ತಂತ್ರಜ್ಞಾನದ ಪ್ರಯೋಜನಗಳನ್ನೆಲ್ಲ ಬಾಚಿಕೊಂಡು, ದೂರದಲ್ಲೆಲ್ಲೋ ಇರುವ ನುರಿತತಜ್ಞರಿಂದ ರೋಗಿಯ ತಪಾಸಣೆ, ಮೇಲ್ವಿಚಾರಣೆ, ಚಿಕಿತ್ಸೆ, ಸಕಾಲಿಕ ಮಧ್ಯಪ್ರವೇಶದ ಮೂಲಕ ಅದೆಷ್ಟೋ ಮಂದಿಯ ಜೀವಗಳನ್ನು ಉಳಿಸುವ ಈ ವ್ಯವಸ್ಥೆಯು ತುರ್ತು ಚಿಕಿತ್ಸಾ ಕ್ಷೇತ್ರದಲ್ಲಿ ಮತ್ತು ಜನಸಾಮಾನ್ಯರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಸ್ಮಾರ್ಟ್ ಐಸಿಯು ಬಗ್ಗೆ ಒಂದಿಷ್ಟು ಮಾಹಿತಿ.
ವೈದ್ಯಕೀಯ ಕ್ಷೇತ್ರದಲ್ಲಿ ಸ್ಮಾರ್ಟ್ ಐಸಿಯು ಎಂಬುದೀಗ ಸದ್ದು ಮಾಡುತ್ತಿದೆ. ತಂತ್ರಜ್ಞಾನದ ಪ್ರಯೋಜನಗಳನ್ನೆಲ್ಲ ಬಾಚಿಕೊಂಡು, ದೂರದಲ್ಲೆಲ್ಲೋ ಇರುವ ನುರಿತ ತಜ್ಞರಿಂದ ರೋಗಿಯ ತಪಾಸಣೆ, ಮೇಲ್ವಿಚಾರಣೆ, ಚಿಕಿತ್ಸೆ, ಸಕಾಲಿಕ ಮಧ್ಯಪ್ರವೇಶದ ಮೂಲಕ ಅದೆಷ್ಟೋ ಮಂದಿಯ ಜೀವಗಳನ್ನು ಉಳಿಸುವ ಈ ವ್ಯವಸ್ಥೆಯು ತುರ್ತು ಚಿಕಿತ್ಸಾ ಕ್ಷೇತ್ರದಲ್ಲಿ ಮತ್ತು ಜನಸಾಮಾನ್ಯರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಏನಿದು ಸ್ಮಾರ್ಟ್ ಐಸಿಯು?
ಸುಲಭ ಲಭ್ಯತೆ ಮತ್ತು ಸ್ವೀಕಾರಾರ್ಹತೆಯಿಂದಾಗಿ ತಂತ್ರಜ್ಞಾನವು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಅದರ ವ್ಯಾಪಕತೆಗೆ ಪ್ರಮುಖ ಸವಾಲುಗಳೆಂದರೆ ಹೆಚ್ಚಿದ ಜನಸಾಂದ್ರತೆ, ಜೊತೆಗೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ದಿಢೀರ್ ಆರೋಗ್ಯ ಸಮಸ್ಯೆಗಳು! ಎಲ್ಲ ಪ್ರದೇಶಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳಿರುವ ಆಸ್ಪತ್ರೆಗಳಾಗಲೀ, ತಜ್ಞವೈದ್ಯರಾಗಲೀ ಇರುವುದು ಕಷ್ಟ. ಆಧುನಿಕ ತಂತ್ರಜ್ಞಾನವನ್ನು ಈ ಸಮಸ್ಯೆಯ ಪರಿಹಾರಕ್ಕೆ ಹೇಗೆ ಬಳಸಬಹುದು? ತಜ್ಞವೈದ್ಯರು ಅದೆಷ್ಟೋ ಸಾವಿರ ಕಿಲೋಮೀಟರ್ ದೂರದಲ್ಲಿದ್ದೇ ರೋಗಿಯೊಬ್ಬನ ಜೀವವನ್ನು