ADVERTISEMENT

ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಮೊಬೈಲ್ ಪರಿಣಾಮ ಬೀರಲಿದೆಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2023, 9:34 IST
Last Updated 18 ಏಪ್ರಿಲ್ 2023, 9:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಮಾರು 50 ವರ್ಷಗಳ ಹಿಂದೆ ಮೊಬೈಲ್ ಎನ್ನುವ ಸಾಧನ‌ ಜಗತ್ತಿಗೆ ಪರಿಚಯವಾಯಿತು. ಅಲ್ಲಿಯವರೆಗೆ ನಾನ್‌ ಪೋರ್ಟಬಲ್ (ಲ್ಯಾಂಡ್‌ಲೈನ್‌) ಪೋನ್‌ಗಳನ್ನೇ ಕಂಡಿದ್ದ ಜನರಿಗೆ ಈ ಪೋರ್ಟಬಲ್ ಸಾಧನ (ಮೊಬೈಲ್‌) ಕಂಡು ಅಚ್ಚರಿ ಮೂಡಿದ್ದಂತೂ ನಿಜ‌. ಮನುಷ್ಯ ತನ್ನ ಮೆದುಳು ಬಳಸಿ ಮಾಡಬೇಕಾದ ಹಲವು ಕೆಲಸಗಳನ್ನು ಇಂದು ಇದೇ ಸಾಧನ ಮಾಡುತ್ತಿದೆ. ಈ ಮೊಬೈಲ್ ಗೀಳು ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಬೀರುವ ಪರಿಣಾಮದ ಕುರಿತು ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ‌‌.

ಇಂತಹ ಚಮತ್ಕಾರಿ ಸಾಧನದ ಹುಟ್ಟು ಮತ್ತು ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಈ ಸಾಧನ ಬೀರುವ ಪರಿಣಾಮದ ಕುರಿತು ಬಿಬಿಸಿ ಮಾಡಿದ ವಿಸ್ಕೃತ ವರದಿ ಇಲ್ಲಿದೆ

1973ರಲ್ಲಿ ಮಾರ್ಟಿನ್ ಕೂಪರ್ ಎಂಬ ಎಂಜಿನಿಯರ್ ಈ ‘ಜಂಗಮವಾಣಿ‘ಯನ್ನು ಜಗತ್ತಿಗೆ ಪರಿಚಯಿಸುತ್ತಾರೆ. ಕೂಪರ್ ಹೊರತಂದ ಮೊಬೈಲ್‌ನಲ್ಲಿ ಕರೆ ಮಾಡಲು ಮಾತ್ರ ಸಾಧ್ಯವಾಗುತ್ತಿತ್ತು . ಇಟ್ಟಿಗೆ ಆಕಾರದ ಈ ಮೊಬೈಲ್‌ ಪೋನ್ ಸುಮಾರು 1.1ಕೆಜಿ ತೂಗುತ್ತಿತ್ತು. ಕ್ಯಾಮೆರಾ ವ್ಯವಸ್ಥೆಯಾಗಲಿ, ಸಂದೇಶ ಕಳುಹಿಸುವ ವ್ಯವಸ್ಥೆಯನ್ನಾಗಲಿ ಈ ಸಾಧನ ಹೊಂದಿರಲಿಲ್ಲ.

