ಅಂತರ್ಜಾಲವೆಂಬ ಗೊಂಡಾರಣ್ಯದ ಗಾತ್ರವೆಷ್ಟು, ವಿಸ್ತಾರವೆಷ್ಟು ಎಂಬುದರ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರುವುದಿಲ್ಲ; ಕೇಳಿದ್ದನ್ನು ಕೊಡುವ ಕಾಮಧೇನುವಿನಂಥ ಗೂಗಲ್ ಒಂದನ್ನು ಬಿಟ್ಟು! ನೆನೆದವರ ಮನದಲ್ಲಿ ಏನಿದೆಯೋ ಅದು ಅಂತರ್ಜಾಲದ ಯಾವ ತಿರುವಿನ ಯಾವ ಮೂಲೆಯಲ್ಲಿ ಬಿದ್ದುಕೊಂಡಿದೆ ಎಂದು ಹುಡುಕಬೇಕಾದ್ದು ಅದರ ಕೆಲಸವಾದ್ದರಿಂದ, ತನ್ನ ಕಾರ್ಯಕ್ಷೇತ್ರದ ಹರಹು–ವಿಸ್ತೀರ್ಣಗಳೂ ಅದಕ್ಕೆ ಗೊತ್ತಿರಬೇಕು. ಹಾಗೆ ಅಂತರ್ಜಾಲದ ಉದ್ದ ಅಗಲಗಳನ್ನು ಲೆಕ್ಕ ಹಾಕಲು ಹೊರಟವರಿಗೆ ಅದು ಲೆಕ್ಕ ಗೊತ್ತಿದ್ದವರಿಗೂ ಲೆಕ್ಕ ತಪ್ಪಬಹುದಾದಷ್ಟು ಬೃಹತ್ತಾಗಿದೆ ಎಂಬ ಸಂಗತಿ ಅರಿವಿಗೆ ಬರುತ್ತದೆ.
ಇನ್ನೂರು ಪುಟದ ಪುಸ್ತಕವೊಂದನ್ನು ಕಲ್ಪಿಸಿಕೊಳ್ಳಿ. ಅಂಥ ಒಂದೂವರೆ ಸಾವಿರ ಪುಸ್ತಕಗಳಿರುವ ಕೋಣೆಯೊಂದನ್ನು ಊಹಿಸಿಕೊಳ್ಳಿ. ಲೆಕ್ಕ ಮುಗಿಯಲಿಲ್ಲ. ಇಂಥ ಒಂದು ಕೋಟಿ ಕೋಣೆಗಳಿರುವ ಗ್ರಂಥಾಲಯವೊಂದನ್ನು ಮನಸ್ಸಿಗೆ ತಂದುಕೊಳ್ಳಿ (ಇಂಥ ಗ್ರಂಥಾಲಯ ಎಲ್ಲಿದೆ ಸ್ವಾಮೀ ಅನ್ನಬೇಡಿ, ಕಲ್ಪನೆಗೆ ಯಾವ ಖರ್ಚೂ ಇಲ್ಲ!). ಈಗ ಇಂಥ ಒಂದು ಕೋಟಿ ಗ್ರಂಥಾಲಯಗಳು ಇದ್ದರೆ ಒಟ್ಟು ಪುಟಗಳೆಷ್ಟಾಗಬಹುದು ಎಂದು ಎಣಿಸಿ ನೋಡಿ! ಎಷ್ಟಾಯಿತು? ಇಂಟರ್‌ನೆಟ್ಟಿನ ಗಾತ್ರ ಅಷ್ಟು ಅನ್ನಬಹುದೇನೋ! ಅಥವಾ ಇಂಟರ್‌ನೆಟ್ಟಿನಲ್ಲಿರುವ ಮಾತನ್ನೆಲ್ಲ ಹಾಡಿನ ರೂಪಕ್ಕೆ ಪರಿವರ್ತಿಸಿದರೆ, ಸುಮಾರು ಇನ್ನೂರ ಇಪ್ಪತ್ತು ಕೋಟಿ ವರುಷ ದಿನವಿಡೀ ಕೂತು ಕೇಳಿದರೂ ಮುಗಿಯದಷ್ಟು ಹಾಡುಗಳಾಗುತ್ತವೆ ಎನ್ನಬಹುದು. ಇವು ನಿಖರವಾದ ಲೆಕ್ಕಾಚಾರಗಳೇನೂ ಅಲ್ಲ, ಒಂದು ಕಣ್ಣಂದಾಜಿನ ಗಣನೆಗಳು ಮಾತ್ರ. ಅಂತರ್ಜಾಲವು