ಉಳಿಸುವಂತಾಗಿರುವುದೇ ಈ ಯೋಚನೆಯ ಫಲ. ಇಷ್ಟರ ಮಟ್ಟಿಗೆ ದೂರಸಂಪರ್ಕ ತಂತ್ರಜ್ಞಾನವು ಬೆಳೆದಿದೆ. ದೂರವಾಣಿ ಈಗ ಮಾತುಕತೆಗಾಗಿ ಮಾತ್ರವೇ ಸೀಮಿತವಾಗದೆ, ಅದು ಸ್ಮಾರ್ಟ್ ಫೋನ್ ಆಗಿ ಪರಿವರ್ತನೆಗೊಂಡ ಬಳಿಕ, ಜನಜೀವನದ ಅವಿಭಾಜ್ಯ ಅಂಗವೂ ಆಗಿದೆ. ದೂರಸಂವಹನ ತಂತ್ರಜ್ಞಾನದ ಸುಧಾರಿತ ರೂಪವೇ ‘ಸ್ಮಾರ್ಟ್’ ಆಗಿರುವ ತುರ್ತು ನಿಗಾ ಘಟಕಗಳು - ‘ಸ್ಮಾರ್ಟ್ ಐಸಿಯು’ಗಳು. ಇಂತಿಂಥ ನಗರದ ಇಂಥ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ದಾರಿ ಮಧ್ಯೆಯೇ ಅಸು ನೀಗಿದರು ಎಂಬ ರೀತಿಯ ವರದಿಗಳಿನ್ನು ಕಡಿಮೆಯಾಗಬಹುದಾದ ಬೆಳವಣಿಗೆಯಿದು.
ಜೀವನ್ಮರಣದ ನಡುವೆ ಹೋರಾಡುವ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆಗೆ ಬೇಕಾಗಿರುವ ಸಕಲ ವ್ಯವಸ್ಥೆಗಳು ಎಲ್ಲ ಊರುಗಳಲ್ಲಿ ಮತ್ತು ಎಲ್ಲ ಆಸ್ಪತ್ರೆಗಳಲ್ಲಿ ಇರುವುದಿಲ್ಲ. ಇದಕ್ಕೆ ಕಾರಣವೆಂದರೆ, ಅದರ ಸ್ಥಾಪನೆಗೆ ತಗುಲುವ ದುಬಾರಿ ವೆಚ್ಚ ಮತ್ತು ತಜ್ಞವೈದ್ಯರ ಸೀಮಿತ ಲಭ್ಯತೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಸವಲತ್ತುಗಳು ಇರುವ ಆಸ್ಪತ್ರೆಗಳೂ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಿದ್ದರೆ ದೂರದ ಊರಿಗೆ ಹೋಗುವುದು ಮತ್ತು ನಗರ ಪ್ರದೇಶಗಳಲ್ಲಿರುವ ಅತ್ಯಾಧುನಿಕ ಸೌಲಭ್ಯಗಳಿರುವ, ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾಗುವುದು – ಇವೆಲ್ಲ ಆರ್ಥಿಕವಾಗಿ ಅಷ್ಟೊಂದು ಸಾಮರ್ಥ್ಯವಿಲ್ಲದ ಸಾಮಾನ್ಯ ಜನರಿಗೆ ದೊಡ್ಡ ಹೊರೆಯೇ. ಹೀಗಿರುವಲ್ಲಿ, ವೆಚ್ಚಗಳಿಗೆ ಕಡಿವಾಣ ಹಾಕಿ, ದೂರದೂರಿಗೆ ಪ್ರಯಾಣ ಮಾಡುವ ಸಮಯವನ್ನೂ ಉಳಿತಾಯ ಮಾಡಿ, ರೋಗಿಯ ಪ್ರಾಣವನ್ನು ಉಳಿಸುವಲ್ಲಿ ಸ್ಮಾರ್ಟ್ ಐಸಿಯು ತಂತ್ರಜ್ಞಾನವು ನೆರವಿಗೆ ಬರುತ್ತದೆ.
