ADVERTISEMENT

PV Web Exclusive | ಯುಪಿಐ ಪಾವತಿ: ಮಾಹಿತಿ ಹಂಚಿಕೊಳ್ಳದಿರಿ

ವಿಶ್ವನಾಥ ಎಸ್.
Published 14 ನವೆಂಬರ್ 2020, 14:02 IST
Last Updated 14 ನವೆಂಬರ್ 2020, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಪರಿಚಿತ ಸಂಖ್ಯೆಯಿಂದ ಎಸ್‌ಎಂಎಸ್‌ ರೂಪದಲ್ಲಿ ಲಿಂಕ್‌ ಬರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ನಿಮ್ಮ ಮೊಬೈಲ್‌ಗೆ ₹ 10 ಸಾವಿರ ಕ್ಯಾಷ್‌ಬ್ಯಾಕ್‌ ಬಂದಿದೆ. ಅದನ್ನು ಪಡೆಯಲು ಲಿಂಕ್‌ ಕ್ಲಿಕ್‌ ಮಾಡಿ ಎಂದು ಅದರಲ್ಲಿ ಇರುತ್ತದೆ. ಕುತೂಹಲಕ್ಕಾಗಿ ಅಥವಾ ಕೈತಪ್ಪಿನಿಂದ ಆ ಲಿಂಕ್‌ ಕ್ಲಿಕ್‌ ಮಾಡಿದರೆ, ನಮ್ಮ ಖಾತೆಯಲ್ಲಿರುವ ಹಣ ವಂಚಕರ ಪಾಲಾಗುತ್ತದೆ.

ಮೊಬೈಲ್‌ ಯುಪಿಐ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಪರಿಚಯಿಸಿದ ಬಳಿಕ ದೇಶದಲ್ಲಿ ಡಿಜಿಟಲ್ ಪಾವತಿಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಜನರು ಹೆಚ್ಚು ಹೆಚ್ಚಾಗಿ ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ, ಭೀಮ್‌ ತರಹದ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಯುಪಿಐ ವ್ಯವಸ್ಥೆ ಬಳಸಿಕೊಂಡು ಬಹಳ ಸುಲಭವಾಗಿ ಹಣ ಪಾವತಿಸಬಹುದು. ಹೀಗಾಗಿಯೇ ಇದರ ಬಳಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಯುಪಿಐ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾಯಿತು.ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ ಪಾವತಿ ಪ್ರಮಾಣ ಶೇ 15ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮಾಹಿತಿ ನೀಡಿದೆ. ಸಕ್ರಿಯ ಬಳಕೆದಾರರ ಸಂಖ್ಯೆ 10 ಕೋಟಿಯನ್ನು ದಾಟಿದೆ. ಇದೇ ವೇಳೆ, ವಂಚನೆ ಪ್ರಕರಣಗಳೂ ದಿನೇ ದಿನೇ ಹೆಚ್ಚಾಗುತ್ತಿವೆ. ಹೀಗಾಗಿ ಯುಪಿಐ ಪಾವತಿ ವ್ಯವಸ್ಥೆ ಬಳಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಕ್ಷಣಗಳಲ್ಲಿ ಹಣ ವರ್ಗಾಯಿಸಲು, ವಸ್ತು, ಉಪಕರಣ ಖರೀದಿಗೆ ಹಣ ಪಾವತಿಸಲು ಯುಪಿಐ ಪಿನ್ ಬೇಕಾಗುತ್ತದೆ. ಹಣ ವರ್ಗಾವಣೆ ಮಾಡಬೇಕಿರುವ ವ್ಯಕ್ತಿಯು ತನ್ನ ಬ್ಯಾಂಕ್‌ ಖಾತೆಗೆ ಜೋಡಿಸಿರುವ ಮೊಬೈಲ್‌ಫೋನ್ ಸಂಖ್ಯೆಯನ್ನು ಹೇಳಿದರೆ ಸಾಕು, ಹಣ ವರ್ಗಾವಣೆ ಮಾಡಬಹುದು. ಈ ಅಂಶವನ್ನೆ ವರವಾಗಿ ಪರಿಗಣಿಸಿರುವ ಹ್ಯಾಕರ್ಸ್‌, ಯುಪಿಐ ಆಧರಿತ ಆ್ಯಪ್‌ಗಳನ್ನು ಬಳಸುತ್ತಿರುವವರಿಗೆ ವಹಿವಾಟು ನಡೆಸುವುದಕ್ಕೆ ನೆರವು ನೀಡುವುದಾಗಿ ಹೇಳಿ ಅವರ ಖಾತೆಯಿಂದ ಹಣ ಎಗರಿಸುತ್ತಿದ್ದಾರೆ.

