ಬೆಂಗಳೂರು: ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಮೆಸೇಜಿಂಗ್ ಅಪ್ಲಿಕೇಷನ್ ಫೇಸ್‌ಬುಕ್ ಸ್ವಾಮ್ಯದ 'ವಾಟ್ಸ್‌ಆ್ಯಪ್' ಹೊಸ ಉಪಯೋಗಗಳನ್ನು ಬಳಕೆದಾರರ ಮುಂದಿರಿಸಿದೆ. ಗೂಗಲ್ ಪ್ಲೇ ಸ್ಟೋರ್ ಒಂದರಲ್ಲಿಯೇ 500 ಕೋಟಿಗೂ ಹೆಚ್ಚು ಬಾರಿ ವಾಟ್ಸ್‌ಆ್ಯಪ್ ಮೆಸೆಂಜರ್ ಡೌನ್‌ಲೋಡ್ ಆಗಿದೆ.
ಇದೀಗ ಹೊಸ ಅಪ್‌ಡೇಟ್ ಮೂಲಕ ವಾಟ್ಸ್‌ಆ್ಯಪ್ ಬಳಕೆದಾರರು ಆ್ಯನಿಮೇಟೆಡ್ ಸ್ಟಿಕ್ಕರ್‌ಗಳನ್ನು ಸಂದೇಶಗಳಾಗಿ ಬಳಸಬಹುದು. ಹಾಸ್ಯ ವಿಷಯಾಧರಿತ ಸ್ಟಿಕ್ಕರ್‌ಗಳನ್ನು ಒಳಗೊಂಡ ಸಂಗ್ರಹವು ಸಿಗಲಿದೆ. ಆ್ಯಂಡ್ರಾಯ್ಡ್, ಐಒಎಸ್ ಜೊತೆಗೆ ಕೆಎಐಒಎಸ್ (KaiOS) ಆಧಾರಿತ ಮೊಬೈಲ್‌ಗಳಿಗೂ ವಾಟ್ಸ್‌ಆ್ಯಪ್ ಅಪ್‌ಡೇಟ್ ಸಿಗುವುದಾಗಿ ಕಂಪನಿ ಹೇಳಿದೆ.
ಮತ್ತೊಂದು ಉಪಯುಕ್ತ ಹೊಸ ಆಯ್ಕೆ ಕ್ಯುಆರ್ ಕೋಡ್. ಇದರಿಂದಾಗಿ ಹೊಸ ಸಂಖ್ಯೆಗಳನ್ನು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಾರ್ಧದಲ್ಲಿ ನಿಮ್ಮ ವಾಟ್ಸ್‌ಆ್ಯಪ್ ಪಟ್ಟಿಗೆ ಸೇರಿಸಿಕೊಳ್ಳಬಹುದು. ಸಂಪರ್ಕ ಪಟ್ಟಿಗೆ ಸೇರಿಸಿಕೊಳ್ಳಬೇಕಿರುವ ವ್ಯಕ್ತಿಯ ಮೊಬೈಲ್ ವಾಟ್ಸ್ಆ್ಯಪ್‌ನಲ್ಲಿ ಕಾಣಸಿಗುವ ಕ್ಯುಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ, ಅವರ ಸಂಪರ್ಕ ವಿವರ ನಿಮ್ಮ ಫೋನ್‌ಗೆ ಸೇರಿಕೊಳ್ಳುತ್ತದೆ. ಇದರಿಂದಾಗಿ ಸಂಖ್ಯೆ ಕೇಳಿ ಟೈಪಿಸಿಕೊಳ್ಳುವ ಕೆಲಸ ತಪ್ಪಲಿದೆ!
ಹಿಂದೆ ಭರವಸೆ ನೀಡಿದ್ದಂತೆ ಈ ಮೆಸೆಂಜರ್ ಆ್ಯಪ್ ಮೂಲಕ ಒಟ್ಟಿಗೆ 8 ಜನರೊಂದಿಗೆ ವಿಡಿಯೊ ಕರೆ ನಿರ್ವಹಿಸಬಹುದಾಗಿದೆ. ಇದರೊಂದಿಗೆ 8 ಮಂದಿ ಅಥವಾ ಅದಕ್ಕಿಂತಲೂ ಕಡಿಮೆ ಜನರಿರುವ ಗ್ರೂಪ್ ಚಾಟ್‌ಗಳಲ್ಲಿ 'ವಿಡಿಯೊ ಐಕಾನ್' ಸೇರಿಸಲಾಗಿದ್ದು, ಅದರ ಮೇಲೆ ಒಂದು ಬಾರಿ ಒತ್ತಿದರೆ ಸಾಕು ಗ್ರೂಪ್ ವಿಡಿಯೊ ಕರೆಗೆ ಸಜ್ಜಾಗುತ್ತದೆ.
ಮೊಬೈಲ್ ಫೋನ್ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಡಾರ್ಕ್ ಮೋಡ್ ಆಯ್ಕೆಯನ್ನು ಬಿಡುಗಡೆ ಮಾಡಿರುವ ಕಂಪನಿ, ಇದೀಗ ಕಂಪ್ಯೂಟರ್‌ನಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೂ ಈ ಆಯ್ಕೆ ನೀಡಲಾಗಿದೆ. ಕಣ್ಣಿನ ಮಾನಿಟರ್ ಸ್ಕ್ರೀನ್ ಬೆಳಕು ಗಾಸಿ ಉಂಟು ಮಾಡದಿರುವಲ್ಲಿ ಡಾರ್ಕ್ ಮೋಡ್ ಸಹಕಾರಿಯಾಗಿದೆ.
ಜಿಯೊ ಫೋನ್ ರೀತಿಯ ಕೆಎಐಒಎಸ್ ಆಧಾರಿತ ಕೀಪ್ಯಾಡ್ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಸ್ಟೇಟಸ್ ಪೋಸ್ಟ್ ಮಾಡುವ ಆಯ್ಕೆ ತೆರೆದುಕೊಂಡಿದೆ. ಹಿಂದಿನಿಂದಲೂ ಆ್ಯಂಡ್ರಾಯ್ಡ್, ಐಫೋನ್‌ಗಳಲ್ಲಿ ಬಳಕೆಯಲ್ಲಿರುವ ಸ್ಟೇಟಸ್ ಆಯ್ಕೆ ಇದೀಗ ಕೆಎಐಒಎಸ್ ಮೊಬೈಲ್‌ಗಳಿಗೆ ಬಿಡುಗಡೆಯಾಗಿದೆ.
ಗೂಗಲ್ ಪ್ಲೇ ಸ್ಟೋರ್ (ಆ್ಯಂಡ್ರಾಯ್ಡ್) ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ (ಐಫೋನ್) ವಾಟ್ಸ್‌ಆ್ಯಪ್ ಎಂದು ಟೈಪಿಸಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್ನೂ ಹೊಸ ಅಪ್‌ಡೇಟ್ ಲಭ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.