ನವದೆಹಲಿ: ನೆಟ್‌ವರ್ಕ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಇಂಟರ್‌ನೆಟ್ ಮೂಲಸೌಕರ್ಯ ಒದಗಿಸುವ ಕಂಪನಿ ಆಕಮಾಯ್ ಟೆಕ್ನಾಲಜೀಸ್ ಸೇವೆಯಲ್ಲಿ ಜಾಗತಿಕವಾಗಿ ವ್ಯತ್ಯಯ ಉಂಟಾದ ಪರಿಣಾಮ ಭಾರತದಲ್ಲೂ ಜೊಮ್ಯಾಟೊ, ಪೇಟಿಎಂ ಸೇರಿದಂತೆ ವಿವಿಧ ಆನ್‌ಲೈನ್ ವೆಬ್‌ಸೈಟ್‌ಗಳು ತಾತ್ಕಾಲಿಕವಾಗಿ ತೊಂದರೆ ಎದುರಿಸಿದವು.
ಗುರುವಾರ ರಾತ್ರಿ 10 ಗಂಟೆಯ ಅಸುಪಾಸಿನಲ್ಲಿ ಟ್ವೀಟ್ ಮಾಡಿರುವ ಆಕಮಾಯ್,ಸೇವೆಗಳಲ್ಲಿ ಅಡೆತಡೆಯನ್ನು ಎದುರಿಸಿದೆ ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಪರೀಶೀಲಿಸುವುದಾಗಿ ಹೇಳಿದೆ.
ಆದರೆ ಯಾವುದೇ ರೀತಿಯ ಸೈಬರ್ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಳಿಕ 10.42ರ ಸುಮಾರಿಗೆ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಡಿಜಿಟಲ್ ಪಾವತಿ ಸೇವಾ ಕಂಪನಿ ಪೇಟಿಎಂ, ಆಕಮಾಯ್ ಜಾಗತಿಕವಾಗಿ ವ್ಯತ್ಯಯ ಎದುರಾದ ಹಿನ್ನೆಲೆಯಲ್ಲಿ ಸೇವೆಯ ಮೇಲೆ ಪರಿಣಾಮ ಬೀರಿದೆ ಎಂದಿದೆ. ಸ್ವಲ್ಪ ಸಮಯದ ಬಳಿಕ ಕಾರ್ಯಾಚರಣೆ ಯಥಾಸ್ಥಿತಿಗೆ ಬಂದಿದೆ ಎಂಬುದನ್ನು ತಿಳಿಸಿದೆ.
ಈ ಬಗ್ಗೆ ಜೊಮ್ಯಾಟೊ ಕೂಡ ಟ್ವೀಟ್ ಮಾಡಿದೆ.
ಇಂಟರ್‌ನೆಟ್ ಸೇವೆ ವ್ಯತ್ಯಯದ ಬಗ್ಗೆ ಹಲವಾರು ಬಳಕೆದಾರರು ಡೌನ್ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ವರದಿ ಮಾಡಿದ್ದಾರೆ. ಪ್ರಸ್ತುತ ವೆಬ್‌ಸೈಟ್ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಟ್ರ್ಯಾಕ್ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.