ನಿಮಿಷ ನಿಮಿಷಕ್ಕೂ ಅರಳುವ ನವನವೋನ್ಮೇಷಶಾಲಿನಿಯಾದ್ದರಿಂದ ಅದು ಲೆಕ್ಕಕ್ಕೆ ಸಿಗಲೂ ಆರದು. ಇಂಥ ಅನಂತ ಅಗಾಧತೆಯಲ್ಲಿ ಏನನ್ನಾದರೂ ಹುಡುಕುವುದು ಅದೆಂಥ ತೊಡಕಿನ ಸಂಗತಿ ಎಂಬುದರ ಅಂದಾಜು ಮಾಡಲಿಕ್ಕೆ ಇಷ್ಟು ಪೀಠಿಕೆ ಹಾಕಿದ್ದಾಯಿತು. ಇಂಥ ತ್ರಾಸದಾಯಕ ಪರಿಸ್ಥಿತಿಯನ್ನು ನಿಭಾಯಿಸಲಿಕ್ಕೆ ಗೂಗಲ್ಲು ಬಗೆಬಗೆಯ ಯುಕ್ತಿಗಳನ್ನು ಹೂಡುತ್ತದೆ. ಅಂಥ ನೂರೆಂಟು ತಂತ್ರಗಳಲ್ಲಿ ಒಂದನ್ನು ಈಗ ನೋಡೋಣ.
ಪುಸ್ತಕಗಳಲ್ಲಿ ಕೊನೆಗೆ, ‘ಸೂಚಿಕೆ’ ಅಥವಾ ‘ವಿಷಯಸೂಚಿ’ ಇರುತ್ತದಲ್ಲ, ಅದುವೇ ಈ ಉಪಾಯಕ್ಕೆ ಪ್ರೇರಣೆ. ಹಾಗಾಗಿ ಈ ತಂತ್ರದ ಹೆಸರೇ ಇಂಡೆಕ್ಸಿಂಗ್. ಇಡೀ ಅಂತರ್ಜಾಲವೇ ಒಂದು ಬೃಹದ್ಗಾತ್ರದ ಪುಸ್ತಕ ಅಂದುಕೊಂಡರೆ, ಅದರ ಇಂಡೆಕ್ಸ್ ಅಥವಾ ವಿಷಯಸೂಚಿ ಗೂಗಲ್ಲಿನ ಹತ್ತಿರ ಇರುತ್ತದೆ. ಇದರ ಜಾಣ್ಮೆಯನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ ಒಂದು ಸಾವಿರ ಹೊಟೇಲ್‌ಗಳಿವೆ ಅಂದುಕೊಳ್ಳೋಣ. ‘ಯಾವ ಹೊಟೇಲ್‌ನಲ್ಲಿ ಯಾವ ದೋಸೆ ಸ್ವಾದಿಷ್ಟವಾಗಿರುತ್ತದೆ’ – ಎಂದು ಸಲಹೆ ನೀಡುವ ಕೆಲಸ ನಿಮ್ಮದು ಅಂದುಕೊಳ್ಳಿ. ಈಗೊಬ್ಬರು, ‘ರವೆದೋಸೆ ಎಲ್ಲಿ ರುಚಿಕರವಾಗಿರುತ್ತದೆ’ ಎಂದು ಕೇಳುತ್ತಾರೆ. ಆಗ ನೀವೇನು ಮಾಡಬಹುದು? ಕೂಡಲೇ ಒಂದು ಬೈಕನ್ನೇರಿ, ಇಡೀ ಬೆಂಗಳೂರು ಸುತ್ತಿ, ಸಾವಿರ ಹೊಟೇಲ್‌ಗಳಿಗೂ ಹೋಗಿ, ಎಲ್ಲಿ ರವೆದೋಸೆ ಸಿಗುತ್ತದೆ, ಎಲ್ಲಿ ಅದು ಚೆನ್ನಾಗಿರುತ್ತದೆ ಎಂದು ಮಾಹಿತಿ ಸಂಗ್ರಹ ಮಾಡಿ, ತಿರುಗಿ ಬಂದು, ಕೇಳಿದವರ ಹತ್ತಿರ, ‘ಇಂಥಲ್ಲಿಗೆ ಹೋಗಿ’ ಎನ್ನಬಹುದು! ಈ ವಿಧಾನದಿಂದ ಕೆಲಸವೇನೋ ಆಗುತ್ತದಾದರೂ ತಲೆ ಸರಿ ಇರುವವರು ಯಾರೂ ಹೀಗೆ ಮಾಡಲಾರರು!
