ADVERTISEMENT

ಭಾರತದಲ್ಲಿನ ತನ್ನ ಜಾಲತಾಣಗಳನ್ನು ಸ್ಥಗಿತಗೊಳಿಸಿದ ಯಾಹೂ

ವಿದೇಶಿ ನೇರ ಬಂಡವಾಳ ಹೂಡಿಕೆಯ ಹೊಸ ನಿಯಮಗಳ ಅನ್ವಯ

ಪಿಟಿಐ
Published 26 ಆಗಸ್ಟ್ 2021, 8:53 IST
Last Updated 26 ಆಗಸ್ಟ್ 2021, 8:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಯಾಹೂ ಕಂಪನಿಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಕೆಲವು ಸುದ್ದಿ ಜಾಲ ತಾಣಗಳನ್ನು ಸ್ಥಗಿತಗೊಳಿಸಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್‌ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ ಮಾಲೀಕತ್ವವನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಯಾಹೂ ಈ ಕ್ರಮ ತೆಗೆದುಕೊಂಡಿದೆ.

ಸ್ಥಗಿತಗೊಳಿಸಿರುವ ಜಾಲತಾಣಗಳಲ್ಲಿ ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌, ಹಣಕಾಸು, ಮನರಂಜನೆ ಮತ್ತು ಮೇಕರ್ಸ್‌ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಸೇರಿವೆ. ಆದರೆ ಕಂಪನಿಯ ಈ ಕ್ರಮದಿಂದ ಯಾಹೂ ಇ–ಮೇಲ್ ಹಾಗೂ ಸರ್ಚ್‌ ಎಂಜಿನ್‌ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ADVERTISEMENT

‘2021ರ ಆಗಸ್ಟ್ 26 ರಿಂದ ಯಾಹೂ ಇಂಡಿಯಾ ಕಂಪನಿ, ಇನ್ನು ಮುಂದೆ ಭಾರತದಲ್ಲಿ ಮೇಲೆ ತಿಳಿಸಿರುವ ಜಾಲತಾಣಗಳನ್ನು ಪ್ರಕಟಿಸುವುದಿಲ್ಲ. ಆದರೆ, ನಿಮ್ಮ ಯಾಹೂ ಇಮೇಲ್‌ ಖಾತೆ ಮತ್ತು ಸರ್ಚ್‌ ಎಂಜಿನ್‌ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಇಲ್ಲಿವರೆಗೂ ನಮ್ಮನ್ನು ಬೆಂಬಲಿಸಿರುವವರಿಗೆ ಹಾಗೂ ಜಾಲತಾಣ ಓದುಗರಿಗೆ ಧನ್ಯವಾದಗಳು'ಎಂದು ಯಾಹೂ ವೆಬ್‌ಸೈಟ್ ಹೇಳಿದೆ.

ಅಮೆರಿಕದ ಟೆಕ್‌ ಮೇಜರ್‌ ವೆರಿಜೋನ್‌, 2017ರಲ್ಲಿ ಯಾಹೂ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.