ADVERTISEMENT

ಮೊಬೈಲ್ ವಿಕಸನದ ಬಗ್ಗೆ ಇತ್ತೀಚೆಗೆ ‘ಮೊಬೈಲ್ ಪೋನ್‌ ಪಿತಾಮಹ‘ ಮಾರ್ಟಿನ್‌ ಕೂಪರ್ ಮಾತನಾಡುತ್ತಾ, 'ಮನುಷ್ಯ ತನ್ನ ಮೆದುಳನ್ನೇ ಕಳೆದುಕೊಂಡಿದ್ದಾನೆ' ಎಂದು ಬೇಸರ ವ್ಯಕ್ತಪಡಿಸಿದರು. ಸಂವಹನ ಪ್ರಕ್ರಿಯೆ ಸರಳವಾಗಲೆಂದು‌ ಮೊಬೈಲ್ ಕಂಡುಹಿಡಿಯಲಾಯಿತು. ಆದರೆ, ಇಂದು ಮನುಷ್ಯ ಮೊಬೈಲ್ ಇಲ್ಲದೆ ಬದುಕಲಾರೆ ಎಂಬಂತೆ ವರ್ತಿಸುತ್ತಿರುವುದನ್ನು ಕಂಡು ಬಹಳ ಆತಂಕವಾಗಿದೆ ಎಂದು ಹೇಳಿದ್ದರು.

ಹೌದು, ಕೂಪರ್ ಅವರ ಮಾತು ಅಕ್ಷರಶಃ ನಿಜ. ಇಂದು ಮನುಷ್ಯ ತನ್ನ ಮೆದುಳು ಮಾಡಬೇಕಾದ ಹೆಚ್ಚಿನ ಕೆಲಸವನ್ನು ಮೊಬೈಲ್ ಮೂಲಕ ಮಾಡಿಸುತ್ತಾನೆ‌. ಸರಳವಾದ ಗಣಿತದ ಲೆಕ್ಕವನ್ನು ಮೊಬೈಲ್ ಕ್ಯಾಲ್ಕುಲೇಟರ್ ಬಳಸಿ ಬಿಡಿಸಲಾಗುತ್ತದೆ. ಬೆಳಿಗ್ಗೆ ಏಳುವಾಗ ಅಲಾರಾಂ, ದಿನಚರಿ ನೋಟ್, ಆಹಾರ, ದಿನಸಿ ಆರ್ಡರ್ ಮಾಡಲು, ಮನರಂಜನೆ ಹೀಗೆ ಎಲ್ಲ ಕೆಲಸಗಳಿಗೂ ಮೊಬೈಲ್ ಇಂದು ಅತ್ಯಗತ್ಯ ಎಂಬಂತಾಗಿದೆ.

ಅಮೆರಿಕದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಅಮೆರಿಕದಲ್ಲಿ ಜನರು ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ಮೊಬೈಲ್ ನೋಡುತ್ತಾರೆ. ದಿನವೊಂದಕ್ಕೆ ಕನಿಷ್ಟ 344 ಬಾರಿ ಮೊಬೈಲ್ ಮೇಲೆ ಕಣ್ಣಾಡಿಸುತ್ತಾರೆ. ಒಟ್ಟಾರೆ ದಿನದ ಮೂರು ಗಂಟೆ ಕಾಲ ಮೊಬೈಲ್‌ಗೆ ಜೋತು ಬೀಳುತ್ತಾರೆ ಎಂದು ಈ ಅಧ್ಯಯನ ಹೇಳುತ್ತದೆ. ಯಾವುದೋ ಪ್ರಮುಖ ವಿಚಾರಕ್ಕೆ (ಉದಾಹರಣೆ ಇಮೇಲ್ ಚೆಕ್ ಮಾಡಲು) ಮೊಬೈಲ್ ಮುಟ್ಟುವ ಜನರು ಕೊನೆಗೆ ಮೊಬೈಲ್‌ನಲ್ಲಿಯೇ ಬಿದ್ದು ಬಿಡುತ್ತಾರೆ ಎಂದು ಈ ಅಧ್ಯಯನ ಹೇಳಿದೆ.

