಿ ‘ಟವರ್’ಗಳನ್ನು ನಿರ್ಮಿಸಲಾಗುತ್ತದೆ. ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದು ‘ರಿಸೀವರ್’ ಅಳವಡಿಸಲಾಗುತ್ತದೆ. ಕಾರು ‘ಟವರ್’ನ ಸಂಪರ್ಕಕ್ಕೆ ಬಂದಾಗ ಅದರಲ್ಲಿರುವ ರಿಸೀವರ್ ಸಹಾಯದಿಂದ ಬ್ಯಾಟರಿ ಚಾರ್ಜ್ ಆಗಲು ಆರಂಭವಾಗುತ್ತದೆ. ಇದು ವೈರ್‌ಲೆಸ್ ಮೊಬೈಲ್ ಚಾರ್ಜರ್‌ನಂತೆಯೇ ಕೆಲಸ ಮಾಡುತ್ತದೆ’ ಎಂದು ಸಾಗರ್ ಹೇಳಿದ್ದಾರೆ.
‘ವೈರ್‌ಲೆಸ್ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್’ ವ್ಯವಸ್ಥೆ ಅಭಿವೃದ್ಧಿಪಡಿಸು ಬಗ್ಗೆ ಬಹಳ ಹಿಂದೆಯೇ ಚಿಂತನೆ ನಡೆಸಿದ್ದೆವು. ಆದರೆ ಹಣಕಾಸು ನೆರವು ಸಿಗದೆ ಸಮಸ್ಯೆ ಎದುರಿಸಬೇಕಾಯಿತು. ಆದರೆ, ‘ಅಟಲ್ ಕಮ್ಯುನಿಟಿ ಇನೊವೇಷನ್ ಸೆಂಟರ್’ ಸಂಪರ್ಕಿಸಿದ ಬಳಿಕ ನಮ್ಮ ಯೋಜನೆಗೆ ಹಣಕಾಸು ನೆರವು ದೊರೆಯಿತು. ಇದರಿಂದಾಗಿ ಸಂಶೋಧನೆ ಸುಲಭವಾಯಿತು ಎಂದು ರೋಹಿತ್ ತಿಳಿಸಿದ್ದಾರೆ.
ನಮ್ಮ ಕಾಲೇಜಿನ ‘ಅಟಲ್ ಕಮ್ಯುನಿಟಿ ಇನೊವೇಷನ್ ಸೆಂಟರ್’ ವಿದ್ಯಾರ್ಥಿಗಳ ಸಂಶೋಧನೆಗಳಿಗೆ ಪೂರಕವಾಗಿದೆ. ವಿದ್ಯಾರ್ಥಿಗಳ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿರುವ ಎಲ್ಲ ನೆರವನ್ನೂ ನಾವು ನೀಡುತ್ತೇವೆ ಎಂದು ಎಂಐಇಟಿ ಉಪಾಧ್ಯಕ್ಷ ಪುನೀತ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.