ADVERTISEMENT

‘ನಿಮ್ಮ ಮೊಬೈಲ್‌ ನಂಬರ್‌ಗೆ ಪೇಟಿಎಂನಿಂದ ₹ 3,500 ಬಂದಿದೆ. ಅದನ್ನು ಪಡೆಯಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ’ ಎನ್ನುವ ಮೆಸೇಜ್‌ ಬಂತು. ಆದರೆ, ನನ್ನ ಆ ಮೊಬೈಲ್‌ ನಂಬರ್‌ನಲ್ಲಿ ಪೇಟಿಎಂ ಖಾತೆಯನ್ನೇ ತೆರೆದಿರಲಿಲ್ಲ. ಯಾವುದೇ ಬ್ಯಾಂಕ್‌ ವ್ಯವಹಾರಕ್ಕೂ ಆ ಮೊಬೈಲ್‌ ನಂಬರ್‌ ಜೋಡಿಸಿಲ್ಲ. ಹಾಗಾದರೆ ಕಳುಹಿಸಿದ್ದಾದರೂ ಯಾರು!? ಒಂದೊಮ್ಮೆ ಆ ಲಿಂಕ್‌ ಕ್ಲಿಕ್ ಮಾಡಿದ್ದರೆ ಅದು ಯಾವ ವಂಚನೆಯ ಜಾಲಕ್ಕೆ ಬೀಳಿಸುತ್ತಿತ್ತೋ ಗೊತ್ತಿಲ್ಲ. ಆದರೆ ಲಿಂಕ್ ಕ್ಲಿಕ್ ಮಾಡಲು ಸಹ ಪ್ರಯತ್ನಿಸದೆ ತಕ್ಷಣವೇ ಆ ಮೆಸೇಜ್‌ ಡಿಲೀಟ್ ಮಾಡಿದೆ.

ದಸರಾ ಸಂದರ್ಭದಲ್ಲಿ ಸ್ನೇಹಿತನೊಬ್ಬ ಹೀಗೆಯೇ ಮೊಬೈಲ್‌ಗೆ ಬಂದ ಲಿಂಕ್‌ ಕ್ಲಿಕ್ ಮಾಡಿ ₹ 30 ಸಾವಿರ ಕಳೆದುಕೊಂಡಿದ್ದಾನೆ. ಪೇಟಿಎಂ ಹೆಸರಿನಲ್ಲಿ ಅವನ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಅದರಲ್ಲಿ ಹಬ್ಬದ ಕೊಡುಗೆಯಾಗಿ ನಿಮಗೆ ₹ 1,000 ಬೋನಸ್‌ ದೊರೆತಿದೆ. ಅದನ್ನು ಪಡೆಯಲು ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಮೆಸೇಜ್‌ನಲ್ಲಿ ಇತ್ತು. ಯೋಚಿಸದೇ ಅದರ ಮೇಲೆ ಕ್ಲಿಕ್‌ ಮಾಡಿದ, ತಕ್ಷಣವೇ ‘ನಿಮ್ಮ ಯುಪಿಐ ಆ್ಯಪ್‌ನಿಂದ ₹ 30 ಸಾವಿರ ಕಡಿತ ಆಗಿದೆ’ ಅಂತ ಮತ್ತೊಂದು ಮೆಸೇಜ್‌ ಬಂತು.

ವಂಚನೆಯ ಮಾರ್ಗಗಳು ಯಾವುವು?