ಮೊಬೈಲ್ ಹೆಚ್ಚು ಹೆಚ್ಚು ಉಪಯುಕ್ತವಾಗಿ ತೋರಿದಂತೆ ನಾವು ಅವುಗಳ ಮೇಲೆ‌ ಹೆಚ್ಚು ಅವಲಂಬಿತರಾಗುತ್ತೇವೆ ಎಂದು ಸಂಶೋಧನೆಯೊಂದು ಹೇಳಿದೆ. ಹೆಚ್ಚು ಬಳಕೆ‌ ಮಾಡಿದಂತೆ ನಮ್ಮ ಮೆದುಳುನಲ್ಲಿ ನ್ಯೂರಲ್ ಪಾಥ್ ವೇ ಸೃಷ್ಟಿಯಾಗುತ್ತದೆ. ಇದು ಸಣ್ಣ ಸಣ್ಣ ಕೆಲಸಗಳಿಗಗೂ ಮೊಬೈಲ್ ನೋಡುವಂತೆ ಮನುಷ್ಯನನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ ಸಣ್ಣ ಲೆಕ್ಕ ಮಾಡಲು ಜನರು ಮೊಬೈಲ್‌ನಲ್ಲಿರುವ ಕ್ಯಾಲ್ಕುಲೆಟರ್ ಬಳಸುತ್ತಾರೆ.

ಹಾಗಾದರೆ ಈ ಮೊಬೈಲ್ ಗೀಳು ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆಯೇ? ಪರಿಣಾಮ ಬೀರುವುದಾದರೆ ಯಾವ ರೀತಿ ಪರಿಣಾಮ ಬೀರುತ್ತದೆ. ಅದು ಋಣಾತ್ಮಕವಾಗಿ ಇರಲಿದೆಯೇ? ಧನಾತ್ಮಕವಾಗಿ ಇರಲಿದೆಯೇ ಎನ್ನುವುದು ಪ್ರಶ್ನೆ.

ಜಗತ್ತಿನಲ್ಲಿ ಮೊಬೈಲ್ ಬಳಕೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿದೆ. ಸರಳ ಕೆಲಸಗಳಿಗೂ ಮೊಬೈಲ್ ಮೇಲೆ ಅವಲಂಬಿತರಾಗುವುದು ಮೆದುಳಿನ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ವೈದ್ಯ ಲೋಕ ಹೇಳಿದೆ. ಮಲ್ಟಿಟಾಸ್ಕಿಂಗ್ ನಮ್ಮ ಸ್ಮರಣಾ ಶಕ್ತಿ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ‌ ಎಂದು ಅಧ್ಯಯನವೊಂದು ತಿಳಿಸಿದೆ. ವಾಹನ ಚಾಲನೆ ಮಾಡುತ್ತಾ ಮಾತನಾಡುವುದು ಮೊಬೈಲ್ ಬಳಕೆಯ ಅತ್ಯಂತ ಕೆಟ್ಟ ಉದಾಹರಣೆಯಾಗಿದೆ. ವಾಹನ ಚಲಾಯಿಸುತ್ತಾ ಮಾತನಾಡುವರು ರಸ್ತೆಯ ನಿಯಮಗಳನ್ನು ಹೆಚ್ಚು ಉಲ್ಲಂಘಿಸುತ್ತಾರೆ ಎಂದೂ ಈ ಅಧ್ಯಯನ ತಿಳಿಸಿದೆ.

ಇತ್ತೀಚೆಗೆ ಮೆದುಳಿನ ಕಾರ್ಯಕ್ಷಮತೆ ಮೇಲೆ ಮೊಬೈಲ್ ಬಳಕೆ ಹೇಗೆ ಪರಿಣಾಮ ಬೀರಲಿದೆ ಎಂದು ಪರಿಶೀಲಿಸಲಾಯಿತು. ಇದಕ್ಕೊಂದು ಟಾಸ್ಕ್ ಇಡಲಾಯಿತು. ಈ ಟಾಸ್ಕ್ ನಲ್ಲಿ ಭಾಗವಹಿಸುವ ಕೆಲವರಿಗೆ ಮೊಬೈಲ್ ಅನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳಲು ಹೇಳಲಾಯಿತು. ಇನ್ನು ಕೆಲವರಿಗೆ ಮೊಬೈಲ್ ಅನ್ನು ಕಣ್ಣಿಗೆ ಕಾಣದ ಹಾಗೆ ಅಂದರೆ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವಂತೆ ತಿಳಿಸಲಾಯಿತು. ಇನ್ನುಳಿದವರಿಗೆ ಬೇರೆ ಕೋಣೆಯೊಂದರಲ್ಲಿ ಮೊಬೈಲ್ ಇರಿಸುವಂತೆ ತಿಳಿಸಲಾಯಿತು. ಈ ವೇಳೆ ಕೆಲವೊಂದು ಟಾಸ್ಕ್ ಗಳನ್ನು ಕೊಡಲಾಯಿತು. ಈ ಮೂಲಕ ಭಾಗವಹಿಸುವವರ ನೆನಪಿನ ಸಾಮರ್ಥ್ಯ, ಏಕಾಗ್ರತೆ, ಕಾರ್ಯಕ್ಷಮತೆ ಹೀಗೆ ಎಲ್ಲವನ್ನು ಪರಿಶಿಲಿಸಲಾಯಿತು.