ಅತ್ಯಾಧುನಿಕ ಚಿಕಿತ್ಸೆಯ ಮೂಲಕ ದೂರದಿಂದಲೇ ರೋಗಿಗಳ ಪ್ರಾಣರಕ್ಷಣೆಗೆ ನೆರವಾಗುವ ಈ ತಂತ್ರಜ್ಞಾನವನ್ನು ಪರಿಚಯಿಸಿರುವ ಖಾಸಗಿ ಕಂಪನಿಗಳಲ್ಲಿ ಬೆಂಗಳೂರು ಮೂಲದ ‘ಕ್ಲೌಡ್ ಫಿಸಿಶಿಯನ್’ ಮುಂಚೂಣಿಯಲ್ಲಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ 59 ಕಡೆ ಸುಮಾರು 200 ಆಸ್ಪತ್ರೆಗಳು ಇದರ ಪ್ರಯೋಜನಕ್ಕೆ ಮುಂದಾಗಿವೆ. ಅಂತೆಯೇ ರಾಜ್ಯದಲ್ಲಿ 35ಕ್ಕೂ ಹೆಚ್ಚು ಆಸ್ಪತ್ರೆಗಳು ಸ್ಮಾರ್ಟ್ ಐಸಿಯು ಸೇವೆ ಬಳಸಿಕೊಳ್ಳುತ್ತಿವೆ. ಇದೊಂದೇ ಅಲ್ಲದೆ, ಪ್ರಮುಖ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳೂ ಇಂಥ ಸೇವೆಯನ್ನು ನೀಡುತ್ತಿವೆ. ಕೋವಿಡ್-19 ನಂತಹ ಪಿಡುಗು ಬಾಧಿಸಿ, ‘ಓಡಾಡಬಾರದು’, ‘ಮುಟ್ಟಬಾರದು’ – ಅಂತೆಲ್ಲ ನಿರ್ಬಂಧವಿದ್ದ ಸಂದರ್ಭದಲ್ಲಿ ಈ ರೀತಿಯ ವ್ಯವಸ್ಥೆಗಳೇ ಹಲವರ ಜೀವಗಳನ್ನು ಉಳಿಸಿದ್ದವು. ಕರ್ನಾಟಕ ಸರ್ಕಾರವು 2022ರಲ್ಲಿ ‘10 Bed ICU’ (10 ಬೆಡ್ ಐಸಿಯು) ಯೋಜನೆಯಡಿ, ಗೂಗಲ್ ಕ್ಲೌಡ್ ಪಾಲುದಾರಿಕೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 41 ಸ್ಮಾರ್ಟ್ ಐಸಿಯು ಕೇಂದ್ರಗಳನ್ನು ತೆರೆದಿತ್ತು. ಇದು ಹಲವಾರು ಕೋವಿಡ್ ರೋಗಿಗಳ ಜೀವಗಳನ್ನು ಉಳಿಸಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.
ಸ್ಮಾರ್ಟ್ ಐಸಿಯು ಅಳವಡಿಕೆ ಹೇಗೆ?
ದೊಡ್ಡ ದೊಡ್ಡ ಆಸ್ಪತ್ರೆಗಳು ದೂರದೂರುಗಳಲ್ಲಿರುವ ಸಣ್ಣ ಮಟ್ಟದ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳನ್ನೇ ಅತ್ಯಾಧುನಿಕ ಐಸಿಯು ಆಗಿ ಪರಿವರ್ತಿಸುವ ವ್ಯವಸ್ಥೆಯೇ ಈ ಸ್ಮಾರ್ಟ್ ಐಸಿಯು. ಅಂದರೆ ತಜ್ಞವೈದ್ಯರು, ಸಣ್ಣಾಸ್ಪತ್ರೆಗಳಲ್ಲಿರುವ ಕ್ಯಾಮೆರಾ ಮೂಲಕ ಲಭ್ಯವಾಗುವ ನೇರಪ್ರಸಾರದ ವಿಡಿಯೊ ಮೂಲಕ ದೊರೆಯುವ ಮಾಹಿತಿಯ ಆಧಾರದಲ್ಲಿ ಅಲ್ಲಿನ ಆಸ್ಪತ್ರೆಗಳ ವೈದ್ಯರಿಗೆ ಮುಂದೇನು ಮಾಡಬೇಕು, ಹೇಗೆ ಏನು ಎತ್ತ ಎಂಬುದನ್ನೆಲ್ಲಾ ಹೇಳುತ್ತಹೋಗುತ್ತಾರೆ.