ಫಿಶಿಂಗ್‌: ವಂಚಕರು ನಕಲಿ ಇ–ಮೇಲ್‌/ಮೆಸೇಜ್‌ ಕಳುಹಿಸುವ ಮೂಲಕ ಬಳಕೆದಾರರ ಪಾಸ್‌ವರ್ಡ್‌ ಅಥವಾ ಪಿನ್‌ ಪಡೆಯುತ್ತಾರೆ. ಬ್ಯಾಂಕ್‌ಗಳ ಹೆಸರನ್ನು ಹೋಲುವಂತೆಯೇ ಇರುವ ಯುಆರ್‌ಎಲ್‌ ಅದಾಗಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಯುಪಿಐ ಪೇಮೆಂಟ್‌ ಆ್ಯಪ್‌ಗೆ ಹೋಗುತ್ತದೆ. ಆಗ ಅಲ್ಲಿ ಆಟೊ ಡೆಬಿಟ್‌ ಆಯ್ಕೆ ಕ್ಲಿಕ್ ಮಾಡುವಂತೆ ಕೇಳಲಾಗುತ್ತದೆ. ಅದಕ್ಕೆ ಅನುಮತಿ ಕೊಟ್ಟರೆ, ತಕ್ಷಣವೇ ಆ್ಯಪ್‌ನಿಂದ ದುಡ್ಡು ಕಟ್ ಆಗಲು ಶುರುವಾಗುತ್ತದೆ. ಬ್ಯಾಂಕ್‌ಗೆ ಸಂಬಂಧಿಸಿದ ಅಧಿಕೃತ ಜಾಲತಾಣದ ವಿಳಾಸ, ಇ–ಮೇಲ್‌ ಐಡಿಯನ್ನು ಸರಿಯಾಗಿ ಗಮನದಲ್ಲಿ ಇಟ್ಟುಕೊಳ್ಳಿ. ಸಾಮಾನ್ಯವಾಗಿ ಪಾಸ್‌ಬುಕ್‌ನಲ್ಲಿ ಇರುತ್ತವೆ.

ಪ್ಲೇ ಸ್ಟೋರ್‌ ಅಲ್ಲದೆ, ಬೇರೆ ಕಡೆಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದರಿಂದಲೂ ವಂಚನೆಗೆ ತುತ್ತಾಗುತ್ತೇವೆ. ಈ ರೀತಿಯಾಗಿ ಅನಧಿಕೃತ ಮೂಲಗಳಿಂದ ಡೌನ್‌ಲೋಡ್‌ ಮಾಡುವುದರಿಂದ ವಂಚಕರು ನಮ್ಮ ಹ್ಯಾಂಡ್‌ಸೆಟ್‌ನಲ್ಲಿ ಇರುವ ಡೆಟಾಗಳನ್ನು ಪಡೆಯಲು ಸುಲಭವಾಗಲಿದೆ. ಕೆಲವೊಮ್ಮೆ ಬ್ಯಾಂಕ್‌ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿ, ಖಾತೆಯನ್ನು ದೃಢೀಕರಿಸಲು ಥರ್ಡ್‌ ಪಾರ್ಟಿ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆಯೂ ಕೇಳುತ್ತಾರೆ. ಹಾಗೆ ಮಾಡಿದರೆ ಫೋನ್‌ ನಮ್ಮ ಕೈಯಲ್ಲಿ ಇದ್ದರೂ ಅದನ್ನು ನಿಯಂತ್ರಿಸುವ ರಿಮೋಟ್‌ ಅವರು ಹೊಂದಿರುತ್ತಾರೆ.

