ADVERTISEMENT

ಲಸಿಕೆ ಕುರಿತು ಅಪಪ್ರಚಾರ: ಹಲವು ವಿಡಿಯೊಗಳಿಗೆ ಯುಟ್ಯೂಬ್‌ ನಿರ್ಬಂಧ

ರಾಯಿಟರ್ಸ್
Published 29 ಸೆಪ್ಟೆಂಬರ್ 2021, 15:21 IST
Last Updated 29 ಸೆಪ್ಟೆಂಬರ್ 2021, 15:21 IST
ಯುಟ್ಯೂಬ್‌–ಪ್ರಾತಿನಿಧಿಕ ಚಿತ್ರ
ಯುಟ್ಯೂಬ್‌–ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19 ಕುರಿತು ಅಪಪ್ರಚಾರ ನಡೆಸುವ ವಿಡಿಯೊಗಳಿಗೆ ನಿರ್ಬಂಧ ಹೇರುತ್ತಿದ್ದ ಯುಟ್ಯೂಬ್‌, ಈಗ ಲಸಿಕೆಗಳ ಸಂಬಂಧ ತಪ್ಪಾದ ಮಾಹಿತಿಗಳನ್ನು ಒಳಗೊಂಡ ವಿಡಿಯೊಗಳನ್ನು ತೆಗೆದುಹಾಕುವ ಕಾರ್ಯಕ್ಕೆ ಮುಂದಾಗಿದೆ.

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಇಂಕ್‌ ಒಡೆತನದ ಆನ್‌ಲೈನ್‌ ವಿಡಿಯೊ ಕಂಪನಿ 'ಯುಟ್ಯೂಬ್‌' ಎಲ್ಲ ಲಸಿಕೆ ವಿರೋಧಿ ಕಂಟೆಂಟ್‌ಗಳನ್ನು ತೆಗೆದು ಹಾಕುತ್ತಿದೆ. ಲಸಿಕೆ ವಿರೋಧಿಸುವ ಕಾರ್ಯಕರ್ತರ ವಿಡಿಯೊಗಳು ಹಾಗೂ ಹಲವು ಚಾನೆಲ್‌ಗಳನ್ನು ನಿರ್ಬಂಧಿಸುತ್ತಿರುವುದಾಗಿ ವಾಷಿಂಗ್ಟನ್‌ ಪೋಸ್ಟ್‌ ಬುಧವಾರ ವರದಿ ಮಾಡಿದೆ.

ಯುಟ್ಯೂಬ್‌ನ ಉಪಾಧ್ಯಕ್ಷ (ಜಾಗತಿಕ ವಿಶ್ವಾಸಾರ್ಹತೆ ಮತ್ತು ಸುರಕ್ಷತೆ) ಮ್ಯಾಚ್‌ ಹಾಲ್ಪ್ರಿನ್‌ ಅವರನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಲಸಿಕೆ ವಿರೋಧಿ ಅಭಿಯಾನದಲ್ಲಿ ಪ್ರಮುಖ ಹೆಸರುಗಳಾದ ರಾಬರ್ಟ್‌ ಎಫ್‌.ಕೆನೆಡಿ ಜೂನಿಯರ್‌ ಮತ್ತು ಜೋಸೆಫ್‌ ಮರ್ಕೊಲಾ ಅವರ ವಿಡಿಯೊಗಳನ್ನೂ ನಿರ್ಬಂಧಿಸಲಾಗುತ್ತಿದೆ.

ADVERTISEMENT

ಲಸಿಕೆ ಮತ್ತು ಅದರಿಂದಾಗುವ ಆರೋಗ್ಯ ಸಂಬಂಧಿತ ಪರಿಣಾಮಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳು ನಿಯಂತ್ರಿಸದಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಯುಟ್ಯೂಬ್‌ ಈ ಕ್ರಮ ಕೈಗೊಂಡಿದೆ.

ಕೋವಿಡ್‌–19 ತಪ್ಪು ಮಾಹಿತಿ ನಿಯಮಗಳನ್ನು ಉಲ್ಲಂಘಿಸಿರುವ ಕಾರಣದಿಂದ ಮಂಗಳವಾರ ರಷ್ಯಾ ಸರ್ಕಾರ ನಡೆಸುತ್ತಿರುವ ಆರ್‌ಟಿ (RT-Russia Today)ಚಾನೆಲ್‌ನ ಜರ್ಮನಿ ಭಾಷೆಯ ಚಾನೆಲ್‌ಗಳನ್ನು ಯುಟ್ಯೂಬ್‌ ತೆಗೆದು ಹಾಕಿದೆ. ಆ ಬಗ್ಗೆ ರಷ್ಯಾ ಆಕ್ರೋಶ ವ್ಯಕ್ತಪಡಿಸಿದ್ದು, ಯುಟ್ಯೂಬನ್ನೇ ನಿರ್ಬಂಧಿಸುವ ಬೆದರಿಕೆಯೊಡ್ಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.