ಸಣ್ಣ ಆಸ್ಪತ್ರೆಗಳಲ್ಲಿ ಒಂದಕ್ಕಿಂತ ಹೆಚ್ಚು ತುರ್ತು ಚಿಕಿತ್ಸಾ ಬೆಡ್‌ಗಳನ್ನು ಅಳವಡಿಸಬಹುದು. ಪಕ್ಕದಲ್ಲೇ ತರಬೇತಾದ ವೈದ್ಯರು, ಸಿಬ್ಬಂದಿಯು ಕ್ಯಾಮೆರಾ ಸಹಾಯದಿಂದ ರೋಗಿಯ ದೈಹಿಕ ಸಮಸ್ಯೆಗಳನ್ನು ತೋರಿಸುತ್ತಾ ಇದ್ದರೆ, ವರ್ಚುವಲ್ ಆಗಿ ತಜ್ಞವೈದ್ಯರು ಅದನ್ನು ನೋಡಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಈ ಸ್ಮಾರ್ಟ್ ಐಸಿಯು ಮುಖ್ಯ ಉದ್ದೇಶ ತುರ್ತು ಚಿಕಿತ್ಸೆ ಆಗಿರುವುದರಿಂದ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರವೇ ದೂರದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಹೋಗಬಹುದು. ಹಠಾತ್ ಹೃದಯಾಘಾತ, ಶಿಶು ಆರೈಕೆ, ಟ್ರಾಮಾ ಕೇರ್, ಕ್ಯಾನ್ಸರ್ ಕೇರ್ ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಐಸಿಯು ಅಗತ್ಯವಿರುವ ಸಮಸ್ಯೆಗಳಿಗೆ ಈ ತಂತ್ರಜ್ಞಾನವೊಂದು ವರದಾನ.
ದಿನದ ಇಪ್ಪತ್ತನಾಲ್ಕು ಗಂಟೆಯೂ ಸ್ಮಾರ್ಟ್ ಐಸಿಯು ಸೇವಾ ಪೂರೈಕೆ ಕೇಂದ್ರದಲ್ಲಿ ತಜ್ಞರು, ಸಿಬ್ಬಂದಿ ಲಭ್ಯರಿರುತ್ತಾರೆ. ಈ ಸೇವಾ ಸ್ವೀಕಾರ ಕೇಂದ್ರಗಳಾದ ಸಣ್ಣ ಮತ್ತು ಸಮುದಾಯ ಆಸ್ಪತ್ರೆಗಳು ನಿರ್ವಹಣಾ ಶುಲ್ಕವನ್ನು ನೀಡಬೇಕಾಗುತ್ತದೆ. ಜೊತೆಗೆ, ಕೆಲವೊಂದು ವೈದ್ಯಕೀಯ ಮೂಲಸೌಕರ್ಯ ವ್ಯವಸ್ಥೆಗಳನ್ನೂ ಈ ಸಣ್ಣಾಸ್ಪತ್ರೆಗಳು ಹೊಂದಿರಬೇಕಾಗುತ್ತದೆ. ಅಗತ್ಯವಿರುವ ಕೊಠಡಿಗಳು, ಅತ್ಯುತ್ತಮ ಅಂತರ್ಜಾಲ ಸಂಪರ್ಕ ಮತ್ತು ಕಂಪ್ಯೂಟರ್, ಪರದೆ ಮತ್ತಿತರ ತಾಂತ್ರಿಕ ಪರಿಕರಗಳು, ಹೈ-ರೆಸೊಲ್ಯುಶನ್ ಇರುವ ಕ್ಯಾಮೆರಾ ಅಳವಡಿಕೆಯ ಖರ್ಚು ಇರುತ್ತದೆ. ಇದನ್ನು ನಿಭಾಯಿಸುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಒಂದಿಷ್ಟು ತರಬೇತಿಯನ್ನೂ ಪಡೆಯಬೇಕಾಗುತ್ತದೆ.