ಫಲಿತಾಂಶ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಬೇರೆ ಕೋಣೆಯಲ್ಲಿ ಮೊಬೈಲ್ ಇರಿಸಿದವರ ಸ್ಮರಣಾ ಶಕ್ತಿ, ಕಾರ್ಯಕ್ಷಮತೆ ಮೊಬೈಲ್ ಹತ್ತಿರ ಇಟ್ಟುಕೊಂಡವರು ಮತ್ತು ಬ್ಯಾಗ್‌ನಲ್ಲಿ ಇರಿಸಿಕೊಂಡವರಿಗಿಂತ ಉತ್ತಮವಾಗಿತ್ತು.

ಮೊಬೈಲ್‌ಗೆ ಹೆಚ್ಚು ಅವಲಂಬಿತರಾಗುವುದರಿಂದ ನಮ್ಮ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಅದೇ ನಿಜ ಎಂದೇನಲ್ಲ. ಇತ್ತೀಚೆಗೆ ಒಂದು ಸಂಶೋಧನೆ ನಡೆಯಿತು. ಒಂದು ಸ್ಕ್ರೀನ್ (ಪರದೆ) ಮೇಲೆ ಸಂಖ್ಯೆಗಳನ್ನು ಒಳಗೊಂಡ ಹಲವು ವೃತ್ತಗಳನ್ನು ತೋರಿಸಲಾಗುತ್ತದೆ. ಅವುಗಳನ್ನು ಯಾವುದಾದರೂ ಒಂದು ಬದಿಗೆ ಡ್ರ್ಯಾಗ್ (ಎಳೆಯುವುದು) ಮಾಡಬೇಕು. ದೊಡ್ಡ ಸಂಖ್ಯೆ ಇರುವ ವೃತ್ತಗಳನ್ನು ಸರಿಯಾದ ಬದಿಗೆ ಎಳೆದವರಿಗೆ ಬಹುಮಾನ. ಅಲ್ಲಿ ಭಾಗವಹಿಸಿದ ಅರ್ಧದಷ್ಟು ಮಂದಿಗೆ ಸ್ಕ್ರೀನ್ ಮೇಲಿರುವ ವೃತ್ತಗಳನ್ನು ಗಮನಿಸಿ, ಯಾವ ವೃತ್ತ ಎಲ್ಲಿ ಹೋಗುತ್ತದೆ ಎನ್ನುವುದನ್ನು ಗುರುತು ಮಾಡಿಕೊಳ್ಳಲು ಸೂಚಿಸಲಾಗಿತ್ತು. ಉಳಿದವರು ತಮ್ಮ ನೆನಪಿನ ಶಕ್ತಿಯನ್ನು ಅವಲಂಬಿಸಬೇಕಾಗಿತ್ತು.