ಸಮರ್ಥರಾದವರು, ಚುರುಕು ಬುದ್ಧಿಯುಳ್ಳವರು ಇನ್ನೊಂದು ಕ್ರಮವನ್ನು ರೂಪಿಸಿಯಾರು. ಯಾರಾದರೂ ಕೇಳಿಯಾದಮೇಲೆ ಇಡೀ ಬೆಂಗಳೂರಿನಲ್ಲಿ ದೋಸೆ ಹುಡುಕುವ ಬದಲು, ಬಿಡುವಾದಾಗ ಬೆಂಗಳೂರಿನ ಒಂದೊಂದೇ ರಸ್ತೆ, ಮೂಲೆಗಳಿಗೆ ಹೋಗಿ, ಎಲ್ಲಿ ಮಸಾಲೆದೋಸೆ ಗರಿಗರಿಯಾಗಿರುತ್ತದೆ, ಎಲ್ಲಿ ಖಾಲಿದೋಸೆ ಒಂದೇ ಏಟಿಗೆ ಗುಳುಂ ಮಾಡುವಂತಿರುತ್ತದೆ, ಎಲ್ಲಿ ಚಟ್ನಿ ಮತ್ತೆ ಮತ್ತೆ ನೆಕ್ಕುವಂತಿರುತ್ತದೆ, ಎಲ್ಲಿ ಸಾಂಬಾರು ಮರುಳು ಮಾಡುತ್ತದೆ – ಅಂತೆಲ್ಲ ಒಂದೊಂದಾಗಿ ನೋಡಿ, ನೋಟು ಪುಸ್ತಕವೊಂದರಲ್ಲಿ ಪಟ್ಟಿ ಮಾಡಿಕೊಳ್ಳಬಹುದು. ಉತ್ತಮ ದರ್ಜೆಯದಕ್ಕೆ ಇಷ್ಟು ಅಂಕ, ಕಳಪೆಯಾದಕ್ಕೆ ಇಷ್ಟು ಎಂದು ವರ್ಗೀಕರಣವನ್ನೂ ಮಾಡಬಹುದು. ವಿಜಯನಗರದ್ದು ಒಂದು ಕಡೆ, ಪೀಣ್ಯದ್ದು ಮತ್ತೊಂದು ಕಡೆ ಎಂದು ವಿಂಗಡಿಸಲೂಬಹುದು. ಎಲ್ಲಿ ಹೆಚ್ಚು ಜನ ಸೇರುತ್ತಾರೆ ಎಂಬುದೂ ರುಚಿಯ ಪರೋಕ್ಷ ಸೂಚನೆಯೇ ಆಗಿರುವುದರಿಂದ, ಅದನ್ನೂ ಗುರುತು ಮಾಡಿಕೊಳ್ಳಬಹುದು.
ಹೀಗೆ ಒಂದು ತಿಂಗಳು ತಿರುಗಿ ನೋಟು ಪುಸ್ತಕ ಭರ್ತಿಯಾದ ಮೇಲೆ, ಯಾರಾದರೂ ‘ಬಸವನಗುಡಿಯಲ್ಲಿ ಬೆಣ್ಣೆದೋಸೆ ಎಲ್ಲಿ ಚೆನ್ನಾಗಿರುತ್ತದೆ’ ಎಂದು ಕೇಳಿದರೆ, ನೀವು ಇಡೀ ಬೆಂಗ್ಳೂರನ್ನೋ ಬಸವನಗುಡಿಯನ್ನೋ ಅಲೆಯಬೇಕಾಗಿಲ್ಲ. ನಿಮ್ಮ ನೋಟುಪುಸ್ತಕವನ್ನು ಒಮ್ಮೆ ತಿರುವಿ ಹಾಕಿ, ಸರಿಯಾದ ಪುಟ ತೆಗೆದು, ಅಲ್ಲಿರುವುದನ್ನು ಓದಿ, ‘ಓ ಇಂಥಲ್ಲಿಗೆ ಹೋಗಿ’ ಅಂದರಾಯಿತು. ಗೂಗಲ್ಲು ಅನುಸರಿಸುವುದೂ ಹೆಚ್ಚು ಕಡಮೆ ಇದೇ ಕಾರ್ಯವೈಖರಿಯನ್ನು! ನೀವು ಏನನ್ನನಾದರೂ ಅರಸಿದಾಗ ಅದು ಜಾಲದ ಬೈಕನ್ನೇರಿ ಇಡೀ ಇಂಟರ್ನೆಟ್ಟಿನ ಎಂದೂ ಮುಗಿಯದ ದಿಗ್ದಿಗಂತಗಳಲ್ಲಿ ಅಡ್ಡಾಡಿ ನೀವು ಕೇಳಿದ್ದನ್ನು ಶೋಧಿಸುವುದಿಲ್ಲ. ಅದು ನೋಡುವುದು ತನ್ನ ನೋಟು ಪುಸ್ತಕವನ್ನು ಅಂದರೆ ವಿಷಯಸೂಚಿಯನ್ನು ಮಾತ್ರ, ಅದು ಅಷ್ಟು ಬೇಗ ಉತ್ತರ ಕೊಡಲು ಸಾಧ್ಯವಾಗುವುದು ಇದರಿಂದಾಗಿಯೇ. ತಮಾಷೆಯೆಂದರೆ ಗೂಗಲ್ಲಿನದ್ದು ನಮ್ಮ ಪುಸ್ತಕಗಳ ಸೂಚಿಯಂತೆ ನಾಲ್ಕೋ ಐದೋ ಪುಟಗಳ ಸೂಚಿಯಲ್ಲ, ಅದರ ಸೂಚಿಯೇ ಕೆಲವು ಕೋಟಿ ಪುಟಗಳಷ್ಟು ರಾಕ್ಷಸ ಗಾತ್ರದ್ದಾಗಬಹುದು!
ಈ ವಿಷಯಸೂಚಿಯನ್ನು ತಯಾರಿಸಲಿಕ್ಕೆಂದೇ ಸಾವಿರ ಸಂಖ್ಯೆಗಳಲ್ಲಿ ಗಣಕಯಂತ್ರಗಳು ಹಗಲಿರುಳು ದುಡಿಯುತ್ತಿರುತ್ತವೆ. ಅವುಗಳಿಗೆ ‘ಗೂಗಲ್ ಸ್ಪೈಡರ್’ ಎಂಬ ಹೆಸರಿದೆ. ಅವುಗಳು ಬಿಡುವಾದಾಗ ಅಂತರ್ಜಾಲದಲ್ಲಿ ಅಲೆದು ವಿಷಯಸಂಗ್ರಹ ಮಾಡುವುದಕ್ಕೆ ‘ಕ್ರಾಲಿಂಗ್’ ಅನ್ನುತ್ತಾರೆ. ಈ ಸೂಚಿಯೂ ಪುಸ್ತಕಗಳ ಸೂಚಿಯಂತೆ ತೀರಾ ಸಂಕ್ಷಿಪ್ತವಲ್ಲ, ಅದು ಕೈಪಿಡಿಯಂತೆ, ನಿಮ್ಮ ನೋಟುಪುಸ್ತಕದಂತೆ ಕ್ರಮಬದ್ಧವಾಗಿ ಕಲೆ ಹಾಕಿದ ಮಾಹಿತಿಯನ್ನು, ವಿವರಗಳನ್ನು ಇಟ್ಟುಕೊಂಡಿರುತ್ತದೆ. ಅಂತರ್ಜಾಲವು ಕ್ಷಣಕ್ಷಣಕ್ಕೂ ಮಾರ್ಪಾಡಾಗುವ, ಕಣ್ಣು ಮಿಟುಕಿಸುವಷ್ಟರಲ್ಲಿ ಪುಟ ಹೆಚ್ಚಿಸಿಕೊಳ್ಳುವ ಪುಸ್ತಕವಾದ್ದರಿಂದ, ಅದರ ವಿಷಯಸೂಚಿಯೂ ಇನ್ನೊಮ್ಮೆ, ಮತ್ತೊಮ್ಮೆ, ಪುನರೊಮ್ಮೆ, ಮಗುಳೊಮ್ಮೆ ಪರಿವರ್ತನೆ ಹೊಂದುತ್ತಲೇ ಇರುತ್ತದೆ. ಇದು ಗೂಗಲ್ಲಿನ ಬಗಲಿನಲ್ಲಿರುವ ನೂರಾರು ಯುಕ್ತಿಗಳಲ್ಲಿ ಒಂದು ಮಾತ್ರ. ಗೂಗಲ್ಲೆಂದರೆ ಸುಮ್ಮನೆ ಅಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.