ತಜ್ಞರ ಕನ್ಸಲ್ಟೇಶನ್, ತುರ್ತು ಸಂದರ್ಭದಲ್ಲಿ ರೋಗಿಯ ದೈಹಿಕ ಸ್ಥಿತಿಗತಿಗಳ ವರದಿಯ ಮತ್ತು ದತ್ತಾಂಶದ ಕ್ಷಿಪ್ರ ಪರಿಶೀಲನೆ, ಚಿಕಿತ್ಸಾ ವೆಚ್ಚ - ಮುಂತಾದವುಗಳನ್ನು ಪರಿಗಣಿಸಿದರೆ, ಆರ್ಥಿಕವಾಗಿ ಸಬಲರಾಗಿಲ್ಲದ ರೋಗಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಈ ರೀತಿಯ ದೂರನಿಯಂತ್ರಿತ ಐಸಿಯು ಸೌಕರ್ಯದಿಂದ ಹೆಚ್ಚು ಅನುಕೂಲ. ಒಂದನೆಯದು, ಅವರದೇ ಊರಿನಲ್ಲಿ ಮಲ್ಟಿಸ್ಪೆಶಾಲಿಟಿ (ಹಲವು ರೀತಿಯ ಕಾಯಿಲೆಗಳ ಚಿಕಿತ್ಸಾ ತಜ್ಞರಿರುವ) ಆಸ್ಪತ್ರೆಗಳಿಲ್ಲದ ಹೊರತಾಗಿಯೂ, ಕಡಿಮೆ ಖರ್ಚಿನಲ್ಲಿ ತುರ್ತು ಚಿಕಿತ್ಸೆಯನ್ನು ಕ್ಷಿಪ್ರವಾಗಿ, ದೂರ ಪ್ರಯಾಣ ಮಾಡದೆಯೇ ಪಡೆಯಬಹುದು. ಜೊತೆಗೆ, ಪದೇ ಪದೇ ದೊಡ್ಡ ಮಲ್ಟಿ-ಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಗಬಹುದಾದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ತಮ್ಮೂರಲ್ಲೇ, ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಳ್ಳಬಹುದು.
ಸ್ಮಾರ್ಟ್ ಐಸಿಯು ಪರಿಕಲ್ಪನೆಯು ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದ ವಿಷಯತಜ್ಞರ ಕೊರತೆಯನ್ನು ನೀಗಿಸುತ್ತದೆ. ಸ್ಮಾರ್ಟ್ ಐಸಿಯು ವ್ಯವಸ್ಥೆಯಲ್ಲಿ ಈಗಾಗಲೇ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಸೇರ್ಪಡೆಯೂ ಆಗಿದ್ದು, ತುರ್ತಾಗಿ ಆರೈಕೆಯ ಅಗತ್ಯವಿರುವ ನಾಗರಿಕರ ಆರೋಗ್ಯರಕ್ಷಣೆ ಮತ್ತು ಜೀವರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುವುದಂತೂ ದಿಟ. ‘ಕ್ಲೌಡ್’ (ಅಂತರ್ಜಾಲ ಸಂಪರ್ಕಿತ ಸರ್ವರ್) ಆಧಾರಿತವಾಗಿ ರೇಡಾರ್ ತಂತ್ರಜ್ಞಾನವು ನಿರಂತರವಾಗಿ ರೋಗಿ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿ ತಕ್ಷಣ ಸ್ಪಂದಿಸುವ ಆಧುನಿಕ ವ್ಯವಸ್ಥೆಯೂ ಇರುತ್ತದೆ.
ಊರಲ್ಲೇ ಇರುವ ಆಸ್ಪತ್ರೆಗಳನ್ನು ಸ್ಮಾರ್ಟ್ ಐಸಿಯು ಆಗಿ ಪರಿವರ್ತಿಸುವುದರಿಂದ ತಕ್ಷಣದ ಚಿಕಿತ್ಸೆ ಲಭ್ಯವಾಗುವ ಮೂಲಕ ಅದೆಷ್ಟೋ ರೋಗಿಗಳ ಜೀವಗಳನ್ನು ಉಳಿಸಬಹುದಾಗಿದೆ. ವರ್ಚುವಲ್ ಕನ್ಸಲ್ಟೇಶನ್, ವರ್ಚುವಲ್ ಚಿಕಿತ್ಸೆಗಳ ಮೂಲಕ ಸಮಯ, ಹಣ ಉಳಿತಾಯವಾಗುವುದರಿಂದ ಆರ್ಥಿಕವಾಗಿ ಸಬಲರಲ್ಲದವರಿಗೆ ಇದರ ಅನುಕೂಲ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.