ಡಿಜಿಟಲ್ ಜ್ಞಾಪಕತೆ ಎನ್ನುವುದು ಅವರ ಕೆಲಸಕ್ಕೆ ಸಹಕಾರಿಯಾಗಿತ್ತು. ಅದಕ್ಕಿಂತ ಅಚ್ಚರಿ ಹುಟ್ಟಿಸಿದ್ದೆಂದರೆ ಹೆಚ್ಚು ಮೌಲ್ಯದ ಸಂಖ್ಯೆ ಹೊಂದಿರುವ ವೃತ್ತಗಳನ್ನು ನೆನಪಿಟ್ಟುಕೊಂಡು ಬರೆದು, ಕಡಿಮೆ ಮೌಲ್ಯದ ಸಂಖ್ಯೆ ಇರುವ ವೃತ್ತಗಳನ್ನು ಅವರು ಕೈಬಿಟ್ಟಿದ್ದು. ಸಂಶೋಧಕರು ಈ ಕುರಿತು, 'ಹೆಚ್ಚು ಮೌಲ್ಯ ಇರುವ ಮಾಹಿತಿಗಳನ್ನು ಒಂದು ಡಿವೈಸ್ ಗೆ ವಹಿಸಿದಾಗ, ಕಡಿಮೆ ಮೌಲ್ಯ ಇರುವ ಮಾಹಿತಿಗಳನ್ನು ಶೇಖರಿಸಿಡುವುದು ಅವರ ನೆನಪಿನ ಶಕ್ತಿಗೆ ಸುಲಭವಾಗುತ್ತದೆ' ಎಂದು ಅಂದಾಜಿಸುತ್ತಾರೆ. ಆದರೆ, ಇದರಲ್ಲೂ ಒಂದು ಸಮಸ್ಯೆಯಿತ್ತು. ಅದೇನೆಂದರೆ ಡಿಜಿಟಲ್ ಜ್ಞಾಪಕತೆಯಿಂದ ದೊಡ್ಡ ಮೊತ್ತದ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡ ಅವರಿಗೆ ಡಿಜಿಟಲ್ ವ್ಯವಸ್ಥೆ ಇಲ್ಲದಿರುವಾಗ ಕಡಿಮೆ ಮೌಲ್ಯದ ಸಂಖ್ಯೆಗಳು ಮಾತ್ರ ನೆನಪಿನಲ್ಲಿದ್ದು, ದೊಡ್ಡ ಮೊತ್ತದ ಸಂಖ್ಯೆ ನೆನಪಿನಲ್ಲಿರಲಿಲ್ಲ.

ಒಟ್ಟಿನಲ್ಲಿ ಇತ್ತೀಚಿನ ಹಲವು ಅಧ್ಯಯನ, ಪ್ರಯೋಗಗಳನ್ನು ಗಮನಿಸಿದಾಗ ಮೊಬೈಲ್ ಬಳಕೆಗೆ ಮಿತಿ ಹೇರಬೇಕಾದ ಅನಿವಾರ್ಯತೆ ಮನುಷ್ಯನಿಗೆ ಇದ್ದೇ ಇದೆ ಎನ್ನಬಹುದು. ಮೆದುಳಿನ ಅರ್ಧ ಕೆಲಸವನ್ನು ನಿರ್ವಹಿಸುವ ಹಂತಕ್ಕೆ ತಂತ್ರಜ್ಞಾನ ಮಾನವ ಕುಲದ 'ಸ್ಪೇಸ್' ಅನ್ನು ನಿಧಾನಕ್ಕೆ ಆಕ್ರಮಿಸಿಕೊಳ್ಳುತ್ತಿರುವುದು ಅಪಾಯಕಾರಿಯೂ ಹೌದು. ಮನುಷ್ಯ ಯಂತ್ರವಾಗುತ್ತ, ಯಂತ್ರಗಳೇ ಮನುಷ್ಯರಾಗುತ್ತ ಸಾಗುವ ಹೊಸ ಕಾಲಘಟ್ಟ ಅಪಾಯದ ಅಂಚಿಗೆ ಕರೆದೊಯ್ಯುವ ಮಾಯೆ ಇರಬಹುದೇನೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.