ನಕಲಿ ಜಾಲತಾಣ: ಬ್ಯಾಂಕ್‌ ಅಥವಾ ಸರ್ಕಾರದ ಸಂಘಸಂಸ್ಥೆ, ಎನ್‌ಪಿಸಿಐ, ಭೀಮ್‌ ಅಥವಾ ಇನ್ಯಾವುದೇ ಹೆಸರಿನಲ್ಲಿ ನಕಲಿ ಟ್ವಿಟರ್‌, ಫೇಸ್‌ಬುಕ್‌ ಖಾತೆಯನ್ನು ತೆರೆದು ವಂಚಿಸಲಾಗುತ್ತದೆ. ಮೇಲ್ನೋಟಕ್ಕೆ ಜಾಲತಾಣದಲ್ಲಿ ಯಾವುದೇ ಬದಲಾವಣೆ ಕಾಣಿಸದೇ, ಅಧಿಕೃತ ಎಂದೇ ಅನ್ನಿಸುತ್ತದೆ. ಅಂತಹ ಜಾಲತಾಣಗಳಲ್ಲಿ ನಿಮ್ಮ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ. ಯಾವುದೇ ರೀತಿಯ ಸಮಸ್ಯೆ ಇದ್ದರೂ ಆ ಬಗ್ಗೆ ಸಂಬಂಧಪಟ್ಟ ಅಧಿಕೃತ ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿಯೂ ಹೇಳಿಕೊಳ್ಳಬೇಡಿ. ಕೆಲವರು ಯುಪಿಐ ಸಂಬಂಧಿತ ಸಮಸ್ಯೆಗಳನ್ನು ಸ್ಕ್ರೀನ್‌ ಶಾಟ್‌ ತೆಗೆದು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹಾಕುತ್ತಾರೆ. ಇದರಿಂದ ವಂಚಕರಿಗೆ ಸುಲಭವಾಗಿ ನಮ್ಮ ಮಾಹಿತಿ ನೀಡಿದಂತಾಗುತ್ತದೆ. ಆಗ ಅವರು ಅಧಿಕಾರಿಗಳ ಸೋಗಿನಲ್ಲಿ ನಮ್ಮನ್ನು ಸಂಪರ್ಕಿಸಿ ವಂಚಿಸಲು ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಒಟಿಪಿ, ಯುಪಿಐ ಪಿನ್‌ ವಂಚನೆ: ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ಯುಪಿಐ ಖಾತೆಗೆ ₹ 10 ಸಾವಿರ ಬರುತ್ತದೆ ಎನ್ನುವ ಸಂದೇಶ ಕಳುಹಿಸಿ ವಂಚಿಸಲಾಗುತ್ತಿದೆ. ಅದನ್ನು ಕ್ಲಿಕ್‌ ಮಾಡಿದರೆ ನಮ್ಮ ಖಾತೆಗೆ ಹಣ ಬರುವುದಕ್ಕೆ ಬದಲಾಗಿ ನಮ್ಮ ಖಾತೆಯಿಂದ ಕಟ್ ಆಗುವಂತೆ ಆ ಲಿಂಕ್‌ ಅನ್ನು ರೂಪಿಸಲಾಗಿರುತ್ತದೆ.

ಸುರಕ್ಷತೆ ಹೇಗೆ?

* ಡೆಬಿಟ್‌ ಕಾರ್ಡ್‌ ಸಂಖ್ಯೆ, ಮುಕ್ತಾಯ ದಿನಾಂಕ, ಒಟಿಪಿ, ಯುಪಿಐ ಪಿನ್‌ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಬ್ಯಾಂಕ್‌ ಅಧಿಕಾರಿಗಳೆಂದು ಹೇಳಿಕೊಂಡು ಬರುವ ಕರೆಗಳನ್ನು ನಿರ್ಲಕ್ಷ್ಯ ಮಾಡಿ.

* ದೂರವಾಣಿ ಕರೆಯ ಮೂಲಕ/ಎಸ್‌ಎಂಎಸ್‌ ರೂಪದಲ್ಲಿ ಗ್ರಾಹಕರಿಂದ ಖಾತೆಗೆ ಯಾವುದೇ ಮಾಹಿತಿ ಪಡೆಯುವುದಿಲ್ಲ ಎಂದು ಬ್ಯಾಂಕ್‌ಗಳು ಪದೇ ಪದೇ ಹೇಳುತ್ತಲೆ ಇರುತ್ತವೆ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

* ಎಸ್‌ಎಂಎಸ್‌ ಮೂಲಕ ಬರುವ ಯಾವುದೇ ಅನಧಿಕೃತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಅಂತಹ ಸಂದೇಶಗಳನ್ನು ಫಾರ್ವರ್ಡ್‌ ಸಹ ಮಾಡಬೇಡಿ.

* ಯುಪಿಐನ ಎಂಪಿನ್‌ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

* ಬ್ಯಾಂಕ್‌ ಹೆಸರಿನಲ್ಲಿ ಅಲ್ಲದೆ, ಐಆರ್‌ಡಿಎಐ ಮತ್ತು ಇಪಿಎಫ್‌ಒ ಹೆಸರಿನಲ್ಲಿಯೂ ಮೆಸೇಜ್‌ ಬರುತ್ತದೆ. ಅವುಗಳನ್ನೂ ನಿರ್ಲಕ್ಷ್ಯ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.