ನವದೆಹಲಿ: ತನ್ನ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) 50 ಕೋಟಿ ಭಾರತೀಯ ಬಳಕೆದಾರರಿಗೆ ವಿಸ್ತರಿಸಲು ಕ್ರಮ ಕೈಗೊಂಡಿರುವುದಾಗಿ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಕಂಪನಿ ಗುರುವಾರ ತಿಳಿಸಿದೆ.
ಸದ್ಯ ಸುಮಾರು 4 ಕೋಟಿ ಭಾರತೀಯ ಬಳಕೆದಾರರು ವಾಟ್ಸ್‌ಆ್ಯಪ್ ಯುಪಿಐ ಸೇವೆಯನ್ನು ಬಳಸಬಹುದಾಗಿದೆ. ಇದರ ಪ್ರಮಾಣವನ್ನು ವಾಟ್ಸ್‌ಆ್ಯಪ್‌ಇದೀಗ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿದೆ.
ವಾಟ್ಸ್‌ಆ್ಯಪ್‌ನ ಈ ನಿರ್ಧಾರಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಹಸಿರು ನಿಶಾನೆ ತೋರಿಸಿರುವುದಾಗಿ ವಾಟ್ಸ್‌ಆ್ಯಪ್ ಇಂಡಿಯಾದ ಪಾವತಿ ವಿಭಾಗದ ನಿರ್ದೇಶಕ ಮನೀಶ್ ಮಹಾತ್ಮಾ ತಿಳಿಸಿದ್ದಾರೆ.
‘ಪಾವತಿ ವ್ಯವಸ್ಥೆಯು ಒಂದು ವರದಾನವಾಗಿದ್ದು, ಅದರಲ್ಲೂ ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಾಟ್ಸ್‌ಆ್ಯಪ್ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಎನ್‌ಸಿಪಿಐ ಹಾಗೂ ಆರ್‌ಬಿಐ ಜೊತೆ ಒಬ್ಬ ಅದ್ಭುತ ಸಹಭಾಗಿದಾರನಾಗಲು ಬಯಸುತ್ತದೆ’ ಎಂದು ಮಹಾತ್ಮಾ ಹೇಳಿದ್ದಾರೆ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪೈಪೋಟಿ ಆಗದಂತೆ ಎನ್‌ಸಿಪಿಐ ಹಂತ ಹಂತವಾಗಿ ವಾಟ್ಸ್‌ಆ್ಯಪ್‌ಗೆ ಅನುಮೋದನೆ ನೀಡುತ್ತಿದೆ.
‘ವಾಟ್ಸ್‌ಆ್ಯಪ್ ಪೇಮೆಂಟ್ ಸೇವೆಯನ್ನು 50 ಕೋಟಿ ಭಾರತೀಯ ಬಳಕೆದಾರರಿಗೆ ಅತ್ಯಂತ ಸುರಕ್ಷಿತವಾಗಿ ಹಾಗೂ ಸರಳವಾಗಿ ದೊರಕುವಂತೆ ಮಾಡುವುದು ನಮ್ಮ ಉದ್ದೇಶ’ ಎಂದು ಮಹಾತ್ಮಾ ಹೇಳಿದ್ದಾರೆ. 2018 ರಿಂದ ವಾಟ್ಸ್‌ಆ್ಯಪ್ ಡಿಜಿಟಲ್ ಪಾವತಿ ಸೇವೆಯನ್ನು ಜಾರಿಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.